ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜರ್ಮನಿಯ ಫೆಡರಲ್ ಚಾನ್ಸಲರ್ ಘನತೆವೆತ್ತ ಓಲಾಫ್ ಶೋಲ್ಜ್ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

Posted On: 05 JAN 2022 8:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಫೆಡರಲ್ ಚಾನ್ಸಲರ್ ಘನತೆವೆತ್ತ ಓಲಾಫ್ ಶೋಲ್ಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಚಾನ್ಸಲರ್ ಆಗಿ ನೇಮಕಗೊಂಡ ಘನತೆವೆತ್ತ ಶೋಲ್ಜ್ ಅವರನ್ನು ಪ್ರಧಾನಿ ಅಭಿನಂದಿಸಿದರು. ಭಾರತ-ಜರ್ಮನಿ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಾಜಿ ಚಾನ್ಸಲರ್ ಘನತೆವೆತ್ತ ಏಂಜೆಲಾ ಮರ್ಕೆಲ್ ಅವರ ಅಪಾರ ಕೊಡುಗೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಶ್ರೀಯುತ ಶೋಲ್ಜ್ ಅವರ ನಾಯಕತ್ವದಲ್ಲಿ ಈ ಸಕಾರಾತ್ಮಕ ಬೆಳವಣಿಗೆಯನ್ನು ಮುಂದುವರಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಹೊಸ ಜರ್ಮನ್ ಸರಕಾರವು ಘೋಷಿಸಿದ ಆಡಳಿತ ಆದ್ಯತೆಗಳು ಮತ್ತು ಭಾರತದ ಸ್ವಂತ ಆರ್ಥಿಕ ದೂರದೃಷ್ಟಿಗಳಲ್ಲಿ ಗಮನಾರ್ಹ ಸಮನ್ವಯವಿರುವ ಬಗ್ಗೆ ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು. ಹೂಡಿಕೆ ಮತ್ತು ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸುವುದು ಸೇರಿದಂತೆ ಪ್ರಸ್ತುತ ಕೈಗೊಂಡಿರುವ ಸಹಕಾರ ಉಪಕ್ರಮಗಳ ಸಾಮರ್ಥ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಹೊಸ ಕ್ಷೇತ್ರಗಳಲ್ಲಿ ಸಹಕಾರ ಮತ್ತು ವಿನಿಮಯವನ್ನು ಮತ್ತಷ್ಟು ವೈವಿಧ್ಯಗೊಳಿಸುವ ಸಾಮರ್ಥ್ಯ ಎರಡೂ ಕಡೆ ಇದೆಯೆಂದು ಉಭಯ ನಾಯಕರು ಒಪ್ಪಿಕೊಂಡರು. ವಿಶೇಷವಾಗಿ, ಎರಡೂ ದೇಶಗಳು ತಮ್ಮ ಹವಾಮಾನ ಬದ್ಧತೆಗಳನ್ನು ಸಾಧಿಸಲು ಅನುಕೂಲವಾಗುವಂತೆ ʻಹವಾಮಾನ ಕ್ರಿಯಾಯೋಜನೆ ಮತ್ತು ಹಸಿರು ಇಂಧನʼ ಕ್ಷೇತ್ರಗಳಲ್ಲಿ ಹೊಸ ಸಹಕಾರ ಉಪಕ್ರಮಗಳನ್ನು ಪ್ರಾರಂಭಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಘನತೆವೆತ್ತ ಚಾನ್ಸಲರ್ ಶೋಲ್ಜ್ ಮತ್ತು ಜರ್ಮನ್ ಜನರಿಗೆ ಪ್ರಧಾನಮಂತ್ರಿಯವರು ಹೊಸ ವರ್ಷದ ಶುಭಾಶಯ ತಿಳಿಸಿದರು. ದ್ವಿಪಕ್ಷೀಯ ಅಂತರ- ಸರಕಾರ ಸಮಾಲೋಚನೆಯ ಮುಂದಿನ ಸಭೆಯ ಭಾಗವಾಗಿ ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಪ್ರಧಾನಿ ಹೇಳಿದರು.  

***


(Release ID: 1787961) Visitor Counter : 185