ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ಮಧ್ಯ ಏಷ್ಯಾ ವರ್ಚುವಲ್ ಶೃಂಗಸಭೆ

Posted On: 27 JAN 2022 8:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜನವರಿ 27ರಂದು ಚೊಚ್ಚಲ ಭಾರತ-ಮಧ್ಯ ಏಷ್ಯಾ ವರ್ಚ್ಯವಲ್‌ ಶೃಂಗಸಭೆಯ ಆತಿಥ್ಯ ವಹಿಸಿದರು. ಇದರಲ್ಲಿ ಕಜಕಿಸ್ತಾನ್ ಗಣರಾಜ್ಯ, ಕಿರ್ಗಿಜ್ ಗಣರಾಜ್ಯ, ತಜಕಿಸ್ತಾನ ಗಣರಾಜ್ಯ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರು ಭಾಗವಹಿಸಿದ್ದರು. ಈ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗ ಸಭೆಯು ಭಾರತ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲೇ ಜರುಗಿದ್ದು ವಿಶೇಷ.

ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಮಧ್ಯ ಏಷ್ಯಾದ ನಾಯಕರು ಭಾರತ-ಮಧ್ಯ ಏಷ್ಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು. ಐತಿಹಾಸಿಕ ನಿರ್ಧಾರವೊಂದರಲ್ಲಿ, ನಾಯಕರು ಪ್ರತಿ 2 ವರ್ಷಗಳಿಗೊಮ್ಮೆ ಶೃಂಗಸಭೆ ನಡೆಸುವ ಮೂಲಕ ಅದರ ಕಾರ್ಯವಿಧಾನವನ್ನು ಸಾಂಸ್ಥಿಕಗೊಳಿಸಲು ಸಮ್ಮತಿಸದರು. ಈ ಶೃಂಗಸಭೆಗಳಿಗೆ ಪೂರ್ವಯೋಜನೆಯನ್ನು ತಯಾರಿಸಲು ವಿದೇಶಾಂಗ ಸಚಿವರು, ವಾಣಿಜ್ಯ ಸಚಿವರು, ಸಂಸ್ಕೃತಿ ಸಚಿವರು ಮತ್ತು ಭದ್ರತಾ ಮಂಡಳಿಯ ಕಾರ್ಯದರ್ಶಿಗಳ ನಿಯಮಿತ ಸಭೆಗಳನ್ನು ನಡೆಸಲು ಎಲ್ಲ ನಾಯಕರು ಸಮ್ಮತಿಸಿದರು. ಹೊಸ ವ್ಯವಸ್ಥೆಯನ್ನು ಬೆಂಬಲಿಸಲು ನವದೆಹಲಿಯಲ್ಲಿ ಭಾರತ-ಮಧ್ಯ ಏಷ್ಯಾ ಸಚಿವಾಲಯ ಸ್ಥಾಪಿಸಲಾಗುವುದು.
ವ್ಯಾಪಾರ ಮತ್ತು ಸಂಪರ್ಕ, ಅಭಿವೃದ್ಧಿ ಸಹಕಾರ, ರಕ್ಷಣೆ ಮತ್ತು ಭದ್ರತೆ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಮತ್ತು ಜನರ ಸಂಪರ್ಕಕ್ಷೇತ್ರಗಳಲ್ಲಿ ಮತ್ತಷ್ಟು ಸಹಕಾರ ನೀಡುವ ದೂರಗಾಮಿ ಪ್ರಸ್ತಾಪಗಳ ಬಗ್ಗೆ ನಾಯಕರು ಚರ್ಚಿಸಿದರು. ಇವುಗಳಲ್ಲಿ ಇಂಧನ ಮತ್ತು ಸಂಪರ್ಕ ಕುರಿತ ದುಂಡು ಮೇಜಿನ ಸಭೆ; ಆಫ್ಘಾನಿಸ್ತಾನ ಮತ್ತು ಚಾಬಹಾರ್ ಬಂದರಿನ ಬಳಕೆ ಕುರಿತು ಹಿರಿಯ ಅಧಿಕಾರಿಗಳ ಮಟ್ಟದ ಜಂಟಿ ಕಾರ್ಯಪಡೆಗಳು; ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಬೌದ್ಧ ಧರ್ಮ ಕುರಿತ ಪ್ರದರ್ಶನಗಳು ಮತ್ತು ಭಾರತ-ಮಧ್ಯ ಏಷ್ಯಾದ ಸಾಮಾನ್ಯ ಪದಗಳ ನಿಘಂಟಿನ ಕಾರ್ಯಾರಂಭ,  ಭಯೋತ್ಪಾದನೆ ನಿಗ್ರಹ ಅಭ್ಯಾಸಗಳು, ಮಧ್ಯ ಏಷ್ಯಾ ದೇಶಗಳಿಂದ ಭಾರತಕ್ಕೆ ವಾರ್ಷಿಕವಾಗಿ 100 ಸದಸ್ಯರ ಯುವ ನಿಯೋಗದ ಭೇಟಿ ಮತ್ತು ಮಧ್ಯ ಏಷ್ಯಾದ ರಾಜತಾಂತ್ರಿಕರಿಗೆ ವಿಶೇಷ ಕೋರ್ಸ್‌ಗಳು ಸೇರಿವೆ.
ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆಯೂ ಪ್ರಧಾನಿ ಮೋದಿ ಅವರು ಮಧ್ಯ ಏಷ್ಯಾದ ನಾಯಕರೊಂದಿಗೆ ಚರ್ಚಿಸಿದರು. ನೈಜ ಪ್ರಾತಿನಿಧಿಕ ಮತ್ತು ಸಮಗ್ರ ಸರ್ಕಾರದೊಂದಿಗೆ ಶಾಂತಿಯುತ, ಸುರಕ್ಷಿತ ಮತ್ತು ಸ್ಥಿರ ಆಫ್ಘಾನಿಸ್ತಾನಕ್ಕೆ ತಮ್ಮ ದೃಢ ಬೆಂಬಲದ ಮುಂದುವರಿಕೆಯನ್ನು ನಾಯಕರು ಪುನರುಚ್ಚರಿಸಿದರು. ಆಫ್ಘನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ನಿರಂತರ ಬದ್ಧತೆಯನ್ನು ಪ್ರಧಾನಿ ತಿಳಿಸಿದರು.
ಶಾಶ್ವತ ಮತ್ತು ಸಮಗ್ರ ಸ್ವರೂಪದ ಭಾರತ-ಮಧ್ಯ ಏಷ್ಯಾ ಪಾಲುದಾರಿಕೆಗಾಗಿ ಸಮಾನ ದೃಷ್ಟಿಕೋನವನ್ನು ವಿವರಿಸುವ ಜಂಟಿ ಘೋಷಣೆಯನ್ನು ನಾಯಕರು ಅಂಗೀಕರಿಸಿದರು.


***


(Release ID: 1793098) Visitor Counter : 475