ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಎಸ್‌ಜಿವಿಪಿ ಗುರುಕುಲದಲ್ಲಿ ಭಾವ ವಂದನಾ ಪರ್ವ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರ ಸಂದೇಶ


"ಪೂಜ್ಯ ಶಾಸ್ತ್ರೀಜಿ ಮಹಾರಾಜರ ಜೀವನಚರಿತ್ರೆಯು ಸಮಾಜದ ಜ್ಞಾನ ಮತ್ತು ಸೇವೆಯ ಅನ್ವೇಷಣೆಗೆ ಮೀಸಲಾದ ವ್ಯಕ್ತಿತ್ವದ ನಿಸ್ವಾರ್ಥ ಜೀವನವನ್ನು ಪ್ರಸ್ತುತಪಡಿಸುತ್ತದೆ"

"ಶಾಸ್ತ್ರೀಜಿಯವರು ಪ್ರಾಚೀನ ಜ್ಞಾನವನ್ನು ಸಮಯದ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲು ಮತ್ತು ಜಡತ್ವವನ್ನು ತಪ್ಪಿಸಲು ಒತ್ತಿಹೇಳಿದರು"

"ಸ್ವಾತಂತ್ರ್ಯ ಚಳವಳಿಯ ಅಡಿಪಾಯವನ್ನು ಹಾಕುವಲ್ಲಿ ಸಂತರು ಮತ್ತು ಭಕ್ತಿ ಚಳುವಳಿ ಪ್ರಮುಖ ಪಾತ್ರ ವಹಿಸಿದೆ"

Posted On: 20 MAR 2022 10:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಎಸ್‌ಜಿವಿಪಿ ಗುರುಕುಲದಲ್ಲಿ ಭಾವ ವಂದನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.  ಪೂಜ್ಯ ಶಾಸ್ತ್ರೀಜಿ ಮಹಾರಾಜರ ಜೀವನಚರಿತ್ರೆ- ‘ಶ್ರೀ ಧರ್ಮಜೀವನ ಗಾಥಾ’ ಬಿಡುಗಡೆಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾನ್ ವ್ಯಕ್ತಿಗಳ ಕಾರ್ಯಗಳು ಮತ್ತು ಕಥೆಗಳು ಸಾಮಾನ್ಯವಾಗಿ ಬರವಣಿಗೆಯಲ್ಲಿ ದಾಖಲಾಗುವ ಬದಲು ಸ್ಮರಣೆ ಮತ್ತು ಮೌಖಿಕ ಪರಂಪರೆಯಲ್ಲಿ ಮಾತ್ರ ಉಳಿಯುತ್ತವೆ ಎಂದು ಹೇಳಿದರು. ಪೂಜ್ಯ ಶಾಸ್ತ್ರೀಜಿ ಮಹಾರಾಜರ ಜೀವನ ಚರಿತ್ರೆಯು ಜ್ಞಾನದ ಅನ್ವೇಷಣೆ ಮತ್ತು ಸಮಾಜದ ಸೇವೆಗೆ ಮೀಸಲಾದ ವ್ಯಕ್ತಿತ್ವದ ನಿಸ್ವಾರ್ಥ ಜೀವನವನ್ನು ಲಿಖಿತ ರೂಪದಲ್ಲಿ ಪ್ರಸ್ತುತಪಡಿಸುತ್ತದೆ ಎಂದು ಅವರು ಹೇಳಿದರು. ಪೂಜ್ಯ ಶಾಸ್ತ್ರೀಜಿ ಮಹಾರಾಜರ ಎಲ್ಲರ  ಕಲ್ಯಾಣದ ಆದೇಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸರ್ಕಾರದ 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ನ ದೃಷ್ಟಿಕೋನವು ಶಾಸ್ತ್ರೀಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯುತ್ತದೆ ಮತ್ತು 'ಸರ್ವಜನ ಹಿತಾಯ ಮತ್ತು ಸರ್ವಜನ ಸುಖಾಯ' ತತ್ವದ ಮೇಲೆ ಆಧಾರಿತವಾಗಿದೆ..

ಪ್ರಾಚೀನ ಭಾರತದ ಗುರುಕುಲ ಸಂಪ್ರದಾಯವು 'ಸರ್ವಜನ್ ಹಿತಾಯ'ಚಿಂತನೆಯ ಸಾಕಾರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಗುರುಕುಲದಲ್ಲಿ ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಈ ಸಂಪ್ರದಾಯವು ಭವ್ಯವಾದ ಗತಕಾಲ ಮತ್ತು ಅದ್ಭುತ ಭವಿಷ್ಯವನ್ನು ಸಂಪರ್ಕಿಸುವ ಸಾಧನಗಳನ್ನು ಹೊಂದಿದೆ. ಈ ಸಂಪ್ರದಾಯವು ದೇಶದ ಸಾಮಾನ್ಯ ಜನರಿಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಫೂರ್ತಿಯನ್ನು ನೀಡುತ್ತದೆ. ಶಾಸ್ತ್ರಿಯವರು ತಮ್ಮ ಗುರುಕುಲದ ಮೂಲಕ ಜಗತ್ತಿನಾದ್ಯಂತ ಅನೇಕರ ಜೀವನಗಳನ್ನು ರೂಪಿಸಿದರು. "ಅವರ ಜೀವನವು ಕೇವಲ ಉಪದೇಶ ಅಥವಾ ಆದೇಶಗಳಲ್ಲ, ಆದರೆ ಶಿಸ್ತು ಮತ್ತು ತಪಸ್ಸಿನ ನಿರಂತರ ಹರಿವಾಗಿತ್ತು ಮತ್ತು ಅವರು ಕರ್ತವ್ಯದ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ" ಎಂದು ಪ್ರಧಾನಮಂತ್ರಿ ಹೇಳಿದರು.

ಎಸ್‌ಜಿವಿಪಿ ಗುರುಕುಲದೊಂದಿಗಿನ ತಮ್ಮ ವೈಯಕ್ತಿಕ ಒಡನಾಟವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಮಹಾನ್ ಸಂಸ್ಥೆಯ ಪ್ರಾಚೀನ ಜ್ಞಾನದಲ್ಲಿ ಆಧುನಿಕತೆಯ ಅಂಶಗಳನ್ನು ಗಮನಿಸಿದರು. ಶಾಸ್ತ್ರೀಜಿಯವರು ಪುರಾತನ ಜ್ಞಾನವನ್ನು ಕಾಲದ ಅಗತ್ಯಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲು ಮತ್ತು ಜಡತ್ವವನ್ನು ತಪ್ಪಿಸಲು ಒತ್ತು ನೀಡಿದರು ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಾತಂತ್ರ್ಯ ಚಳವಳಿಯ ಅಡಿಪಾಯ ಹಾಕುವಲ್ಲಿ ಸಂತರು ಮತ್ತು ಭಕ್ತಿ ಚಳವಳಿಯ ಪಾತ್ರವಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ಅಮೃತ ಕಾಲದಲ್ಲಿ ಕೊಡುಗೆ ನೀಡಲು ಗುರುಕುಲ ಕುಟುಂಬವು ಮುಂದೆ ಬರಬಹುದು ಎಂದು ಹೇಳಿದರು. ಸಾಂಕ್ರಾಮಿಕ ರೋಗದಿಂದ ಉಂಟಾದ ಅನಿಶ್ಚಿತತೆಗಳು ಮತ್ತು ಉಕ್ರೇನ್ ಪರಿಸ್ಥಿತಿಯಂತಹ ಬಿಕ್ಕಟ್ಟುಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಆತ್ಮನಿರ್ಭರತೆ-ಸ್ವಾವಲಂಬನೆಯ ಮಹತ್ವವನ್ನು ಪುನರುಚ್ಚರಿಸಿದರು. ಅವರು ಗುರುಕುಲ ಕುಟುಂಬವನ್ನು ಸ್ಥಳೀಯರಿಗೆ ಧ್ವನಿಯಾಗುವಂತೆ ಕೇಳಿಕೊಂಡರು. ದೈನಂದಿನ ಬಳಕೆಯ ವಸ್ತುಗಳ ಪಟ್ಟಿಯನ್ನು ಮಾಡಲು ಮತ್ತು ಆಮದು ಮಾಡಿದ ವಸ್ತುಗಳ ಮೇಲೆ ಅವಲಂಬನೆಯ ಪ್ರಮಾಣವನ್ನು ಅಳೆಯಲು ಅವರು ಕೇಳಿದರು. ಭಾರತೀಯನ ಬೆವರಿನಿಂದ ತಯಾರಿಸಿದ ವಸ್ತು ಲಭ್ಯವಿದ್ದರೆ, ಅದಕ್ಕೆ ಯಾವಾಗಲೂ ಆದ್ಯತೆ ನೀಡಬೇಕು. ಅದೇ ರೀತಿ, ಕುಟುಂಬವು ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುಗೆ ನೀಡಬಹುದು, ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತಪ್ಪಿಸಬಹುದು. ಶುಚಿತ್ವವನ್ನು ಸುಧಾರಿಸಲು ಏಕತೆಯ ಪ್ರತಿಮೆ ಅಥವಾ ಸ್ಥಳೀಯ ಪ್ರತಿಮೆಗಳಂತಹ ಸ್ಥಳಗಳಿಗೆ ನಿಯಮಿತವಾಗಿ ತಂಡಗಳಲ್ಲಿ ಹೋಗುವಂತೆ ಅವರು ಕೇಳಿದರು. ರಾಸಾಯನಿಕ ಮತ್ತು ಇತರ ಹಾನಿಕಾರಕ ವಸ್ತುಗಳಿಂದ ಭೂಮಿಯನ್ನು ರಕ್ಷಿಸಲು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇದರಲ್ಲಿ ಗುರುಕುಲವು ಪ್ರಮುಖ ಪಾತ್ರ ವಹಿಸಬಹುದು ಎಂದು ಪ್ರಧಾನಮಂತ್ರಿಯವರು ಹೇಳಿದರು.

ಪೂಜ್ಯ ಶಾಸ್ತ್ರೀಜಿ ಮಹಾರಾಜರ ಬೋಧನೆಗಳನ್ನು ಅನುಸರಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಗುರುಕುಲದ ಕುಟುಂಬವನ್ನು ವಿನಂತಿಸುವ ಮೂಲಕ ತಮ್ಮ ಮಾತನ್ನು  ಮುಕ್ತಾಯಗೊಳಿಸಿದರು.

***



(Release ID: 1807524) Visitor Counter : 170