ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼದ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿಯವರು, ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು


"ಬ್ರಿಟಿಷರ ಅನ್ಯಾಯದ ವಿರುದ್ಧ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಚಳವಳಿಯು ನಮ್ಮ ಭಾರತೀಯರ ಸಾಮೂಹಿಕ ಶಕ್ತಿಯನ್ನು ಬ್ರಿಟಿಷ್ ಸರ್ಕಾರ ಅರಿತುಕೊಳ್ಳುವಂತೆ ಮಾಡಿತ್ತು"

"ಸಮವಸ್ತ್ರ ಧರಿಸಿದ ಸಿಬ್ಬಂದಿಯ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂಬ ಗ್ರಹಿಕೆ ಆಗ ಬೆಳೆದಿತ್ತು. ಆದರೆ ಅದು ಈಗ ಬದಲಾಗಿದೆ. ಜನರು ಈಗ ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ನೋಡಿದಾಗ, ಅವರು ಸಹಾಯದ ಭರವಸೆಯನ್ನು ಪಡೆಯುತ್ತಾರೆ"

"ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಒತ್ತಡರಹಿತ ತರಬೇತಿ ಚಟುವಟಿಕೆಗಳು ಇಂದಿನ ಅಗತ್ಯವಾಗಿವೆ"

Posted On: 12 MAR 2022 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದರು ಮತ್ತು ಅಹಮದಾಬಾದ್ ನಲ್ಲಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಗೃಹ ವ್ಯವಹಾರಗಳು ಹಾಗು ಸಹಕಾರ ಖಾತೆ ಸಚಿವ ಶ್ರೀ ಅಮಿತ್ ಶಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆರಂಭದಲ್ಲಿ ಪ್ರಧಾನಮಂತ್ರಿಯವರು ಮಹಾತ್ಮಾ ಗಾಂಧಿ ಮತ್ತು ದಂಡಿ ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಗೌರವ ಸಲ್ಲಿಸಿದರು. ದಿನದಂದು ಮಹಾನ್ ಪಾದಯಾತ್ರೆಯನ್ನು ಪ್ರಾರಂಭಿಸಲಾಯಿತು. "ಬ್ರಿಟಿಷರ ಅನ್ಯಾಯದ ವಿರುದ್ಧ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಚಳವಳಿಯು ನಮ್ಮ ಭಾರತೀಯರ ಸಾಮೂಹಿಕ ಶಕ್ತಿಯನ್ನು ಬ್ರಿಟಿಷ್ ಸರ್ಕಾರ ಅರಿತುಕೊಳ್ಳುವಂತೆ ಮಾಡಿತ್ತು" ಎಂದು ಪ್ರಧಾನಿ ಹೇಳಿದರು.

ವಸಾಹತುಶಾಹಿ ಕಾಲದಲ್ಲಿ ಆಗಿನ ವಸಾಹತುಶಾಹಿ ಪ್ರಭುಗಳಿಗೆ ಶಾಂತಿಯ ವಾತಾವರಣ ಸೃಷ್ಟಿಸಲು ಇದ್ದಂತಹ ಆಂತರಿಕ ಭದ್ರತೆಯ ಕಲ್ಪನೆಯು ಜನಸಾಮಾನ್ಯರಲ್ಲಿ ಭಯವನ್ನು ಹುಟ್ಟುಹಾಕುವುದರ ಮೇಲೆ ಆಧರಿಸಿತ್ತು. ಅದೇ ರೀತಿ, ಹಿಂದಿನ ಸನ್ನಿವೇಶವು ತುಂಬಾ ಭಿನ್ನವಾಗಿತ್ತು. ಏಕೆಂದರೆ ಭದ್ರತಾ ಪಡೆಗಳಿಗೆ ತಯಾರಿ ನಡೆಸಲು ಹೆಚ್ಚಿನ ಸಮಯವಿತ್ತು. ಆದರೆ, ಈಗ ತಂತ್ರಜ್ಞಾನ ಮತ್ತು ಸಾರಿಗೆ ಮತ್ತು ಸಂವಹನವು ತುಂಬಾ ಸುಧಾರಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಕಾಶವಿಲ್ಲ. ಇಂದಿನ ಪೊಲೀಸಿಂಗ್ ವ್ಯವಸ್ಥೆಗೆ ಸಂಧಾನ ಮತ್ತು ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಇತರೆ ಮೃದು ಕೌಶಲ್ಯಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಚಿತ್ರಣವನ್ನು ಬದಲಾಯಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜನಪ್ರಿಯ ಸಂಸ್ಕೃತಿಯಲ್ಲಿ ಪೊಲೀಸರನ್ನು ಚಿತ್ರಿಸುವುದು ಸಹ ನಿಟ್ಟಿನಲ್ಲಿ ಸಹಾಯ ಮಾಡಿಲ್ಲ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮಾಡಿದ ಮಾನವೀಯ ಕೆಲಸದ ಬಗ್ಗೆ ಅವರು ಗಮನ ಸೆಳೆದರು. "ಸ್ವಾತಂತ್ರ್ಯದ ನಂತರ, ದೇಶದ ಭದ್ರತಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವಿತ್ತು. ಮೊದಲು ಸಮವಸ್ತ್ರ ಧರಿಸಿದ ಸಿಬ್ಬಂದಿಯ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂಬ ಗ್ರಹಿಕೆಯನ್ನು ಬೆಳೆಸಲಾಗಿತ್ತು. ಆದರೆ ಅದು ಈಗ ಬದಲಾಗಿದೆ. ಜನರು ಈಗ ಸಮವಸ್ತ್ರ ಧರಿಸಿದ ಸಿಬ್ಬಂದಿಯನ್ನು ನೋಡಿದಾಗ, ಅವರು ಸಹಾಯದ ಭರವಸೆಯನ್ನು ಪಡೆಯುತ್ತಾರೆ", ಎಂದು ಪ್ರಧಾನಿ ಹೇಳಿದರು.

ಕೆಲಸದ ಒತ್ತಡವನ್ನು ನಿಭಾಯಿಸುವಲ್ಲಿ ಪೊಲೀಸ್ ಸಿಬ್ಬಂದಿಗೆ ಅವಿಭಕ್ತ ಕುಟುಂಬದ ಬೆಂಬಲ ಕುಗ್ಗಿರುವುದನ್ನು ಪ್ರಧಾನಿ ಉಲ್ಲೇಖಿಸಿದರು. ಒತ್ತಡವನ್ನು ಎದುರಿಸಲು ಮತ್ತು ವಿಶ್ರಾಂತಿಯನ್ನು ಹೊಂದಲು ರಕ್ಷಣಾ ಪಡೆಗಳಿಗೆ ಯೋಗತಜ್ಞರು ಸೇರಿದಂತೆ ವಿವಿಧ ತಜ್ಞರ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. "ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಒತ್ತಡ ರಹಿತ ತರಬೇತಿ ಚಟುವಟಿಕೆಗಳು ಇಂದಿನ ಅಗತ್ಯ" ಎಂದೂ ಅವರು ಹೇಳಿದರು.

ಭದ್ರತೆ ಮತ್ತು ಪೊಲೀಸಿಂಗ್ ಕೆಲಸದಲ್ಲಿ ತಂತ್ರಜ್ಞಾನದ ಮಹತ್ವವನ್ನು ಅವರು ಒತ್ತಿ ಹೇಳಿದರು. ಅಪರಾಧಿಗಳು ತಂತ್ರಜ್ಞಾನವನ್ನು ಬಳಸುತ್ತಿದ್ದರೆ, ಅವರನ್ನು ಬಂಧಿಸಲು ಅದೇ ತಂತ್ರಜ್ಞಾನವನ್ನು ತಿರುಗುಬಾಣವಾಗಿ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು. ತಂತ್ರಜ್ಞಾನಕ್ಕೆ ರೀತಿ ಒತ್ತು ನೀಡುವುದರಿಂದ ದಿವ್ಯಾಂಗರು ಸಹ ಕ್ಷೇತ್ರದಲ್ಲಿ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗಾಂಧಿನಗರ ಪ್ರದೇಶವು ʻರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯʼ, ʻರಕ್ಷಾ ವಿಶ್ವವಿದ್ಯಾಲಯʼ ಮತ್ತು ʻವಿಧಿ ವಿಜ್ಞಾನ ವಿಶ್ವವಿದ್ಯಾಲಯʼವನ್ನು ಹೊಂದಿದೆ ಎಂದು ಅವರು ಹೇಳಿದರು. ಕ್ಷೇತ್ರಗಳಲ್ಲಿ ಸಮಗ್ರ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ, ಕಾಲಕಾಲಕ್ಕೆ ಜಂಟಿ ವಿಚಾರ ಸಂಕಿರಣಗಳ ಮೂಲಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. "ಇದನ್ನು ಪೊಲೀಸ್ ವಿಶ್ವವಿದ್ಯಾಲಯವೆಂದು ಪರಿಗಣಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ದೇಶದ ಭದ್ರತೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ರಕ್ಷಾ ವಿಶ್ವವಿದ್ಯಾಲಯವಾಗಿದೆ,ʼʼ ಎಂದು ಅವರು ಹೇಳಿದರು. ಗುಂಪು ಮತ್ತು ಜನಸಮೂಹ ಮನೋವಿಜ್ಞಾನ, ಸಂಧಾನ ಮಾತುಕತೆ, ಪೌಷ್ಟಿಕತೆ ಮತ್ತು ತಂತ್ರಜ್ಞಾನದಂತಹ ವಿಭಾಗಗಳ ಮಹತ್ವವನ್ನು ಅವರು ಪುನರುಚ್ಚರಿಸಿದರು.

ವಿದ್ಯಾರ್ಥಿಗಳು ಸದಾ ಮಾನವೀಯತೆಯ ಮೌಲ್ಯಗಳನ್ನು ತಮ್ಮ ಸಮವಸ್ತ್ರದ ಅವಿಭಾಜ್ಯ ಅಂಗವಾಗಿ ಇರಿಸಿಕೊಳ್ಳಬೇಕು ಮತ್ತು ಅವರ ಪ್ರಯತ್ನಗಳಲ್ಲಿ ಎಂದಿಗೂ ಸೇವಾ ಮನೋಭಾವದ ಕೊರತೆ ಇರಕೂಡದು ಎಂದು ಅವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ಭದ್ರತಾ ಕ್ಷೇತ್ರದಲ್ಲಿ ಹುಡುಗಿಯರು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. "ರಕ್ಷಣಾ ವಲಯದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ನಾವು ನೋಡುತ್ತಿದ್ದೇವೆ. ವಿಜ್ಞಾನ, ಶಿಕ್ಷಣೆ ಅಥವಾ ಸುರಕ್ಷೆ ಯಾವುದೇ ಆಗಿರಬಹುದು, ಮಹಿಳೆಯರು ಮುಂದಾಳತ್ವ ವಹಿಸಿ ಮುನ್ನಡೆಯುತ್ತಿದ್ದಾರೆ", ಎಂದು ಅವರು ಹೇಳಿದರು.

ಯಾವುದೇ ಸಂಸ್ಥೆಯ ಧ್ಯೇಯವಾಕ್ಯವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ, ಅಂತಹ ಸಂಸ್ಥೆಯಿಂದ ಹೊರ ಬರುವ ಮೊದಲ ವಿದ್ಯಾರ್ಥಿಗಳ ತಂಡದ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಗುಜರಾತ್ ಗೆ ಔಷಧ ಕ್ಷೇತ್ರದಲ್ಲಿ ಮುಂಚೂಣಿ ನಾಯಕತ್ವ ತಂದುಕೊಡುವಲ್ಲಿ ರಾಜ್ಯದ ಹಳೆಯ ಫಾರ್ಮಸಿ ಕಾಲೇಜಿನ ಕೊಡುಗೆಯನ್ನು ಅವರು ಪ್ರಸ್ತಾಪಿಸಿದರು. ಅದೇ ರೀತಿ ʻಐಐಎಂ ಅಹಮದಾಬಾದ್ʼ ಶಿಕ್ಷಣ ಸಂಸ್ಥೆಯು ದೇಶದಲ್ಲಿ ದೃಢವಾದ ಎಂಬಿಎ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಕೊಡುಗೆ ನೀಡಿದೆ ಎಂದರು.

ಪೊಲೀಸಿಂಗ್, ಕ್ರಿಮಿನಲ್ ನ್ಯಾಯ ಮತ್ತು ಕಾರಾಗೃಹಗಳ ಆಡಳಿತದ ವಿವಿಧ ವಿಭಾಗಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿ ಪಡೆದ ಮಾನವ ಶಕ್ತಿಯ ಅಗತ್ಯವನ್ನು ಪೂರೈಸಲು ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼವನ್ನು (ಆರ್ ಆರ್ ಯು) ಸ್ಥಾಪಿಸಲಾಯಿತು. 2010ರಲ್ಲಿ ಗುಜರಾತ್ ಸರ್ಕಾರವು ಸ್ಥಾಪಿಸಿದ `ರಕ್ಷಾ ಶಕ್ತಿ ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸುವ ಮೂಲಕ ಸರ್ಕಾರವು `ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಎಂಬ ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ರಾಷ್ಟ್ರೀಯ ಪ್ರಾಮುಖ್ಯದ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯವು 2020 ಅಕ್ಟೋಬರ್ 1ರಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ವಿಶ್ವವಿದ್ಯಾಲಯವು ಉದ್ಯಮದಿಂದ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಖಾಸಗಿ ವಲಯದೊಂದಿಗೆ ಸಮನ್ವಯವನ್ನು ಅಭಿವೃದ್ಧಿಪಡಿಸುತ್ತದೆ ಹಾಗೂ ಪೊಲೀಸ್ ಮತ್ತು ಭದ್ರತೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲಿದೆ.

ಪೊಲೀಸ್ ವಿಜ್ಞಾನ ಮತ್ತು ನಿರ್ವಹಣೆ, ಕ್ರಿಮಿನಲ್ ಕಾನೂನು ಮತ್ತು ನ್ಯಾಯ, ಸೈಬರ್ ಮನಃಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್  ಮತ್ತು ಸೈಬರ್ ಭದ್ರತೆ, ಅಪರಾಧ ತನಿಖೆ, ಕಾರ್ಯತಂತ್ರಾತ್ಮಕ ಭಾಷೆಗಳು, ಆಂತರಿಕ ರಕ್ಷಣೆ ಮತ್ತು ಕಾರ್ಯತಂತ್ರಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡೆ, ಕರಾವಳಿ ಮತ್ತು ಕಡಲ ಭದ್ರತೆಯಂತಹ ಪೊಲೀಸಿಂಗ್ ಮತ್ತು ಆಂತರಿಕ ಭದ್ರತೆಯ ವಿವಿಧ ಕ್ಷೇತ್ರಗಳಲ್ಲಿ ಡಿಪ್ಲೊಮಾದಿಂದ ಹಿಡಿದು ಡಾಕ್ಟರೇಟ್ ಮಟ್ಟದವರೆಗೆ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ʻಆರ್.ಆರ್.ಯುʼ ಒದಿಗಸುತ್ತದೆ. ಪ್ರಸ್ತುತ, 18 ರಾಜ್ಯಗಳ 822 ವಿದ್ಯಾರ್ಥಿಗಳು ಕೋರ್ಸ್ಗಳಿಗೆ ನೋಂದಾಯಿಸಿ ಕೊಂಡಿದ್ದಾರೆ.

***


(Release ID: 1805730) Visitor Counter : 229