ಹಣಕಾಸು ಸಚಿವಾಲಯ

ಕೇಂದ್ರೀಯ ಬ್ಯಾಂಕ್ (ಆರ್ ಬಿ ಐ)ನ ಡಿಜಿಟಲ್ ಕರೆನ್ಸಿ ‘ಡಿಜಿಟಲ್ ರೂಪಾಯಿ’ ಜಾರಿ ಪ್ರಕಟ


ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳಿಂದ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಶಾಖೆಗಳ ಸ್ಥಾಪನೆ

2022ರಲ್ಲಿ 1.5 ಲಕ್ಷ ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿ, ಸೌಲಭ್ಯ ಒದಗಿಸಲಾಗುವುದು

ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಣಕಾಸಿನ ನೆರವು ಮುಂದುವರಿಕೆ

Posted On: 01 FEB 2022 1:11PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ನಲ್ಲಿಡಿಜಿಟಲ್ ರೂಪಾಯಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಸ್ತಾಪ ಪ್ರಕಟಿಸಿದ್ದಾರೆ.

2022-23ರಿಂದ ಅಂದರೆ ಪ್ರಸಕ್ತ ವರ್ಷದಿಂದಲೇ ಆರಂಭವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್, ಡಿಜಿಟಲ್ ರೂಪಾಯಿ ಅನ್ನು ಹಣಕಾಸು ಮಾರುಕಟ್ಟೆಗೆ ಪರಿಚಯಿಸಲಿದೆ. ಕೇಂದ್ರೀಯ ಬ್ಯಾಂಕ್ ಜಿಡಿಟಲ್ ಕರೆನ್ಸಿ(ಸಿಬಿಡಿಸಿ)ಯು ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲಿದೆ. ಡಿಜಿಟಲ್ ಕರೆನ್ಸಿ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಕಾರಣವಾಗುತ್ತದೆ. ಡಿಜಿಟಲ್ ಕರೆನ್ಸಿ ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಲಿದೆ ಎಂದು ಸಚಿವರು ತಿಳಿಸಿದರು

Central Bank Digital Currency.jpg

ಡಿಜಿಟಲ್ ಬ್ಯಾಂಕಿಂಗ್:

ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಹಣಕಾಸು ತಂತ್ರಜ್ಞಾನ ಆವಿಷ್ಕಾರಗಳು ತ್ವರಿತ ಗತಿಯಲ್ಲಿ ಬೆಳವಣಿಗೆ ಕಾಣುತ್ತಿವೆ. ಡಿಜಿಟಲ್ ಬ್ಯಾಂಕಿಂಗ್‌ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ಗ್ರಾಹಕ ಸ್ನೇಹಿಯಾಗಿ ತಲುಪುವಂತೆ ನೋಡಿಕೊಳ್ಳಲು ಸರ್ಕಾರವು ನಿರಂತರವಾಗಿ ವಲಯಗಳನ್ನು ಪ್ರೋತ್ಸಾಹಿಸುತ್ತಿದೆ. ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ. ನಾವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ, ದೇಶದ 75 ಜಿಲ್ಲೆಗಳನ್ನು ಆಯ್ಕೆ ಮಾಡಿ, ಅಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳಿಂದ 75 ಡಿಜಿಟಲ್ ಬ್ಯಾಂಕಿಂಗ್ ಶಾಖೆಗಳನ್ನು (ಡಿಬಿಯು) ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹಣಕಾಸು ಸಚಿವವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ಯಾವುದೇ ಸಮಯಯಾವುದೇ ಸ್ಥಳದಲ್ಲಿ ಅಂಚೆ ಕಚೇರಿ ಉಳಿತಾಯ:

ಮತ್ತೊಂದು ಪ್ರಮುಖ ಪ್ರಸ್ತಾವನೆ ಪ್ರಕಟಿಸಿರುವ ಹಣಕಾಸು ಸಚಿವರು, 2022ರಲ್ಲಿ ಅಂದರೆ ಇದೇ ವರ್ಷ ದೇಶದ 1.5 ಲಕ್ಷ ಅಂಚೆ ಕಚೇರಿಗಳಲ್ಲಿ 100% ಕೋರ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲಾಗುವುದು. ಹಣಕಾಸಿನ ಸೇರ್ಪಡೆ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳ ಮೂಲಕ ಜನರ ಖಾತೆಗಳನ್ನು ಪ್ರವೇಶ ಸಕ್ರಿಯಗೊಳಿಸಲಾಗುತ್ತದೆ. ಪೋಸ್ಟ್ ಆಫೀಸ್ ಖಾತೆ ಮತ್ತು ಬ್ಯಾಂಕ್ ಖಾತೆ ನಡುವಿನ ಹಣ ಆನ್‌ಲೈನ್ ವರ್ಗಾವಣೆಯನ್ನು ಸಹ ಒದಗಿಸುತ್ತದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಕಾರಿಯಾಗಲಿದೆಪರಸ್ಪರ ಕಾರ್ಯಸಾಧ್ಯತೆ ಮತ್ತು ಹಣಕಾಸು ಸೇರ್ಪಡೆಯನ್ನು ಇದು ಸಕ್ರಿಯಗೊಳಿಸುತ್ತದೆ.

ಡಿಜಿಟಲ್ ಪಾವತಿ ವ್ಯವಸ್ಥೆ:

ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾದ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಣಕಾಸಿನ ನೆರವು ಪ್ರಸ್ತಾವನೆಯನ್ನು ಬಜೆಟ್ ಅವಧಿಗೂ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವರು ಪ್ರಕಟಿಸಿದರು. ಇದು ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಆರ್ಥಿಕ ಮತ್ತು ಬಳಕೆದಾರ ಸ್ನೇಹಿಯಾಗಿರುವ ಪಾವತಿ ವೇದಿಕೆಗಳ ಬಳಕೆಯನ್ನು ಉತ್ತೇಜಿಸಲು ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

***



(Release ID: 1794302) Visitor Counter : 387