ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಭೇಟಿ (2022ರ ಮೇ 23-25)
प्रविष्टि तिथि:
19 MAY 2022 10:00PM by PIB Bengaluru
ಜಪಾನ್ ನ ಘನತೆವೆತ್ತ ಪ್ರಧಾನಮಂತ್ರಿ ಶ್ರೀ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 24ರಂದು ಟೋಕಿಯೋದಲ್ಲಿ ನಡೆಯಲಿರುವ 3ನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಅಮರಿಕ ಅಧ್ಯಕ್ಷ, ಗೌರವಾನ್ವಿತ ಜೋಸೆಫ್ ಆರ್ ಬೈಡೆನ್ ಮತ್ತು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಅವರೊಂದಿಗೆ ಭಾಗವಹಿಸಲಿದ್ದಾರೆ.
2021ರ ಮಾರ್ಚ್ ನಲ್ಲಿ ಮೊದಲ ವರ್ಚುವಲ್ ಸಭೆ ನಡೆದಿತ್ತು. ಆನಂತರ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವುದು ಕ್ವಾಡ್ ನಾಯಕರ 4ನೇ ಸಂವಾದವಾಗಿದೆ. 2021ರ ಸೆಪ್ಟೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ 2ನೇ ಮುಖಾಮುಖಿ ಶೃಂಗಸಭೆ ಹಾಗೂ 2022ರ ಮಾರ್ಚ್ ನಲ್ಲಿ 3ನೇ ವರ್ಚುವಲ್ ಶೃಂಗಸಭೆ ನಡೆದಿತ್ತು.
ಮುಂಬರುವ ಈ 4ನೇ ಕ್ವಾಡ್ ಶೃಂಗಸಭೆ, ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ನಾಯಕರ ವಿಚಾರ ವಿನಿಮಯಕ್ಕೆ ಅವಕಾಶ ಒದಗಿಸಲಿದೆ.
ನಾಯಕರು ಕ್ವಾಡ್ ಉಪಕ್ರಮಗಳು ಮತ್ತು ಕಾರ್ಯಕಾರಿ ಗುಂಪಿನ ಪ್ರಗತಿಯನ್ನು ಪರಾಮರ್ಶಿಸುವರು, ಸಹಕಾರ ಸಂಬಂಧದ ಹೊಸ ಅವಕಾಶಗಳನ್ನು ಗುರುತಿಸುವುದು ಮತ್ತು ಭವಿಷ್ಯದ ಸಹಭಾಗಿತ್ವಕ್ಕೆ ಕಾರ್ಯತಾಂತ್ರಿಕ ಮಾರ್ಗದರ್ಶನ ಮತ್ತು ದೂರದೃಷ್ಟಿಯನ್ನು ಒದಗಿಸುವರು.
ಪ್ರಧಾನಮಂತ್ರಿ ಅವರು ಮೇ 24ರಂದು ಜಪಾನ್ ನ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಕಿಶಿಡಾ ಅವರೊಂದಿಗಿನ ಮಾತುಕತೆ ಇಬ್ಬರೂ ನಾಯಕರಿಗೆ ಪ್ರಧಾನಮಂತ್ರಿ ಕಿಶಿಡಾ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ 2022ರ ಮಾರ್ಚ್ ನಲ್ಲಿ ನಡೆದ 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಸಮಾಲೋಚನೆಗಳನ್ನು ಮುಂದುವರಿಸಲು ಅವಕಾಶ ನೀಡಲಿದೆ. ಈ ಭೇಟಿಯ ವೇಳೆ ಪ್ರಧಾನಮಂತ್ರಿ ಅವರು ಜಪಾನ್ ನ ವಾಣಿಜ್ಯ ನಾಯಕರೊಂದಿಗೆ ವ್ಯಾವಹಾರಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಜಪಾನ್ ನಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವರು ಹಾಗೂ ಅವರನ್ನುದ್ದೇಶಿಸಿ ಮಾತನಾಡುವರು.
ಪ್ರಧಾನಮಂತ್ರಿ ಅವರು 2022ರ ಮೇ 24 ರಂದು ಅಮೆರಿಕ ಅಧ್ಯಕ್ಷ ಗೌರವಾನ್ವಿತ ಜೋಸೆಫ್ ಆರ್. ಬೈಡೆನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವರು. ಈ ಸಭೆ ಇತ್ತೀಚೆಗೆ 2022ರ ಏಪ್ರಿಲ್ 11ರಂದು ವರ್ಚುವಲ್ ರೂಪದಲ್ಲಿ ನಡೆಸಿದ ಮಾತುಕತೆಯನ್ನು ಮುಂದುವರಿಸಲು ಸಹಾಯಕವಾಗಲಿದೆ. ಉಭಯ ನಾಯಕರು ಭಾರತ-ಅಮೆರಿಕ ಕಾರ್ಯತಾಂತ್ರಿಕ ಪಾಲುದಾರಿಕೆ ಪರಾಮರ್ಶೆ ಮತ್ತು 2021ರ ಸೆಪ್ಟೆಂಬರ್ ನಲ್ಲಿ ಅಧ್ಯಕ್ಷ ಬೈಡೆನ್ ಅವರೊಂದಿಗೆ ಪ್ರಧಾನಮಂತ್ರಿ ನಡೆಸಿದ ದ್ವಿಪಕ್ಷೀಯ ಮಾತುಕತೆಯನ್ನು ಮುಂದುವರಿಸುವ ಬಗ್ಗೆ ಸಮಾಲೋಚಿಸುವ ಸಾಧ್ಯತೆ ಇದೆ. ಅಲ್ಲದೆ ಅವರು, ಸಮಾನ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸುವರು.
ಅಲ್ಲದೆ ಪ್ರಧಾನಮಂತ್ರಿ ಅವರು, 2022ರ ಮೇ 21ರಂದು ಚುನಾವಣೆ ಎದುರಿಸಲಿರುವ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ. ಉಭಯ ನಾಯಕರು ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಕುರಿತು ಪರಾಮರ್ಶೆ ನಡೆಸುವರು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸುವರು. ಇಬ್ಬರೂ ಪ್ರಧಾನಮಂತ್ರಿಗಳ ನಡುವೆ 2022ರ ಮಾರ್ಚ್ 21ರಂದು ವರ್ಚುವಲ್ ರೂಪದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಆನಂತರ 2022ರ ಏಪ್ರಿಲ್ 2 ರಂದು ಭಾರತ – ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ(ಇಸಿಟಿಎ)ಗೆ ಸಹಿ ಹಾಕಲಾಗಿತ್ತು.
***
(रिलीज़ आईडी: 1827080)
आगंतुक पटल : 211
इस विज्ञप्ति को इन भाषाओं में पढ़ें:
Marathi
,
English
,
Urdu
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam