ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋವಿಡ್-19 ಸ್ಥಿತಿಗತಿ ಪರಾಮರ್ಶೆಗೆ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿಗಳ ಸಕಾಲಿಕ ಮಾರ್ಗದರ್ಶನ ಮತ್ತು ಸಾಂಕ್ರಾಮಿಕ ಕಾಣಿಸಿಕೊಂಡ ನಂತರದ ಬೆಂಬಲಕ್ಕಾಗಿ ಧನ್ಯವಾದ ಹೇಳಿದ ಮುಖ್ಯಮಂತ್ರಿಗಳು

“ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಹಕಾರಿ ಒಕ್ಕೂಟದ ಸ್ಫೂರ್ತಿಯಲ್ಲಿ ಭಾರತವು ಕೊರೊನಾ ವಿರುದ್ಧ ಸುದೀರ್ಘ ಯುದ್ದ ನಡೆಸಿತು’’

“ಕೊರೊನಾ ಸವಾಲು ಇನ್ನೂ ಸಂಪೂರ್ಣ ದೂರವಾಗಿಲ್ಲವೆಂಬುದು ಸ್ಪಷ್ಟವಾಗಿದೆ’’

ಆದಷ್ಟು ಶೀಘ್ರ ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವುದು ನಮ್ಮ ಆದ್ಯತೆಯಾಗಿದೆ. ಶಾಲೆಗಳಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುವ ಅಗತ್ಯವಿದೆ’’

“ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ಕಾಯತಂತ್ರವನ್ನು ನಾವು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು’’

“ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆ ಇಳಿಸಲು ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಕೆ ಮಾಡಿದೆ, ಆದರೆ ಹಲವು ರಾಜ್ಯಗಳು ತೆರಿಗೆ ತಗ್ಗಿಸಿಲ್ಲ’’

“ಇದು ಆಯಾ ರಾಜ್ಯಗಳ ಜನತೆಗೆ ಮಾಡುತ್ತಿರುವ ಅನ್ಯಾಯವಷ್ಟೇ ಅಲ್ಲ, ಇದರಿಂದ ನೆರೆಯ ರಾಜ್ಯಗಳಿಗೂ ತೊಂದರೆ ಆಗಲಿದೆ’’

“ಸಹಕಾರಿ ಒಕ್ಕೂಟದ ಸ್ಫೂರ್ತಿಯ ಹಿನ್ನೆಲೆಯಲ್ಲಿ ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲ ರಾಜ್ಯಗಳು ಒಂದು ತಂಡವಾಗಿ ಕೆಲಸ ಮಾಡಬೇಕು ನಾನು ಆಗ್ರಹಿಸುತ್ತೇನೆ’’

Posted On: 27 APR 2022 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿಲ್ಲಿ ಕೋವಿಡ್-19 ಪರಿಸ್ಥಿತಿ ಪರಾಮರ್ಶೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. 
ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಇತ್ತೀಚಿನ ದಿನ ಹೆಚ್ಚಾಗುತ್ತಿರುವ ಕುರಿತು ಕೇಂದ್ರ ಗೃಹ ಸಚಿವರು ಮಾತನಾಡಿದರು ಮತ್ತು ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯ ಎಂದರು. ಕೇಂದ್ರ ಆರೋಗ್ಯ ಕಾರ್ಯದರ್ಶಿ, ವಿಶ್ವದ ಹಲವು ದೇಶಗಳಲ್ಲಿ ಸೋಂಕು ಪ್ರಕರಣಗಳ ಹೆಚ್ಚಳದ ಬಗ್ಗೆ ಚರ್ಚಿಸಿದರು ಮತ್ತು ಭಾರತದ ಕೆಲ ರಾಜ್ಯಗಳಲ್ಲಿ ಪ್ರಕರಣಗಳ ಹೆಚ್ಚಾಗುತ್ತಿರುವುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ರಾಜ್ಯಗಳು ನಿಯಮಿತವಾಗಿ ದತ್ತಾಂಶದ ಮೇಲೆ ನಿಗಾ ವಹಿಸಬೇಕು ಮತ್ತು ವರದಿ ಮಾಡುವುದು, ಪರಿಣಾಮಕಾರಿ ನಿಗಾ ವಹಿಸುವುದು, ಮೂಲಸೌಕರ್ಯ ಉನ್ನತೀಕರಿಸುವುದು ಮತ್ತು ಕೇಂದ್ರ ನೀಡುವ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯದ ಕುರಿತೂ ಸಹ  ಅವರು ಮಾತನಾಡಿದರು.
ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗಿನಿಂದಲೂ ಸಕಾಲಿಕ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಎಲ್ಲ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಈ ಪರಿಶೀಲನಾ ಸಭೆಯನ್ನು ಪ್ರಧಾನಮಂತ್ರಿ ಅವರ ಸೂಕ್ತವಾದ ಸಮಯದಲ್ಲಿ ಕರೆದಿದ್ದಾರೆ ಎಂದು ಅವರು ಹೇಳಿದರು. ಅವರು ತಮ್ಮ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತು ಲಸಿಕೆಗಳ ಸ್ಥಿತಿಗತಿಯ ಸ್ಥೂಲ ಚಿತ್ರಣವನ್ನು ನೀಡಿದರು. 
ಪ್ರಧಾನಮಂತ್ರಿ ಅವರ ಜೀವನ ಮತ್ತು ಜೀವನೋಪಾಯದ ಮಂತ್ರವನ್ನು ರಾಜ್ಯದಲ್ಲಿ ಪಾಲಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳಿದರು. ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌)ದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಅಧಿಕ ಪಾಸಿಟಿವಿಟಿ ದರ ಕಂಡು ಬರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು. ಮಾಸ್ಕ್ ಗಳನ್ನು ಮತ್ತೆ ಕಡ್ಡಾಯಗೊಳಿಸಿರುವ ಬಗ್ಗೆಯೂ ಅವರು ಮಾತನಾಡಿದರು. ಪ್ರಧಾನಮಂತ್ರಿ ಅವರ ಸುದೃಢ ಬೆಂಬಲ ಮತ್ತು ಮಾರ್ಗದರ್ಶನವು ಹಿಂದಿನ ಅಲೆಗಳ ವೇಳೆ ರಾಜ್ಯವನ್ನು ಉಳಿಸಲು ಸಹಾಯ ಮಾಡಿತು ಎಂದು ಮಿಜೋರಾಂ ಮುಖ್ಯಮಂತ್ರಿ ಹೇಳಿದರು.  ಇತರ ಆರೋಗ್ಯ ವಿಚಾರಗಳು ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಬೆಂಬಲ ನೀಡಿದ್ದಕ್ಕಾಗಿ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದರು. ಕೋವಿಡ್ ಅಲೆಗಳನ್ನು  ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಲು ಪ್ರಧಾನಮಂತ್ರಿಯವರು ನೀಡಿದ ಮಾರ್ಗದರ್ಶನವು ಕಲಿಕೆಯ ಪಾಠವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಹೇಳಿದರು. ಕೋವಿಡ್ ಸೂಕ್ತ ನಡೆವಳಿಕೆ ಪಾಲನೆ ಖಾತ್ರಿಪಡಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಮುಖ್ಯವಾಗಿ ದೆಹಲಿ ಸುತ್ತಮುತ್ತ, ಗುರುಗ್ರಾಮ ಮತ್ತು ಫರಿದಾಬಾದ್ ನಗರಗಳಲ್ಲಿ ಕಂಡುಬರುತ್ತಿವೆ ಎಂದು ಹರಿಯಾಣ ಮುಖ್ಯಮಂತ್ರಿಗಳು ಹೇಳಿದರು.
ಪ್ರಧಾನಮಂತ್ರಿ ಅವರು ತಮ್ಮ ಸಮಾಪನ ಭಾಷಣವನ್ನು ತಮಿಳುನಾಡಿನ ತಂಜಾವೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಮೂಲಕ ಪ್ರಾರಂಭಿಸಿದರು. ಶ್ರೀ ನರೇಂದ್ರ ಮೋದಿ ಅವರು ಅಪಘಾತದ ಸಂತ್ರಸ್ತರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಪರಿಹಾರವನ್ನು ಘೋಷಿಸಿದರು. 
ಕೊರೊನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಉಲ್ಲೇಖಿಸಿದರು. ಮುಖ್ಯಮಂತ್ರಿಗಳು, ಅಧಿಕಾರಿಗಳು ಮತ್ತು ಎಲ್ಲಾ ಕೊರೊನಾ ಯೋಧರ ಪ್ರಯತ್ನಗಳಿಗೆ ಅವರು ಮೆಚ್ಚುಗೆ ಸೂಚಿಸಿದರು. ಕೊರೊನಾ ಸವಾಲು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಓಮಿಕ್ರಾನ್ ಮತ್ತು  ಆನಂತರ ವೈರಾಣುಗಳು ಯುರೋಪ್‌ನ ಹಲವು ದೇಶಗಳಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದೆಂಬುದು ದೃಢಪಟ್ಟಿದೆ. ವೈರಾಣು ರೂಪಾಂತರಿಗಳು ಅನೇಕ ದೇಶಗಳಲ್ಲಿ ಸೋಂಕು ಉಲ್ಬಣ ಉಂಟು ಮಾಡುತ್ತಿವೆ. ಭಾರತವು ಹಲವು ದೇಶಗಳಿಗಿಂತ ಉತ್ತಮವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಅವರು ಹೇಳಿದರು. ಕಳೆದ ಎರಡು ವಾರಗಳಲ್ಲಿ, ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾವು ಇನ್ನೂ ಜಾಗರೂಕರಾಗಿರಬೇಕೆಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. 
ಓಮಿಕ್ರಾನ್ ಅಲೆಯನ್ನು ದೃಢಸಂಕಲ್ಪದಿಂದ ಮತ್ತು ಆತಂಕವಿಲ್ಲದೆ ನಿರ್ವಹಿಸಲಾಗಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಆರೋಗ್ಯ ಮೂಲಸೌಕರ್ಯ, ಆಮ್ಲಜನಕ ಪೂರೈಕೆ ಅಥವಾ ಲಸಿಕೆ ಸೇರಿದಂತೆ ಕೊರೊನಾ ಹೋರಾಟದ ಎಲ್ಲಾ ಅಂಶಗಳನ್ನು ಬಲವರ್ಧನೆಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮೂರನೇ ಅಲೆಯಲ್ಲಿ ಯಾವುದೇ ರಾಜ್ಯದಲ್ಲೂ ಪರಿಸ್ಥಿತಿ ನಿಯಂತ್ರಣ ಕೈ ಮೀರಿದ್ದನ್ನು ನೋಡಲಿಲ್ಲ. ಇದನ್ನು ಬೃಹತ್ ಲಸಿಕೆ ಅಭಿಯಾನದ ದೃಷ್ಟಿಯಲ್ಲಿ ನೋಡಬೇಕು ಎಂದು ಪ್ರಧಾನಿ ಹೇಳಿದರು. ಲಸಿಕೆಯು ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಿದೆ ಮತ್ತು ಶೇ.96ರಷ್ಟು ವಯಸ್ಕ ಜನಸಂಖ್ಯೆಯು ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿರುವುದು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ಶೇ.84ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು. ತಜ್ಞರ ಪ್ರಕಾರ ಲಸಿಕೆಯು ಕರೋನಾ ವಿರುದ್ಧದ ಅತಿದೊಡ್ಡ ರಕ್ಷಣೆಯಾಗಿದೆ ಎಂದು ಅವರು ಹೇಳಿದರು. 

ದೀರ್ಘಕಾಲದ ನಂತರ ಶಾಲೆಗಳು ತೆರೆದಿವೆ ಮತ್ತು ಕೆಲವು ಜಾಗಗಳಲ್ಲಿ  ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವು ಪೋಷಕರು ಆತಂಕಕ್ಕೊಳಗಾಗಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಹೆಚ್ಚು ಹೆಚ್ಚು ಮಕ್ಕಳು ಲಸಿಕೆ ಪಡೆಯುತ್ತಿದ್ದಾರೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಮಾರ್ಚ್‌ನಲ್ಲಿ 12-14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ನಿನ್ನೆಯಷ್ಟೇ 6-12 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದರು. “ನಮ್ಮ ಆದ್ಯತೆಯು ಎಲ್ಲಾ ಅರ್ಹ ಮಕ್ಕಳಿಗೆ ಆದಷ್ಟು ಶೀಘ್ರ ಲಸಿಕೆಯನ್ನು ನೀಡುವುದಾಗಿದೆ. ಅದಕ್ಕಾಗಿ ಮೊದಲಿನಂತೆ ಶಾಲೆಗಳಲ್ಲೂ ವಿಶೇಷ ಅಭಿಯಾನದ ಅಗತ್ಯವಿದೆ. ಶಿಕ್ಷಕರು ಮತ್ತು ಪೋಷಕರು ಈ ಬಗ್ಗೆ ಜಾಗೃತರಾಗಿರಬೇಕು” ಎಂದು ಪ್ರಧಾನಮಂತ್ರಿ ಹೇಳಿದರು. ಲಸಿಕೆ ರಕ್ಷಣಾ ಕವಚವನ್ನು ಬಲಪಡಿಸಲು ದೇಶದ ಎಲ್ಲಾ ವಯಸ್ಕರಿಗೆ ಮುನ್ನೆಚ್ಚರಿಕೆಯ ಡೋಸ್ ಲಭ್ಯವಿದೆ. ಶಿಕ್ಷಕರು, ಪೋಷಕರು ಮತ್ತು ಇತರ ಅರ್ಹ ಜನರು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.  ಮೂರನೇ ಅಲೆಯ ಸಮಯದಲ್ಲಿ, ಭಾರತವು ದಿನಕ್ಕೆ 3 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಮತ್ತು ಎಲ್ಲಾ ರಾಜ್ಯಗಳು ಪರಿಸ್ಥಿತಿಯನ್ನು ನಿಭಾಯಿಸಿದವು ಮತ್ತು ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟವು ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಮತೋಲನವು ನಮ್ಮ ಭವಿಷ್ಯದ ಕಾರ್ಯತಂತ್ರದಲ್ಲೂ ತಿಳಿಸಬೇಕು ಎಂದು ಅವರು ಹೇಳಿದರು. ವಿಜ್ಞಾನಿಗಳು ಮತ್ತು ತಜ್ಞರು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದ್ದಾರೆ ಮತ್ತು ಅವರ ಸಲಹೆಗಳ ಮೇಲೆ ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು. “ಮುಂಚಿತವಾಗಿಯೇ ಸೋಂಕು ತಡೆಗಟ್ಟುವುದು ನಮ್ಮ ಆದ್ಯತೆಯಾಗಿದೆ ಮತ್ತು ಈಗಲೂ ಹಾಗೆಯೇ ಇರಬೇಕು. ನಮ್ಮ ಪರೀಕ್ಷೆ, ಪತ್ತೆ ಮತ್ತು ಅದೇ ಪರಿಣಾಮಕಾರಿ ಚಿಕಿತ್ಸೆ ನೀಡುವ ತಂತ್ರವನ್ನು ನಾವು ಜಾರಿಗೊಳಿಸಬೇಕಾಗಿದೆ’’ ಎಂದು ಅವರು ಹೇಳಿದರು. 
ಗಂಭೀರವಾದ ಜ್ವರ ಪ್ರಕರಣಗಳ ಶೇಕಡಾವಾರು ಪರೀಕ್ಷೆ ಮತ್ತು ಪಾಸಿಟಿವ್ ಪ್ರಕರಣಗಳ ಜೀನೋಮ್ ಅನುಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆ ಪಾಲನೆ ಮತ್ತು ಆಂತಕ ನಿವಾರಿಸುವ ತಪ್ಪಿಸುವ ಬಗ್ಗೆ ಒತ್ತು ನೀಡಬೇಕೆಂದು ಪ್ರಧಾನಮಂತ್ರಿ ಹೇಳಿದರು. ಆರೋಗ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಮಾನವಶಕ್ತಿಯ ಉನ್ನತೀಕರಣ ಮುಂದುವರಿಕೆಗೂ ಒತ್ತು ನೀಡಬೇಕು ಎಂದು ಅವರು ಹೇಳಿದರು. 
ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಹಕಾರಿ ಒಕ್ಕೂಟದ ಸ್ಫೂರ್ತಿಯೊಂದಿಗೆ ಭಾರತವು ಕರೋನಾ ವಿರುದ್ಧ ಸುದೀರ್ಘ ಹೋರಾಟ ನಡೆಸಿದೆ ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಭಾರತದ ಆರ್ಥಿಕತೆಯ ಬಲವರ್ಧನೆಗಾಗಿ ಆರ್ಥಿಕ ನಿರ್ಧಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಅಗತ್ಯ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಜಾಗತಿಕ ಘಟನೆಗಳು ಸೃಷ್ಟಿಸಿರುವ ಪರಿಸ್ಥಿತಿಯಿಂದಾಗಿ ಸಹಕಾರಿ ಒಕ್ಕೂಟದ ಈ ಮನೋಭಾವವು ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಅವರು ಈ ಅಂಶವನ್ನು ವಿವರಿಸಿದರು. 
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತ ಮಾಡಿದೆ ಮತ್ತು ತೆರಿಗೆಯನ್ನು ತಗ್ಗಿಸಲು ರಾಜ್ಯಗಳಿಗೆ ಮನವಿ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವು ರಾಜ್ಯಗಳು ತೆರಿಗೆಗಳನ್ನು ಕಡಿತಗೊಳಿಸಿದವು ಆದರೆ ಕೆಲವು ರಾಜ್ಯಗಳು ಕಡಿತದ ಪ್ರಯೋಜನಗಳನ್ನು ಜನರಿಗೆ ವರ್ಗಾಯಿಸಲಿಲ್ಲ, ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಅಧಿಕವಾಗಲು ಕಾರಣವಾಯಿತು. ಇದರಿಂದ ರಾಜ್ಯದ ಜನತೆಗೆ ಅನ್ಯಾಯವಾಗುವುದಲ್ಲದೆ ನೆರೆಯ ರಾಜ್ಯಗಳಿಗೂ ತೊಂದರೆಯಾಗುತ್ತದೆ. ಕರ್ನಾಟಕ ಮತ್ತು ಗುಜರಾತ್‌ನಂತಹ ರಾಜ್ಯಗಳು ಆದಾಯ ನಷ್ಟದ ನಡುವೆಯೂ ಜನರ ಕಲ್ಯಾಣಕ್ಕಾಗಿ ತೆರಿಗೆ ಕಡಿತ ನಿರ್ಧಾರವನ್ನು ಕೈಗೊಂಡವು, ಆದರೆ ಅವರ ನೆರೆಯ ರಾಜ್ಯಗಳು ತೆರಿಗೆಯನ್ನು ಕಡಿಮೆ ಮಾಡದೆ ಆದಾಯಗಳಿಸುತ್ತಿವೆ ಎಂದು ಅವರು ಹೇಳಿದರು. 
ಅಂತೆಯೇ, ಕಳೆದ ನವೆಂಬರ್ ನಲ್ಲಿ ವ್ಯಾಟ್ ತೆರಿಗೆ ಕಡಿಮೆ ಮಾಡುವಂತೆ ಮನವಿ ಮಾಡಲಾಗಿತ್ತು ಆದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಜಾರ್ಖಂಡ್ ನಂತಹ ಹಲವು ರಾಜ್ಯಗಳು ಕಾರಣಾಂತರಗಳಿಂದ ಕಡಿತ ಮಾಡಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಕೇಂದ್ರದ ಆದಾಯದ ಶೇ.42ರಷ್ಟು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ ಎಂದು ಪ್ರಧಾನಿ ಹೇಳಿದರು. "ಸಹಕಾರಿ ಒಕ್ಕೂಟದ ಮನೋಭಾವವನ್ನು ಅನುಸರಿಸಿ ಜಾಗತಿಕ ಬಿಕ್ಕಟ್ಟಿನ ಈ ಸಮಯದಲ್ಲಿ ತಂಡವಾಗಿ ಕೆಲಸ ಮಾಡಲು ನಾನು ಎಲ್ಲಾ ರಾಜ್ಯಗಳಿಗೆ ಕರೆ ನೀಡುತ್ತೇನೆ’’ ಎಂದು ಪ್ರಧಾನಮಂತ್ರಿ ಮನವಿ ಮಾಡಿದರು. 
ತಾಪಮಾನ ಹೆಚ್ಚಾಗುತ್ತಿರುವುದರಿಂದ ಕಾಡುಗಳು ಮತ್ತು ಕಟ್ಟಡಗಳಲ್ಲಿ ಬೆಂಕಿಯ ಅವಘಡಗಳು ಹೆಚ್ಚಾಗುತ್ತಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅವರು ವಿಶೇಷವಾಗಿ ಆಸ್ಪತ್ರೆಗಳ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಪರಿಶೋಧನೆ ಮಾಡುವ ಅಗತ್ಯವಿದೆ ಎಂದು ಹೇಳಿದರು. ಈ ಸವಾಲನ್ನು ಎದುರಿಸಲು ನಮ್ಮ ವ್ಯವಸ್ಥೆಗಳು ಸಮಗ್ರವಾಗಿರಬೇಕು ಮತ್ತು ಕನಿಷ್ಠ ಸಮಯದಲ್ಲಿ ನಾವು ಪ್ರತಿಕ್ರಿಯಿಸಬೇಕು ಎಂದು ಅವರು ಹೇಳಿದರು.  

***


(Release ID: 1820583) Visitor Counter : 214