ವಾರ್ತಾ ಮತ್ತು ಪ್ರಸಾರ ಸಚಿವಾಲಯ

ʻಕೇನ್ಸ್‌ʼನಲ್ಲಿ ಭಾರತ – ಫ್ರಾನ್ಸ್‌ನಿಂದ ಡಿಡಿ ಇಂಡಿಯಾ ಪ್ರತ್ಯಕ್ಷ ವರದಿಗಾರಿಕೆ

Posted On: 19 MAY 2022 12:46PM by PIB Bengaluru

ಪ್ರತಿಷ್ಠಿತ ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಹತ್ತಿರದಿಂದ ಸಾಕ್ಷಿಯಾಗುವುದು ಸಿನಿ ರಸಿಕರ ಅತಿದೊಡ್ಡ ಬಯಕೆಯೇ ಸರಿ. ಭಾರತೀಯ ಚಲನಚಿತ್ರ ಪ್ರೇಮಿಗಳಿಗೆ, ಇದು ಸುಂದರ ಸಿನಿಮಾ ಪ್ರಯಾಣದಷ್ಟೇ ವಿಶಿಷ್ಟ ಅನುಭವ. ದೂರದರ್ಶನದ ಅಂತರರಾಷ್ಟ್ರೀಯ ಸುದ್ದಿ ವಾಹಿನಿಯಾದ ʻಡಿಡಿ ಇಂಡಿಯಾʼ, ಜಾಗತಿಕ ಸಿನಿಮಾ ಪ್ರಪಂಚದಿಂದ ಸಮೃದ್ಧ, ವೈವಿಧ್ಯಮಯ ಧ್ವನಿಗಳನ್ನು ನಿಮ್ಮ ಮುಂದೆ ತೆರೆದಿಡುವ ದೃಷ್ಟಿಯಿಂದ ನಿಮ್ಮನ್ನು ಈ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ಕೇನ್ಸ್‌ ನೆಲದಲ್ಲಿದ್ದುಕೊಂಡು, ಅಲ್ಲಿಂದ ಚಲನಚಿತ್ರೋತ್ಸವದ ನೇರ ಪ್ರಸಾರ ಮಾಡುತ್ತಿರುವ ಭಾರತದ ಏಕೈಕ ಸುದ್ದಿ ವಾಹಿನಿ ʻಡಿಡಿ ಇಂಡಿಯಾʼ.

ತಾರಾ ದಿಗ್ಗಜರ ಉಪಸ್ಥಿತಿಯ ನಡುವೆ ನಡೆದ ʻಇಂಡಿಯಾ ಪೆವಿಲಿಯನ್ʼ ಉದ್ಘಾಟನಾ ಸಮಾರಂಭವನ್ನು ʻಡಿಡಿ ಇಂಡಿಯಾʼ ಸಮಗ್ರವಾಗಿ ವರದಿ ಮಾಡಿತು. ʻಡಿಡಿ ಇಂಡಿಯಾʼ ಮತ್ತು ʻಡಿಡಿ ನ್ಯೂಸ್ʼನಲ್ಲಿ ಪ್ರತಿದಿನ ಅರ್ಧಗಂಟೆಗಳ ಕಾಲ 'ಇಂಡಿಯಾ ಅಟ್ ಕೇನ್ಸ್' ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು ಕೇನ್ಸ್‌ನ ಅಸಾಧಾರಣ ಅನುಭವವನ್ನು ಮೂಡಿಸುತ್ತಿದೆ- ಅಲ್ಲಿನ ತಾರಾ ಚೈತನ್ಯ, ಭಾವನೆಗಳು, ಉದಯೋನ್ಮುಖ ಟ್ರೆಂಡ್‌ಗಳು, 21ನೇ ಶತಮಾನದಲ್ಲಿ ಚಲನಚಿತ್ರೋತ್ಸವಗಳ ಪ್ರಸ್ತುತತೆ ಮತ್ತು ಚಲಿಸುವ ಚಿತ್ರಗಳ ಉತ್ಕೃಷ್ಟ ಅನುಭವಗಳನ್ನು ಈ ಕಾರ್ಯಕ್ರಮದ ಮೂಲಕ ಜನರ ಮುಂದಿಡುತ್ತಿದೆ. ಅಲ್ಲದೆ, ಭಾರತವನ್ನು ʻಕಂಟೆಂಟ್ ಹಬ್ʼ ಆಗಿ ಈ ಕಾರ್ಯಕ್ರಮವು ಪ್ರದರ್ಶಿಸುತ್ತಿದೆ. ಕೇನ್ಸ್‌ನಿಂದಲೇ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಪ್ರಸಾರ ಮಾಡುತ್ತಿರುವ ʻಡಿಡಿ ಇಂಡಿಯಾʼ, ಅವರ ಜೀವನ ಮತ್ತು ಕೆಲಸದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನೂ ಜನರಿಗೆ ತಲುಪಿಸುತ್ತಿದೆ.

ಕೇನ್ಸ್‌ ಚಲನಚಿತ್ರೋತ್ಸವದ ಈ ಆವೃತ್ತಿಯಲ್ಲಿ ಭಾರತವು ಅಧಿಕೃತ ಗೌರವಾನ್ವಿತ ಪಾಲುದಾರ ದೇಶವಾಗಿರುವುದರಿಂದ, ಕೇನ್ಸ್ ಚಲನಚಿತ್ರೋತ್ಸವದಲ್ಲಿ ಹೊರಹೊಮ್ಮುತ್ತಿರುವ ತಾರಾ ಧ್ವನಿಗಳೊಂದಿಗೆ ವೀಕ್ಷಕರನ್ನು ʻಡಿಡಿ ಇಂಡಿಯಾʼ ಸಂಪರ್ಕಿಸುತ್ತಿದೆ.  ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ದೇಶವಾಗಿ ಭಾರತವು ಅನ್ವೇಷಿಸಬೇಕಾದ ಕಥೆಗಳ ಬಗ್ಗೆ ಶೇಖರ್ ಕಪೂರ್ ಅವರ ಅಭಿಪ್ರಾಯ, ವಿಶ್ವದ ʻಕಂಟೆಂಟ್ ಹಬ್ʼ ಆಗುವ ಭಾರತದ ಅಗಾಧ ಸಾಮರ್ಥ್ಯದ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಅವರ ಸಂಕ್ಷಿಪ್ತ ವಿವರಣೆ ಮತ್ತು ಚಲನಚಿತ್ರೋತ್ಸವದ ಹುರುಪು-, ಚೈತನ್ಯದ ಬಗ್ಗೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಅಭಿಪ್ರಾಯ ಹೀಗೆ ಆಕರ್ಷಕ ಮಾಹಿತಿಗಳು ಕೇನ್ಸ್‌ನಿಂದ ಆಕರ್ಷಕ ಸಂಭಾಷಣೆಯ ಮೂಲಕ ಪ್ರತ್ಯಕ್ಷ ಪ್ರಸಾರ ಕಂಡಿವೆ.

 

 

 

ʻಡಿಡಿ ಇಂಡಿಯಾʼದಲ್ಲಿ ರಾತ್ರಿ 10 ಗಂಟೆಗೆ ಮತ್ತು ʻಡಿಡಿ ನ್ಯೂಸ್‌ʼನಲ್ಲಿ ರಾತ್ರಿ 10:30 ಕ್ಕೆ 'ಇಂಡಿಯಾ ಅಟ್ ಕೇನ್ಸ್' ದೈನಂದಿನ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ʻಡಿಡಿ ಇಂಡಿಯಾʼದಲ್ಲಿ 2022ರ ಕೇನ್ಸ್ ಚಲನಚಿತ್ರೋತ್ಸವವನ್ನು ವೀಕ್ಷಿಸಲು ಕೆಳಗಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.

https://static.pib.gov.in/WriteReadData/userfiles/image/image001FNOY.jpg

****



(Release ID: 1826661) Visitor Counter : 185