ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಮಾತುಕತೆ ನಡೆಸಿದರು

Posted On: 25 APR 2022 4:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಗಮಿಸಿದ ಯುರೋಪಿಯನ್ ಕಮಿಷನ್ ಅಧ್ಯಕ್ಷೆಯಾದ ಗೌರವಾನ್ವಿತ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು.

ಈ ವರ್ಷ ರೈಸಿನಾ ಡೈಲಾಗ್ ನಲ್ಲಿ ಉದ್ಘಾಟನಾ ಭಾಷಣ ಮಾಡಲು ಒಪ್ಪಿಗೆ ನೀಡಿದ ಯುರೋಪಿಯನ್ ಕಮಿಷನ್ ಅಧ್ಯಕ್ಷರಿಗೆ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರ ಭಾಷಣವನ್ನು ಕೇಳಲು ಬಹಳ ಉತ್ಸುಕನಾಗಿದ್ದೇನೆ ಎಂದು ಪ್ರಧಾನಮಂತ್ರಿ  ಅವರು ಹೇಳಿದರು.

ಬೃಹತ್ ಮತ್ತು ಶಕ್ತಿಶಾಲಿಯಾದ ಪ್ರಜಾಸತ್ತಾತ್ಮಕ ಸಮಾಜಗಳಾಗಿ, ಭಾರತ ಮತ್ತು ಯುರೋಪ್ ಒಂದೇ ರೀತಿಯ ಮೌಲ್ಯಗಳನ್ನು ಮತ್ತು ಅನೇಕ ಜಾಗತಿಕ ವಿಷಯಗಳ ಸಾಮಾನ್ಯ ದೃಷ್ಟಿಕೋನಗಳನ್ನು ಸಮವಾಗಿ ಹಂಚಿಕೊಳ್ಳುತ್ತವೆ ಎಂದು ಇಬ್ಬರೂ ನಾಯಕರು ಪರಸ್ಪರ ಸಹಮತ ವ್ಯಕ್ತಪಡಿಸಿದರು. 

ಮುಕ್ತ ವ್ಯಾಪಾರ ಒಪ್ಪಂದ ಮತ್ತು ಹೂಡಿಕೆ ಒಪ್ಪಂದದ ಕುರಿತು ಮುಂಬರುವ ದಿನಗಳಲ್ಲಿ ಚರ್ಚೆ ಮರು-ಪ್ರಾರಂಭ ಸೇರಿದಂತೆ, ಭಾರತ- ಯುರೋಪಿಯನ್ ಒಕ್ಕೂಟ  ವ್ಯೂಹಾತ್ಮಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಇಬ್ಬರು ನಾಯಕರು ಪರಿಶೀಲಿಸಿದರು. ಭಾರತ- ಯುರೋಪಿಯನ್ ಒಕ್ಕೂಟ  ಸಂಬಂಧದ ಎಲ್ಲಾ ಅಂಶಗಳ ರಾಜಕೀಯ-ಮಟ್ಟದ ಮೇಲ್ವಿಚಾರಣೆ ಮಾಡಲು ಮತ್ತು ಸಹಕಾರದ ವಿವಿಧ ಕ್ಷೇತ್ರಗಳ ನಡುವೆ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ವ್ಯಾಪಾರ ಮತ್ತು ತಂತ್ರಜ್ಞಾನ ಆಯೋಗವನ್ನು ಸ್ಥಾಪಿಸಲು ಈ ಸಂದರ್ಭದಲ್ಲಿ ಒಪ್ಪಿಗೆ ನೀಡಲಾಯಿತು.

ಹಸಿರು ಹೈಡ್ರೋಜನ್ ನಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವಿನ ಸಹಯೋಗದ ಸಾಧ್ಯತೆಗಳು ಸೇರಿದಂತೆ ಹವಾಮಾನ ಸಂಬಂಧಿತ ವಿಷಯಗಳ ಕುರಿತು ಇಬ್ಬರು ನಾಯಕರೂ ವ್ಯಾಪಕ ಚರ್ಚೆ ನಡೆಸಿದರು. ಕೋವಿಡ್ -19 ನ ನಿರಂತರ ಸವಾಲುಗಳನ್ನು ಇಬ್ಬರೂ ನಾಯಕರು ಚರ್ಚಿಸಿದರು ಮತ್ತು ಪ್ರಪಂಚದ ಎಲ್ಲಾ ಭಾಗಗಳಿಗೆ ಲಸಿಕೆಗಳು ಮತ್ತು ಚಿಕಿತ್ಸಕಗಳಿಗೆ ಸಮಾನ ಪ್ರವೇಶ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಇಬ್ಬರೂ ನಾಯಕರು ವಿವರಿಸಿದರು. 

ಇದರ ಜೊತೆಗೆ, ಉಕ್ರೇನ್ ನಲ್ಲಿನ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ಪ್ರಾಮುಖ್ಯತೆಯ ಹಲವಾರು ಭೌಗೋಳಿಕ-ರಾಜಕೀಯ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

 

****



(Release ID: 1819923) Visitor Counter : 219