ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ತಂತ್ರಜ್ಞಾನ ಆಧರಿತ ಅಭಿವೃದ್ಧಿ' ಕುರಿತು ವೆಬಿನಾರ್‌ ಉದ್ದೇಶಿಸಿ ಪ್ರಧಾನಿ ಭಾಷಣ


"ತಂತ್ರಜ್ಞಾನವು ನಮ್ಮ ಪಾಲಿಗೆ ದೇಶದ ಜನರನ್ನು ಸಬಲೀಕರಿಸುವ ಮಾಧ್ಯಮವಾಗಿದೆ. ನಮ್ಮ ಪಾಲಿಗೆ ತಂತ್ರಜ್ಞಾನವು ದೇಶವನ್ನು ಆತ್ಮನಿರ್ಭರ್ ಮಾಡಲು ಪ್ರಮುಖವಾಗಿದೆ. ಇದೇ ದೃಷ್ಟಿಕೋನವನ್ನು ಈ ವರ್ಷದ ಬಜೆಟ್‌ ಸಹ ಪ್ರತಿಫಲಿಸಿದೆ"

" 5ಜಿ ತರಂಗಗುಚ್ಛ ಹರಾಜಿಗೆ ಸ್ಪಷ್ಟ ಮಾರ್ಗಸೂಚಿಯನ್ನು ಬಜೆಟ್ ರೂಪಿಸಿದೆ ಮತ್ತು ಸಶಕ್ತ 5ಜಿ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ವಿನ್ಯಾಸ ಚಾಲಿತ ಉತ್ಪಾದನೆಗಾಗಿ ʻಪಿಎಲ್ಐʼ (ಉತ್ಪಾದನೆ ಆಧರಿತ ಸಹಾಯಧನ) ಯೋಜನೆಗಳನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ"

"ಜೀವನ ನಿರ್ವಹಣೆ ಸುಲಲಿತಗೊಳಿಸಲು ತಂತ್ರಜ್ಞಾನವನ್ನು ಗರಿಷ್ಠವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ವಿಷಯಕ್ಕೆ ನಾವು ಒತ್ತು ನೀಡಬೇಕು."

"ಕೋವಿಡ್ ಸಮಯದ ವೇಳೆ ಲಸಿಕೆ ಉತ್ಪಾದನೆಯಲ್ಲಿ ನಮ್ಮ ಸ್ವಾವಲಂಬನೆ, ಸುಸ್ಥಿರತೆಯಿಂದಾಗಿ ಜಗತ್ತಿಗೆ ನಮ್ಮ ವಿಶ್ವಾಸಾರ್ಹತೆಯ ಅರಿವಾಗಿದೆ. ನಾವು ಈ ಯಶಸ್ಸನ್ನು ಪ್ರತಿಯೊಂದು ವಲಯದಲ್ಲೂ ಪುನರಾವರ್ತಿಸಬೇಕು"

Posted On: 02 MAR 2022 11:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಏಳನೇ ವೆಬಿನಾರ್‌ ಉದ್ದೇಶಿಸಿ ಇಂದು ಮಾತನಾಡಿದರು. ಬಜೆಟ್‌ನ ಪ್ರಸ್ತಾಪಗಳನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ನಡೆಸುವುದು ಮತ್ತು ಅವರನ್ನು ನಿಟ್ಟಿನಲ್ಲಿ ಪ್ರೋತ್ಸಾಹಿಸುವುದು ಸರಣಿಯ ಉದ್ದೇಶವಾಗಿದೆ. "ಬಜೆಟ್‌ಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ನಾವು ತ್ವರಿತವಾಗಿ, ತಡೆರಹಿತವಾಗಿ ಮತ್ತು ಸೂಕ್ತ ಫಲಿತಾಂಶದೊಂದಿಗೆ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಇದೊಂದು ಸಹಯೋಗದ ಪ್ರಯತ್ನ,” ಎಂದು ವೆಬಿನಾರ್‌ಗಳ ಹಿಂದಿನ ತಾರ್ಕಿಕತೆಯನ್ನು ಅವರು ವಿವರಿಸಿದರು.

ಸರ್ಕಾರದ ಪಾಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತ್ಯೇಕ ವಲಯವಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಆರ್ಥಿಕ ಕ್ಷೇತ್ರದ ಗುರಿಗಳು ಡಿಜಿಟಲ್ ಆರ್ಥಿಕತೆ ಮತ್ತು ʻಫಿನ್‌ಟೆಕ್ʼನಂತಹ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿವೆ. ಅದೇ ರೀತಿ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆ ವಿತರಣೆ ಸಂಬಂಧಿತ ಗುರಿಗಳ ಸಾಧನೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನವು ದೊಡ್ಡ ಪಾತ್ರವನ್ನು ಹೊಂದಿದೆ. "ನಮ್ಮ ಪಾಲಿಗೆ ತಂತ್ರಜ್ಞಾನವು ದೇಶದ ಜನರನ್ನು ಸಶಕ್ತಗೊಳಿಸುವ ಮಾಧ್ಯಮವಾಗಿದೆ. ನಮಗೆ, ತಂತ್ರಜ್ಞಾನವೆಂದರೆ  ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪ್ರಮುಖ ಅಂಶವಾಗಿದೆ. ಇದೇ ದೃಷ್ಟಿಕೋನವು ವರ್ಷದ ಬಜೆಟ್‌ನಲ್ಲೂ ಪ್ರತಿಫಲಿಸಿದೆ,” ಎಂದು ಪ್ರಧಾನಿ ಹೇಳಿದರು. ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳು ಸಹ ʻಆತ್ಮನಿರ್ಭರ ಭಾರತʼ ಬಗ್ಗೆ ಮಾತನಾಡುತ್ತಿರುವುದರಿಂದ, ಇದರ ಮಹತ್ವವನ್ನು ಒತ್ತಿ ಹೇಳಲು ಅಧ್ಯಕ್ಷ ಬೈಡನ್‌ ಅವರ ಇತ್ತೀಚಿನ ಭಾಷಣದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. "ಉದಯೋನ್ಮುಖ ಹೊಸ ಜಾಗತಿಕ ವ್ಯವಸ್ಥೆಗಳ ಹಿನ್ನೆಲೆಯಲ್ಲಿ, ನಾವು ಆತ್ಮನಿರ್ಭರತಾದ ಮೇಲೆ ಗಮನ ಕೇಂದ್ರೀಕರಿಸಿ ಮುಂದುವರಿಯುವುದು ನಿರ್ಣಾಯಕವಾಗಿದೆ" ಎಂದು ಅವರು ಹೇಳಿದರು.

ಆರ್ಟಿಫಿಷಿಯಲ್‌ ಇಂಟಲಿಜೆನ್ಸ್, ಭೂ-ಪ್ರಾಂತೀಯ ವ್ಯವಸ್ಥೆಗಳು(ಜಿಯೋ-ಸ್ಪೇಷಿಯಲ್‌ ಸಿಸ್ಟಂ), ಡ್ರೋನ್‌ಗಳು, ಸೆಮಿ-ಕಂಡಕ್ಟರ್‌ಗಳು, ಬಾಹ್ಯಾಕಾಶ ತಂತ್ರಜ್ಞಾನ, ಜೀನೋಮಿಕ್ಸ್, ಔಷಧ ಮತ್ತು ಸ್ವಚ್ಛ ತಂತ್ರಜ್ಞಾನ (ಕ್ಲೀನ್‌ ಟೆಕ್ನಾಲಜೀಸ್),  5ಜಿ ಹೀಗೆ ಹತ್ತು ಹಲವು ಉದಯೋನ್ಮುಖ ವಲಯಗಳಿಗೆ ಬಜೆಟ್‌ನಲ್ಲಿ ಪ್ರಾಧಾನ್ಯ ನೀಡುವುದನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು. 5ಜಿ ತರಂಗಗುಚ್ಛ ಹರಾಜಿಗೆ ಬಜೆಟ್ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿದೆ ಮತ್ತು ಸಶಕ್ತ 5ಜಿ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ವಿನ್ಯಾಸ ಚಾಲಿತ ಉತ್ಪಾದನೆಗೆ ಪಿಎಲ್ಐ (ಉತ್ಪಾದನೆ ಆಧರಿತ ಸಹಾಯಧನ) ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು. ಕ್ಷೇತ್ರದಲ್ಲಿ ತಮ್ಮ ಪ್ರಯತ್ನಗಳನ್ನು ಹೆಚ್ಚಿಸುವಂತೆ ಖಾಸಗಿ ವಲಯಕ್ಕೆ ಅವರು ಸೂಚಿಸಿದರು.

'ವಿಜ್ಞಾನವು ಸಾರ್ವತ್ರಿಕವಾಗಿದೆ ಮತ್ತು ತಂತ್ರಜ್ಞಾನವು ಸ್ಥಳೀಯವಾಗಿದೆ' ಎಂಬ ಸೂತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ನಮಗೆ ವಿಜ್ಞಾನದ ತತ್ವಗಳ ಬಗ್ಗೆ ತಿಳಿದಿದೆ, ಆದರೆ ಜೀವನ ನಿರ್ವಹಣೆಯನ್ನು ಸುಲಲಿತವಾಗಿಸಲು ತಂತ್ರಜ್ಞಾನವನ್ನು ಹೇಗೆ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಒತ್ತು ನೀಡಬೇಕು,” ಎಂದು ಹೇಳಿದರು. ಮನೆ ನಿರ್ಮಾಣ, ರೈಲ್ವೆ, ವಾಯುಮಾರ್ಗ, ಜಲಮಾರ್ಗಗಳು ಮತ್ತು ಆಪ್ಟಿಕಲ್ ಫೈಬರ್‌ಗಳಲ್ಲಿ ಹೂಡಿಕೆಯನ್ನು ಅವರು ಉಲ್ಲೇಖಿಸಿದರು. ಪ್ರಮುಖ ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳನ್ನು ಬಳಸುವ ಆಲೋಚನೆಗಳಿಗೆ ಮುಂದಾಗುವಂತೆ ಅವರು ಕರೆ ನೀಡಿದರು.

ಜಾಗತಿಕವಾಗಿ ʻಗೇಮಿಂಗ್ʼ ಮಾರುಕಟ್ಟೆ ವಿಸ್ತರಿಸುತ್ತಿರುವ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ʻಅನಿಮೇಷನ್ ವಿಶುವಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ʼ (ಎವಿಜಿಸಿ) ಮೇಲೆ ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ ಎಂದು ಹೇಳಿದರು. ಹಾಗೆಯೇ, ಭಾರತೀಯ ಪರಿಸರ ಮತ್ತು ಅಗತ್ಯಗಳಿಗೆ ಹೊಂದುವ ಆಟಿಕೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಂವಹನ ಕೇಂದ್ರಗಳು ಮತ್ತು ʻಫಿನ್‌ಟೆಕ್ʼ ಅನ್ನು ಕೇಂದ್ರಬಿಂದುವಾಗಿಸುವ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಎರಡಕ್ಕೂ ಕಡಿಮೆ ವಿದೇಶಿ ಅವಲಂಬನೆ ಇರುವಂತಹ ದೇಶೀಯ ಪರಿಸರ ವ್ಯವಸ್ಥೆಯನ್ನು ರೂಪಿಸಲು ಮನವಿ ಮಾಡಿದರು. ಭೂ-ಪ್ರಾಂತೀಯ ದತ್ತಾಂಶಗಳ ಬಳಕೆ ನಿಯಮಗಳ ಬದಲಾವಣೆಯಿಂದ ದೊರೆತ ಪ್ರಯೋಜನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಮತ್ತು ನಿಯಮಗಳ ಸುಧಾರಣೆಯಿಂದಾಗಿ ಹೊರಹೊಮ್ಮಿರುವ ಅನಂತ ಅವಕಾಶಗಳ ಗರಿಷ್ಠ ಬಳಕೆಗೆ ಪ್ರಧಾನಮಂತ್ರಿಯವರು ಖಾಸಗಿ ವಲಯಕ್ಕೆ ಸಲಹೆ ನೀಡಿದರು. "ಕೋವಿಡ್ ಸಮಯದಲ್ಲಿ ಲಸಿಕೆ ಉತ್ಪಾದನೆಯಲ್ಲಿ ಭಾರತ ತೋರಿದ ಸ್ವವಾಲಂಬನೆ ಮತ್ತು ಸ್ವಯಂ-ಸುಸ್ಥಿರತೆಯಿಂದ ನಮ್ಮ ವಿಶ್ವಾಸಾರ್ಹತೆ ಏನೆಂಬುದನ್ನು ಜಗತ್ತು ಕಂಡಿದೆ. ನಾವು ಯಶಸ್ಸನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಪುನರಾವರ್ತಿಸಬೇಕು", ಎಂದು ಪ್ರಧಾನಿ ಮೋದಿ ಹೇಳಿದರು.

ದೇಶಕ್ಕೆ ದೃಢವಾದ ದತ್ತಾಂಶ ಭದ್ರತಾ ಚೌಕಟ್ಟನ್ನು ಒದಗಿಸಬೇಕಾದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅದಕ್ಕಾಗಿ ಮಾನದಂಡಗಳು ಮತ್ತು ನಿಯಮಗಳನ್ನು ರಚಿಸಲು ಮಾರ್ಗಸೂಚಿಯೊಂದನ್ನು ರೂಪಿಸುವಂತೆ ಸಭೆಯಲ್ಲಿ ಕೋರಿದರು.

ಜಗತ್ತಿನ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ, ಅಂದರೆ ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉಲ್ಲೇಖಿಸಿದ ಪ್ರಧಾನಿ, ವಲಯಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. "ಯುವಕರಿಗೆ  ಕೌಶಲ್ಯ, ಮರು-ಕೌಶಲ್ಯ ತರಬೇತಿಗಾಗಿ ವಿಶೇಷ ಪೋರ್ಟಲ್ ತೆರೆಯಲು ಸಹ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ, ಯುವಕರು ʻಎಪಿಐʼ ಆಧಾರಿತ ವಿಶ್ವಾಸಾರ್ಹ ಕೌಶಲ್ಯ ಪ್ರಮಾಣ ಪತ್ರಗಳು, ಪಾವತಿ ಮತ್ತು ಆವಿಷ್ಕಾರ ಪದರಗಳ ಮೂಲಕ ಸೂಕ್ತ ಉದ್ಯೋಗಗಳು ಮತ್ತು ಅವಕಾಶಗಳನ್ನು ಪಡೆಯಲಿದ್ದಾರೆ,” ಎಂದು ಪ್ರಧಾನಿ ಮಾಹಿತಿ ನೀಡಿದರು.

ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ 14 ಪ್ರಮುಖ ವಲಯಗಳಲ್ಲಿ 2 ಲಕ್ಷ ಕೋಟಿ ರೂ. ಮೌಲ್ಯದ ʻಉತ್ಪಾದನೆ ಆಧರಿತ ಸಹಾಯಧನʼ (ಪಿಎಲ್‌ಐ) ಯೋಜನೆಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ನಾಗರಿಕ ಸೇವೆಗಳಲ್ಲಿ ಆಪ್ಟಿಕಲ್ ಫೈಬರ್‌ ಬಳಕೆ, -ತ್ಯಾಜ್ಯ ನಿರ್ವಹಣೆ, ಆವರ್ತನ ಆರ್ಥಿಕತೆ ಮತ್ತು ವಿದ್ಯುತ್ ಚಾಲಿತ ಸಾರಿಗೆಯಂತಹ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಲಹೆಗಳನ್ನು ನೀಡಲು ಭಾಗಿದಾರರಿಗೆ ಪ್ರಧಾನಿ ಸ್ಪಷ್ಟ ನಿರ್ದೇಶನ ನೀಡಿದರು.

***


(Release ID: 1802295) Visitor Counter : 257