ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರು ಮಾರಿಷಸ್‌ನಲ್ಲಿ ಜಂಟಿಯಾಗಿ ಸಾಮಾಜಿಕ ವಸತಿ ಘಟಕಗಳ ಯೋಜನೆಯನ್ನು ಉದ್ಘಾಟಿಸಿದರು
ಜೊತೆಗೆ ಮಾರಿಷಸ್‌ನಲ್ಲಿ ನಾಗರಿಕ ಸೇವಾ ಕಾಲೇಜು ಮತ್ತು 8 ಮೆಗಾವ್ಯಾಟ್ ಸೌರ ಪಿವಿ ಫಾರ್ಮ್ ಯೋಜನೆಗೆ ವರ್ಚ್ಯುವಲ್ ಮಾದರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು
Posted On:
20 JAN 2022 6:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗ್ನೌತ್ ಅವರು ಇಂದು ಮಾರಿಷಸ್‌ನಲ್ಲಿ ಸಾಮಾಜಿಕ ವಸತಿ ಘಟಕಗಳ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಿದರು. ಭಾರತ ಮತ್ತು ಮಾರಿಷಸ್ ನಡುವಿನ ಸದೃಢ ಅಭಿವೃದ್ಧಿ ಪಾಲುದಾರಿಕೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ, ಭಾರತದ ಅಭಿವೃದ್ಧಿ ಬೆಂಬಲದ ಭಾಗವಾಗಿ ಇತರೆ ಎರಡು ಯೋಜನೆಗಳಾದ - ಅತ್ಯಾಧುನಿಕ ನಾಗರಿಕ ಸೇವಾ ಕಾಲೇಜು ಸ್ಥಾಪನೆ ಮತ್ತು 8 ಮೆಗಾವ್ಯಾಟ್ ಸೌರ ಪಿವಿ ಫಾರ್ಮ್ ಸ್ಥಾಪನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು. ಈ ಸಮಾರಂಭದಲ್ಲಿ ಇಬ್ಬರೂ ಪ್ರಧಾನಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಮಾರಿಷಸ್‌ನಲ್ಲಿ ಅಲ್ಲಿನ ಪಿಎಂಒ ಆವರಣದಲ್ಲಿ ಮಾರಿಷಸ್ ಕ್ಯಾಬಿನೆಟ್ ಸಚಿವರು ಮತ್ತು ಮಾರಿಷಸ್ ಸರಕಾರದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಭಾರತದ ಸ್ನೇಹಿತರ ಅಗತ್ಯಗಳು, ಆದ್ಯತೆಗಳು ಮತ್ತು ಸಾರ್ವಭೌಮತ್ವದ ಬಗ್ಗೆ ಗೌರವದೊಂದಿಗೆ ವ್ಯಾಖ್ಯಾನಿಸಲಾದ ದೇಶದ ಅಭಿವೃದ್ಧಿ ನೆರವಿನ ದೂರದೃಷ್ಟಿಯ ಬಗ್ಗೆ ಒತ್ತಿ ಹೇಳಿದರು. ಇದೇ ವೇಳೆ, ಜನರ ಯೋಗಕ್ಷೇಮವನ್ನು ಹೆಚ್ಚಿಸುವುದು ಮತ್ತು ದೇಶದ ಸಾಮರ್ಥ್ಯವನ್ನು ಹೆಚ್ಚಿಸುವುದು ಸಹ ಭಾರತದ ಇಂತಹ ನೆರವಿನ ದೃಷ್ಟಿಕೋನದ ಭಾಗವೆಂದು ಪ್ರಧಾನಿ ತಿಳಿಸಿದರು. ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕ ಸೇವಾ ಕಾಲೇಜು ಯೋಜನೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿಯವರು, ʻಮಿಷನ್ ಕರ್ಮಯೋಗಿʼ ಯ ಕಲಿಕೆಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದರು. 2018ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ (ಐಎಸ್ಎ) ಮೊದಲ ಸಮಾವೇಶದಲ್ಲಿ ಮಂಡಿಸಲಾದ ʻಒಬ್ಬ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ʼ (ಒಎಸ್ ಒಡಬ್ಲ್ಯುಒಜಿ) ಉಪಕ್ರಮವನ್ನು ಪ್ರಧಾನಿ ಸ್ಮರಿಸಿದರು. 8 ಮೆಗಾವ್ಯಾಟ್ ಸೌರ ಪಿವಿ ಫಾರ್ಮ್ ಯೋಜನೆಯು 13,000 ಟನ್ ಸಿಒ2 ಹೊರಸೂಸುವಿಕೆಯನ್ನು ತಪ್ಪಿಸುವ ಮೂಲಕ ಮಾರಿಷಸ್ ಎದುರಿಸುತ್ತಿರುವ ಹವಾಮಾನ ಸವಾಲುಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ್ ಜುಗ್ನೌತ್ ಅವರು ಮಾತನಾಡಿ, ಮಾರಿಷಸ್‌ಗೆ ಆರ್ಥಿಕ ನೆರವು ಸೇರಿದಂತೆ ವ್ಯಾಪಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಅರ್ಪಿಸಿದರು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಮತ್ತು ಮಾರಿಷಸ್ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ಸಾಧಿಸಿವೆ ಎಂದು ಅವರು ಗಮನ ಸೆಳೆದರು.
ಮಾರಿಷಸ್ ಸರಕಾರ ಗುರುತಿಸಿರುವ ಐದು ಆದ್ಯತೆಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಸರ್ಕಾರವು 2016ರ ಮೇ ತಿಂಗಳಲ್ಲಿ ಮಾರಿಷಸ್ ಸರಕಾರಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ (ಎಸ್‌ಇಪಿ) ಭಾಗವಾಗಿ 353 ಅಮೆರಿಕನ್ ಡಾಲರ್ ಅನುದಾನವನ್ನು ವಿಸ್ತರಿಸಿತ್ತು. ಅಂತಹ ಆದ್ಯತೆ ಯೋಜನೆಗಳೆಂದರೆ: ಮೆಟ್ರೋ ಎಕ್ಸ್ ಪ್ರೆಸ್ ಯೋಜನೆ, ಸುಪ್ರೀಂ ಕೋರ್ಟ್ ಕಟ್ಟಡ, ಹೊಸ ಇಎನ್‌ಟಿ ಆಸ್ಪತ್ರೆ, ಪ್ರಾಥಮಿಕ ಶಾಲಾ ಮಕ್ಕಳಿಗೆ ಡಿಜಿಟಲ್ ಟ್ಯಾಬ್ಲೆಟ್‌ಗಳ ಪೂರೈಕೆ ಮತ್ತು ಸಾಮಾಜಿಕ ವಸತಿ ಯೋಜನೆ. ಇಂದು ಸಾಮಾಜಿಕ ವಸತಿ ಯೋಜನೆಯ ಉದ್ಘಾಟನೆಯೊಂದಿಗೆ, ʻಎಸ್‌ಇಪಿʼ ಅಡಿಯಲ್ಲಿ ಎಲ್ಲಾ ಉನ್ನತ ಮಟ್ಟದ ಯೋಜನೆಗಳನ್ನು ಜಾರಿಗೊಳಿಸಿದಂತಾಗಿದೆ.
ʻರೆಡುಯಿಟ್‌ನಲ್ಲಿರುವ ನಾಗರಿಕ ಸೇವಾ ಕಾಲೇಜು ಯೋಜನೆಗೆ 4.74 ದಶಲಕ್ಷ ಅಮೆರಿಕನ್ ಡಾಲರ್ ಅನುದಾನದ ಮೂಲಕ ಭಾರತ ಹಣಕಾಸು ಬೆಂಬಲ ಒದಗಿಸುತ್ತಿದೆ. 2017ರಲ್ಲಿ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಿ ಹಾಕಲಾದ ಒಪ್ಪಂದದ ಅಡಿಯಲ್ಲಿ ಈ ನೆರವು ಒದಗಿಸಲಾಗುತ್ತಿದೆ. ಒಮ್ಮೆ ಇದು ನಿರ್ಮಾಣಗೊಂಡ ನಂತರ, ಮಾರಿಷಸ್‌ನ ನಾಗರಿಕ ಸೇವಕರಿಗೆ ಅಗತ್ಯವಾದ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳಲು ಸಂಪೂರ್ಣ ಸುಸಜ್ಜಿತ ಹಾಗೂ ಕ್ರಿಯಾತ್ಮಕ ಸೌಲಭ್ಯವನ್ನು ಇದು ಒದಗಿಸುತ್ತದೆ. ಇದರಿಂದ ಭಾರತದೊಂದಿಗೆ ಸಾಂಸ್ಥಿಕ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ.
ವಾರ್ಷಿಕ ಸುಮಾರು 14 GWh ಹಸಿರು ಶಕ್ತಿಯನ್ನು ಉತ್ಪಾದಿಸುವ ನಿಟ್ಟಿನಲ್ಲಿ 25,000 ಪಿವಿ ಕೋಶಗಳ ಸ್ಥಾಪನೆಯನ್ನು 8 ಮೆಗಾವ್ಯಾಟ್ ಸೌರ ಪಿವಿ ಫಾರ್ಮ್ ಯೋಜನೆಯು ಒಳಗೊಂಡಿದೆ. ಇದರಡಿ ಪ್ರತಿ ವರ್ಷ ಸುಮಾರು 10,000 ಮಾರಿಷಸ್ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ವಿಸ್ತರಣೆಯಾಗಲಿದೆ. ಜೊತಗೆ ಪ್ರತಿವರ್ಷ 13,000 ಟನ್ ಇಂಗಾಲದ ಡೈಯಾಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸುವ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸಹ ಮಾರಿಷಸ್‌ಗೆ ಇದು ಸಹಾಯ ಮಾಡುತ್ತದೆ.
ಇಂದಿನ ಸಮಾವೇಶದಲ್ಲಿ ಎರಡು ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳ ವಿನಿಮಯವೂ ಸೇರಿತ್ತು, ಅವುಗಳೆಂದರೆ: ಮೆಟ್ರೋ ಎಕ್ಸ್‌ಪ್ರೆಸ್ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗಾಗಿ ಭಾರತ ಸರಕಾರದಿಂದ ಮಾರಿಷಸ್ ಸರಕಾರಕ್ಕೆ 190 ದಶಲಕ್ಷ ಅಮೆರಿಕನ್ ಡಾಲರ್ ಸಾಲ ವಿಸ್ತರಣೆ ಹಾಗೂ ಸಣ್ಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕುರಿತ ಒಪ್ಪಂದ.
ಕೋವಿಡ್-19 ಸವಾಲುಗಳ ಹೊರತಾಗಿಯೂ, ಭಾರತ-ಮಾರಿಷಸ್ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳು ತ್ವರಿತವಾಗಿ ಪ್ರಗತಿ ಸಾಧಿಸಿವೆ. 2019ರಲ್ಲಿ, ಪ್ರಧಾನಿ ಮೋದಿ ಮತ್ತು ಪ್ರಧಾನಿ ಜುಗ್ನೌತ್ ಅವರು ಮೆಟ್ರೋ ಎಕ್ಸ್‌ಪ್ರೆಸ್ ಯೋಜನೆ ಮತ್ತು ಮಾರಿಷಸ್‌ನ ನ್ಯೂ ಇಎನ್‌ಟಿ ಆಸ್ಪತ್ರೆಯನ್ನು ವರ್ಚ್ಯುವಲ್ ಮೋಡ್‌ನಲ್ಲಿ ಜಂಟಿಯಾಗಿ ಉದ್ಘಾಟಿಸಿದ್ದರು. ಅದೇ ರೀತಿ, ಜುಲೈ 2020ರಲ್ಲಿ, ಮಾರಿಷಸ್‌ನ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು ಸಹ ಇಬ್ಬರು ಪ್ರಧಾನ ಮಂತ್ರಿಗಳು ವರ್ಚ್ಯುವಲ್ ಮಾದರಿಯಲ್ಲಿ ಉದ್ಘಾಟಿಸಿದ್ದರು.
ಭಾರತ ಮತ್ತು ಮಾರಿಷಸ್ ಸಾಮಾನ್ಯ ಇತಿಹಾಸ, ವಂಶಾವಳಿ, ಸಂಸ್ಕೃತಿ ಮತ್ತು ಭಾಷೆಯಲ್ಲಿ ನಿಕಟ ಸಂಬಂಧಗಳನ್ನು ಹಂಚಿಕೊಂಡಿವೆ. ನಮ್ಮ ಎರಡೂ ದೇಶಗಳ ನಡುವಿನ ವಿಶೇಷ ಅಭಿವೃದ್ಧಿ ಪಾಲುದಾರಿಕೆಯಲ್ಲಿ ಇದು ಪ್ರತಿಫಲಿಸುತ್ತದೆ. ಮಾರಿಷಸ್ ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಪ್ರಮುಖ ಅಭಿವೃದ್ಧಿ ಪಾಲುದಾರನಾಗಿದೆ. ಇಂದಿನ ಈ ಕಾರ್ಯಕ್ರಮವು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ʼ ಆಶಯಕ್ಕೆ ಅನುಗುಣವಾಗಿ ಉಭಯ ದೇಶಗಳ ಯಶಸ್ವಿ, ದೀರ್ಘಕಾಲೀನ ಪಾಲುದಾರಿಕೆಯಲ್ಲಿ ಮತ್ತೊಂದು ಮೈಲುಗಲ್ಲನ್ನು ಗುರುತಿಸುತ್ತದೆ.
***
(Release ID: 1791678)
Visitor Counter : 227
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam