ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಗ್ರಾಹಕರು ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಇಡಬೇಕು, ಇದರಿಂದ ಭಾರತವು ಸರಕು ಮತ್ತು ಸೇವೆಗಳಲ್ಲಿ ವಿಶ್ವ ನಾಯಕನಾಗಲು ಸಾಧ್ಯ; ವಿಶ್ವ ಗ್ರಾಹಕ ಹಕ್ಕುಗಳ ಸಂರಕ್ಷಣಾ ದಿನದಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಪಿಯೂಷ್ ಗೋಯಲ್ ಕರೆ
ಯಾವುದೇ ಸಂದರ್ಭದಲ್ಲೂ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಬೇಕು; ಆದರೆ ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಕಿರುಕುಳ ನೀಡಲು ಕಾನೂನು ದುರುಪಯೋಗ ಸಲ್ಲದು: ಶ್ರೀ ಗೋಯಲ್
ಕಾನೂನು ಮಾಪನಶಾಸ್ತ್ರ ಕಾಯಿದೆಯ ಕೆಲವು ನಿಬಂಧನೆಗಳ ಅಪರಾಧೀಕರಣ ತಡೆಯಲು ಒಮ್ಮತಾಭಿಪ್ರಾಯ ಅಗತ್ಯ: ಶ್ರೀ ಗೋಯಲ್ ಪ್ರತಿಪಾದನೆ
ಗ್ರಾಹಕರ ಹಕ್ಕುಗಳ ಜಾರಿ ಮತ್ತು ಮಾರಾಟಗಾರರಿಂದ ಆಗುವ ಉಲ್ಲಂಘನೆಗಳಿಗೆ ದಂಡ ವಿಧಿಸಲು ಇಲಾಖೆ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ: ಗೋಯಲ್ ಪ್ರಶಂಸೆ
Posted On:
15 MAR 2022 6:33PM by PIB Bengaluru
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಉತ್ತೇಜಿಸಲು ಕಾನೂನುಗಳ ಪರಿಣಾಮಕಾರಿ ಜಾರಿ ಅಗತ್ಯ, ಆದರೆ ಸಣ್ಣ ವ್ಯಾಪಾರಸ್ಥರು ಮತ್ತು ವ್ಯಾಪಾರಿಗಳಿಗೆ ಕಿರುಕುಳ ನೀಡಲು ಕಾನೂನುಗಳ ನಿರ್ದಿಷ್ಟ ನಿಬಂಧನೆಗಳನ್ನು ಬಳಸಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಜವಳಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದರು.
ವಿಶ್ವ ಗ್ರಾಹಕ ಹಕ್ಕುಗಳ ಸಂರಕ್ಷಣಾ ದಿನದ ಅಂಗವಾಗಿ ಆಯೋಜಿತವಾಗಿದ್ದ “ನ್ಯಾಯಸಮ್ಮತ ಡಿಜಿಟಲ್ ಹಣಕಾಸು(ಫೇರ್ ಡಿಜಿಟಲ್ ಫೈನಾನ್ಸ್)” ಕುರಿತು ದಿಪೂರ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೋಯಲ್, ಸಣ್ಣ ಉದ್ಯಮಗಳ ದುಃಸ್ಥಿತಿ ಕುರಿತು ಬೆಳಕು ಚೆಲ್ಲಿದರು. ಕಾನೂನಿನ ಹೆಸರಿನಲ್ಲಿ ಸಣ್ಣ ವ್ಯಾಪಾರಸ್ಥರು ಮತ್ತು ಸಣ್ಣ ಉದ್ಯಮಿಗಳಿಗೆ ನೀಡುವ ಕಿರುಕುಳ ನಿಲ್ಲಿಸುವುದು ಅವಶ್ಯಕ ಎಂದು ಪ್ರತಿಪಾದಿಸಿದರು.
ಉದ್ಘಾಟನಾ ಭಾಷಣದಲ್ಲಿ ಅವರು, ಕಾನೂನು ಮಾಪನಶಾಸ್ತ್ರ ಕಾಯ್ದೆಯ ಕೆಲವು ನಿಬಂಧನೆಗಳ ಅಪರಾಧೀಕರಣ ತಡೆ ಅತ್ಯಗತ್ಯ. ಗ್ರಾಹಕರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ವಿವಿಧ ಅಧಿಕಾರಿಗಳು ಕೈಗೊಂಡ ಉಪಕ್ರಮಗಳು ಶ್ಲಾಘನೀಯ. ಆದರೆ ಎಲ್ಲಾ ಪಾಲುದಾರರು ಕಾನೂನಿನ ಅಪರಾಧೀಕರಣ ತಡೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾನೂನು ಮಾಪನಶಾಸ್ತ್ರ ಕಾಯಿದೆಯ ಕೆಲವು ನಿಬಂಧನೆಗಳ ಅಪರಾಧೀಕರಣ ತಡೆ ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅಪರಾಧೀಕರಣದ ಪರಿಣಾಮಗಳ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸಲು ಎಲ್ಲಾ ಪಾಲುದಾರರು ಒಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ)ದ ನ್ಯಾಯಮೂರ್ತಿ ಶ್ರೀ ಆರ್.ಕೆ. ಅಗರ್ ವಾಲ್, ಇನ್ಫೋಸಿಸ್ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಶ್ರೀ ನಂದನ್ ನಿಲೇಕಣಿ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾನೂನು ಮಾಪನಶಾಸ್ತ್ರ ಕಾಯಿದೆ 2009ರ ವಿವಿಧ ಸೆಕ್ಷನ್‌ಗಳ ಅಡಿ ಸುಮಾರು 90,000 ಜನರ ವಿರುದ್ಧ ಮೊದಲ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 90% ಪ್ರಕರಣಗಳು ಲೀಗಲ್ ಮಾಪನಶಾಸ್ತ್ರ ಕಾಯ್ದೆಯ 3 ಸೆಕ್ಷನ್‌ಗಳ ಅಡಿ ಅಂದರೆ ಸೆಕ್ಷನ್ 33, 36 (1) ಮತ್ತು 25ರ ಅಡಿ, ಪರಿಶೀಲಿಸದ ತೂಕ ಬಳಸುವುದು, ಪ್ರಮಾಣಿತವಲ್ಲದ ಉತ್ಪನ್ನಗಳ ಮಾರಾಟ ಮಾಡುವುದು ಮತ್ತು ಪ್ರಮಾಣಿತವಲ್ಲದ ತೂಕ ಮತ್ತು ಅಳತೆಯ ದುರ್ಬಳಕೆಗಾಗಿ ದಂಡ ವಿಧಿಸಲಾಗಿದೆ ಎಂದು ಶ್ರೀ ಗೋಯಲ್ ಹೇಳಿದರು.
ಮೊದಲ ಅಪರಾಧದ ವಾರ್ಷಿಕ ದತ್ತಾಂಶವನ್ನು ಹಂಚಿಕೊಂಡ ಸಚಿವರು, 2ನೇ ಅಪರಾಧದಲ್ಲಿ ಎಲ್ಎಂ ಕಾಯಿದೆ ಅಡಿ, ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. 2018-19ರಲ್ಲಿ ಮೊದಲ ಅಪರಾಧದ ಅಡಿ 89,724 ಪ್ರಕರಣಗಳು ದಾಖಲಾಗಿದ್ದರೆ 2ನೇ ಅಪರಾಧದ ಅಡಿ ಕೇವಲ 11 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ, 2019-20ರಲ್ಲಿ ಮೊದಲ ಅಪರಾಧದ ಅಡಿ 91,818 ಪ್ರಕರಣಗಳು ದಾಖಲಾಗಿದ್ದರೆ, 2ನೇ ಅಪರಾಧದ ಅಡಿ ಕೇವಲ 2 ಪ್ರಕರಣಗಳು ದಾಖಲಾಗಿವೆ. 2020-21ರಲ್ಲಿ ಮೊದಲ ಅಪರಾಧದ ಅಡಿ 84,824 ಪ್ರಕರಣಗಳು ದಾಖಲಾಗಿದ್ದರೆ, 2ನೇ ಅಪರಾಧದ ಅಡಿ ಶೂನ್ಯ ಪ್ರಕರಣ ದಾಖಲಾಗಿದೆ ಎಂದು ವಿವರ ನೀಡಿದರು.
“ಬೃಹತ್ ಸಂಖ್ಯೆಯ ಮೊದಲ ಅಪರಾಧಗಳು ಮತ್ತು ಬಹುತೇಕ ಶೂನ್ಯ 2ನೇ ಅಪರಾಧಗಳು ನಮ್ಮೆಲ್ಲರನ್ನು ಆತ್ಮಾವಲೋಕನಕ್ಕೆ ಕರೆ ನೀಡುತ್ತಿವೆ. ಆದ್ದರಿಂದ, ಕಾನೂನಿನ ದುರುಪಯೋಗದಿಂದ ಸಣ್ಣ ಉದ್ಯಮಿಗಳಿಗೆ ಕಿರುಕುಳವಾಗದಂತೆ ನಾವು ಖಾತ್ರಿ ಪಡಿಸುವುದು ಅತ್ಯಗತ್ಯ. ಮುಂದಿನ ವರ್ಷ ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಿಸುವ ವೇಳೆಗೆ, ಕಾನೂನು ಮಾಪನಶಾಸ್ತ್ರ ಕಾಯ್ದೆಯ ಕೆಲವು ನಿಬಂಧನೆಗಳ ಅಪರಾಧೀಕರಣ ತಡೆ ಕ್ರಮವು ಅಂತಿಮ ಹಂತ ತಲುಪಬೇಕು. ಈ ವಿಷಯವನ್ನು ಚರ್ಚಿಸಲು ಎಲ್ಲಾ ಪಾಲುದಾರರು ಒಂದಾಗಬೇಕು ಎಂದು ಸಚಿವರು ಒತ್ತಾಯಿಸಿದರು.
ಗ್ರಾಹಕರನ್ನು ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಗ್ರಾಹಕ ವ್ಯವಹಾರಗಳ ಇಲಾಖೆಯು ತೆಗೆದುಕೊಳ್ಳುತ್ತಿರುವ ದಿಟ್ಟ ಕ್ರಮಗಳ ನಿದರ್ಶನಗಳನ್ನು ಶ್ರೀ ಗೋಯಲ್ ಅವರು ಹಂಚಿಕೊಂಡರು. ವಿಶ್ವದ ನಂಬರ್ 1 ಎಂದು ಹೇಳಿಕೊಳ್ಳುವ ಟೂತ್‌ಪೇಸ್ಟ್ ಕಂಪನಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಪ ಸಮಯದಲ್ಲೇ ಎಲ್ಲಾ ದಾಸ್ತಾನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಳ್ಳುವ ಮತ್ತೊಂದು ಕಂಪನಿಯ ವಿರುದ್ಧ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಉದಾಹರಿಸಿದರು.
"ನೀವು ಗ್ರಾಹಕರ ಶಕ್ತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಒಮ್ಮೆ ಭಾರತವನ್ನು ನೋಡಿ. ಗುಣಮಟ್ಟದ ಉತ್ಪನ್ನಗಳಿಗೆ ಭಾರತೀಯ ಕಂಪನಿಗಳನ್ನು ಉತ್ತಮವಾಗಿ ಕಾರ್ಯ ನಿರ್ವಹಿಸಲು ಪೂರ್ವಭಾವಿ ಗ್ರಾಹಕರ ಬೇಡಿಕೆಯು ಹೇಗೆ ಪ್ರೇರೇಪಿಸಿದೆ ಎಂಬುದನ್ನು ನೋಡಿ" ಎಂದು ಅವರು ವೇದಿಕೆಯ ಗಣ್ಯರಿಗೆ ಹೇಳಿದರು.
ಇಂದು ವಿಶ್ವ ಗ್ರಾಹಕರ ಹಕ್ಕುಗಳ ಸಂರಕ್ಷಣಾ ದಿನ ಆಚರಿಸುತ್ತಿರುವಾಗ, ಹಕ್ಕುಗಳೊಂದಿಗೆ ಅಧಿಕಾರಿಗಳ ಹಾಗೂ ಗ್ರಾಹಕರ ಜವಾಬ್ದಾರಿಗಳೂ ಬರುತ್ತವೆ. "ಗ್ರಾಹಕರಿಗೆ ಅನುಕೂಲವಾಗುವಂತೆ ಗ್ರಾಹಕ ನ್ಯಾಯಾಲಯಗಳ ವರ್ಚುವಲ್ ವಿಚಾರಣೆಗೆ ನಾನು ಸಲಹೆ ನೀಡುತ್ತೇನೆ" ಎಂದು ಸಚಿವರು ಹೇಳಿದರು.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಕೈಗೊಂಡಿರುವ ಗುಣಮಟ್ಟದ ಪ್ರಮಾಣೀಕರಣ ಕಾರ್ಯದ ಕುರಿತು ಶ್ರೀ ಗೋಯಲ್ ಮಾತನಾಡಿ, ಹಾಲ್‌ಮಾರ್ಕಿಂಗ್ ಗ್ರಾಹಕರಿಗೆ ಗುಣಮಟ್ಟ, ಶುದ್ಧತೆ ಮತ್ತು ಪಾರದರ್ಶಕತೆಯ ದೀರ್ಘಾವಧಿಯ ಹಕ್ಕು ಒದಗಿಸಿದೆ. ಡಿಸೆಂಬರ್ 2021 ರವರೆಗೆ, 1.3 ಲಕ್ಷಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ಚಿನ್ನದ ಹಾಲ್‌ಮಾರ್ಕ್ ಆಭರಣಗಳನ್ನು ಮಾರಾಟ ಮಾಡಲು ಬಿಐಎಸ್‌ನಿಂದ ನೋಂದಣಿ ಮಾಡಿಕೊಂಡಿದ್ದಾರೆ. ದೇಶಾದ್ಯತ 987 ಬಿಐಎಸ್ ಮಾನ್ಯತೆ ಪಡೆದ ವಿಶ್ಲೇಷಣೆ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ಪ್ರಯಾಸ್’ ಸಂದೇಶವನ್ನು ಪ್ರಸ್ತಾಪಿಸಿದ ಅವರು, ಎಲ್ಲಾ ರಾಜ್ಯ ಸರ್ಕಾರಗಳು, ಉದ್ಯಮ ಸಂಸ್ಥೆಗಳು ಮತ್ತು ಇತರೆ ಪಾಲುದಾರರು ಕಟ್ಟುನಿಟ್ಟಾಗಿ ನೈಜ ವ್ಯಾಪಾರ ಅವಕಾಶಗಳನ್ನು ಅನುಮತಿಸುವ ಜತೆಗೆ, ಸಮತೋಲನ ಕಾಪಾಡಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಬೇಕೆಂದು ಕರೆ ನೀಡಿದರು. ಗ್ರಾಹಕರ ರಕ್ಷಣೆಗೆ ಹಾನಿಕಾರಕ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಪ್ಪಿಸಲು ಪ್ರಯತ್ನಿಸುವ ಅನ್ಯಾಯದ ವ್ಯಾಪಾರ ಅಭ್ಯಾಸಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಗ್ರಾಹಕರ ರಕ್ಷಣೆ ಹೆಚ್ಚಿಸುವ ಗುರಿ ಹೊಂದಿರುವ ಹೊಸ ನೀತಿ ನಿರ್ಧಾರಗಳನ್ನು ವ್ಯಾಪಾರ ಬೆಂಬಲಿಸಬೇಕು. ವ್ಯಾಪಾರ ಮತ್ತು ಗ್ರಾಹಕರ ರಕ್ಷಣೆಗೆ ಸಮಗ್ರ ವಾತಾವರಣವನ್ನು ಸೃಷ್ಟಿಸಲು ಸರ್ಕಾರದೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಎಲ್ಲಾ ಪಾಲುದಾರರಿಗೂ ಅವರು ಮನವಿ ಮಾಡಿದರು.
ಗ್ರಾಹಕರು ಹೆಚ್ಚು ಜಾಗೃತರಾಗಿರಬೇಕು, ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಇಡಬೇಕು. ಆ ಮೂಲಕ ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸುವಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯ ಸರದಾರನನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಅವರು ಒತ್ತಿ ಹೇಳಿದರು.
ಗ್ರಾಹಕರ ದೂರುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅನುವು ಮಾಡಿಕೊಡುವ ಇ-ದಾಖಿಲ್ ಪೋರ್ಟಲ್‌ನ ಪ್ರಗತಿಯನ್ನು ಶ್ಲಾಘಿಸಿದ ಸಚಿವರು, ಎಲ್ಲಾ ಗ್ರಾಹಕರ ಪ್ರಕರಣಗಳ ವರ್ಚುವಲ್ ವಿಚಾರಣೆಗೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. 'ನ್ಯಾಯ ವಿತರಣೆ ವಿಳಂಬವಾದರೆ ನ್ಯಾಯ ಒದಗಿಸುವುದನ್ನು ನಿರಾಕರಿದಂತೆ'. ಹಾಗಾಗಿ, ವಿವಿಧ ರಾಜ್ಯ ಮತ್ತು ಜಿಲ್ಲಾ ಗ್ರಾಹಕ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸ ಬೇಕಾಯಿತು. ಇದು ಕಳವಳಕಾರಿ ಸಂಗತಿ. ಹಾಗಾಗಿ, ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ವರ್ಚುವಲ್ ಮಾದರಿಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಂದನ್ ನಿಲೇಕಣಿ ವಾಸ್ತವಿಕವಾಗಿ ಮಾತನಾಡಿ, ಬದಲಾಗುತ್ತಿರುವ ಡಿಜಿಟಲ್ ವೇದಿಕೆಗಳೊಂದಿಗೆ ಬದಲಾಗುವ ಅಗತ್ಯಗಳಿಗೆ ಒತ್ತು ನೀಡಬೇಕು. ಹೆಚ್ಚುತ್ತಿರುವ ಸಂಕೀರ್ಣ ಡಿಜಿಟಲ್ ಶಿಷ್ಟಾಚಾರಗಳೊಂದಿಗೆ, ಹೆಚ್ಚು ಸಂಕೀರ್ಣವಾದ ಗ್ರಾಹಕ ಪರಿಹಾರ ವಿಧಾನಗಳನ್ನು ಒದಗಿಸಲು ಸಿದ್ಧರಾಗಬೇಕು. ಇದು ಸರ್ಕಾರದ ಆರೋಗ್ಯಕರ ವಿಧಾನವಾಗಬೇಕು. ಈ ನಿಟ್ಟಿನಲ್ಲಿ, ಆನ್‌ಲೈನ್ ವಿವಾದ ಪರಿಹಾರ ಕಾರ್ಯವಿಧಾನವನ್ನು ಬಹು ಭಾಷಾ ಸ್ವರೂಪದಲ್ಲಿ ಲಭ್ಯವಾಗುವಂತೆ ಮಾಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಗಣಿಸಿ, ಗ್ರಾಹಕ ವಿವಾದ ಪರಿಹಾರ ಕಾರ್ಯವಿಧಾನವನ್ನು ಮರುವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಇಂದಿನ ಡಿಜಿಟಲ್ ವಹಿವಾಟುಗಳು ಬಹು ಪಕ್ಷೀಯವಾಗಿವೆ. ಆದ್ದರಿಂದ ಅಂತಹ ವಿವಾದಗಳ ಪರಿಹಾರವು ಬಹು ಪಕ್ಷೀಯ ಅವಶ್ಯಕತೆಗಳನ್ನು ಹೊಂದಿರಬೇಕು ಎಂದು ಅವರು ಒತ್ತು ನೀಡಿದರು. ಡಿಜಿಟಲ್ ಹಣಕಾಸು ವಹಿವಾಟು ಪ್ರಮಾಣ ಅತಿ ವೇಗದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಭಾರತವು ಗ್ರಾಹಕರ ಪರಿಹಾರದ ಹೊಸ ಯುಗವನ್ನು ಪ್ರಾರಂಭಿಸಬೇಕು. ಪ್ರತಿಯೊಬ್ಬ ಭಾರತೀಯನು ಸುಲಭವಾದ ಗ್ರಾಹಕ ಪರಿಹಾರಕ್ಕೆ ಪ್ರವೇಶ ಅಥವಾ ಅವಕಾಶ ಪಡೆಯುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನ ಮತ್ತು ಹೊಸ ವ್ಯವಹಾರ ಮಾದರಿಗಳು ಆರ್ಥಿಕ ಸೇವೆಗಳೊಂದಿಗೆ ಬಡ ಮತ್ತು ನಾಗರಿಕ ಸೌಲಭ್ಯಗಳಿಂದ ಹೊರಗಿರುವ ಕುಟುಂಬಗಳನ್ನು ತಲುಪುವ ನಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಸರ್ಕಾರವು ಯಾವಾಗಲೂ ಹೆಚ್ಚಿನ ಹಣಕಾಸು ಸೇರ್ಪಡೆ ತರಲು ಶ್ರಮಿಸುತ್ತಿದೆ. ಇದು ಮಾರ್ಚ್ 2017 ಮತ್ತು ಮಾರ್ಚ್ 2021ರ ನಡುವೆ ಹಣಕಾಸಿನ ಸೇರ್ಪಡೆಯಲ್ಲಿ 24% ಸುಧಾರಣೆಯಾಗಿದೆ. ಫೆಬ್ರವರಿ 2022ರ ವರೆಗೆ ಯುಪಿಐ ಮೂಲಕ 8 ಶತಕೋಟಿ ವ್ಯವಹಾರಗಳನ್ನು ಮಾಡಲಾಗಿದೆ ಎಂಬ ಅಂಕಿಅಂಶದಲ್ಲಿ ಇದು ಉತ್ತಮವಾಗಿ ಪ್ರತಿಫಲಿಸುತ್ತಿದೆ. ವಿವಿಧ ಕೋವಿಡ್ ಪರಿಹಾರ ಸ್ವೀಕರಿಸಿದ 428 ಮಿಲಿಯನ್ ಫಲಾನುಭವಿಗಳಿಗೆ ಯುಪಿಐ ಮೂಲಕ ಪರಿಹಾರ ಒದಗಿಸಲಾಗಿದೆ. ಇದಲ್ಲದೆ, ಡಿಜಿಟಲ್ ಹಣಕಾಸು ವ್ಯವಹಾರವನ್ನು ಇನ್ನಷ್ಟು ಉತ್ತಮವಾಗಿ, ಸುರಕ್ಷಿತವಾಗಿ ಗ್ರಾಹಕರಿಗೆ ಒದಗಿಸಲು ಸಂಯೋಜಿತ ಪ್ರಯತ್ನಗಳನ್ನು ಮಾಡಬೇಕು ಎಂದು ಸಚಿವರು ಒತ್ತಾಯಿಸಿದರು.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಮಾತನಾಡಿ, ನವೀನ ನಿಯಂತ್ರಣ ವಿಧಾನಗಳು, ಡಿಜಿಟಲ್ ಹಣಕಾಸು ಸೇವೆಗಳು, ಗ್ರಾಹಕರ ರಕ್ಷಣೆ ಮತ್ತು ಸಬಲೀಕರಣ ಕೇಂದ್ರೀಕರಿಸುವ ಉತ್ಪನ್ನಗಳ ಉತ್ತೇಜನದ ಅಗತ್ಯವನ್ನು ಒತ್ತಿ ಹೇಳಿದರು. ಡಿಜಿಟಲ್ ಹಣಕಾಸು ಗ್ರಾಹಕರಿಗೆ ಹೆಚ್ಚು ಪ್ರವೇಶ ನೀಡುವ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುತ್ತದೆ. ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಅದು ವ್ಯವಹಾರವನ್ನು ಜೀವಂತವಾಗಿಟ್ಟಿತ್ತು ಎಂದು ಅವರು ಪ್ರಸ್ತಾಪಿಸಿದರು. ಆದಾಗ್ಯೂ, ಡಿಜಿಟಲ್ ಹಣಕಾಸು ಗ್ರಾಹಕರ ನಂಬಿಕೆಗೆ ಪ್ರತಿಕೂಲ ಪರಿಣಾಮ ಬೀರುವ, ಹಣಕಾಸು ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಅಪಾಯಗಳಿಗೆ ಗ್ರಾಹಕರನ್ನು ಒಡ್ಡುತ್ತಿದೆ. ಡಿಜಿಟಲ್ ಹಣಕಾಸು ಸೇವೆಗಳ ಬಳಕೆ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ಗಳಿಸಿದ ಲಾಭಗಳನ್ನು ಸವೆಸುವುದನ್ನು ತಡೆಯುತ್ತದೆ. ಆದ್ದರಿಂದ, ಡಿಜಿಟಲ್ ಹಣಕಾಸು ಸೇವೆಯ ವ್ಯಾಪ್ತಿ ಅಥವಾ ವಿಸ್ತೀರ್ಣವನ್ನು ವಿಸ್ತಾರಗೊಳಿಸುವ ಜತೆಗೆ, ಗ್ರಾಹಕ ರಕ್ಷಣೆ ಪ್ರತಿಬಿಂಬಿಸುವ ಕಾರ್ಯತಂತ್ರದ ನಿಯಂತ್ರಣ ಮತ್ತು ಸಮಯೋಚಿತ ಮಧ್ಯಸ್ಥಿಕೆ ಹೊಂದುವುದು ಅತ್ಯಗತ್ಯ ಎಂದರು.
ಗ್ರಾಹಕರ ವ್ಯವಹಾರಗಳ ಇಲಾಖೆಯು 'ಆಜಾದಿ ಕಾ ಅಮೃತ್ ಮಹೋತ್ಸವ' ಅಡಿ ಸಾಂಪ್ರದಾಯಿಕ ವಾರದ ಆಚರಣೆಯ ಭಾಗವಾಗಿ ಆಯೋಜಿಸಿದ್ದ ವರ್ಚುವಲ್ ಪ್ರದರ್ಶನವನ್ನು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಉದ್ಘಾಟಿಸಿದರು.
ಎನ್‌ಸಿಡಿಆರ್‌ಸಿ ಗೌರವಾನ್ವಿತ ಅಧ್ಯಕ್ಷ ನ್ಯಾ. ಶ್ರೀ ಆರ್.ಕೆ ಅಗರವಾಲ್ ಅವರು, ಡಿಜಿಟಲೀಕರಣ ಯುಗದಲ್ಲಿ ಜಗತ್ತು ಕಂಡಿರುವ ತಾಂತ್ರಿಕ ಪ್ರಗತಿಯ ಮಾದರಿ ಬದಲಾವಣೆಗಳನ್ನು ಪ್ರಸ್ತಾಪಿಸಿದರು. ವ್ಯಕ್ತಿ, ಕಾರ್ಪೊರೇಟ್ ವಲಯ ಸೇರಿದಂತೆ ಇಡೀ ದೇಶಕ್ಕೆ ಡಿಜಿಟಲ್ ಹಣಕಾಸು ಸೇವೆಯ ಉತ್ಪಾದಕತೆ, ವ್ಯಾಪ್ತಿ, ಆರ್ಥಿಕ ಸೇರ್ಪಡೆ ಮತ್ತು ದಕ್ಷತೆ ಹೆಚ್ಚಿಸಲು ಇದು ಪ್ರಮುಖ ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಎಲ್ಲಾ ವರ್ಗದ ಗ್ರಾಹಕರಿಗೆ ಉತ್ತಮ ಗಂಡಾಂತರ ನಿರ್ವಹಣೆ ಖಾತ್ರಿಪಡಿಸಿಕೊಳ್ಳಲು ಹಣಕಾಸು ನಿಯಂತ್ರಕರು, ಟೆಲಿಕಾಂ ಆಪರೇಟರ್‌ಗಳು ಮತ್ತು ಕೇಂದ್ರ ಪಾವತಿ ವ್ಯವಸ್ಥೆ ಪ್ರಾಧಿಕಾರದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
2022ನೇ ಸಾಲಿನ ವಿಶ್ವ ಗ್ರಾಹಕ ಹಕ್ಕುಗಳ ಸಂರಕ್ಷಣಾ ದಿನಾಚರಣೆ ಅಂಗವಾಗಿ ಗ್ರಾಹಕ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಯೋಗದೊಂದಿಗೆ ಕಳ್ಳಸಾಗಣೆ ಮತ್ತು ಆರ್ಥಿಕ ಅಪರಾಧ ಚಟುವಟಿಕೆಗಳ ವಿರುದ್ಧ ಫಿಕ್ಕಿ ಆಯೋಜಿಸಿದ್ದ ಇಂಟರ್ ಸ್ಕೂಲ್ ಆನ್‌ಲೈನ್ ವರ್ಣಚಿತ್ರ ಸ್ಪರ್ಧೆಯ ವಿಜೇತರನ್ನು ಸಚಿವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಗೋಯಲ್ ಮತ್ತು ಇತರೆ ಸಚಿವರು ಹಾಗೂ ಗಣ್ಯರು ಕೆಳಗೆ ಪಟ್ಟಿ ಮಾಡಿರುವ ಕೃತಿಗಳನ್ನು ಲೋಕಾರ್ಪಣೆ ಮಾಡಿದರು:
ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಿದ್ಧಪಡಿಸಿದ ಸುಪ್ರೀಂ ಕೋರ್ಟ್, ಎನ್ ಸಿಡಿಆರ್ ಸಿ ಮತ್ತು ಎಸ್ ಸಿಡಿಆರ್ ಸಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ತ್ರೈಮಾಸಿಕ ಡೈಜೆಸ್ಟ್.
ಉತ್ಪನ್ನ ಹೊಣೆಗಾರಿಕೆ ಮತ್ತು ಪದೇಪದೆ ಕೇಳಲಾಗುವ ಪ್ರಶ್ನೆಗಳ ಕುರಿತಾದ ಗ್ರಾಹಕರ ಕೈಪಿಡಿ
2019ರ ಸಂರಕ್ಷಣಾ ಕಾಯಿದೆಯ ಕೈಪಿಡಿ
ಗ್ರಾಹಕನೇ ರಾಜ (5ನೇ ಆವೃತ್ತಿ)
ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀ ರೋಹಿತ್ ಕುಮಾರ್ ಸಿಂಗ್, ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನಿಧಿ ಖಾರೆ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****
(Release ID: 1806435)
Visitor Counter : 681