ಪ್ರಧಾನ ಮಂತ್ರಿಯವರ ಕಛೇರಿ
ಅರುಣಾಚಲ ಪ್ರದೇಶದ 36ನೇ ಸಂಸ್ಥಾಪನಾ ದಿನ ಮತ್ತು ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
“ಆಂಗ್ಲೋ-ಅಬೋರ್ ಯುದ್ಧವಾಗಿರಬಹುದು ಅಥವಾ ಸ್ವಾತಂತ್ರ್ಯಾನಂತರ ಗಡಿ ಭದ್ರತೆಯಾಗಿರಬಹುದು, ಅರುಣಾಚಲದ ಜನರ ಶೌರ್ಯ ಕತೆಗಳು ಪ್ರತಿಯೊಬ್ಬ ಭಾರತೀಯರಿಗೂ ಬೆಲೆ ಕಟ್ಟಲಾಗದ ಪರಂಪರೆಗಳು”
“ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಾರ್ಗವು ಅರುಣಾಚಲಪ್ರದೇಶಕ್ಕೆ ಉಜ್ವಲ ಭವಿಷ್ಯ ಖಾತ್ರಿಪಡಿಸುತ್ತದೆ”
“ಪೂರ್ವ ಭಾರತ ವಿಶೇಷವಾಗಿ ಈಶಾನ್ಯ ಭಾರತವು 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಯ ಇಂಜಿನ್ ಆಗಲಿದೆ”
“ಅರುಣಾಚಲವನ್ನು ಪೂರ್ವ ಏಷ್ಯಾದ ಪ್ರಮುಖ ಹೆಬ್ಬಾಗಿಲನ್ನಾಗಿ ಮಾಡಲು ನಾವು ಪೂರ್ಣ ಪ್ರಮಾಣದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಅರುಣಾಚಲದ ಕಾರ್ಯತಾಂತ್ರಿಕ ಪಾತ್ರವನ್ನು ಗಮನದಲ್ಲಿರಿಸಿಕೊಂಡು ರಾಜ್ಯದಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಿಸಲಾಗುತ್ತಿದೆ”
Posted On:
20 FEB 2022 12:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದ 36ನೇ ರಾಜ್ಯ ಸಂಸ್ಥಾಪನಾ ದಿನ ಮತ್ತು ಸುವರ್ಣ ಮಹೋತ್ಸವದ ಅಂಗವಾಗಿ ಅರುಣಾಚಲಪ್ರದೇಶದ ಜನರನ್ನು ಅಭಿನಂದಿಸಿದ್ದಾರೆ. ಕಳೆದ 50 ವರ್ಷಗಳಲ್ಲಿ ಉದಯಿಸುತ್ತಿರುವ ಸೂರ್ಯ ನಾಡು ಎಂಬ ಹೆಗ್ಗುರುತನ್ನು ಬಲವರ್ಧನೆಗೊಳಿಸಿದ್ದಕ್ಕಾಗಿ ಅವರು ಶ್ಲಾಘಿಸಿದರು. ಅಲ್ಲದೆ ಅವರು, ಹೆಸರಾಂತ ಭಾರತ ರತ್ನ ಡಾ.ಭೂಪೇನ್ ಹಜಾರಿಕಾ ಅವರ ಜನಪ್ರಿಯ ಗೀತೆ ‘ಅರುಣಾಚಲ ಹಮಾರ’ ದ ಕೆಲವು ವಾಕ್ಯಗಳನ್ನು ಉಲ್ಲೇಖಿಸಿದರು. ಅರುಣಾಚಲಪ್ರದೇಶದ 36ನೇ ರಾಜ್ಯ ಉದಯ ದಿನ ಮತ್ತು ಸುವರ್ಣ ಮಹೋತ್ಸವದ ಅಂಗವಾಗಿ ಅವರು ಆ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದರು.
ಅರುಣಾಚಲಪ್ರದೇಶವು ದೇಶಭಕ್ತಿ ಮತ್ತು ಸಾಮಾಜಿಕ ಸೌಹಾರ್ದ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ದೇಶದ ಸಾಂಸ್ಕೃತಿಕ ಗತವೈಭವವನ್ನು ಸಂರಕ್ಷಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ದೇಶಕ್ಕಾಗಿ ಬಲಿದಾನಗೈದ ಅರುಣಾಚಲಪ್ರದೇಶದ ಹುತಾತ್ಮರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು. “ಆಂಗ್ಲೋ-ಅಬೋರ್ ಯುದ್ಧವಾಗಿರಬಹುದು ಅಥವಾ ಸ್ವಾತಂತ್ರ್ಯಾ ನಂತರ ದೇಶದ ಭದ್ರತೆಯಾಗಿರಬಹುದು. ನಮ್ಮ ಅರುಣಾಚಲಪ್ರದೇಶ ಜನರ ಶೌರ್ಯಗಾಥೆಗಳು ಪ್ರತಿಯೊಬ್ಬ ಭಾರತೀಯರಿಗೂ ಬೆಲೆಕಟ್ಟಲಾಗದ ಪರಂಪರೆಯಾಗಿವೆ” ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು ರಾಜ್ಯಕ್ಕೆ ತಾವು ಹಲವು ಭಾರಿ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡರು ಮತ್ತು ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ನೇತೃತ್ವದ ಡಬಲ್ ಇಂಜಿನ್ ಸರ್ಕಾರದಡಿ ನಡೆಯುತ್ತಿರುವ ವೇಗದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. “ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಮಾರ್ಗದಲ್ಲಿ ಅರುಣಾಚಲಪ್ರದೇಶಕ್ಕೆ ಉಜ್ವಲ ಭವಿಷ್ಯದ ಖಾತ್ರಿ ಇದೆ” ಎಂದು ಹೇಳಿದರು.
ಪೂರ್ವ ಭಾರತ, ವಿಶೇಷವಾಗಿ ಈಶಾನ್ಯ ಭಾರತ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಯ ಇಂಜಿನ್ ಆಗಲಿದೆ ಎಂದು ತಾವು ವಿಶ್ವಾಸ ಹೊಂದಿರುವುದಾಗಿ ಪ್ರಧಾನಮಂತ್ರಿ ಪುನರುಚ್ಚರಿಸಿದರು. ಅಲ್ಲದೆ ಅವರು ಕಳೆದ ಏಳು ವರ್ಷಗಳಲ್ಲಿ ತಾವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಸಂಪರ್ಕ ಮತ್ತು ವಿದ್ಯುತ್ ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಕಾಮಗಾರಿಗಳು ನಡೆಯುತ್ತಿವೆ ಮತ್ತು ಅದರಿಂದಾಗಿ ಅರುಣಾಚಲಪ್ರದೇಶದಲ್ಲಿ ಜೀವನ ಮತ್ತು ವ್ಯಾಪಾರ ಸುಲಭವಾಗಿದೆ. ಈಶಾನ್ಯ ಭಾಗದ ಎಲ್ಲ ರಾಜಧಾನಿಗಳಿಗೂ ಆದ್ಯತೆಯ ಮೇರೆಗೆ ರೈಲು ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದರು. “ಅರುಣಾಚಲಪ್ರದೇಶವನ್ನು ಪೂರ್ವ ಏಷ್ಯಾದ ಪ್ರಮುಖ ಹೆಬ್ಬಾಗಿಲನ್ನಾಗಿ ಮಾಡಲು ನಾವು ಸಂಪೂರ್ಣ ಶಕ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಅರುಣಾಚಲಪ್ರದೇಶ ಕಾರ್ಯತಾಂತ್ರಿಕ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಧುನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡಲಾಗುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಅರುಣಾಚಲಪ್ರದೇಶ ಪ್ರಕೃತಿ ಮತ್ತು ಸಂಸ್ಕೃತಿಯೊಂದಿಗೆ ಸಾಮರಸ್ಯದಿಂದ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. “ನಿಮ್ಮ ಪ್ರಯತ್ನಗಳಿಂದಾಗಿ ಅರುಣಾಚಲಪ್ರದೇಶ ಅತ್ಯಂತ ಪ್ರಮುಖ ಜೀವವೈವಿಧ್ಯದ ತಾಣವಾಗಿದೆ” ಎಂದು ಪ್ರಧಾನಮಂತ್ರಿ ಅವರು ಅರುಣಾಚಲಪ್ರದೇಶದ ಜನರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಸ್ವ-ಸಹಾಯ ಗುಂಪುಗಳ ವಲಯದಲ್ಲಿ ಮುಖ್ಯಮಂತ್ರಿಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಅವರು ರಾಜ್ಯದ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕಾಗಿ ಅವರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಅರುಣಾಚಲಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.
***
(Release ID: 1799824)
Visitor Counter : 236
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam