ಸಂಪುಟ

ʻಕಲ್ಲಿದ್ದಲು ಹೊಂದಿರುವ ಪ್ರದೇಶಗಳ (ಸ್ವಾಧೀನ ಮತ್ತು ಅಭಿವೃದ್ಧಿ) ಕಾಯ್ದೆ-1957ʼರ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯ ಬಳಕೆಯ ನೀತಿಗೆ ಸಚಿವ ಸಂಪುಟದ ಅನುಮೋದನೆ  


ಈ ನೀತಿಯು ಕಲ್ಲಿದ್ದಲು ಮತ್ತು ಇಂಧನಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಮತ್ತು ಅಭಿವೃದ್ಧಿಪಡಿಸಲು ಗಣಿಗಾರಿಕೆಯೇತರ ಭೂಮಿಯನ್ನು ಮುಕ್ತಗೊಳಿಸುತ್ತದೆ 

Posted On: 13 APR 2022 3:26PM by PIB Bengaluru

ಕಲ್ಲಿದ್ದಲು ಗಣಿಗಾರಿಕೆ ಮಾಡಿ ಮುಗಿಸಿದ ಅಥವಾ ಕಲ್ಲಿದ್ದಲು ಗಣಿಗಾರಿಕೆಗೆ ಪ್ರಸ್ತುತ ಪ್ರಾಯೋಗಿಕವಾಗಿ ಸೂಕ್ತವಲ್ಲದ ಅಥವಾ ಕಲ್ಲಿದ್ದಲು ವಲಯದಲ್ಲಿ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಪ್ರಾಯೋಗಿಕವಾಗಿ ಸೂಕ್ತವಲ್ಲದ ಭೂಮಿಗಳ ಸದ್ಬಳಕೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ʻಕಲ್ಲಿದ್ದಲು ಹೊಂದಿರುವ ಪ್ರದೇಶಗಳ (ಸ್ವಾಧೀನ ಮತ್ತು ಅಭಿವೃದ್ಧಿ) ಕಾಯ್ದೆ-1957ʼ (ಸಿಬಿಎ ಕಾಯ್ದೆ) ಅಡಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸುವ ನೀತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.  ಅಂತಹ ಭೂಮಿಯನ್ನು ಅಭಿವೃದ್ಧಿ ಕಾರ್ಯಗಳು, ಕಲ್ಲಿದ್ದಲು ಮತ್ತು ಇಂಧನಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಸ್ಥಾಪನೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಈ ನೀತಿಯು ಅವಕಾಶ ಕಲ್ಪಿಸುತ್ತದೆ. 

 

ʻಸಿಬಿಎ ಕಾಯ್ದೆʼಯು ಕಲ್ಲಿದ್ದಲು ಹೊಂದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅವುಗಳನ್ನು ಯಾವುದೇ ಋಣಭಾರದಿಂದ ಮುಕ್ತಗೊಳಿಸಿ ಸರ್ಕಾರಿ ಕಂಪನಿಗೆ ವಹಿಸಲು ಅವಕಾಶ ಕಲ್ಪಿಸುತ್ತದೆ.  ಅನುಮೋದಿತ ನೀತಿಯು ʻಸಿಬಿಎ ಕಾಯ್ದೆʼಯಡಿ ಸ್ವಾಧೀನಪಡಿಸಿಕೊಳ್ಳಲಾದ ಈ ಕೆಳಗಿನ ರೀತಿಯ ಭೂಮಿಗಳ ಬಳಕೆಗೆ ಸ್ಪಷ್ಟ ನೀತಿ ಚೌಕಟ್ಟನ್ನು ಒದಗಿಸುತ್ತದೆ: 

  

A.    ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಿಗೆ ನಿರ್ದಿಷ್ಟ ಭೂಮಿಯು ಇನ್ನು ಮುಂದೆ ಸೂಕ್ತವಾಗಿಲ್ಲ ಎಂದಾದರೆ ಅಥವಾ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದಿದ್ದರೆ; ಅಥವಾ 

B.    ಯಾವ ಭೂಮಿಯಿಂದ ಕಲ್ಲಿದ್ದಲನ್ನು ಗಣಿಗಾರಿಕೆ ಮಾಡಲಾಗಿದೆಯೋ/ ಯಾವ ನೆಲದಿಂದ ಕಲ್ಲಿದ್ದಲು ಹೊರತೆಗೆಯಲಾಗಿದೆಯೋ ಅಂತಹ ಭೂಮಿ

  

ʻಕೋಲ್ ಇಂಡಿಯಾ ಲಿಮಿಟೆಡ್ʼ(ಸಿಐಎಲ್) ಮತ್ತು ಅದರ ಅಂಗಸಂಸ್ಥೆಗಳಂತಹ ಸರ್ಕಾರಿ ಕಲ್ಲಿದ್ದಲು ಕಂಪನಿಗಳು ʻಸಿಬಿಎ ಕಾಯ್ದೆʼಯಡಿ ಸ್ವಾಧೀನಪಡಿಸಿಕೊಂಡ ಈ ಭೂಮಿಯ ಮಾಲೀಕರಾಗಿ ಉಳಿಯಲಿವೆ. ಈ ನೀತಿಯಲ್ಲಿ ಸೂಚಿಸಲಾದ ನಿರ್ದಿಷ್ಟ ಉದ್ದೇಶಗಳಿಗಾಗಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಮಾತ್ರ ನೀಡಲಾಗುತ್ತದೆ. ಸರ್ಕಾರಿ ಕಲ್ಲಿದ್ದಲು ಕಂಪನಿಗಳು ಕಲ್ಲಿದ್ದಲು ಮತ್ತು ಇಂಧನ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಜಂಟಿ ಯೋಜನೆಗಳಲ್ಲಿ ಖಾಸಗಿ ಬಂಡವಾಳವನ್ನು ನಿಯೋಜಿಸಬಹುದು. 

 

ಭೂಮಿಯನ್ನು ಹೊಂದಿರುವ ಸರ್ಕಾರಿ ಕಂಪನಿಯು ಅಂತಹ ಭೂಮಿಯನ್ನು ನೀತಿಯ ಅಡಿಯಲ್ಲಿ ಸೂಚಿಸಲಾದ ನಿರ್ದಿಷ್ಟ ಅವಧಿಗೆ ಗುತ್ತಿಗೆಗೆ ನೀಡುತ್ತದೆ. ಜೊತೆಗೆ ಗರಿಷ್ಠ ಮೌಲ್ಯವನ್ನು ಪಡೆಯುವ ಸಲುವಾಗಿ ಪಾರದರ್ಶಕ, ನ್ಯಾಯಸಮ್ಮತ ಮತ್ತು ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆ ಮತ್ತು ಕಾರ್ಯವಿಧಾನದ ಮೂಲಕ ಗುತ್ತಿಗೆ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕೆಳಗಿನ ಚಟುವಟಿಕೆಗಳಿಗೆ ಭೂಮಿಯನ್ನು ಪರಿಗಣಿಸಲಾಗುತ್ತದೆ: 

  

i.    ಕಲ್ಲಿದ್ದಲು ತೊಳೆದಾಣಗಳನ್ನು (ವಾಷರಿ) ಸ್ಥಾಪಿಸಲು; 

ii.    ಸಾಗಣೆ ವ್ಯವಸ್ಥೆಗಳನ್ನು (ಕನ್ವೇಯರ್‌ ಸಿಸ್ಟಂ) ಸ್ಥಾಪಿಸಲು; 

iii.    ಕಲ್ಲಿದ್ದಲು ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು; 

iv.    ರೈಲ್ವೆ ಸೈಡಿಂಗ್‌ಗಳನ್ನು ನಿರ್ಮಿಸಲು;  

v.    ಸಿಬಿಎ ಕಾಯ್ದೆ ಅಥವಾ ಇತರ ಭೂ ಸ್ವಾಧೀನ ಕಾನೂನಿನ ಅಡಿಯಲ್ಲಿ ಭೂಮಿಯನ್ನು   

       ಸ್ವಾಧೀನಪಡಿಸಿಕೊಳ್ಳುವುದರಿಂದ ಯೋಜನಾ ಬಾಧಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು; 

vi.    ಶಾಖೋತ್ಪನ್ನ ಮತ್ತು ನವೀಕೃತ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು; 

vii.    ಪರಿಹಾರ ಅರಣ್ಯೀಕರಣ ಸೇರಿದಂತೆ ಕಲ್ಲಿದ್ದಲು ಅಭಿವೃದ್ಧಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸ್ಥಾಪಿಸಲು   

       ಅಥವಾ ಒದಗಿಸಲು; 

viii.    ಮಾರ್ಗದ ಹಕ್ಕನ್ನು ಒದಗಿಸಲು; 

ix.    ಕಲ್ಲಿದ್ದಲು ಅನಿಲೀಕರಣ ಮತ್ತು ಕಲ್ಲಿದ್ದಲು ರಾಸಾಯನಿಕ ಘಟಕಗಳಿಗೆ; ಮತ್ತು 

x.    ಇಂಧನಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅಥವಾ ಒದಗಿಸಲು. 

  

ಗಣಿಗಾರಿಕೆಗೆ ಒಳಪಡಿಸಲಾದ ಅಥವಾ ಕಲ್ಲಿದ್ದಲು ಗಣಿಗಾರಿಕೆಗೆ ಪ್ರಸ್ತುತ ಪ್ರಾಯೋಗಿಕವಾಗಿ ಸೂಕ್ತವಲ್ಲದ ಭೂಮಿಗಳು ಅನಧಿಕೃತ ಅತಿಕ್ರಮಣಕ್ಕೆ ಒಳಗಾಗುತ್ತವೆ. ಜೊತೆಗೆ ಅವುಗಳ ಭದ್ರತೆ ಮತ್ತು ನಿರ್ವಹಣೆಗಾಗಿ ಅನಗತ್ಯ ವೆಚ್ಚ ಮಾಡಬೇಕಾಗುತ್ತದೆ. ಅನುಮೋದಿತ ನೀತಿಯ ಅಡಿಯಲ್ಲಿ, ಸರ್ಕಾರಿ ಕಂಪನಿಗಳಿಂದ ಮಾಲೀಕತ್ವವನ್ನು ವರ್ಗಾಯಿಸದೆ, ವಿವಿಧ ಕಲ್ಲಿದ್ದಲು ಮತ್ತು ಇಂಧನ ಸಂಬಂಧಿತ ಮೂಲಸೌಕರ್ಯಗಳ ಸ್ಥಾಪನೆಗೆ ಈ ಭೂಮಿಯನ್ನು ಬಳಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. 

 

ಗಣಿಗಾರಿಕೆ ಮಾಡಲಾಗದ ಭೂಮಿಯನ್ನು ಇತರ ಉದ್ದೇಶಗಳಿಗಾಗಿ ಮುಕ್ತಗೊಳಿಸುವುದರಿಂದ ʻಸಿಐಎಲ್ʼ ತನ್ನ ಕಾರ್ಯಾಚರಣೆಗಳ ವೆಚ್ಚವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಏಕೆಂದರೆ ಖಾಸಗಿ ವಲಯದ ಸಹಭಾಗಿತ್ವದಲ್ಲಿ ವಿವಿಧ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಲ್ಲಿದ್ದಲು ಸಂಬಂಧಿತ ಮೂಲಸೌಕರ್ಯ ಮತ್ತು ಸೌರ ಸ್ಥಾವರದಂತಹ ಇತರ ಯೋಜನೆಗಳನ್ನು ತನ್ನ ಸ್ವಂತ ಭೂಮಿಯಲ್ಲಿ ಸ್ಥಾಪಿಸಲು ಸಾಧ್ಯವಾಗುತ್ತದೆ. ಕಲ್ಲಿದ್ದಲನ್ನು ದೂರದ ಸ್ಥಳಗಳಿಗೆ ಸಾಗಿಸುವ ಅಗತ್ಯವಿಲ್ಲದ ಕಾರಣ ಕಲ್ಲಿದ್ದಲು ಅನಿಲೀಕರಣ ಯೋಜನೆಗಳನ್ನೂ ಇದು ಕಾರ್ಯಸಾಧ್ಯವಾಗಿಸುತ್ತದೆ. 

 

ಪುನರ್ವಸತಿ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಿಕೊಳ್ಳುವ ಪ್ರಸ್ತಾಪವು ಭೂಮಿಯ ಸದ್ಬಳಕೆಯನ್ನು ಖಚಿತಪಡಿಸುತ್ತದೆ ಮತ್ತು ಎಲ್ಲಾ ಪ್ರಮುಖ ಭೂ ಸಂಪನ್ಮೂಲದ ವ್ಯರ್ಥವನ್ನು ತಡೆಯುತ್ತದೆ. ಯೋಜನಾ ಬಾಧಿತ ಕುಟುಂಬಗಳ ಪುನರ್ವಸತಿಗಾಗಿ ಹೊಸ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುತ್ತದೆ, ಯೋಜನೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಗ್ಗಿಸುವುದಲ್ಲದೆ ಲಾಭ ಹೆಚ್ಚಳಕ್ಕೂ ದಾರಿ ಮಾಡುತ್ತದೆ. ಇದರಿಂದ ಸ್ಥಳಾಂತರಗೊಂಡ ಕುಟುಂಬಗಳ ಬೇಡಿಕೆಯೂ ಈಡೇರಿದಂತಾಗುತ್ತದೆ. ಏಕೆಂದರೆ ಅವರು ಸದಾ ತಮ್ಮ ಮೂಲ ವಸತಿ ಸ್ಥಳಗಳಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿರಲು ಬಯಸುತ್ತಾರೆ. ಕಲ್ಲಿದ್ದಲು ಯೋಜನೆಗಳಿಗೆ ಸ್ಥಳೀಯ ಬೆಂಬಲವನ್ನು ಪಡೆಯಲು ಮತ್ತು ಕಲ್ಲಿದ್ದಲು ಗಣಿಗಾರಿಕೆಗೆ ಬಳಸಲಾದ ಅರಣ್ಯ ಭೂಮಿಗೆ ಬದಲಿಗೆ ಅರಣ್ಯೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಭೂಮಿಯನ್ನು ಒದಗಿಸಲು ಇದರಿಂದ ಸಹಾಯಕವಾಗಲಿದೆ. 

 

ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ, ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಉದ್ಯೋಗ ಸೃಷ್ಟಿ, ಇತ್ಯಾದಿಗಳನ್ನು ಉತ್ತೇಜಿಸುವ ಮೂಲಕ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಲು ಈ ನೀತಿಯು ಸಹಾಯ ಮಾಡುತ್ತದೆ. ಈ ನೀತಿಯು ವಿವಿಧ ಕಲ್ಲಿದ್ದಲು ಮತ್ತು ಇಂಧನ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಭೂಮಿಯನ್ನು ಮುಕ್ತಗೊಳಿಸುವ ಮೂಲಕ ದೇಶದ ಹಿಂದುಳಿದ ಪ್ರದೇಶಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ಈಗಾಗಲೇ ಸ್ವಾಧೀನಪಡಿಸಿಕೊಂಡ ಭೂಮಿಯ ಬಳಕೆಯಿಂದಾಗಿ ಮತ್ತೆ ಹೊಸದಾಗಿ ಭೂಮಿಯ ಸ್ವಾಧೀನ ಮತ್ತು ಸಂಬಂಧಿತ ಸ್ಥಳಾಂತರವನ್ನು ತಪ್ಪಿಸಬಹುದು. ಜೊತೆಗೆ ಇದರಿಂದ ಸ್ಥಳೀಯ ಉತ್ಪಾದನೆ ಮತ್ತು ಕೈಗಾರಿಕೆಗಳಿಗೂ ಉತ್ತೇಜನ ದೊರೆಯುತ್ತದೆ. 

***

  



(Release ID: 1816492) Visitor Counter : 233