ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80 ನೇ ಜನ್ಮದಿನದ ಆಚರಣೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ನೀಡಿದ ಸಂದೇಶದ ಕನ್ನಡ ಭಾಷಾಂತರ

Posted On: 22 MAY 2022 12:00PM by PIB Bengaluru

ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ,

 

ಇಲ್ಲಿ ಉಪಸ್ಥಿತರಿರುವ ದತ್ತಪೀಠದ ಎಲ್ಲಾ ಋಷಿಮುನಿಗಳೇ, ಭಕ್ತರೇ, ಅನುಯಾಯಿಗಳೇ, ಮಹಿಳೆಯರೇ ಹಾಗೂ ಮಹನೀಯರೇ!

ಎಲ್ಲರಿಗೂ…

ಜಯಗುರು ದತ್ತ!

ಅಪ್ಪಾಜೀ ಅವರಿಗೆ,

ಎಂಬತ್ತನೇ ವರ್ಧಂತತಿಯ ಸಂದರ್ಭದಲ್ಲಿ…

 

ನಮಸ್ಕಾರ!

ಸ್ನೇಹಿತರೇ,

ದತ್ತಪೀಠಕ್ಕೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಆಗ ನೀವು ನನ್ನನ್ನು ಈ ಕಾರ್ಯಕ್ರಮಕ್ಕೆ ಬರುವಂತೆ ಹೇಳಿದ್ದೀರಿ. ನಿಮ್ಮ ಆಶೀರ್ವಾದ ಪಡೆಯಲು ಮತ್ತೊಮ್ಮೆ ಬರುತ್ತೇನೆ ಎಂದು ಆ ಸಂದರ್ಭದಲ್ಲೇ ಮನಸ್ಸು ಮಾಡಿದ್ದೆ. ಆದರೆ, ಬರಲಾಗಲಿಲ್ಲ. ಇಂದು ನನಗೆ ಜಪಾನ್ ಪ್ರವಾಸವಿದೆ. ದತ್ತಪೀಠದ ಈ ಭವ್ಯ ಸಮಾರಂಭದಲ್ಲಿ ನಾನು ಭೌತಿಕವಾಗಿ ಇಲ್ಲದಿರಬಹುದು. ಆದರೆ, ನನ್ನ ಆತ್ಮ ಮತ್ತು ಮನಸ್ಸು ನಿಮ್ಮೊಂದಿಗಿದೆ.

ಈ ಶುಭ ಸಂದರ್ಭದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ನನ್ನ ಶುಭಾಶಯಗಳನ್ನು ಮತ್ತು ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಜೀವನದ 80ನೇ ವರ್ಷದ ಈ ಹಂತವು ಬಹಳ ಮುಖ್ಯವಾಗಿದೆ. ನಮ್ಮ ಸಾಂಸ್ಕೃತಿಕ ಸಂಪ್ರದಾಯದಲ್ಲಿ 80ನೇ ವರ್ಷವನ್ನು ಸಹಸ್ರ ಚಂದ್ರದರ್ಶನ ಅಥವಾ ವ್ಯಕ್ತಿಯ ಜೀವನದಲ್ಲಿ ಅವರ 1000ನೇ ಹುಣ್ಣಿಮೆಯ ಆಚರಣೆ ಎಂದು ಪರಿಗಣಿಸಲಾಗುತ್ತದೆ. ಪೂಜ್ಯ ಸ್ವಾಮೀಜಿ ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತೇನೆ. ಅವರ ಅನುಯಾಯಿಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪೂಜ್ಯ ಸಂತರು ಮತ್ತು ವಿಶೇಷ ಅತಿಥಿಗಳಿಂದ ಇಂದು  ಆಶ್ರಮದಲ್ಲಿ ‘ಹನುಮಮಂತ ದ್ವಾರ’ದ ಪ್ರವೇಶ ಕಮಾನು ಸಹ ಉದ್ಘಾಟನೆಗೊಂಡಿದೆ. ಇದಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಸಾಮಾಜಿಕ ನ್ಯಾಯಕ್ಕಾಗಿ ಗುರುದೇವ್ ದತ್ ಅವರ ಕರೆಯಿಂದ ಪ್ರೇರಿತರಾಗಿ ನೀವು ಮಾಡುತ್ತಿರುವ ಕೆಲಸಕ್ಕೆ ಇದೂ  ಒಂದು ಸೇರ್ಪಡೆಯಾಗಿದೆ. ಅಲ್ಲದೆ,  ಇನ್ನೊಂದು ದೇವಸ್ಥಾನವೂ  ಇಂದು ಉದ್ಘಾಟನೆಗೊಂಡಿದೆ.

 

ಸ್ನೇಹಿತರೇ,

ನಮ್ಮ ಧರ್ಮಗ್ರಂಥಗಳಲ್ಲಿ ಈ ರೀತಿ ಹೇಳಲಾಗಿದೆ -

‘परोपकाराय सताम् विभूत’।

ಸಂತರು ಮತ್ತು ಉದಾತ್ತ ಪುರುಷರು ಅಂದರೆ ದಾನಕ್ಕೆ ಹೆಸರುವಾಸಿಯಾಗಿದ್ದಾರೆ. ಮಾನವೀಯ ಸೇವೆ ಹಾಗೂ ದಾನಕ್ಕಾಗಿಯೇ ಸಂತರು ಹುಟ್ಟಿದ್ದು. ಹಾಗಾಗಿ, ಸಂತನ ಜನ್ಮ ಮತ್ತು ಜೀವನವು ಕೇವಲ ವೈಯಕ್ತಿಕ ಪ್ರಯಾಣವಲ್ಲ. ಬದಲಾಗಿ,  ಅದರೊಂದಿಗೆ ಸಮಾಜದ ಉನ್ನತಿ ಮತ್ತು ಕಲ್ಯಾಣದ ಪ್ರಯಾಣಕ್ಕೂ ಸಂಬಂಧಿಸಿದ್ದಾಗಿದೆ. ಅದಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜೀವನವೇ ಸಾಕ್ಷಿ ಹಾಗೂ ಉದಾಹರಣೆಯಾಗಿದೆ. ದೇಶ ಮತ್ತು ಪ್ರಪಂಚದ ವಿವಿಧ ಮೂಲೆಗಳಲ್ಲಿ ಹಲವಾರು ಆಶ್ರಮಗಳಿವೆ.  ಅವು ವಿಭಿನ್ನ ಯೋಜನೆಗಳನ್ನು ಹೊಂದಿರುವ ದೊಡ್ಡ ಸಂಸ್ಥೆಗಳಾಗಿವೆ. ಆದರೆ, ಅವುಗಳ ಗುರಿ ಮತ್ತು ಉದ್ದೇಶ ಒಂದೇ. ಜೀವಿಗಳ ಸೇವೆ ಮತ್ತು ಕಲ್ಯಾಣ.

 

ಸಹೋದರರೇ ಮತ್ತು ಸಹೋದರಿಯರೇ,

ದತ್ತಪೀಠದ ಪ್ರಯತ್ನದ ಬಗ್ಗೆ ನನಗೆ ಅತ್ಯಂತ ತೃಪ್ತಿ ನೀಡುವ ವಿಷಯವೆಂದರೆ, ಇಲ್ಲಿ ಅಧ್ಯಾತ್ಮದ ಜೊತೆಗೆ ಆಧುನಿಕತೆಯನ್ನೂ ಪೋಷಿಸಿರುವುದು. ಇಲ್ಲಿ ಬೃಹತ್ ಹನುಮಾನ್ ದೇವಾಲಯವಿದೆ; ಅದೇ ರೀತಿಯಲ್ಲಿ 3ಡಿ ಮ್ಯಾಪಿಂಗ್, ಧ್ವನಿ ಹಾಗೂ ಬೆಳಕಿನ ಪ್ರದರ್ಶನಕ್ಕೆ ಅವಕಾಶವಿದೆ. ಇಲ್ಲಿ ಬೃಹತ್ ಪಕ್ಷಿಗಳ ಉದ್ಯಾನವನ ಮಾತ್ರವಲ್ಲದೆ, ಅದರ ಕಾರ್ಯಾಚರಣೆಗೆ ಆಧುನಿಕ ವ್ಯವಸ್ಥೆಯೂ ಇದೆ.

ದತ್ತಪೀಠವು ಇಂದು ವೇದಗಳ ಅಧ್ಯಯನದ ಪ್ರಮುಖ ಕೇಂದ್ರವಾಗಿದೆ. ಇದಲ್ಲದೆ, ನಮ್ಮ ಪೂರ್ವಜರು ನಮಗೆ ನೀಡಿದ ಸಂಗೀತ ಮತ್ತು ಮಾಧುರ್ಯಗಳ ಶಕ್ತಿಯನ್ನು ಜನರ ಆರೋಗ್ಯಕ್ಕಾಗಿ ಹೇಗೆ ಬಳಸುವುದು ಎಂಬುದರ ಕುರಿತು ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಆವಿಷ್ಕಾರಗಳು ನಡೆಯುತ್ತಿವೆ. ಪ್ರಕೃತಿಗಾಗಿ ವಿಜ್ಞಾನದ ಈ ಬಳಕೆಯು, ಆಧ್ಯಾತ್ಮದೊಂದಿಗೆ ತಂತ್ರಜ್ಞಾನದ ಈ ಸಮ್ಮಿಲನವು ಚಲನಶೀಲ ಭಾರತದ ಆತ್ಮವಾಗಿದೆ. ಸ್ವಾಮೀಜಿ ಅವರಂತಹ ಸಂತರ ಶ್ರಮದಿಂದ ಇಂದು ನಾಡಿನ ಯುವಜನತೆ ಅವರ ಸಂಪ್ರದಾಯಗಳ ಶಕ್ತಿಯನ್ನು ಅರಿತು ಮುನ್ನಡೆಯುತ್ತಿರುವುದು ಸಂತಸ ತಂದಿದೆ.

 

ಸ್ನೇಹಿತರೇ,

ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ನಾವು ಸ್ವಾಮೀಜಿ ಅವರ 80ನೇ ವರ್ಷದ ಜನ್ಮದಿನವನ್ನು ಇಂದು ಆಚರಿಸುತ್ತಿದ್ದೇವೆ. ನಮ್ಮ ಸಂತರು ಯಾವಾಗಲೂ ಆತ್ಮಕ್ಕಿಂತ ಮೇಲೇರಲು ಮತ್ತು ಎಲ್ಲದಕ್ಕೂ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಿದ್ದಾರೆ. ಇಂದು ದೇಶವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್’ಎಂಬ ಮಂತ್ರದೊಂದಿಗೆ ಸಾಮೂಹಿಕ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ನಮಗೆ ಕರೆ ನೀಡುತ್ತಿದೆ. ದೇಶ ತನ್ನ ಪರಂಪರೆಯನ್ನು ಇಂದು ಸಂರಕ್ಷಿಸುತ್ತಿದೆ. ಅದನ್ನು ಉತ್ತೇಜಿಸುತ್ತಿದೆ. ಅದರ ನಾವೀನ್ಯತೆ ಮತ್ತು ಆಧುನಿಕತೆಗೆ ಪ್ರೋತ್ಸಾಹ ನೀಡುತ್ತಿದೆ. ಇಂದು ಭಾರತವು ಯೋಗ ಮತ್ತು ಯುವಜನರ ಜೊತೆ ಗುರುತಿಸಿಕೊಂಡಿದೆ. ಜಗತ್ತು ಇಂದು ನಮ್ಮ ಸ್ಟಾರ್ಟ್‌ಅಪ್‌ಗಳನ್ನು ತನ್ನ ಭವಿಷ್ಯದಂತೆ ನೋಡುತ್ತಿದೆ. ನಮ್ಮ ಕೈಗಾರಿಕೆಗಳು ಹಾಗೂ ನಮ್ಮ ‘ಮೇಕ್ ಇನ್ ಇಂಡಿಯಾ’ವು ಜಾಗತಿಕ ಬೆಳವಣಿಗೆಯ ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ. ಈ ನಿರ್ಣಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ, ನಮ್ಮ ಆಧ್ಯಾತ್ಮಿಕ ಕೇಂದ್ರಗಳು ಸ್ಫೂರ್ತಿಯ  ಕೇಂದ್ರಗಳಾಗಬೇಕು ಎಂದು ನಾನು ಬಯಸುತ್ತೇನೆ.

 

ಸ್ಮೇಹಿತರೇ,

75ನೇ ಸ್ವಾತಂತ್ರ್ಯೋತ್ಸವದ ವರ್ಷದಲ್ಲಿ ಮುಂದಿನ 25 ವರ್ಷಗಳ ಸಂಕಲ್ಪ ಮತ್ತು ಗುರಿಗಳನ್ನು ನಾವು ಹೊಂದಿದ್ದೇವೆ. ದತ್ತ ಪೀಠದ ನಿರ್ಣಯಗಳನ್ನು ‘ಅಮೃತ ಸಂಕಲ್ಪ’ಕ್ಕೆ ಜೋಡಿಸಬಹುದು ಎಂದು ನಾನು ನಂಬುತ್ತೇನೆ. ನೀವು ಪ್ರಕೃತಿಯ ರಕ್ಷಣೆಗಾಗಿ ಮತ್ತು ಪಕ್ಷಿಗಳಿಗಾಗಿ ಅಸಾಮಾನ್ಯ ಕೆಲಸವನ್ನು ಮಾಡುತ್ತಿದ್ದೀರಿ. ಈ ದಿಕ್ಕಿನಲ್ಲಿ ನೀವು ಇನ್ನೂ ಕೆಲವು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನದಿಗಳ ಸಂರಕ್ಷಣೆಗಾಗಿ ನೀರಿನ ಸಂರಕ್ಷಣೆ ಹಾಗೂ ನೀರಿನ ಮೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ.

ಅಮೃತ ಮಹೋತ್ಸವದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ನಾವು ಸಮಾಜವನ್ನು ಒಳಗೊಳ್ಳಬೇಕು. ಅದೇ ರೀತಿ, ಸ್ವಚ್ಛ ಭಾರತ ಅಭಿಯಾನವನ್ನು ನಿರಂತರ ಜನಾಂದೋಲನವಾಗಿ ಮುನ್ನಡೆಸಬೇಕು. ನೈರ್ಮಲ್ಯ ಕಾರ್ಮಿಕರಿಗೆ ಸ್ವಾಮೀಜಿ ಅವರು ನೀಡಿದ ಕೊಡುಗೆ ಮತ್ತು ಅಸಮಾನತೆಯ ವಿರುದ್ಧದ ಹೋರಾಟವನ್ನು ನಾನು ವಿಶೇಷವಾಗಿ ಶ್ಲಾಘಿಸಲು ಬಯಸುತ್ತೇನೆ. ಸ್ವಾಮೀಜಿ ಅವರು ಅನುಸರಿಸುತ್ತಿರುವ ಪ್ರತಿಯೊಬ್ಬರನ್ನು ಸಂಪರ್ಕಿಸುವುದು ಧರ್ಮದ ನಿಜವಾದ ಅಭಿವ್ಯಕ್ತಿಯಾಗಿದೆ. ದತ್ತಪೀಠವು ಸಮಾಜ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತದೆ. ಜೊತೆಗೆ, ಆಧುನಿಕ ಕಾಲದಲ್ಲಿ ಜೀವಿಗಳ ಸೇವೆಗೆ ಹೊಸ ಆಯಾಮ ನೀಡುತ್ತದೆ ಎಂಬ ಖಾತ್ರಿ ನನಗಿದೆ. ಜೀವಿಗಳ ಸೇವೆಯಿಂದ ಶಿವನ ಸೇವೆಯ ಸಂಕಲ್ಪವು ನೆರವೇರುತ್ತದೆ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದೀರ್ಘಾಯುಷ್ಯಕ್ಕಾಗಿ ನಾನು ಮತ್ತೊಮ್ಮೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ನಾನು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದತ್ತ ಪೀಠದ ಮೂಲಕ ಸಮಾಜವು ಅದೇ ರೀತಿಯಲ್ಲಿ ಬೆಳೆಯಲು ಮತ್ತು ಸಬಲೀಕರಣಗೊಳ್ಳಲು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು!

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಲಾಗಿದೆ

***


(Release ID: 1827928) Visitor Counter : 165