ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ



“ಸ್ವಾತಂತ್ರ್ಯದ 75 ವರ್ಷಗಳು ನ್ಯಾಯಾಂಗ ಮತ್ತು ಕಾರ್ಯಾಂಗ ಎರಡರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನಿರಂತರವಾಗಿ ಸ್ಪಷ್ಟಪಡಿಸಿವೆ. ಅಗತ್ಯವಿರುವಲ್ಲೆಲ್ಲಾ ಈ ಬಾಂಧವ್ಯವು ದೇಶಕ್ಕೆ ಮಾರ್ಗದರ್ಶನ ನೀಡಲು ನಿರಂತರವಾಗಿ ವಿಕಸನಗೊಂಡಿದೆ

"2047 ರ ಭಾರತದ ಆಕಾಂಕ್ಷೆಗಳನ್ನು ಪೂರೈಸಲು ನಾವು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆ ಸಮರ್ಥಗೊಳಿಸುತ್ತೇವೆ, ಎಂಬುದು ಇಂದು ನಮ್ಮ ಆದ್ಯತೆಯಾಗಬೇಕು"

"ಅಮೃತ ಕಾಲದಲ್ಲಿನ ನಮ್ಮ ನಿಲುವು ಸುಲಭ ನ್ಯಾಯ, ತ್ವರಿತ ನ್ಯಾಯ ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸುವ ಅಂತಹ ನ್ಯಾಯಾಂಗ ವ್ಯವಸ್ಥೆಯಾಗಿರಬೇಕು"

"ಡಿಜಿಟಲ್ ಇಂಡಿಯಾ ಅಭಿಯಾನದ ಅತ್ಯಗತ್ಯ ಭಾಗವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಸರ್ಕಾರ ಪರಿಗಣಿಸುತ್ತದೆ"

"ದೇಶದ ಜನರು ನ್ಯಾಯಾಂಗ ಪ್ರಕ್ರಿಯೆಯೊಂದಿಗೆ ಸಂಪರ್ಕ ಹೊಂದಲು ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವುದು ಮಹತ್ವದ್ದಾಗಿದೆ"

“ದೇಶದಲ್ಲಿ ಸುಮಾರು 3.5 ಲಕ್ಷ ಕೈದಿಗಳು ವಿಚಾರಣಾಧೀನರಾಗಿ ಜೈಲಿನಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರು ಅಥವಾ ಸಾಮಾನ್ಯ ಕುಟುಂಬಗಳಿಂದ ಬಂದವರು”

"ನಾನು ಎಲ್ಲಾ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡುತ್ತೇನೆ

Posted On: 30 APR 2022 12:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ವಿಜ್ಞಾನ ಭವನದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದ ಉದ್ಘಾಟನಾ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಯು.ಯು.ಲಲಿತ್, ಕೇಂದ್ರ ಸಚಿವರುಗಳಾದ ಶ್ರೀ ಕಿರಣ್ ರಿಜಿಜು ಮತ್ತು ಪ್ರೊ.ಎಸ್.ಪಿ.ಸಿಂಗ್ ಬಾಘೇಲ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗೌರ್ನರ್ ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, “ನಮ್ಮ ದೇಶದಲ್ಲಿ ನ್ಯಾಯಾಂಗವು ಸಂವಿಧಾನದ ರಕ್ಷಕನ ಪಾತ್ರ ವಹಿಸಿದ್ದರೆ, ಶಾಸಕಾಂಗವು ನಾಗರಿಕರ ಆಶಯಗಳನ್ನು ಪ್ರತಿನಿಧಿಸುತ್ತದೆ. ಸಂವಿಧಾನದ ಈ ಎರಡು ಶಾಖೆಗಳ ಈ ಸಂಗಮ ಮತ್ತು ಸಮತೋಲನವು ದೇಶದಲ್ಲಿ ಪರಿಣಾಮಕಾರಿ ಮತ್ತು ಕಾಲಮಿತಿಯ ನ್ಯಾಯಾಂಗ ವ್ಯವಸ್ಥೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳು ನಿರಂತರವಾಗಿ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿವೆ ಎಂದು ಹೇಳಿದರು. ಅಗತ್ಯವಿರುವಲ್ಲೆಲ್ಲ ಈ ಬಾಂಧವ್ಯಗಳು ದೇಶಕ್ಕೆ ಮಾರ್ಗದರ್ಶನ ನೀಡಲು ವಿಕಾಸಗೊಂಡಿವೆ ಎಂದರು. ಈ ಸಮ್ಮೇಳನವು ಸಂವಿಧಾನದ ಸೊಬಗಿನ ರೋಮಾಂಚಕತೆಯ ದ್ಯೋತಕ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ನಾನು ಮುಖ್ಯಮಂತ್ರಿಯಾಗಿ ಮತ್ತು ಈಗ ಪ್ರಧಾನಮಂತ್ರಿಯಾಗಿ ಬಹಳ ಸಮಯದಿಂದ ಸಮ್ಮೇಳನಕ್ಕೆ ಬರುತ್ತಿದ್ದೇನೆ ಎಂದೂ ಹೇಳಿದರು. ‘ಒಂದು ರೀತಿಯಲ್ಲಿ ಈ ಸಮ್ಮೇಳನದ ವಿಷಯದಲ್ಲಿ ನಾನು ಸಾಕಷ್ಟು ಹಿರಿಯವನಾಗಿದ್ದೇನೆ’ ಎಂದು ಲಘು ಧಾಟಿಯಲ್ಲಿ ಹೇಳಿದರು.
ಸಮಾವೇಶಕ್ಕೊಂದು ಧ್ವನಿಯನ್ನು ನಿಗದಿಪಡಿಸಿದ ಪ್ರಧಾನಮಂತ್ರಿ, “2047 ರಲ್ಲಿ, ದೇಶವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವಾಗ, ನಾವು ದೇಶದಲ್ಲಿ ಯಾವ ರೀತಿಯ ನ್ಯಾಯಾಂಗ ವ್ಯವಸ್ಥೆಯನ್ನು ನೋಡಲು ಬಯಸುತ್ತೇವೆ? 2047ರ ಭಾರತದ ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ನಾವು ಹೇಗೆ ಸಮರ್ಥಗೊಳಿಸುತ್ತೇವೆ, ಈ ಪ್ರಶ್ನೆಗಳು ಇಂದು ನಮ್ಮ ಆದ್ಯತೆಯಾಗಿರಬೇಕು. "ಅಮೃತ ಕಾಲದಲ್ಲಿ ನಮ್ಮ ದೃಷ್ಟಿ ಸುಲಭ ನ್ಯಾಯ, ತ್ವರಿತ ನ್ಯಾಯ ಮತ್ತು ಎಲ್ಲರಿಗೂ ನ್ಯಾಯವನ್ನು ನೀಡುವ ನ್ಯಾಯಾಂಗ ವ್ಯವಸ್ಥೆಯಾಗಿರಬೇಕು" ಎಂದು ಅವರು ಹೇಳಿದರು.
ನ್ಯಾಯ ವಿತರಣೆಯಲ್ಲಿನ ವಿಳಂಬವನ್ನು ತಗ್ಗಿಸಲು ಸರ್ಕಾರ ಶ್ರಮಿಸುತ್ತಿದೆ ಮತ್ತು ನ್ಯಾಯಾಂಗದ ಶಕ್ತಿಯನ್ನು ಹೆಚ್ಚಿಸಲು ಮತ್ತು ನ್ಯಾಯಾಂಗ ಮೂಲಸೌಕರ್ಯವನ್ನು ಸುಧಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರಕರಣ ನಿರ್ವಹಣೆಗಾಗಿ ಐಸಿಟಿಯನ್ನು ನಿಯೋಜಿಸಲಾಗುತ್ತಿದ್ದು, ನ್ಯಾಯಾಂಗದ ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ಹೇಳಿದರು.
ನ್ಯಾಯಾಂಗ ಕಾರ್ಯಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ ಅಭಿಯಾನದ ಅತ್ಯಗತ್ಯ ಭಾಗವೆಂದು ಪರಿಗಣಿಸುತ್ತದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳು ಇದನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು. ಇ-ಕೋರ್ಟ್ಸ್ ಯೋಜನೆಯನ್ನು ಇಂದು ಅಭಿಯಾನದೋಪಾದಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಸಣ್ಣ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಡಿಜಿಟಲ್ ವಹಿವಾಟುಗಳು ಸಾಮಾನ್ಯವಾಗುತ್ತಿವೆ ಎಂದು ಅವರು ಯಶಸ್ಸಿನ ಉದಾಹರಣೆ ನೀಡಿದರು. ಕಳೆದ ವರ್ಷ ಜಗತ್ತಿನಲ್ಲಿ ನಡೆದ ಎಲ್ಲಾ ಡಿಜಿಟಲ್ ವಹಿವಾಟುಗಳಲ್ಲಿ ಶೇಕಡಾ 40 ರಷ್ಟು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆದಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ತಂತ್ರಜ್ಞಾನದ ಬಳಕೆಯ ವಿಷಯದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಚೈನ್‌ ಗಳು, ಎಲೆಕ್ಟ್ರಾನಿಕ್ ಡಿಸ್ಕವರಿ, ಸೈಬರ್‌ ಸೆಕ್ಯುರಿಟಿ, ರೋಬೋಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಬಯೋಎಥಿಕ್ಸ್‌ ನಂತಹ ವಿಷಯಗಳನ್ನು ಹಲವು ದೇಶಗಳ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದೆ ಎಂದು ಹೇಳಿದರು. "ನಮ್ಮ ದೇಶದಲ್ಲಿ ಕಾನೂನು ಶಿಕ್ಷಣವು ಈ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾಡಬೇಕಾಗಿದ್ದು, ಇದು ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.
ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವುದು ಮುಖ್ಯವಾಗಿದೆ, ಇದರಿಂದ ದೇಶದ ಜನರು ನ್ಯಾಯಾಂಗ ಪ್ರಕ್ರಿಯೆಯೊಂದಿಗೆ ಸಂಪರ್ಕ ಹೊಂದಿರುವುದಾಗಿ ಭಾವಿಸುತ್ತಾರೆ ಮತ್ತು ಅವರ ನಂಬಿಕೆಯು ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರಿಂದ ನ್ಯಾಯಾಂಗ ಪ್ರಕ್ರಿಯೆಗೆ ಜನರ ಹಕ್ಕು ಬಲಗೊಳ್ಳುತ್ತದೆ ಎಂದು ಹೇಳಿದರು. ತಾಂತ್ರಿಕ ಶಿಕ್ಷಣದಲ್ಲೂ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು
ತಿಳಿಸಿದರು.
ಕಾನೂನುಗಳಲ್ಲಿನ ಸಂಕೀರ್ಣತೆಗಳು ಮತ್ತು ಬಳಕೆಯಲ್ಲಿಲ್ಲದಿರುವ ಕಾನೂನುಗಳ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು. 2015ರಲ್ಲಿ ಸರ್ಕಾರ ಅಪ್ರಸ್ತುತವಾಗಿದ್ದ 1800 ಕಾನೂನುಗಳನ್ನು ಗುರುತಿಸಿದ್ದು, ಈಗಾಗಲೇ 1450 ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಂತಹ 75 ಕಾನೂನುಗಳನ್ನು ಮಾತ್ರ ರಾಜ್ಯಗಳು ತೆಗೆದುಹಾಕಿವೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, “ತಮ್ಮ ರಾಜ್ಯದ ನಾಗರಿಕರ ಹಕ್ಕುಗಳಿಗಾಗಿ ಮತ್ತು ಅವರ ಜೀವನ ಸುಗಮಗೊಳಿಸಲು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ." ಎಂದರು.
ನ್ಯಾಯಾಂಗ ಸುಧಾರಣೆ ಎಂಬುದು ಕೇವಲ ನೀತಿಯ ವಿಷಯವಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಮಾನವ ಸೂಕ್ಷ್ಮತೆಗಳು ಅದರಲ್ಲಿ ಒಳಗೊಂಡಿರುತ್ತವೆ ಮತ್ತು ಅವುಗಳನ್ನು ಎಲ್ಲಾ ಚರ್ಚೆಗಳ ಕೇಂದ್ರದಲ್ಲಿ ಇಡಬೇಕು. ಇಂದು ದೇಶದಲ್ಲಿ ಸುಮಾರು 3.5 ಲಕ್ಷ  ವಿಚಾರಣಾಧೀನ ಕೈದಿಗಳಿದ್ದು, ಜೈಲಿನಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಬಡವರು ಅಥವಾ ಸಾಮಾನ್ಯ ಕುಟುಂಬದವರು ಎಂದು ಅವರು ತಿಳಿಸಿದರು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿದ್ದು, ಈ ಪ್ರಕರಣಗಳನ್ನು ಪರಿಶೀಲಿಸಬಹುದು ಮತ್ತು ಸಾಧ್ಯವಾದರೆ, ಅಂತಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. "ಮಾನವೀಯ ಸಂವೇದನೆ ಮತ್ತು ಕಾನೂನಿನ ಆಧಾರದ ಮೇಲೆ ಈ ವಿಷಯಗಳಿಗೆ ಆದ್ಯತೆ ನೀಡುವಂತೆ ನಾನು ಎಲ್ಲಾ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇನೆ" ಎಂದು ಅವರು ಹೇಳಿದರು.
ನ್ಯಾಯಾಲಯಗಳಲ್ಲಿ ವಿಶೇಷವಾಗಿ ಸ್ಥಳೀಯ ಮಟ್ಟದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಪ್ರವೇಶ ಪ್ರಮುಖ ಸಾಧನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಸಮಾಜದಲ್ಲಿ ಸಂಧಾನದ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸುವ ಸಾವಿರಾರು ವರ್ಷಗಳ ಸಂಪ್ರದಾಯವಿದೆ. ಪರಸ್ಪರ ಒಪ್ಪಿಗೆ ಮತ್ತು ಪರಸ್ಪರ ಭಾಗವಹಿಸುವಿಕೆ, ತನ್ನದೇ ಆದ ರೀತಿಯಲ್ಲಿ, ನ್ಯಾಯದ ವಿಶಿಷ್ಟ ಮಾನವ ಪರಿಕಲ್ಪನೆಯಾಗಿದೆ ಎಂದು ಅವರು ಹೇಳಿದರು. ಈ ಚಿಂತನೆಯೊಂದಿಗೆ ಸರ್ಕಾರವು ಮಧ್ಯಸ್ಥಿಕೆ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ನಮ್ಮ ಶ್ರೀಮಂತ ಕಾನೂನು ಪರಿಣತಿಯೊಂದಿಗೆ, ನಾವು ಮಧ್ಯಸ್ಥಿಕೆಯಿಂದ ಪರಿಹಾರ ಪಡೆಯುವ ಕ್ಷೇತ್ರದಲ್ಲಿ ಜಾಗತಿಕ ನಾಯಕರಾಗಬಹುದು. ನಾವು ಇಡೀ ಜಗತ್ತಿಗೆ ಮಾದರಿಯನ್ನು ಪ್ರಸ್ತುತಪಡಿಸಬಹುದು ಎಂದು ಅವರು ಹೇಳಿದರು.

***


(Release ID: 1821612) Visitor Counter : 296