ಸಂಸ್ಕೃತಿ ಸಚಿವಾಲಯ
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಎಲೆ ಮರೆಯ ಕಾಯಿಯಂತಹ ಭಾರತದ ಮಹಿಳಾ ನಾಯಕಿಯರ ಕುರಿತ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಿದ ಶ್ರೀಮತಿ ಮೀನಾಕ್ಷೀ ಲೇಖಿ
Posted On:
27 JAN 2022 4:47PM by PIB Bengaluru
ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷೀ ಲೇಖಿ ಅವರು ನವದೆಹಲಿಯಲ್ಲಿಂದು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಎಲೆ ಮರೆಯ ಕಾಯಿಯಂತಹ ಮಹಿಳಾ ನಾಯಕಿಯರುಗಳ ಕುರಿತ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಿದರು. ಭಾರತದಲ್ಲಿ ಮನೆಮಾತಾಗಿರುವ ಅಮರ್ ಚಿತ್ರ ಕಥಾ ಸಹಭಾಗಿತ್ವದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಮೀನಾಕ್ಷಿ ಲೇಖಿ ಅವರು, ಈ ಪುಸ್ತಕವು ಹೊಣೆಗಾರಿಕೆಯೊಂದಿಗೆ ನೇತೃತ್ವ ವಹಿಸಿದ್ದ ಮತ್ತು ದೇಶಾದ್ಯಂತ ಪ್ರತಿಭಟನೆ ಹಾಗೂ ಬಂಡಾಯದ ಕಿಡಿ ಹೊತ್ತಿಸಿದ ಕೆಲವು ಮಹಿಳೆಯರ ಜೀವನವನ್ನು ಆಚರಿಸುತ್ತದೆ ಎಂದು ಹೇಳಿದರು. ಇದು ತಾಯ್ನಾಡಿನ ಸಂರಕ್ಷಣೆಗಾಗಿ ಸಾಮ್ರಾಜ್ಯಶಾಹಿ ಆಳ್ವಿಕೆಯ ವಿರುದ್ಧದ ವಸಾಹತುಶಾಹಿ ಶಕ್ತಿಗಳೊಂದಿಗೆ ಹೋರಾಡಿದ, ಸಮರ್ಪಿತರಾಗಿ ಮತ್ತು ತಮ್ಮ ಜೀವವನ್ನೇ ತ್ಯಾಗ ಮಾಡಿದ ವೀರ ರಾಣಿಯರ ಗಾಥೆಗಳನ್ನು ಒಳಗೊಂಡಿದೆ ಎಂದೂ ಹೇಳಿದರು.
ಭಾರತೀಯ ಇತಿಹಾಸದ ಭವ್ಯ ಗತಕಾಲದಲ್ಲಿ ನಾವು ಸಾಗಿ ಬಂದರೆ, ಭಾರತೀಯ ಸಂಸ್ಕೃತಿಯು ಮಹಿಳೆಯರ ಕಾರ್ಯವನ್ನು ಆಚರಿಸುತ್ತಿತ್ತು, ಅಲ್ಲಿ ಲಿಂಗ ತಾರತಮ್ಯಕ್ಕೆ ಆಸ್ಪದ ಇರಲಿಲ್ಲ ಎಂಬುದನ್ನು ನಾವು ಕಾಣಬಹುದಾಗಿದೆ ಎಂದು ಅವರು ಹೇಳಿದರು. ಯುದ್ಧಭೂಮಿಯಲ್ಲಿ ಯೋಧರಂತೆ ಧೈರ್ಯದಿಂದ ಹೋರಾಡುವ ದೈಹಿಕ ಶಕ್ತಿಯನ್ನು ಮಹಿಳೆಯರು ಹೊಂದಿದ್ದರು ಎಂಬ ಅಂಶವು ಇದರಿಂದ ಸ್ಪಷ್ಟವಾಗುತ್ತದೆ.
ಪುಸ್ತಕದಲ್ಲಿ ಸೇರಿಸಲಾಗಿರುವ ಕೆಲವು ಎಲೆ ಮರೆ ಕಾಯಿಯಂತಹ ವೀರ ವನಿತೆಯರ ಶೌರ್ಯದ ಗಾಥೆಗಳನ್ನು ವಿವರಿಸಿದ ಶ್ರೀಮತಿ ಮೀನಾಕ್ಷಿ ಲೇಖಿ, ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಮಹಿಳೆಯರು ಸಮಾನವಾಗಿ ಧ್ವನಿಎತ್ತುತ್ತಿದ್ದರು ಎಂದು ಹೇಳಿದರು. ಉದಾಹರಣೆಗೆ ರಾಣಿ ಅಬ್ಬಕ್ಕ ಪೋರ್ಚುಗೀಸರ ದಾಳಿಯನ್ನು ಹಲವಾರು ದಶಕಗಳವರೆಗೆ ಹಿಮ್ಮೆಟ್ಟಿಸಿದರು. ಆದಾಗ್ಯೂ, ಇತಿಹಾಸವನ್ನು ಈ ದೃಷ್ಟಿಕೋನದಿಂದ ಬರೆಯಲಾಗಿಲ್ಲ ಮತ್ತು ಈಗ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, ಪ್ರಧಾನ ಮಂತ್ರಿಯವರ ದೃಷ್ಟಿಕೋನದಂತೆ, ಈ ಎಲೆಮರೆ ಕಾಯಿಯಂತಹ ವೀರ ವನಿತೆಯರ ತ್ಯಾಗವನ್ನು ಬೆಳಕಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಯುವಕರಿಗೆ ಗತಕಾಲದ ಪರಿಚಯ ಮಾಡಿಸಿ, ಅವರು ಇತಿಹಾಸದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಾಗ ಮಾತ್ರ ಸ್ವಾತಂತ್ರ್ಯದ ಆಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಶ್ರೀಮತಿ ಮೀನಾಕ್ಷಿ ಲೇಖಿ ಹೇಳಿದರು. ಯುವಕರು ವಸಾಹತುಶಾಹಿ ದೃಷ್ಟಿಕೋನದ ಬದಲಾಗಿ, ಭಾರತೀಯ ದೃಷ್ಟಿಕೋನದ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಮಹತ್ವವಾಗಿದೆ, ಬಿಡುಗಡೆಯಾಗಿರುವ ಪುಸ್ತಕವು ಈ ಕಾರ್ಯ ಮಾಡುತ್ತದೆ ಎಂದು ಸಚಿವರು ವಿವರಿಸಿದರು. ಅಮರ ಚಿತ್ರ ಕಥಾದ ತಂಡಕ್ಕೆ ಅವರು ಧನ್ಯವಾದ ಅರ್ಪಿಸಿದರು ಮತ್ತು ಅಮರ ಚಿತ್ರ ಕಥಾವು ಮಕ್ಕಳಲ್ಲಿ ಚಾರಿತ್ರ್ಯ ನಿರ್ಮಾಣ ಮಾಡುವಲ್ಲಿ ಮತ್ತು ಸಂಸ್ಕಾರದೊಂದಿಗೆ ಅವರನ್ನು ಉತ್ತೇಜಿಸುವಲ್ಲಿ ಹಲವು ವರ್ಷಗಳಿಂದ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಸಂಸ್ಕೃತಿ ಸಚಿವಾಲಯವು ಅಮರ್ ಚಿತ್ರ ಕಥಾ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ ಹೋರಾಟದ 75 ಎಲೆ ಮರೆಯ ಕಾಯಿಯಂತಹ ನಾಯಕರುಗಳ ಸಚಿತ್ರಪುಸ್ತಕಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಎರಡನೇ ಆವೃತ್ತಿಯು 25 ಎಲೆ ಮರೆಯ ಕಾಯಿಯಂತಹ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿರುತ್ತದೆ, ಇದು ಪ್ರಗತಿಯಲ್ಲಿದೆ ಮತ್ತು ಬಿಡುಗಡೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು. ಮೂರನೇ ಮತ್ತು ಅಂತಿಮ ಆವೃತ್ತಿಯು ಇತರ ಪ್ರದೇಶಗಳಿಂದ ಸೆಳೆಯಲ್ಪಟ್ಟ 30 ಎಲೆ ಮರೆ ಕಾಯಿಯಂತಹ ನಾಯಕರದಾಗಿರುತ್ತದೆ ಎಂದು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆಯುವ ಚಳವಳಿಯು ವಸಾಹತುಶಾಹಿ ಆಡಳಿತವನ್ನು ವಿರೋಧಿಸಿ ವಿವಿಧ ಕ್ಷೇತ್ರಗಳ ಲಕ್ಷಾಂತರ ಜನರನ್ನು ಒಗ್ಗೂಡಿಸಿತು. ಆದರೆ, ಸ್ವಾತಂತ್ರ್ಯ ಹೋರಾಟದ ಕೆಲವೇ ಕೆಲವು ದಂತಕಥೆಯಂತಹ, ಅಪ್ರತಿಮ ನಾಯಕರ ಬಗ್ಗೆ ಮಾತ್ರ ನಾವೆಲ್ಲರೂ ತಿಳಿದಿದ್ದೇವೆ. ಈ ಹಿನ್ನೆಲೆಯಲ್ಲಿ, ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಸ್ಮರಿಸುವ ಆಜಾದಿ ಕಾ ಅಮೃತ್ ಮಹೋತ್ಸವದ (ಎಕೆಎಎಂ) ಭಾಗವಾಗಿ, ಭಾರತ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮರೆತು ಹೋದ ವೀರರನ್ನು ಸ್ಮರಿಸಲು ನಿರ್ಧರಿಸಿದೆ, ಅವರಲ್ಲಿ ಅನೇಕರ ಬಗ್ಗೆ ನವ ಪೀಳಿಗೆಗೆ ತಿಳಿದಿಲ್ಲದಿರಬಹುದು ಎಂದರು.
ಕರ್ನಾಟಕದ ಉಳ್ಳಾಲದ ರಾಣಿ ಅಬಕ್ಕಾ 16ನೇ ಶತಮಾನದಲ್ಲಿ ಪ್ರಬಲ ಪೋರ್ಚುಗೀಸರ ವಿರುದ್ಧ ಹೋರಾಡಿ ಮಣಿಸಿದರು. ಶಿವಗಂಗಾದ ರಾಣಿ ವೇಲು ನಾಚಿಯಾರ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿಯಾಗಿದ್ದಾರೆ. ಝಲ್ಕರಿ ಬಾಯಿ ಒಬ್ಬ ಮಹಿಳಾ ಯೋಧೆಯಾಗಿದ್ದರು, ಅವರು ಝಾನ್ಸಿ ರಾಣಿಯ ಪ್ರಮುಖ ಸಲಹೆಗಾರರಲ್ಲಿ ಒಬ್ಬರಾಗಿದ್ದರು ಮತ್ತು 1857ರ ಮೊದಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ವ್ಯಕ್ತಿಯಾಗಿದ್ದರು.
ಮಾತಂಗಿನಿ ಹಜ್ರಾ ಬಂಗಾಳದ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಅವರು ಬ್ರಿಟಿಷರ ವಿರುದ್ಧ ಚಳವಳಿ ನಡೆಸುವಾಗ ಪ್ರಾಣತ್ಯಾಗ ಮಾಡಿದರು. ಗುಲಾಬ್ ಕೌರ್ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ಬ್ರಿಟಿಷ್ ರಾಜ್ ವಿರುದ್ಧ ಹೋರಾಡಲು ಮತ್ತು ಜನರನ್ನು ಸಜ್ಜುಗೊಳಿಸಲು ವಿದೇಶದಲ್ಲಿ ತಮ್ಮ ಜೀವನದ ಆಶಾಭಾವನೆಗಳು ಮತ್ತು ಕನಸುಗಳನ್ನು ತ್ಯಾಗ ಮಾಡಿದರು. ಚಕಾಲಿ ಇಳಮ್ಮ ಕ್ರಾಂತಿಕಾರಿ ಮಹಿಳೆಯಾಗಿದ್ದು, 1940ರ ದಶಕದ ಮಧ್ಯಭಾಗದಲ್ಲಿ ತೆಲಂಗಾಣ ದಂಗೆಯ ಸಮಯದಲ್ಲಿ ಜಮೀನ್ದಾರರ ಅನ್ಯಾಯದ ವಿರುದ್ಧ ಹೋರಾಡಿದರು. ಸರೋಜಿನಿ ನಾಯ್ಡು ಅವರ ಪುತ್ರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಪದ್ಮಜಾ ನಾಯ್ಡು ತಮ್ಮದೇ ರೀತಿಯಲ್ಲಿ ಹೋರಾಡಿದರು. ನಂತರ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾದರು ಮತ್ತು ಸ್ವಾತಂತ್ರ್ಯಾ ನಂತರ ಮಾನವೀಯ ವ್ಯಕ್ತಿಯಾಗಿದ್ದರು.
ಈ ಪುಸ್ತಕವು ಉತ್ತರಾಖಂಡದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸ್ವಾತಂತ್ರ್ಯ ಚಳವಳಿಗೆ ಸೇರಲು ಪ್ರೇರೇಪಿಸಿದ ಬಿಶ್ನಿ ದೇವಿ ಷಾ ಎಂಬ ಮಹಿಳೆಯ ಕಥೆಯನ್ನು ಒಳಗೊಂಡಿದೆ. ಸುಭದ್ರಕುಮಾರಿ ಚೌಹಾಣ್ ಹಿಂದಿಯ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದರು, ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯೂ ಆಗಿದ್ದರು. ಜಾನ್ ಸೌಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ಗೆ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಒದಗಿಸಿದ ಧೈರ್ಯಶಾಲಿ ಮಹಿಳೆ ದುರ್ಗಾವತಿ ದೇವಿ ತಮ್ಮ ಕ್ರಾಂತಿಕಾರಿ ದಿನಗಳಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಿದರು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ ಸುಚೇತಾ ಕೃಪಲಾನಿ ಅವರು ಉತ್ತರ ಪ್ರದೇಶ ಸರ್ಕಾರದ ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು.
ಕೇರಳದ ಟ್ರಾವಾಂಕೂರ್ ನಲ್ಲಿ ಸ್ವಾತಂತ್ರ್ಯ ಚಳವಳಿಯ ಸ್ಫೂರ್ತಿದಾಯಕ ನಾಯಕಿಯಾಗಿದ್ದ ಅಚ್ಚಮ್ಮ ಚೆರಿಯನ್ ಅವರ ಕಥೆಯನ್ನೂ ಈ ಪುಸ್ತಕ ಒಳಗೊಂಡಿದೆ, ಅವರಿಗೆ ಮಹಾತ್ಮಾ ಗಾಂಧಿ ಅವರು 'ಟ್ರಾವಾಂಕೂರ್ ನ ಝಾನ್ಸಿ ರಾಣಿ' ಎಂಬ ಹೆಸರನ್ನುನೀಡಿದ್ದರು. ಅರುಣಾ ಅಸಫ್ ಅಲಿ ಸ್ಫೂರ್ತಿದಾಯಕ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು, ಅವರು 1942ರಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯ ಸಮಯದಲ್ಲಿ ಮುಂಬೈನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಕ್ಕಾಗಿ ಸದಾ ಸ್ಮರಣೆಯಲ್ಲಿರುತ್ತಾರೆ. ಆಂಧ್ರಪ್ರದೇಶದಲ್ಲಿ ಮಹಿಳೆಯರ ವಿಮೋಚನೆಗಾಗಿ ದಣಿವರಿಯದೆ ದುಡಿದ ಕಾರ್ಯಕರ್ತೆಯಾಗಿದ್ದ ದುರ್ಗಾಬಾಯಿ ದೇಶಮುಖ್ ಅವರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರೂ ಆಗಿದ್ದರು. ನಾಗಾ ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕಿ ರಾಣಿ ಗೈಡಿನ್ಲಿಯು ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಂನಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ನಡೆಸಿದರು. ಉಷಾ ಮೆಹ್ತಾ ಚಿಕ್ಕ ವಯಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು, ಅವರು 1942ರ ಭಾರತ ಬಿಟ್ಟು ತೊಲಗಿ ಚಳವಳಿಯ ಸಮಯದಲ್ಲಿ ಭೂಗತ ರೇಡಿಯೋ ಕೇಂದ್ರವನ್ನು ನಡೆಸಿದ್ದಕ್ಕಾಗಿ ಸ್ಮರಿಸಿಕೊಳ್ಳಲಾಗುತ್ತದೆ.
ಒಡಿಶಾದ ಪ್ರಮುಖ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರಾದ ಪರ್ಬತಿ ಗಿರಿ ಅವರನ್ನು ತಮ್ಮ ಜನರ ಏಳಿಗೆಗಾಗಿ ಶ್ರಮಿಸಿದ್ದಕ್ಕಾಗಿ ಪಶ್ಚಿಮ ಒಡಿಶಾದ ಮದರ್ ತೆರೇಸಾ ಎಂದು ಕರೆಯಲಾಗುತ್ತಿತ್ತು. ಭಾರತ ಬಿಟ್ಟು ತೊಲಗಿ ಚಳವಳಿಯ ಸಮಯದಲ್ಲಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ತಾರಕೇಶ್ವರಿ ಸಿನ್ಹಾ ಅವರು, ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಸಿದ್ಧ ರಾಜಕಾರಣಿಯೂ ಆಗಿದ್ದರು. ರಾಜಸ್ಥಾನದ ಮೇವಾರ್ ನಲ್ಲಿ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಶ್ರಮಿಸಿದ ಸ್ನೇಹಲತಾ ವರ್ಮಾ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ದಣಿವರಿಯದ ಕಾರ್ಯಕರ್ತಯಾಗಿದ್ದರು. ಭಾರತದ ಅತ್ಯಂತ ಕಿರಿಯ ಹುತಾತ್ಮರಲ್ಲಿ ಒಬ್ಬರಾದ ತಿಲೇಶ್ವರಿ ಬರುವಾ ಅವರನ್ನು ಬ್ರಿಟಿಷರು 12ನೇ ವಯಸ್ಸಿನಲ್ಲಿ ಭಾರತ ಬಿಟ್ಟು ತೊಲಗಿ ಚಳವಳಿಯ ಸಮಯದಲ್ಲಿ ಗುಂಡಿಟ್ಟು ಕೊಂದರು, ಆಗ ಅವರು ಮತ್ತು ಕೆಲವು ಸ್ವಾತಂತ್ರ್ಯ ಹೋರಾಟಗಾರರು ಪೊಲೀಸ್ ಠಾಣೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸಿದ್ದರು.
****
(Release ID: 1793089)
Visitor Counter : 3316