ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಗರ್ಭಿಣಿಯರು ಮತ್ತು ದಿವ್ಯಾಂಗ ನೌಕರರ ಕಚೇರಿ ಹಾಜರಾತಿಗೆ ವಿನಾಯಿತಿ – ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿಕೆ
प्रविष्टि तिथि:
09 JAN 2022 2:46PM by PIB Bengaluru
ಸಾಂಕ್ರಾಮಿಕದ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಪ್ರಕಟಿಸಿರುವ ಮಾರ್ಗಸೂಚಿಗಳ ವಿವರಗಳನ್ನು ಇಂದು ನೀಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ(ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ, ಭೂವಿಜ್ಞಾನ (ಸ್ವತಂತ್ರ ಹೊಣೆಗಾರಿಕೆ),ಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಗರ್ಭಿಣಿಯರು ಮತ್ತು ದಿವ್ಯಾಂಗ ನೌಕರರಿಗೆ ಕಚೇರಿ ಹಾಜರಿಯಿಂದ ವಿನಾಯಿತಿ ನೀಡಲಾಗಿದೆ ಎಂದರು. ಆದರೆ ಅವರು ಮನೆಯಿಂದಲೇ ಕೆಲಸ ಮಾಡಲು ಲಭ್ಯವಿರುವ ಅಗತ್ಯವಿದೆ ಎಂದು ಅವರು ಹೇಳಿದರು.
ನಿರ್ಬಂಧಿತ ವಲಯಗಳಲ್ಲಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ, ನಿರ್ಬಂಧಿತ ವಲಯ ಘೋಷಣೆ ರದ್ದಾಗುವವರೆಗೆ ಕಚೇರಿಗಳಿಗೆ ಬರುವುದಕ್ಕೆ ವಿನಾಯಿತಿ ಇದೆ ಎಂದು ಅವರು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಭೌತಿಕ ಹಾಜರಾತಿಯನ್ನು ಮಿತಿಗೊಳಿಸಲಾಗಿದೆ, ಅಧೀನ ಕಾರ್ಯದರ್ಶಿ ಮಟ್ಟದಲ್ಲಿ ವಾಸ್ತವ ಸಾಮರ್ಥ್ಯಕ್ಕಿಂತ ಶೇ.50ರಷ್ಟು ಮಾತ್ರ ಭೌತಿಕವಾಗಿ ಹಾಜರಾಗಬೇಕು ಮತ್ತು ಉಳಿದ ಶೇ.50ರಷ್ಟು ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಅದಕ್ಕೆ ತಕ್ಕಂತೆ ಎಲ್ಲ ಸಂಬಂಧಿಸಿದ ಇಲಾಖೆಗಳು ರೋಸ್ಟರ್ (ಅವರ್ತನ) ಪಟ್ಟಿಯನ್ನು ಸಿದ್ಧಪಡಿಸಲಿವೆ ಎಂದು ಸಚಿವರು ಹೇಳಿದರು.
ಕಚೇರಿಗೆ ಹಾಜರಾಗದ ಅಧಿಕಾರಿ ಸಿಬ್ಬಂದಿಗಳು ಮತ್ತು ಯಾರು ಮನೆಯಿಂದ ಕೆಲಸ ಮಾಡುತ್ತಾರೋ ಅಂತಹ ಸಿಬ್ಬಂದಿ ಎಲ್ಲ ಕಾಲದಲ್ಲೂ ದೂರವಾಣಿ ಮತ್ತು ಇತರ ವಿದ್ಯುನ್ಮಾನ ಸಂಪರ್ಕ ವಿಧಾನಗಳಲ್ಲಿ ಲಭ್ಯವಿರಬೇಕು ಎಂದು ಸಚಿವರು ತಿಳಿಸಿದರು.
ಸೋಂಕು ಅತ್ಯಂತ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಡಿಒಪಿಟಿ ಸಾಧ್ಯವಾದಷ್ಟು ಅಧಿಕೃತ ಸಭೆಗಳನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕವೇ ನಡೆಸುವಂತೆ ಕಚೇರಿ ಮೆಮೋ (ಒ.ಎಂ) ಹೊರಡಿಸಿದೆ. ಅಂತೆಯೇ ತೀರಾ ಅಗತ್ಯವಿಲ್ಲದಿದ್ದರೆ ಸಂದರ್ಶಕರ ಜತೆಗಿನ ವೈಯಕ್ತಿಕ ಭೇಟಿಗಳನ್ನೂ ಸಹ ತಪ್ಪಿಸುವಂತೆ ಸೂಚಿಸಲಾಗಿದೆ.
ಕಚೇರಿಗಳ ಸಮುಚ್ಛಯದಲ್ಲಿ ಜನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಕಚೇರಿ ಸಿಬ್ಬಂದಿಗಳಿಗೆ ವಿಭಜಿತ ಅವಧಿಯಲ್ಲಿ ಅಂದರೆ(ಎ) ಬೆಳಗ್ಗೆ 9 ರಿಂದ ಸಂಜೆ 5.30 ಮತ್ತು (ಬಿ) ಬೆಳಗ್ಗೆ 10 ರಿಂದ ಸಂಜೆ 6.30 ಸಮಯವನ್ನು ಪಾಲನೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಈ ಮಧ್ಯೆ ಡಿಒಪಿಟಿ, ಎಲ್ಲಾ ಅಧಿಕಾರಿಗಳು/ಸಿಬ್ಬಂದಿ ಕೋವಿಡ್ ಸೂಕ್ತ ನಡವಳಿಕೆ ಅಂದರೆ ಪದೇಪದೆ ಕೈತೊಳೆಯುವುದು/ಸ್ಯಾನಿಟೈಸೇಶನ್, ಮಾಸ್ಕ್ ಧರಿಸುವುದು/ಮುಖ ರಕ್ಷಾಕವಚ ಧರಿಸುವುದು ಮತ್ತು ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ.
ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಸೂಕ್ತ ಸ್ವಚ್ಛತೆ ಮತ್ತು ಸ್ಯಾನಿಟೈಸೇಶನ್ ಮಾಡಬೇಕು. ವಿಶೇಷವಾಗಿ ಪದೇಪದೇ ಸ್ಪರ್ಶಿಸುವಂತಹ ಜಾಗಗಳಲ್ಲಿ ಸ್ಯಾನಿಟೈಸೇಷನ್ ಖಾತ್ರಿಪಡಿಸಬೇಕು.
ಡಿಒಪಿಟಿ ಬಿಡುಗಡೆ ಮಾಡಿರುವ ಈ ಮಾರ್ಗಸೂಚಿಯ ಕಚೇರಿ ಆದೇಶ 2022ರ ಜನವರಿ 31ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಈ ಮಧ್ಯೆ ಕಾಲ ಕಾಲಕ್ಕೆ ಪರಮಾರ್ಶೆ ನಡೆಸಲಾಗುವುದು ಮತ್ತು ಪರಿಸ್ಥಿತಿಯನ್ನು ಆಧರಿಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುವುದು.
***
(रिलीज़ आईडी: 1788792)
आगंतुक पटल : 352