ಪ್ರಧಾನ ಮಂತ್ರಿಯವರ ಕಛೇರಿ

ಫಿನ್‌ಲ್ಯಾಂಡ್ ಪ್ರಧಾನ ಮಂತ್ರಿಯವರೊಂದಿಗೆ ಪ್ರಧಾನಿ ಮೋದಿ ಸಭೆ

Posted On: 04 MAY 2022 4:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2ನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಕೋಪನ್ ಹ್ಯಾಗನ್ನಲ್ಲಿ ಫಿನ್‌ಲ್ಯಾಂಡ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದರು. ಇಬ್ಬರೂ ನಾಯಕರ ನಡುವೆ ನಡೆದ ಮೊದಲ ವೈಯಕ್ತಿಕ ಭೇಟಿ ಇದಾಗಿದೆ. 

ಮಾರ್ಚ್ 16, 2021ರಂದು ನಡೆದ ದ್ವಿಪಕ್ಷೀಯ ವರ್ಚುವಲ್ ಶೃಂಗಸಭೆಯ ಫಲಿತಾಂಶಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಉಭಯ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು. 

ಸುಸ್ಥಿರತೆ, ಡಿಜಿಟಲೀಕರಣ, ವಿಜ್ಞಾನ ಮತ್ತು ಶಿಕ್ಷಣದಲ್ಲಿ ಸಹಕಾರ ಮುಂತಾದ ವಿಚಾರಗಳು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ ಎಂದು ಇಬ್ಬರೂ ನಾಯಕರು ಗಮನ ಸೆಳೆದರು. ಕೃತಕ ಬದ್ಧಿಮತ್ತೆ(ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಭವಿಷ್ಯದ ಮೊಬೈಲ್ ತಂತ್ರಜ್ಞಾನಗಳು, ಶುದ್ಧ ತಂತ್ರಜ್ಞಾನಗಳು ಮತ್ತು ʻಸ್ಮಾರ್ಟ್ ಗ್ರಿಡ್ʼಗಳಂತಹ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಅವಕಾಶಗಳ ಬಗ್ಗೆಯೂ ಅವರು ಚರ್ಚಿಸಿದರು. 

ಭಾರತೀಯ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದುವಂತೆ ಮತ್ತು ಭಾರತೀಯ ಮಾರುಕಟ್ಟೆಯು, ವಿಶೇಷವಾಗಿ ದೂರಸಂಪರ್ಕ ಮೂಲಸೌಕರ್ಯ ಮತ್ತು ಡಿಜಿಟಲ್ ರೂಪಾಂತರಗಳಲ್ಲಿ ನೀಡುವ ಅಗಾಧ ಅವಕಾಶಗಳ ಲಾಭವನ್ನು ಪಡೆದುಕೊಳ್ಳುವಂತೆ ಫಿನ್‌ಲ್ಯಾಂಡ್‌ನ ಕಂಪನಿಗಳಿಗೆ ಪ್ರಧಾನಮಂತ್ರಿಯವರು ಆಹ್ವಾನ ನೀಡಿದರು. 

ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಹಕಾರದ ಬಗ್ಗೆಯೂ ಚರ್ಚೆಗಳು ನಡೆದವು. 


***



(Release ID: 1822926) Visitor Counter : 161