ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನಲ್ಲಿ  ಹನ್ನೊಂದು ವೈದ್ಯಕೀಯ ಕಾಲೇಜುಗಳು ಮತ್ತು  ಕೇಂದ್ರೀಯ ಶಾಸ್ತ್ರೀಯ ಭಾಷಾ ಸಂಸ್ಥೆಯ ಹೊಸ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 12 JAN 2022 5:47PM by PIB Bengaluru

ತಮಿಳುನಾಡಿನ ರಾಜ್ಯಪಾಲರಾದ ಶ್ರೀ.ಆರ್.ಎನ್. ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್, ಸಂಪುಟ ಸಚಿವರಾದ ಶ್ರೀ ಮನ್ ಸುಖ್ ಮಾಂಡವೀಯ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಎಲ್. ಮುರುಗನ್, ಭಾರತೀ ಪವಾರ್ ಜೀ, ತಮಿಳುನಾಡು ಸರಕಾರದ ಸಚಿವರೇ, ಸಂಸತ್ ಸದಸ್ಯರೇ, ತಮಿಳುನಾಡು ವಿಧಾನಸಭೆಯ ಸದಸ್ಯರೇ,

ತಮಿಳುನಾಡಿನ ಸಹೋದರಿಯರೇ ಮತ್ತು ಸಹೋದರರೇ, ವಣಕ್ಕಂ!. ಪೊಂಗಲ್ ಮತ್ತು ಮಕರ ಸಂಕ್ರಾಂತಿಯ ಶುಭಾಶಯಗಳನ್ನು ನಿಮಗೆ ತಿಳಿಸುತ್ತಾ ನಾನು ಆರಂಭ ಮಾಡುತ್ತೇನೆ. ಜನಪ್ರಿಯ ಪದ್ಯವೊಂದು ಹೇಳುತ್ತದೆ-

தை பிறந்தால் வழி பிறக்கும்

ಇಂದು ನಾವು ಎರಡು ಕಾರಣಗಳಿಗಾಗಿ ಸೇರಿದ್ದೇವೆ: 11 ವೈದ್ಯಕೀಯ ಕಾಲೇಜುಗಳ ಉದ್ಘಾಟನೆ ಮತ್ತು ಕೇಂದ್ರೀಯ ತಮಿಳು ಶಾಸ್ತ್ರೀಯ ಭಾಷಾ ಸಂಸ್ಥೆಯ ಹೊಸ ಕಟ್ಟಡದ ಉದ್ಘಾಟನೆ. ಈ ಮೂಲಕ ನಾವು ಸಮಾಜದ ಆರೋಗ್ಯವನ್ನು ಮತ್ತಷ್ಟು ಸುಧಾರಿಸುತ್ತ  ಮತ್ತು ನಮ್ಮ ಸಂಸ್ಕೃತಿಯನ್ನು ಬಲಿಷ್ಟವಾಗಿಸುವತ್ತ ಮುನ್ನಡೆಯುತ್ತಿದ್ದೇವೆ. 

ಸ್ನೇಹಿತರೇ,

ವೈದ್ಯಕೀಯ ಶಿಕ್ಷಣ ಎನ್ನುವುದು ಬಹಳ ಅಪೇಕ್ಷಿತ ಅಧ್ಯಯನ ಕ್ಷೇತ್ರವಾಗಿದೆ. ಭಾರತದಲ್ಲಿ  ವೈದ್ಯರ ಕೊರತೆ ಎಲ್ಲರಿಗೂ ತಿಳಿದಿದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳು ನಡೆದಿರಲಿಲ್ಲ. ಬಹುಷಃ ಸ್ಥಾಪಿತ ಹಿತಾಸಕ್ತಿಗಳು ಹಿಂದಿನ ಸರಕಾರಗಳಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಬಿಡುತ್ತಿರಲಿಲ್ಲ. ಮತ್ತು ವೈದ್ಯಕೀಯ ಶಿಕ್ಷಣದ ಲಭ್ಯತೆ ಒಂದು ಸಮಸ್ಯೆಯಾಗಿತ್ತು. ನಾವು ಅಧಿಕಾರ ವಹಿಸಿಕೊಂಡಂದಿನಿಂದ, ನಮ್ಮ ಸರಕಾರ ಈ ಅಂತರವನ್ನು ನಿವಾರಿಸಲು ನಿರಂತರ ಕೆಲಸ ಮಾಡಿದೆ. 2014ರಲ್ಲಿ  ನಮ್ಮ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ 596ಕ್ಕೇರಿದೆ. ಅಂದರೆ 54 % ಹೆಚ್ಚಳ. 2014ರಲ್ಲಿ ನಮ್ಮ ದೇಶದಲ್ಲಿ ಸುಮಾರು 82 ಸಾವಿರ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳಿದ್ದವು. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ 1 ಲಕ್ಷದ 48 ಸಾವಿರಕ್ಕೇರಿದೆ. ಅಂದರೆ ಸುಮಾರು 80 % ಹೆಚ್ಚಳ. 2014ರಲ್ಲಿ ದೇಶದಲ್ಲಿ ಬರೇ ಏಳು ಎ.ಐ.ಐ.ಎಂ.ಎಸ್. ಗಳಿದ್ದವು. ಆದರೆ 2014ರ ಬಳಿಕ ಮಂಜೂರಾದ ಎ.ಐ.ಐ.ಎಂ.ಎಸ್.ಗಳ ಸಂಖ್ಯೆ 22ಕ್ಕೇರಿತು. ಇದೇ ವೇಳೆಗೆ ವೈದ್ಯಕೀಯ ಶಿಕ್ಷಣ ರಂಗವನ್ನು ಹೆಚ್ಚು ಪಾರದರ್ಶಕಗೊಳಿಸಲು ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಯಿತು. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉದಾರಗೊಳಿಸಲಾಯಿತು.

ಸ್ನೇಹಿತರೇ,

ಯಾವುದೇ ರಾಜ್ಯದಲ್ಲಿ ಒಂದೇ  ಬಾರಿಗೆ 11 ವೈದ್ಯಕೀಯ ಕಾಲೇಜುಗಳ ಉದ್ಘಾಟನೆಯಾಗುತ್ತಿರುವುದು ಇದೇ ಮೊದಲು ಎಂದು ನನಗೆ ತಿಳಿಸಲಾಗಿದೆ. ಕೆಲವು ದಿನಗಳ ಹಿಂದೆ ನಾನು ಉತ್ತರ ಪ್ರದೇಶದಲ್ಲಿ  9 ವೈದ್ಯಕೀಯ ಕಾಲೇಜುಗಳನ್ನು ಏಕಕಾಲದಲ್ಲಿ ಉದ್ಘಾಟಿಸಿದ್ದೆ. ಹಾಗಾಗಿ ನಾನು ನನ್ನದೇ ದಾಖಲೆಯನ್ನು ಮುರಿಯುತ್ತಿದ್ದೇನೆ. ಪ್ರಾದೇಶಿಕ ಅಸಮಾನತೆಯನ್ನು ತೊಲಗಿಸುವುದು ಬಹಳ ಮುಖ್ಯ. ಆ ಹಿನ್ನೆಲೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳು ಆಶೋತ್ತರಗಳ ಜಿಲ್ಲೆಗಳಾದ ರಾಮನಾಥಪುರಂ ಮತ್ತು ವಿರುದ್ಧುನಗರ್ ಗಳಲ್ಲಿ ಉದ್ಘಾಟನೆಯಾಗಿರುವುದು ಬಹಳ ಉತ್ತಮವಾದ ಸಂಗತಿಯಾಗಿದೆ. ಈ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಒಂದು ಕಾಲೇಜು ದೂರದ ದುರ್ಗಮ ಗಿರಿ ಜಿಲ್ಲೆಯಾದ ನೀಲಗಿರಿಯಲ್ಲಿದೆ.

ಸ್ನೇಹಿತರೇ,

ಜೀವನದಲ್ಲಿ ಒಂದು ಬಾರಿಯಷ್ಟೇ ಬರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಆರೋಗ್ಯ ವಲಯದ ಪ್ರಾಮುಖ್ಯವನ್ನು ಒತ್ತಿ ಹೇಳಿದೆ. ಭವಿಷ್ಯವು ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡುವ ಸಮಾಜಗಳನ್ನು ಅವಲಂಬಿಸಿರುತ್ತದೆ. ಭಾರತ ಸರಕಾರವು ಈ ವಲಯದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ. ಆಯುಷ್ಮಾನ್ ಭಾರತಕ್ಕೆ ಧನ್ಯವಾದಗಳು.ಇದರಿಂದ ಬಡವರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ಮೊಣಕಾಲು ಕೀಲು ಜೋಡಣೆಯ ಸಲಕರಣೆಗಳು, ಸ್ಟೆಂಟ್ ಗಳ ದರ ಹಿಂದಿದ್ದ ದರಕ್ಕೆ ಹೋಲಿಸಿದಾಗ ಮೂರನೇ ಒಂದರಷ್ಟಾಗಿದೆ. ಪ್ರಧಾನ ಮಂತ್ರಿ ಜನೌಷಧಿ ಯೋಜನೆಯು ಕೈಗೆಟಕುವ ದರದಲ್ಲಿ ಔಷಧಿ ಒದಗಣೆಯಲ್ಲಿ ಕ್ರಾಂತಿಯನ್ನು ಮಾಡಿದೆ.  ಭಾರತದಲ್ಲಿ ಇಂತಹ 8000 ಅಂಗಡಿಗಳಿವೆ.  ಈ ಯೋಜನೆಯು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಬಹಳ ದೊಡ್ದ ಸಹಾಯವನ್ನು ಮಾಡಿದೆ. ಔಷಧಿಗಳ ಮೇಲೆ ಖರ್ಚು ಮಾಡುವ ಹಣ ಬಹಳ ಕಡಿಮೆಯಾಗಿದೆ. ಮಹಿಳೆಯರಿಗೆ  ಆರೋಗ್ಯಪೂರ್ಣ ಜೀವನ ವಿಧಾನಕ್ಕಾಗಿ 1 ರೂಪಾಯಿ ದರದಲ್ಲಿ ನ್ಯಾಪ್ ಕಿನ್ ಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಾನು ತಮಿಳುನಾಡು ಜನತೆಗೆ ಮನವಿ ಮಾಡುತ್ತೇನೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಆಂದೋಲನವು ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸಂಶೋಧನೆಯಲ್ಲಿ ಅಂತರವನ್ನು ಕಡಿಮೆ ಮಾಡುವ ಇರಾದೆಯನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿಗೆ ಮೂರು ಸಾವಿರ ಕೋ.ರೂ.ಗಳ ಬೆಂಬಲವನ್ನು ಒದಗಿಸಲಾಗುವುದು. ಇದು ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಮತ್ತು ಸಂಕೀರ್ಣ ಆರೋಗ್ಯ ಚಿಕಿತ್ಸಾ ಘಟಕಗಳನ್ನು  ರಾಜ್ಯಾದ್ಯಂತ ಸ್ಥಾಪಿಸುವುದಕ್ಕೆ ಸಹಾಯ ಮಾಡಲಿದೆ. ಇದರಿಂದ ತಮಿಳುನಾಡಿನ ಜನತೆಗೆ ಆಗುವ ಪ್ರಯೋಜನಗಳು ಅನೇಕ.

ಸ್ನೇಹಿತರೇ,

ಬರಲಿರುವ ವರ್ಷಗಳಲ್ಲಿ ಭಾರತವು ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸುವ ದೇಶವಾಗಿ ಮಾರ್ಪಡಲಿದೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಅವಶ್ಯವಾದ ಎಲ್ಲವನ್ನೂ ಭಾರತವು ಹೊಂದಿದೆ. ನಾನು ಹೇಳುತ್ತೇನೆ ಇದಕ್ಕೆಲ್ಲ ಮೂಲಾಧಾರವಾಗಿರುವುದು ನಮ್ಮ ವೈದ್ಯರ ಕೌಶಲ್ಯ. ಟೆಲಿ ಮೆಡಿಸಿನ್ ನತ್ತಲೂ ಗಮನ ಹರಿಸುವಂತೆ ನಾನು ವೈದ್ಯಕೀಯ ಸಮುದಾಯಕ್ಕೆ ಮನವಿ ಮಾಡುತ್ತೇನೆ. ಇಂದು ಜಗತ್ತು ಸ್ವಾಸ್ಥ್ಯಕ್ಕಾಗಿ ಭಾರತೀಯ ಪದ್ಧತಿಗಳ ಬಗ್ಗೆಯೂ ಗಮನ ಕೊಡುತ್ತಿದೆ. ಇದರಲ್ಲಿ ಯೋಗ, ಆಯುರ್ವೇದ ಮತ್ತು ಸಿದ್ದಗಳು ಸೇರಿವೆ. ಇದನ್ನು ನಾವು ಜಗತ್ತು ತಿಳಿದುಕೊಳ್ಳುವ ಭಾಷೆಯಲ್ಲಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.  

ಸ್ನೇಹಿತರೇ,

ತಮಿಳು ಶಾಸ್ತ್ರೀಯ ಭಾಷೆಗಾಗಿರುವ ಕೇಂದ್ರೀಯ ಸಂಸ್ಥೆಯ ಹೊಸ ಕಟ್ಟಡವು ತಮಿಳು ಅಧ್ಯಯನವನ್ನು ಹೆಚ್ಚು ಜನಪ್ರಿಯಗೊಳಿಸಲಿದೆ. ಅದು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ವಿಸ್ತಾರವಾದ ಅವಕಾಶಗಳನ್ನು ಒದಗಿಸಲಿದೆ. ಶಾಸ್ತ್ರೀಯ ತಮಿಳು ಭಾಷೆಗಾಗಿರುವ ಕೇಂದ್ರೀಯ ಸಂಸ್ಥೆ ತಿರುಕ್ಕುರಲ್ ನ್ನು ವಿವಿಧ ಭಾರತೀಯ ಮತ್ತು ವಿದೇಶೀ ಭಾಷೆಗಳಿಗೆ ಭಾಷಾಂತರಿಸುವ ಉದ್ದೇಶ ಹೊಂದಿರುವುದಾಗಿ ನನಗೆ ತಿಳಿಸಲಾಗಿದೆ. ಇದು ಉತ್ತಮ ಕ್ರಮ.ತಮಿಳು ಭಾಷೆಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಬಗ್ಗೆ ನಾನು ಬೆರಗಾಗಿದ್ದೇನೆ. ವಿಶ್ವ ಸಂಸ್ಥೆಯಲ್ಲಿ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಲ್ಲಿ ಕೆಲವು ಶಬ್ದಗಳನ್ನು ಮಾತನಾಡುವ ಅವಕಾಶ ನನಗೆ ದೊರಕಿದುದು ನನ್ನ ಜೀವನದ ಅತ್ಯಂತ ಸಂತೋಷದ ಸಂಗತಿಗಳಲ್ಲಿ ಒಂದು. ಸಂಗಮ ಸಾಹಿತ್ಯ ನಮ್ಮ ಪ್ರಾಚೀನ ಕಾಲದ ಶ್ರೀಮಂತ ಸಮಾಜ ಮತ್ತು ಸಂಸ್ಕೃತಿಗೆ ಒಂದು ಕಿಟಕಿ ಇದ್ದಂತೆ. ನಮ್ಮ ಸರಕಾರ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ “ಸುಬ್ರಮಣ್ಯ ಭಾರತಿ ಪೀಠ” ವನ್ನು ಸ್ಥಾಪಿಸಿದ ಗೌರವವನ್ನು  ಪಡೆದಿದೆ. ನನ್ನ ಸಂಸದೀಯ ಕ್ಷೇತ್ರದಲ್ಲಿರುವ ಇದು ತಮಿಳಿನ ಬಗ್ಗೆ ಇನ್ನಷ್ಟು ಕುತೂಹಲವನ್ನು ಬೆಳೆಸಲಿದೆ. ನಾನು ಗುಜರಾತಿಯಲ್ಲಿ ತಿರುಕ್ಕುರಲ್ ಭಾಷಾಂತರವನ್ನು ಕಾರ್ಯಾರಂಭ ಮಾಡಿದಾಗ  ಈ ಸಾರ್ವಕಾಲಿಕ ಮಹತ್ವದ  ಕೃತಿಯ ಉತ್ತಮ ಚಿಂತನೆಗಳು ಗುಜರಾತಿನ ಜನತೆಯನ್ನು ಜೋಡಿಸಲಿವೆ ಮತ್ತು ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಲಿವೆ ಎಂಬುದನ್ನು ಕಂಡುಕೊಂಡಿದ್ದೆ.

ಸ್ನೇಹಿತರೇ,

ನಾವು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಭಾರತೀಯ ಭಾಷೆಗಳ ಉತ್ತೇಜನಕ್ಕೆ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಉತ್ತೇಜನಕ್ಕೆ ಬಹಳ ಒತ್ತು ನೀಡಿದ್ದೇವೆ. ತಮಿಳನ್ನು ಈಗ ಶಾಸ್ತ್ರೀಯ ಭಾಷೆಯಾಗಿ ಶಾಲಾ ಶಿಕ್ಷಣದಲ್ಲಿ ಸೆಕೆಂಡರಿ ಸ್ತರ ಅಥವಾ ಮಾಧ್ಯಮಿಕ ಸ್ತರದಲ್ಲಿ ಕಲಿಯಬಹುದಾಗಿದೆ. ವಿವಿಧ ಭಾರತೀಯ ಭಾಷೆಗಳ ಧ್ವನಿ ಮತ್ತು ವೀಡಿಯೋಗಳಲ್ಲಿರುವ ನೂರು ವಾಕ್ಯಗಳನ್ನು ಒಳಗೊಂಡ ಭಾಷಾ-ಸಂಗಮದ ಮೂಲಕ ಶಾಲಾ ವಿದ್ಯಾರ್ಥಿಗಳು ತಮಿಳನ್ನು ಕಲಿಯಬಹುದಾಗಿದೆ. ಭಾರತವಾಣಿ ಯೋಜನೆಯ ಅಡಿಯಲ್ಲಿ ತಮಿಳಿನ ಬೃಹತ್ ಇ-ಕಂಟೆಂಟನ್ನು ಡಿಜಿಟಲೀಕರಣ ಮಾಡಲಾಗಿದೆ.

ಸ್ನೇಹಿತರೇ,

ನಾವು ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ಸರಕಾರ ತಾಂತ್ರಿಕ ಶಿಕ್ಷಣ ಕೋರ್ಸ್ ಗಳಾದ ಇಂಜಿನಿಯರಿಂಗ್ ನಂತಹ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲಾರಂಭಿಸಿದೆ. ತಮಿಳುನಾಡು ಹಲವು ಪ್ರತಿಭಾವಂತ ಇಂಜಿನಿಯರುಗಳನ್ನು ರೂಪಿಸಿದೆ. ಅವರಲ್ಲಿ ಅನೇಕರು ಅತ್ಯಂತ ಉನ್ನತ ಜಾಗತಿಕ ತಂತ್ರಜ್ಞಾನ ಮತ್ತು ವ್ಯಾಪಾರೋದ್ಯಮಗಳ ನಾಯಕರಾಗಿದ್ದಾರೆ. ಈ ಪ್ರತಿಭಾವಂತ ತಮಿಳು ಜನಸಮೂಹಕ್ಕೆ “ಸ್ಟೆಮ್ “ ತರಗತಿಗಳಿಗೆ ತಮಿಳು ಭಾಷೆಯಲ್ಲಿ ಪಠ್ಯಕ್ರಮವನ್ನು ಅಭಿವೃದ್ಧಿ ಮಾಡಲು ಮುಂದೆ ಬಂದು ಸಹಾಯ ಮಾಡಬೇಕು ಎಂದು ನಾನು ಕರೆ ನೀಡುತ್ತೇನೆ. ಇಂಗ್ಲೀಷ್ ಭಾಷೆಯ ಆನ್ ಲೈನ್ ಕೋರ್ಸ್ ಗಳನ್ನು ತಮಿಳು ಸಹಿತ ಹನ್ನೆರಡು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದ ಮಾಡುವುದಕ್ಕಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಭಾಷಾ ಭಾಷಾಂತರ ಸಲಕರಣೆಯನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ. 

ಸ್ನೇಹಿತರೇ,

ಭಾರತದ ವೈವಿಧ್ಯವೇ ನಮ್ಮ ಶಕ್ತಿ. “ಏಕ ಭಾರತ್ ಶ್ರೇಷ್ಠ ಭಾರತ್” ವಿವಿಧತೆಯಲ್ಲಿ  ಏಕತೆಯನ್ನು ಹೆಚ್ಚಿಸುವ ಮತ್ತು ನಮ್ಮ ಜನರನ್ನು ಇನ್ನೂ ನಿಕಟಗೊಳಿಸುವ ಸ್ಫೂರ್ತಿಯ ಆಶಯವನ್ನು ಹೊಂದಿದೆ. ಹರಿದ್ವಾರದಲ್ಲಿಯ ಮಗುವೊಂದು ತಿರುವಲ್ಲುವರ್ ಪ್ರತಿಮೆಯನ್ನು ನೋಡಿ, ಅವರ ಶ್ರೇಷ್ಠತೆಯನ್ನು ಅರಿಯುವಂತಾದರೆ ಆಗ ಅಲ್ಲಿ ಏಕ ಭಾರತ್ ಶ್ರೇಷ್ಠ ಭಾರತದ ಬೀಜಗಳು ಆ ಯುವ ಮನಸ್ಸಿನಲ್ಲಿ ಬೇರೂರಲು ಅವಕಾಶವಾದಂತಾಗುತ್ತದೆ. ಹರ್ಯಾಣದ ಮಗುವೊಂದು ಕನ್ಯಾಕುಮಾರಿಯ ಶಿಲಾ ಸ್ಮಾರಕಕ್ಕೆ ಭೇಟಿ ನೀಡಿದಾಗಲೂ ಇಂತಹ ಸ್ಫೂರ್ತಿಯು ಉದ್ಭವವಾಗುವುದನ್ನು ಕಾಣಬಹುದು. ತಮಿಳು ನಾಡಿನ ಅಥವಾ ಕೇರಳದ ಮಕ್ಕಳು ವೀರ ಬಾಲ ದಿವಸದ ಬಗ್ಗೆ ಅರಿತಾಗ ಅವರು ಸಾಹಿಬ್ಝಡೇಸ್ ಗಳ ಜೀವನ ಮತ್ತು ಸಂದೇಶದ ಜೊತೆ ಸಂಬಂಧಹೊಂದುತ್ತಾರೆ. ಅವರು ತಮ್ಮ ಆದರ್ಶಗಳನ್ನು ಬಿಡದೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ,  ಈ ಮಣ್ಣಿನ ಶ್ರೇಷ್ಠ ಪುತ್ರರು. ಇತರ ಸಂಸ್ಕೃತಿಗಳನ್ನು ಶೋಧಿಸುವ ಪ್ರಯತ್ನವನ್ನು ನಾವು  ಮಾಡೋಣ. ನೀವದನ್ನು ಆನಂದಿಸುತ್ತೀರಿ ಎಂಬುದಾಗಿ ನಾನು ನಿಮಗೆ ಭರವಸೆ ಕೊಡುತ್ತೇನೆ.

ಸ್ನೇಹಿತರೇ,

ಮುಗಿಸುವುದಕ್ಕೆ ಮೊದಲು, ನಾನು ಎಲ್ಲರೂ ಕೋವಿಡ್-19ಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಅದರಲ್ಲೂ ಮುಖಗವಸು ಧರಿಸುವುದನ್ನು ಅನುಸರಿಸಬೇಕು ಎಂದು ಮನವಿ ಮಾಡುತ್ತೇನೆ. ಭಾರತದ ಲಸಿಕಾ ಆಂದೋಲನ ಗಮನೀಯ ಪ್ರಗತಿ ಸಾಧನೆ ಮಾಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ 15 ರಿಂದ 18 ವರ್ಷದ ವಯೋಮಿತಿಯ ಗುಂಪಿನ ಯುವ ಜನತೆ ತಮ್ಮ ಮೊದಲ ಡೋಸ್ ಲಸಿಕೆ ಪಡೆಯಲಾರಂಭಿಸಿದ್ದಾರೆ. ಹಿರಿಯರಿಗೆ ಮತ್ತು ಆರೋಗ್ಯವಲಯದ ಕಾರ್ಯಕರ್ತರಿಗೆ ಮುಂಜಾಗರೂಕತಾ ಡೋಸ್ ನೀಡುವಿಕೆಯೂ ಆರಂಭಗೊಂಡಿದೆ. ಅರ್ಹರೆಲ್ಲರೂ ಲಸಿಕೆ ಪಡೆಯಬೇಕು ಎಂದು ನಾನು ಮನವಿ ಮಾಡುತ್ತೇನೆ.

ಸಬ್ ಕಾ ಸಾಥ್ , ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದ ಮಾರ್ಗದರ್ಶನದೊಂದಿಗೆ ನಾವೆಲ್ಲರೂ 135 ಕೋಟಿ ಭಾರತೀಯರ ಬದುಕಿನಲ್ಲಿ ಧನಾತ್ಮಕ ಬದಲಾವಣೆಯನ್ನು ತರಲು ಒಗ್ಗೂಡಿ ಕೆಲಸ ಮಾಡಬೇಕು. ಜಾಗತಿಕ ಸಾಂಕ್ರಾಮಿಕದಿಂದ ಕಲಿತು,  ನಾವು ನಮ್ಮೆಲ್ಲಾ ದೇಶವಾಸಿಗಳಿಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣಾ ಸೇವೆಯನ್ನು ಒದಗಿಸಲು ಕಾರ್ಯನಿರತರಾಗಿರಬೇಕು. ನಾವು ನಮ್ಮ ಶ್ರೀಮಂತ ಸಂಸ್ಕೃತಿಯಿಂದ ಕಲಿಯುವ ಮತ್ತು ಬರಲಿರುವ ತಲೆಮಾರುಗಳಿಗೆ ಅಮೃತ ಕಾಲದ ಅಡಿಪಾಯವನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಪೊಂಗಲ್ ಗಾಗಿ ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು. ಅದು ನಮ್ಮೆಲ್ಲರಿಗೂ ಶಾಂತಿ ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲಿ

ವಣಕ್ಕಂ.

ಧನ್ಯವಾದಗಳು.

***


(Release ID: 1789780) Visitor Counter : 192