ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು (ಡಿಎಪಿಡಿ) ತನ್ನ  'ಒಂದು ದೇಶ ಒಂದು ಪಡಿತರ ಚೀಟಿ' ಯೋಜನೆಗಾಗಿ 2020ನೇ ಸಾಲಿನ ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿʼಯನ್ನು ಪಡೆದಿದೆ



ದೇಶಾದ್ಯಂತ ನಾಗರಿಕ-ಕೇಂದ್ರಿತ ಸರಕಾರಿ ಯೋಜನೆಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ʻಒಂದು ದೇಶ, ಒಂದು ಪಡಿತರ ಚೀಟಿʼ (ಒಎನ್ಒಆರ್‌ಸಿ) ದತ್ತಾಂಶವನ್ನು ಇತರ ಸಚಿವಾಲಯಗಳು / ಇಲಾಖೆಗಳು ಬಳಸಿಕೊಳ್ಳಲು ಅವುಗಳೊಂದಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸಹಕರಿಸುತ್ತಿದೆ

Posted On: 22 APR 2022 4:52PM by PIB Bengaluru

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು (ಡಿಎಫ್‌ಪಿಡಿ) ತನ್ನ 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' (ಒಎನ್ಒಆರ್‌ಸಿ) ಯೋಜನೆಗಾಗಿ 2020ನೇ ಸಾಲಿನ ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರತಿಷ್ಠಿತ ಪ್ರಧಾನ ಮಂತ್ರಿ ಪ್ರಶಸ್ತಿʼಗೆ ಭಾಜನವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 21.04.2022ರಂದು ನವದೆಹಲಿಯಲ್ಲಿ ನಡೆದ 15ನೇ ʻನಾಗರಿಕ ಸೇವಾ ದಿನʼದ ಸಂದರ್ಭದಲ್ಲಿ ʻಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು. ನಾವಿನ್ಯತೆ(ಸಾಮಾನ್ಯ)-ಕೇಂದ್ರಿತ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಹತ್ವಾಕಾಂಕ್ಷಿ ʻಒಎನ್ಒಆರ್‌ಸಿʼ ಯೋಜನೆಯು ದೇಶವ್ಯಾಪಿ ಆವಿಷ್ಕಾರವಾಗಿದೆ. ಇದು ಎಲ್ಲಾ ʻಎನ್ಎಫ್ಎಸ್ಎʼ ಫಲಾನುಭವಿಗಳು, ವಿಶೇಷವಾಗಿ ವಲಸೆ ಫಲಾನುಭವಿಗಳು ತಮ್ಮ ಬಯೋಮೆಟ್ರಿಕ್/ ಆಧಾರ್ ದೃಢೀಕರಣದೊಂದಿಗೆ ತಮ್ಮ ಹಾಲಿ ಪಡಿತರ ಚೀಟಿಯ ಮೂಲಕವೇ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ (ಎಫ್‌ಪಿಎಸ್) ಪೂರ್ಣ ಅಥವಾ ಭಾಗಶಃ ಆಹಾರ ಧಾನ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯಲ್ಲಿ ಸಂಬಂಧಪಟ್ಟ ಕುಟುಂಬದ ಸದಸ್ಯರಾರಾದರೂ ತವರಿನಲ್ಲಿ ಉಳಿದಿದ್ದರೆ, ಅವರು ಸಹ ಅದೇ ಪಡಿತರ ಚೀಟಿಯಲ್ಲಿ ಅವರ ಪಾಲಿನ ಉಳಿದ ಆಹಾರ ಧಾನ್ಯಗಳ ಪಡೆಯಬಹುದಾಗಿದೆ. 

(ಕಾರ್ಯದರ್ಶಿ ಸುಧಾಂಶು ಪಾಂಡೆ {ಎಡಗಡೆಯಿಂದ 2ನೇಯವರು }, ಜಂಟಿ ಕಾರ್ಯದರ್ಶಿ ಎಸ್.ಜಗನ್ನಾಥನ್ (ಮಧ್ಯದಲ್ಲಿರುವವರು), ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಇತರ ಅಧಿಕಾರಿಗಳು, ʻಪಿಎಂ ಅವಾರ್ಡ್ ಟ್ರೋಫಿ ಮತ್ತು ಸ್ಕ್ರೋಲ್-2020ʼನೊಂದಿಗೆ.)
ಇಲಾಖೆಯು ಇತರ ಸಚಿವಾಲಯಗಳು / ಇಲಾಖೆಗಳಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ), ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ (ಎಂಒಎಚ್‌ಯುಎ), ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (ಎಂಒಎಲ್ಇ) ಮತ್ತು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ (ಡಿಒಎಎಫ್‌ಡಬ್ಲ್ಯೂ) ಮುಂತಾದವುಗಳೊಂದಿಗೆ ದೇಶಾದ್ಯಂತ ನಾಗರಿಕ-ಕೇಂದ್ರಿತ ಸರಕಾರಿ ಯೋಜನೆಗಳ ವ್ಯಾಪ್ತಿಯನ್ನು ಆಳಗೊಳಿಸಲು ʻಒಎನ್ಒಆರ್‌ಸಿʼ ದತ್ತಾಂಶವನ್ನು ದೊಡ್ಡ ಪ್ರಮಾಣವನ್ನು ಬಳಸಿಕೊಳ್ಳಲು ಸಹಕರಿಸುತ್ತಿದೆ.
ಆಗಸ್ಟ್ 2019ರಲ್ಲಿ, 4 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾದ ʻಒಎನ್ಒಆರ್‌ಸಿʼಯನ್ನು ಡಿಸೆಂಬರ್ 2020ರ ವೇಳೆಗೆ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಚಾಲನೆಗೊಳಿಸಲಾಯಿತು. ಅಂದಿನಿಂದ, ಹಂತ ಹಂತವಾಗಿ, ʻಒಎನ್ಓಆರ್‌ಸಿʼ ಯೋಜನೆಯನ್ನು ಪ್ರಸ್ತುತ 35 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದ್ದು, ಫೆಬ್ರವರಿ 2022ರವರೆಗೆ ದೇಶದ ಸುಮಾರು 77 ಕೋಟಿ ಫಲಾನುಭವಿಗಳು (ʻಎನ್ಎಫ್ಎಸ್ಎʼ ಜನಸಂಖ್ಯೆಯ ಸುಮಾರು 96.8%) ಇದರಡಿ ಪ್ರಯೋಜನ ಪಡೆಯುತ್ತಿದ್ದಾರೆ. 
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ʻಒಎನ್ಒಆರ್‌ಸಿʼ ಯೋಜನೆಯು ʻಎನ್ಎಫ್ಎಸ್ಎʼ ಫಲಾನುಭವಿಗಳಿಗೆ, ವಿಶೇಷವಾಗಿ ವಲಸಿಗರಿಗೆ ತಾವಿದ್ದಲ್ಲೇ ತಮ್ಮ ಪಡಿತರವನ್ನು (ಪೋರ್ಟಬಲ್) ಪಡೆಯಲು ಅನುವುಮಾಡಿದೆ. ಇದರ ಮೂಲಕ ಲಾಕ್‌ಡೌನ್‌ ಅವಧಿಯಲ್ಲಿ ದೇಶದ ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಗಳಲ್ಲಿ ಎಲ್ಲಿ ಬೇಕಾದರೂ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಆಗಸ್ಟ್ 2019ರಲ್ಲಿ ʻಒಎನ್ಒಆರ್‌ಸಿʼ ಯೋಜನೆ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 65 ಕೋಟಿಗೂ ಹೆಚ್ಚು ʻಪೋರ್ಟಬಿಲಿಟಿʼ ವಹಿವಾಟುಗಳು ದಾಖಲಾಗಿದ್ದು, ಸುಮಾರು 36,000 ಕೋಟಿ ರೂ. ಮೌಲ್ಯದ ಸುಮಾರು 121 ಲಕ್ಷ ಮೆಟ್ರಿಕ್ ಟನ್ ಸಬ್ಸಿಡಿಯುಕ್ತ ಆಹಾರ ಧಾನ್ಯಗಳನ್ನು ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಪೋರ್ಟಬಿಲಿಟಿ ವಹಿವಾಟುಗಳ ಮೂಲಕ ವಿತರಿಸಲಾಗಿದೆ. ಈ ಯೋಜನೆಯ ಅನುಷ್ಠಾನ ವ್ಯಾಪ್ತಿಯ ಪ್ರಮುಖ ಸೂಚ್ಯಂಕವೆಂಬಂತೆ, ಪ್ರಸ್ತುತ ʻಒಎನ್ಒಆರ್‌ಸಿʼ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಸಿಕ ಸರಾಸರಿ ಸುಮಾರು 2.7 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು (ನಿಯಮಿತ ʻಎನ್ಎಫ್ಎಸ್ಎʼ ಮತ್ತು ಪಿಎಂ-ಜಿಕೆಎವೈ ಆಹಾರ ಧಾನ್ಯಗಳ ವಹಿವಾಟುಗಳು ಸೇರಿದಂತೆ) ದಾಖಲಿಸಲಾಗುತ್ತಿವೆ. ಕೋವಿಡ್ -19 ಅವಧಿಯಲ್ಲಿ (ಏಪ್ರಿಲ್ 2020ರಿಂದ ಇಲ್ಲಿಯವರೆಗೆ) ಫಲಾನುಭವಿಗಳು ಸುಮಾರು 58 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ಮಾಡಿದ್ದಾರೆ.
ʻಒಎನ್ಒಆರ್‌ಸಿʼಗಾಗಿ ವಿಶೇಷವಾಗಿ ವೈಯಕ್ತೀಕರಿಸಿದ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಸಹ 13 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಸುಮಾರು 20 ಲಕ್ಷ ಬಾರಿ ಅದನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿದೆ. ಇದಲ್ಲದೆ, ವಲಸಿಗ ʻಎನ್ಎಫ್ಎಸ್ಎʼ ಫಲಾನುಭವಿಗಳಿಗಾಗಿ 5 ಅಂಕಿಗಳ '14445' ಉಚಿತ ಸಹಾಯವಾಣಿಯನ್ನು ʻಒಎನ್ಒಆರ್‌ಸಿʼ ಅಡಿಯಲ್ಲಿ ಹೆಚ್ಚಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಾಗಿಸಲಾಗಿದೆ.


***********


(Release ID: 1819110) Visitor Counter : 274