ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

40ನೇ ಪ್ರಗತಿ ಸಂವಾದದ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ


ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಏಜೆನ್ಸಿಗಳು ಅಮೃತ ಸರೋವರ ಅಡಿಯಲ್ಲಿ ಅಭಿವೃದ್ಧಿಪಡಿಸುವ ಜಲ ಮೂಲಗಳೊಂದಿಗೆ  ತಮ್ಮ ಯೋಜನೆಗಳ ನಕ್ಷೆಯನ್ನು ತಯಾರಿಸಬೇಕು: ಪ್ರಧಾನ ಮಂತ್ರಿ.

ರೈಟ್ ಆಫ್ ವೇ ಅರ್ಜಿಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಗತಿ ಶಕ್ತಿ ಸಂಚಾರ ಪೋರ್ಟಲ್ ಬಳಸಿಕೊಳ್ಳಲು ರಾಜ್ಯಗಳಿಗೆ ಪ್ರಧಾನಮಂತ್ರಿ ಕೋರಿಕೆ

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯ ಮಾದರಿಯಲ್ಲಿ ರಾಜ್ಯಗಳು ರಾಜ್ಯ ಮಟ್ಟದ ಗತಿಶಕ್ತಿ ಮಹಾಯೋಜನೆಯನ್ನು ಸಹ ರೂಪಿಸಬಹುದು: ಪ್ರಧಾನಮಂತ್ರಿ

Posted On: 25 MAY 2022 7:26PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನಕ್ಕಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒಳಗೊಂಡಿರುವ ಐ.ಸಿ.ಟಿ. ಆಧಾರಿತ ಬಹು-ಮಾದರಿ ವೇದಿಕೆಯಾದ ಪ್ರಗತಿಯ 40 ನೇ ಆವೃತ್ತಿಯ ಸಭೆ ನಡೆಸಿದರು.

ಸಭೆಯಲ್ಲಿ ಎಂಟು ಯೋಜನೆಗಳು ಮತ್ತು ಒಂದು ಕಾರ್ಯಕ್ರಮ ಸಹಿತ ಒಂಬತ್ತು ಕಾರ್ಯಸೂಚಿಗಳನ್ನು ಪರಾಮರ್ಶೆಗೆ ಕೈಗೆತ್ತಿಕೊಳ್ಳಲಾಗಿತ್ತು. ಎಂಟು ಯೋಜನೆಗಳಲ್ಲಿ ರೈಲ್ವೇ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಸಚಿವಾಲಯದ  ತಲಾ ಎರಡು ಯೋಜನೆಗಳು ಹಾಗು ಇಂಧನ ಸಚಿವಾಲಯ ಮತ್ತು ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಹಾಗು ಗಂಗಾ ಪುನಶ್ಚೇತನ ಇಲಾಖೆಯ ತಲಾ ಒಂದು ಯೋಜನೆಗಳು ಸೇರಿವೆ. ಈ ಎಂಟು ಯೋಜನೆಗಳು ಒಟ್ಟು 59,900 ಕೋ.ರೂ.ಗಳಿಗೂ ಅಧಿಕ ವೆಚ್ಚದವಾಗಿವೆ. ಮತ್ತು ಮಹಾರಾಷ್ಟ್ರ, ಕರ್ನಾಟಕ,ಆಂಧ್ರ ಪ್ರದೇಶ, ತಮಿಳು ನಾಡು, ಛತ್ತೀಸ್ ಗಢ, ಒಡಿಶಾ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಜಾರ್ಖಂಡ್ ಸಹಿತ 14 ರಾಜ್ಯಗಳ ವ್ಯಾಪ್ತಿಯನ್ನು ಹೊಂದಿವೆ.

ರಸ್ತೆಗಳು ಮತ್ತು ರೈಲ್ವೇಗಳಂತಹ  ಮೂಲಸೌಕರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಜೆನ್ಸಿಗಳು ತಮ್ಮ ಯೋಜನೆಗಳಲ್ಲಿ ಅಮೃತ ಸರೋವರ ಯೋಜನೆಯ ಮೂಲಕ ಅಭಿವೃದ್ಧಿ ಮಾಡಲಾಗುವ ಜಲಮೂಲಗಳ ನಕ್ಷೆಯನ್ನೂ ಸೇರಿಸಿಕೊಳ್ಳಬೇಕು ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. ಅಮೃತ ಸರೋವರಗಳಿಗಾಗಿ ಅಗೆದ ವಸ್ತುಗಳನ್ನು ಏಜೆನ್ಸಿಗಳು ನಿರ್ಮಾಣ ಕಾಮಗಾರಿಗಳಲ್ಲಿ ಬಳಸಬಹುದಾದಂತಹ ಪರಿಸ್ಥಿತಿ ಇದರಿಂದ ನಿರ್ಮಾಣವಾಗುತ್ತದೆ.

ಸಂವಾದದಲ್ಲಿ ಪ್ರಧಾನ ಮಂತ್ರಿ ಅವರು “ರಾಷ್ಟ್ರೀಯ ಬ್ರಾಡ್ ಬ್ಯಾಂಡ್ ಮಿಷನ್” ಕಾರ್ಯಕ್ರಮವನ್ನು ಪರಾಮರ್ಶಿಸಿದರು. ರೈಟ್ ಆಫ್ ವೇ ಅರ್ಜಿಗಳನ್ನು (ಆರ್.ಒ.ಡಬ್ಲ್ಯು.) ಸಕಾಲದಲ್ಲಿ ಇತ್ಯರ್ಥ ಮಾಡುವುದನ್ನು ಖಾತ್ರಿಪಡಿಸಲು  ಕೇಂದ್ರೀಕೃತ ಗತಿ ಶಕ್ತಿ ಸಂಚಾರ ಪೋರ್ಟಲನ್ನು ಬಳಸಿಕೊಳ್ಳುವಂತೆ ರಾಜ್ಯಗಳು ಮತ್ತು ಏಜೆನ್ಸಿಗಳಿಗೆ ಸೂಚಿಸಲಾಯಿತು. ಇದರಿಂದ ಮಿಷನ್ ಅನುಷ್ಠಾನಕ್ಕೆ ವೇಗ ದೊರೆಯಲಿದೆ. ಮತ್ತು ಇದಕ್ಕೆ ಸಮಾನಾಂತರವಾಗಿ  ಜನಸಾಮಾನ್ಯರ ಜೀವನಕ್ಕೆ ಇನ್ನಷ್ಟು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖವಾಗಬೇಕು.

ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಮಾದರಿಯಲ್ಲಿ ರಾಜ್ಯಗಳು ರಾಜ್ಯ ಮಟ್ಟದ ಗತಿ ಶಕ್ತಿ ಮಹಾ ಯೋಜನೆಯನ್ನು ರೂಪಿಸಬಹುದು ಮತ್ತು ಇದಕ್ಕಾಗಿ ರಾಜ್ಯ ಮಟ್ಟದ ಘಟಕಗಳನ್ನು ರಚಿಸಬಹುದು ಎಂದು ಪ್ರಧಾನ ಮಂತ್ರಿ ಹೇಳಿದರು. ಇದರಿಂದ ಉತ್ತಮ ಯೋಜನೆ, ಗುರುತಿಸುವಿಕೆ ಮತ್ತು ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಜೊತೆಗೆ ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಉತ್ತಮ ಸಮನ್ವಯವನ್ನು ಸಾಧಿಸಲು  ಅನುಕೂಲವಾಗುತ್ತದೆ.

ಪ್ರಗತಿಯ 39 ಆವೃತ್ತಿಗಳಲ್ಲಿ ಒಟ್ಟು 14.82 ಲಕ್ಷ ಕೋ.ರೂ.ಗಳ ವೆಚ್ಚದ 311 ಯೋಜನೆಗಳಿಗೆ ಪುನಶ್ಚೇತನ ನೀಡಲಾಗಿದೆ.

***


(Release ID: 1828937) Visitor Counter : 182