ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 11-12ರಂದು ಗುಜರಾತ್‌ಗೆ ಪ್ರಧಾನ ಮಂತ್ರಿ ಭೇಟಿ


ಗುಜರಾತ್ ಪಂಚಾಯತ್ ಮಹಾಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ; ಗುಜರಾತ್ ನ 1 ಲಕ್ಷಕ್ಕಿಂತ ಹೆಚ್ಚಿನ ಪಂಚಾಯತ್ ರಾಜ್ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ

ಪ್ರಧಾನಮಂತ್ರಿ ಅವರಿಂದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆ; ನರೇಂದ್ರ ಮೋದಿ ಅವರಿಂದ ಮೊದಲ ಘಟಿಕೋತ್ಸವ ಭಾಷಣ

ಪೊಲೀಸ್, ಕ್ರಿಮಿನಲ್ ನ್ಯಾಯ ಮತ್ತು ಸಮರ್ಪಕ ಆಡಳಿತದ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ತರಬೇತಿ ಪಡೆದ ಮಾನವಶಕ್ತಿಯ ಅಗತ್ಯ ಪೂರೈಸಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪನೆ

11ನೇ ಖೇಲ್ ಮಹಾಕುಂಭ ಉದ್ಘಾಟಿಸಲಿರುವ ಪ್ರಧಾನಮಂತ್ರಿ

2010ರಲ್ಲಿ ಅಂದಿನ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಆರಂಭವಾದ ಮಹಾಕುಂಭವು ಗುಜರಾತ್‌ನಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಕ್ರಾಂತಿಕಾರಿಗೊಳಿಸಿದೆ.

Posted On: 09 MAR 2022 6:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 11-12ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಮಾರ್ಚ್ 11ರಂದು ಸಂಜೆ 4 ಗಂಟೆಗೆ ಪ್ರಧಾನಿ ಅವರು ಗುಜರಾತ್ ಪಂಚಾಯತ್ ಮಹಾಸಮ್ಮೇಳನ  ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಾರ್ಚ್ 12ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ(ಆರ್ ಆರ್ ಯು) ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಆರ್ ಆರ್ ಯು ಮೊದಲ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಸಂಜೆ 6.30ಕ್ಕೆ ಪ್ರಧಾನಿ ಅವರು 11ನೇ ಖೇಲ್ ಮಹಾಕುಂಭ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.

ಗುಜರಾತ್ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಹೊಂದಿದೆ. 33 ಜಿಲ್ಲಾ ಪಂಚಾಯಿತಿಗಳು, 248 ತಾಲೂಕು ಪಂಚಾಯತ್ಗಳು ಮತ್ತು 14,500ಕ್ಕಿಂತ ಹೆಚ್ಚಿನ ಗ್ರಾಮ ಪಂಚಾಯತ್ಗಳನ್ನು ಹೊಂದಿದೆ. 'ಗುಜರಾತ್ ಪಂಚಾಯತ್ ಮಹಾಸಮ್ಮೇಳನ: ಆಪ್ನು ಗಾವ್, ಆಪ್ನು ಗೌರವ್' ಧ್ಯೇಯವಾಕ್ಯದೊಂದಿಗೆ ಜರುಗಲಿದ್ದು, ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳ ಮೂರು ವಿಭಾಗಗಳಿಂದ 1 ಲಕ್ಷಕ್ಕಿಂತ ಹೆಚ್ಚಿನ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪೊಲೀಸ್, ಕ್ರಿಮಿನಲ್ ನ್ಯಾಯ ಮತ್ತು ಸಮರ್ಪಕ ಅಥವಾ ಪಾರದರ್ಶಕ ಆಡಳಿತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವನ್ನು ಪೂರೈಸಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. 2010ರಲ್ಲಿ ಗುಜರಾತ್ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ರಕ್ಷಾ ಶಕ್ತಿ ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸುವ ಮೂಲಕ ಸರ್ಕಾರವು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಎಂಬ ಹೆಸರಿನ ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿರುವ ಈ ವಿಶ್ವವಿದ್ಯಾಲಯವು 2020 ಅಕ್ಟೋಬರ್ 1ರಿಂದ  ತನ್ನ ಕಾರ್ಯಾಚರಣೆ ಆರಂಭಿಸಿದೆ. ಉದ್ಯಮದಿಂದ ಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಖಾಸಗಿ ವಲಯದೊಂದಿಗೆ ಸಹಭಾಗಿತ್ವ ಅಭಿವೃದ್ಧಿಪಡಿಸುತ್ತದೆ. ಇದು ಪೊಲೀಸ್ ಮತ್ತು ಭದ್ರತೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಿದೆ.

ಪೊಲೀಸ್ ವಿಜ್ಞಾನ ಮತ್ತು ನಿರ್ವಹಣೆ, ಅಪರಾಧ ಕಾನೂನು ಮತ್ತು ನ್ಯಾಯ, ಸೈಬರ್ ಮನೋವಿಜ್ಞಾನ, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ, ಅಪರಾಧ ತನಿಖೆ, ಕಾರ್ಯತಂತ್ರದ ಭಾಷೆಗಳು, ಆಂತರಿಕ ರಕ್ಷಣೆ ಮತ್ತು ಪೊಲೀಸ್ ಮತ್ತು ಆಂತರಿಕ ಭದ್ರತೆ, ಕಾರ್ಯತಂತ್ರಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡೆ, ಕರಾವಳಿ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡಿಪ್ಲೊಮಾದಿಂದ ಡಾಕ್ಟರೇಟ್ ಹಂತದವರೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ವಿಶ್ವವಿದ್ಯಾಲಯ ನೀಡುತ್ತದೆ.  ಪ್ರಸ್ತುತ, 18 ರಾಜ್ಯಗಳಿಂದ 822 ವಿದ್ಯಾರ್ಥಿಗಳು ಈ ಶೈಕ್ಷಣಿಕ ಕಾರ್ಯಕ್ರಮಗಳಿಗೆ ದಾಖಲಾಗಿದ್ದಾರೆ.

2010ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ 16 ಕ್ರೀಡೆಗಳು ಮತ್ತು 13 ಲಕ್ಷ ಸ್ಪರ್ಧಿಗಳು ಭಾಗವಹಿಸುವುದರೊಂದಿಗೆ ಆರಂಭವಾದ ಖೇಲ್ ಮಹಾಕುಂಭ್ ಇಂದು 36 ಸಾಮಾನ್ಯ ಕ್ರೀಡೆಗಳು ಮತ್ತು 26 ಪ್ಯಾರಾ ಕ್ರೀಡೆಗಳನ್ನು ಒಳಗೊಂಡಿದೆ. 11ನೇ ಖೇಲ್ ಮಹಾಕುಂಭಕ್ಕೆ 45 ಲಕ್ಷಕ್ಕೂ ಹೆಚ್ಚು ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ.

ಖೇಲ್ ಮಹಾಕುಂಭ್ ಗುಜರಾತ್‌ನ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಕ್ರಾಂತಿಕಾರಿಗೊಳಿಸಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ, ಇದು 1 ತಿಂಗಳ ಅವಧಿಯಲ್ಲಿ ವಿವಿಧ ಕ್ರೀಡಾ ಕಾರ್ಯಕ್ರಮಗಳಲ್ಲಿ ರಾಜ್ಯದ ಜನರು  ಸ್ಪರ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದು ಸಾಂಪ್ರದಾಯಿಕ ಕ್ರೀಡೆಗಳಾದ ಕಬಡ್ಡಿ, ಖೋ-ಖೋ, ಟಗ್ ಆಫ್ ವಾರ್, ಯೋಗಾಸನ, ಮಲ್ಲಕಂಭ ಮತ್ತು ಆಧುನಿಕ ಕ್ರೀಡೆಗಳಾದ ಕಲಾತ್ಮಕ ಸ್ಕೇಟಿಂಗ್, ಟೆನ್ನಿಸ್ ಮತ್ತು ಫೆನ್ಸಿಂಗ್‌ನ ವಿಶಿಷ್ಟ ಸಂಗಮವಾಗಿದೆ. ತಳಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಇದು ಗುಜರಾತ್‌ನಲ್ಲಿ ಪ್ಯಾರಾ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಿದೆ.

 

***



(Release ID: 1804733) Visitor Counter : 201