ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 27 DEC 2021 4:43PM by PIB Bengaluru

ಹಿಮಾಚಲದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜೀ, ಜನಪ್ರಿಯ ಮತ್ತು ಉತ್ಸಾಹಿ ಮುಖ್ಯಮಂತ್ರಿ ಶ್ರೀ ಜೈ ರಾಂ ಠಾಕೂರ್ ಜೀ, ಮಾಜಿ ಮುಖ್ಯಮಂತ್ರಿ ಧುಮಾಲ್ ಜೀ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಅನುರಾಗ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಸುರೇಶ್ ಕಶ್ಯಪ್, ಶ್ರೀ ಕಿಶನ್ ಕಪೂರ್ ಜೀ, ಮತ್ತು ಇಂದು ಗೋಸ್ವಾಮೀ ಜೀ, ಮತ್ತು ಹಿಮಾಚಲದ ವಿವಿಧ ಭಾಗಗಳಿಂದ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!.

ತಿಂಗಳ ಆರಂಭದಲ್ಲಿ ಕಾಶಿ ವಿಶ್ವನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಇಂದು ನನಗೆ ಮಿನಿ ಕಾಶಿ ಅಂದರೆ ಮಂಜಾ, ಬಾಬಾ ಭೂತನಾಥ್, ಪಂಚವಕ್ತ್ರಾ ಮತ್ತು ಮಹಾಮೃತ್ಯುಂಜಯರ ಆಶೀರ್ವಾದ ಪಡೆಯುವ ಅವಕಾಶ ದೊರೆಯಿತು. ನಾನು ದೇವಭೂಮಿಯ ಎಲ್ಲಾ ದೇವರು ಮತ್ತು ದೇವತೆಯರಿಗೆ ಶಿರಬಾಗಿ ನಮಿಸುತ್ತೇನೆ

ಸ್ನೇಹಿತರೇ,

ಹಿಮಾಚಲದ ಜೊತೆ ನಾನು ಸದಾ  ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಹಿಮಾಚಲದ ಭೂಮಿ ಮತ್ತು ಹಿಮಾಲಯದ ಸೌಂದರ್ಯದ ಉನ್ನತ ಶಿಖರಗಳು ನನ್ನ ಜೀವನಕ್ಕೆ ಮಾರ್ಗದರ್ಶನ ನೀಡುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಿವೆ. ಮತ್ತು ನಾನು ನಿಮ್ಮೊಂದಿಗೆ ಬಂದಾಗ ಮತ್ತು ಮಂಡಿಗೆ ಬಂದಾಗೆಲ್ಲ, ನನಗೆ ಮಂಡಿಯ ಖಾದ್ಯಗಳಾದಸೇಪು ಬಾರಿ, “ಕಚೋರಿಮತ್ತುಬದಾನೇ ಮಿತ್ತಾನೆನಪಾಗುತ್ತದೆ.

ಸ್ನೇಹಿತರೇ,

ಇಂದು, ಎರಡು ಇಂಜಿನ್ ಗಳ ಸರಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ. ನಾಲ್ಕು ವರ್ಷಗಳು ಸೇವೆ ಮತ್ತು ಸಾಧನೆಯನ್ನು ದಾಖಲಿಸಿವೆ, ಇದಕ್ಕಾಗಿ ನಾನು ಹಿಮಾಚಲ ಪ್ರದೇಶದ ಜನರನ್ನು  ಅಭಿನಂದಿಸುತ್ತೇನೆ. ಅತ್ಯಂತ ಚಳಿಯ ವಾತಾವರಣದಲ್ಲಿಯೂ ನಮ್ಮನ್ನು ಆಶೀರ್ವದಿಸಲು ನೀವು ಬಂದಿದ್ದೀರಿ ಎಂದರೆ, ನೀವು ಹಿಮಾಚಲ ನಾಲ್ಕು ವರ್ಷಗಳಲ್ಲಿ ಬಹಳ ತ್ವರಿತಗತಿಯಿಂದ ಮುನ್ನಡೆಯುತ್ತಿರುವುದನ್ನು ನೀವು ಕಾಣುತ್ತಿದ್ದೀರಿ  ಎಂದರ್ಥ. ಜೈ ರಾಂ ಜೀ ಮತ್ತು ಅವರ ಕಠಿಣ ಪರಿಶ್ರಮಿ ತಂಡವು ಹಿಮಾಚಲದ ಜನತೆಯ ಕನಸುಗಳನ್ನು ನನಸು ಮಾಡಲು ಯಾವುದೇ ಕೆಲಸಗಳನ್ನು ಮಾಡದೇ ಬಿಟ್ಟಿಲ್ಲ. ನಾಲ್ಕು ವರ್ಷಗಳಲ್ಲಿ ಎರಡು ವರ್ಷ ನಾವು ಕೊರೊನಾ ವಿರುದ್ಧ ಬಲವಾದ ಹೋರಾಟವನ್ನು ಮಾಡಿದೆವು ಮತ್ತು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳದಂತೆ ನೋಡಿಕೊಂಡೆವು. ಕಳೆದ ನಾಲ್ಕು ವರ್ಷಗಳಲ್ಲಿ ಹಿಮಾಚಲ ಮೊದಲ ...ಎಂ.ಎಸ್. ನ್ನು ಪಡೆಯಿತು. ಹಮೀರ್ಪುರ, ಮಂಡಿ, ಚಂಬಾ ಮತ್ತು ಸಿರ್ಮೌರ್ ಗಳಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳು ಮಂಜೂರಾದವು. ಹಿಮಾಚಲದ ಸಂಪರ್ಕವನ್ನು ಬಲಪಡಿಸಲು ಹಲವು ಪ್ರಯತ್ನಗಳನ್ನು ಮಾಡಲಾಯಿತು.

ಸಹೋದರರೇ ಮತ್ತು ಸಹೋದರಿಯರೇ,

ಇಲ್ಲಿಗೆ ಬರುವುದಕ್ಕೆ ಮೊದಲು, ಹಿಮಾಚಲ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತಹ ಕಾರ್ಯಕ್ರಮವಾದ ಹೂಡಿಕೆದಾರರ ಸಮಾವೇಶದಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ವಸ್ತುಪ್ರದರ್ಶನ ನೋಡಿ ನಾನು ಬಹಳ ಹರ್ಷಿತನಾದೆ.ಇದು ಹಿಮಾಚಲದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಗೆ ಹಾದಿ ಮಾಡಿಕೊಟ್ಟಿದೆ ಮತ್ತು ಯುವಜನತೆಗೆ ಹೊಸ ಉದ್ಯೋಗಗಳು ಲಭಿಸುವಂತೆ ಮಾಡಿದೆ. ಸ್ವಲ್ಪ ಸಮಯದ ಹಿಂದೆ 11,000 ಕೋ.ರೂ.ಗಳ ವೆಚ್ಚದ ನಾಲ್ಕು ಬೃಹತ್ ಜಲ ವಿದ್ಯುತ್ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ ಅಥವಾ ಇಲ್ಲಿ ಉದ್ಘಾಟಿಸಲಾಗಿದೆ. ಇದರಿಂದ ಹಿಮಾಚಲದ ಆದಾಯ ಹೆಚ್ಚಲಿದೆ ಮತ್ತು ಇದರಿಂದ ಸಾವಿರಾರು ಉದ್ಯೋಗಾವಕಾಶಗಳು ನಿರ್ಮಾಣ ಆಗಲಿವೆ. ಅದು ಸಾವ್ರಾ-ಕುಡ್ಡು ಯೋಜನೆ ಆಗಿರಲಿ, ಲುಹ್ರಿ ಯೋಜನೆ ಆಗಿರಲಿ, ಧೌಲಾಸಿದ್ ಯೋಜನೆ ಅಥವಾ ರೇಣುಕಾಜೀ ಯೋಜನೆ ಆಗಿರಲಿ, ಇವುಗಳು ಹಿಮಾಚಲದ ಆಶೋತ್ತರಗಳನ್ನು  ಮತ್ತು ದೇಶದ ಆವಶ್ಯಕತೆಗಳನ್ನು ಪೂರೈಸಲಿವೆ. ಸಾವ್ರಾ-ಕುಡ್ಡು ಅಣೆಕಟ್ಟು ಪಿಯಾನೋ ರೀತಿಯಲ್ಲಿ ನಿರ್ಮಾಣವಾಗಲಿರುವ ಏಶ್ಯಾದ ಮೊದಲ ಅಣೆಕಟ್ಟು. ಹಿಮಾಚಲವು ಆಣೆಕಟ್ಟೆಯಿಂದ ಉತ್ಪಾದನೆಯಾಗಲಿರುವ ವಿದ್ಯುತ್ತಿನಿಂದ ವಾರ್ಷಿಕ 150 ಕೋ.ರೂ. ಆದಾಯವನ್ನು ಗಳಿಸಲಿದೆ

ಸ್ನೇಹಿತರೇ

ಶ್ರೀ ರೇಣುಕಾ ಜೀ ನಮ್ಮ ನಂಬಿಕೆಯ ಪ್ರಮುಖ ಸ್ಥಳಗಳಲ್ಲಿ ಒಂದು. ಭಗವಾನ್ ಪರಶುರಾಮ ಮತ್ತು ಅವರ ತಾಯಿ ರೇಣುಕಾ ಜೀಯ ವಾತ್ಸಲ್ಯದ ದ್ಯೋತಕವಾಗಿ ಒಂದು ತೊರೆ ಇಂದು  ದೇಶದ ಅಭಿವೃದ್ಧಿಗಾಗಿ ಭೂಮಿಯಿಂದ ಹರಿಯತೊಡಗಿದೆ. ಗಿರಿ ನದಿಯಲ್ಲಿ ಶ್ರೀ ರೇಣುಕಾಜೀ ಅಣೆಕಟ್ಟು ಯೋಜನೆ ಪೂರ್ಣಗೊಂಡಾಗ ಇದರಿಂದ ಬಹಳ ವಿಸ್ತಾರವಾದ ಭೂಪ್ರದೇಶಕ್ಕೆ ನೇರ ಲಾಭವಾಗುತ್ತದೆ. ಯೋಜನೆಯ ಆದಾಯದ ಬಹಳ ದೊಡ್ಡ ಭಾಗವನ್ನು ಇಲ್ಲಿಯ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುವುದು.

ಸ್ನೇಹಿತರೇ,

ಜೀವನವನ್ನು ಸುಲಭಗೊಳಿಸುವುದು ಅಂದರೆ ದೇಶದ ನಾಗರಿಕರ ಬದುಕನ್ನು ಸುಲಭಗೊಳಿಸುವುದು ನಮ್ಮ ಸರಕಾರದ ಅತ್ಯಂತ ಗರಿಷ್ಠ ಆದ್ಯತೆಯ ಸಂಗತಿಯಾಗಿದೆ. ಮತ್ತು ಇದರಲ್ಲಿ ವಿದ್ಯುತ್ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ. ವಿದ್ಯುತ್ ಇಲ್ಲದೆ ಯಾರು ಕೂಡಾ ಬದುಕಲಾರರು. ಅದು ಓದುವುದಕ್ಕಾಗಿರಬಹುದು,    ಮನೆ ಕೆಲಸಗಳಿಗಾಗಿರಬಹುದು, ವಿದ್ಯುತ್ ಆಧಾರಿತ ಕೈಗಾರಿಕೆಗಳಿಗಾಗಿರಬಹುದು, ಮತ್ತು ಈಗ ಮೊಬೈಲ್ ಫೋನುಗಳ ಚಾರ್ಜಿಂಗ್ ಮಾಡುವುದಕ್ಕಾಗಿರಬಹುದು ವಿದ್ಯುತ್ ಬಹಳ ಮುಖ್ಯ. ನಿಮಗೆ ಗೊತ್ತಿರಬಹುದು -ನಮ್ಮ ಸರಕಾರದ ಜೀವನವನ್ನು ಸುಲಭಗೊಳಿಸುವ ಮಾದರಿಯು ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದೆ ಮತ್ತು ಅದು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇಂದು ಇಲ್ಲಿ ಶಿಲಾನ್ಯಾಸ ಮತ್ತು ಅನಾವರಣ ಮಾಡಲಾದ ಜಲ ವಿದ್ಯುತ್ ಯೋಜನೆಗಳು ಪರಿಸರ ಸ್ನೇಹಿ ನವ ಭಾರತದತ್ತ ಬಲಿಷ್ಟ ಹೆಜ್ಜೆಗಳು. ಇಂದು ಇಡೀ ವಿಶ್ವವೇ ಪರಿಸರವನ್ನು ರಕ್ಷಿಸುತ್ತ ಅಭಿವೃದ್ಧಿಗೆ ವೇಗ ನೀಡುತ್ತಿರುವ ಭಾರತವನ್ನು ಶ್ಲಾಘಿಸುತ್ತಿದೆ. ಸೌರ ವಿದ್ಯುತ್ ಶಕ್ತಿಯಿಂದ ಜಲ ವಿದ್ಯುತ್ತಿನವರೆಗೆ, ಪವನ ವಿದ್ಯುತ್ತಿನಿಂದ ಹಸಿರು ಜಲಜನಕದವರೆಗೆ ನಮ್ಮ ದೇಶವು ಮರುನವೀಕರಿಸಬಹುದಾದ ಇಂಧನಗಳ ಪ್ರತಿಯೊಂದು ಮೂಲವನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಲು ನಿರಂತರವಾಗಿ ಕಾರ್ಯನಿರತವಾಗಿದೆ. ಇದರ ಉದ್ದೇಶ ದೇಶದ ನಾಗರಿಕರ ಇಂಧನ ಆವಶ್ಯಕತೆಯನ್ನು ಈಡೇರಿಸುವುದು ಮತ್ತು ಪರಿಸರವನ್ನು ರಕ್ಷಿಸುವುದು. ದೇಶದ ಸ್ಥಾಪಿತ ವಿದ್ಯುತ್ ಸಾಮರ್ಥ್ಯ ವರ್ಧಿಸುತ್ತಿರುವುದು ಭಾರತ ಹೇಗೆ ತನ್ನ ಗುರಿಗಳನ್ನು ಸಾಧಿಸುತ್ತಿದೆ ಎನ್ನುವುದಕ್ಕೆ ಒಂದು ಉದಾಹರಣೆ.

ಸ್ನೇಹಿತರೇ,

2016ರಲ್ಲಿ, ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇಖಡ 40 ರಷ್ಟನ್ನು 2030ರವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳ ಮೂಲಕ ಸಾಧಿಸುವ ಗುರಿಯನ್ನು ಹಾಕಿಕೊಂಡಿದೆ. ಗುರಿಯನ್ನು ವರ್ಷದ ನವೆಂಬರ್ ತಿಂಗಳೊಳಗೇ ಸಾಧಿಸಿರುವುದಕ್ಕೆ ಇಂದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುತ್ತಾರೆ. ಅಂದರೆ, ಭಾರತವು 2030ಕ್ಕೆ ನಿಗದಿ ಮಾಡಲಾಗಿದ್ದ ಗುರಿಯನ್ನು 2021ರಲ್ಲಿಯೇ ಸಾಧಿಸಿದೆ. ಇದು ಇಂದಿನ ಭಾರತದ ಕೆಲಸದ ವೇಗ ಮತ್ತು ನಮ್ಮ ಕೆಲಸದ ವೇಗ.

ಸ್ನೇಹಿತರೇ,

ಪ್ಲಾಸ್ಟಿಕ್ ನಿಂದ ಪರ್ವತಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ  ನಮ್ಮ ಸರಕಾರಕ್ಕೆ ಅರಿವಿದೆ. ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ರಾಷ್ಟ್ರವ್ಯಾಪೀ ಆಂದೋಲನದ ಜೊತೆ ನಮ್ಮ ಸರಕಾರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಿದೆ. ಪ್ಲಾಸ್ಟಿಕ್ ಪುನರ್ಬಳಕೆ ಮಾಡಿದ ತ್ಯಾಜ್ಯವನ್ನು ರಸ್ತೆಗಳನ್ನು ಮಾಡುವುದಕ್ಕಾಗಿ ಬಳಸಲಾಗುತ್ತಿದೆ. ಹಿಮಾಚಲಕ್ಕೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರಲ್ಲಿ ನನ್ನ ಕೋರಿಕೆ ಏನೆಂದರೆ ಹಿಮಾಚಲವನ್ನು ಸ್ವಚ್ಛವಾಗಿರಿಸುವುದರಲ್ಲಿ ಅವರಿಗೂ ಜವಾಬ್ದಾರಿ ಇದೆ ಮತ್ತು ಪ್ಲಾಸ್ಟಿಕ್ ಹಾಗು ಇತರ ತ್ಯಾಜ್ಯಗಳಿಂದ ಹಿಮಾಚಲವನ್ನು ಸ್ವಚ್ಛವಾಗಿಡಬೇಕು. ಎಲ್ಲ ಕಡೆಯೂ ಹರಡಿ ಬಿದ್ದಿರುವ ಪ್ಲಾಸ್ಟಿಕನ್ನು ನಿರ್ಬಂಧಿಸಲು, ನದಿಗಳಿಗೆ ಅದು ಸೇರುವುದನ್ನು ತಡೆಯಲು ಮತ್ತು ಅದು ಹಿಮಾಚಲಕ್ಕೆ ಮಾಡುತ್ತಿರುವ ಹಾನಿಯನ್ನು ನಿವಾರಿಸಲು ನಾವು ಒಗ್ಗೂಡಿ ಕೆಲಸ ಮಾಡಬೇಕಾಗಿದೆ.

ಸ್ನೇಹಿತರೇ,

ದೇವಭೂಮಿ ಹಿಮಾಚಲಕ್ಕೆ ಪ್ರಕೃತಿಯ ಆಶೀರ್ವಾದವಿದೆ, ಮತ್ತು ನಾವದನ್ನು ರಕ್ಷಿಸಬೇಕಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿವೆ ಮತ್ತು ಕೈಗಾರಿಕಾ ಅಭಿವೃದ್ಧಿಗೂ ಅವಕಾಶಗಳಿವೆ. ನಮ್ಮ ಸರಕಾರ ನಿಟ್ಟಿನಲ್ಲಿ ಸದಾ ಕಾರ್ಯನಿರತವಾಗಿದೆ. ಆಹಾರ ಉದ್ಯಮ, ಕೃಷಿ ಮತ್ತು ಔಷಧ ವಲಯಗಳು ನಮ್ಮ ವಿಶೇಷ ಆದ್ಯತೆಯ ವಲಯಗಳಾಗಿವೆ. ಮತ್ತು ಅದಕ್ಕಾಗಿ ಹಣಕಾಸು ಕೂಡಾ ಈಗಾಗಲೇ ಇಲ್ಲಿದೆ. ಹಿಮಾಚಲ ಬಿಟ್ಟು ಪ್ರವಾಸೋದ್ಯಮ ನಿಧಿ ಬೇರೆಲ್ಲಿ ಇರಲು ಸಾಧ್ಯ?. ಹಿಮಾಚಲದ ಆಹಾರ ಸಂಸ್ಕರಣಾ ಉದ್ಯಮಗಳು ವಿಸ್ತರಣೆಗೆ ವ್ಯಾಪಕವಾದಂತಹ ಅವಕಾಶಗಳನ್ನು ಹೊಂದಿವೆ. ಆದುದರಿಂದ ನಮ್ಮ ಸರಕಾರ ಬೃಹತ್ ಆಹಾರ ಪಾರ್ಕ್ ಗಳಿಂದ ಹಿಡಿದು ಶೀತಲ ದಾಸ್ತಾನುಗಾರಗಳವರೆಗೆ ಪ್ರತಿಯೊಂದು ಮೂಲಸೌಕರ್ಯವನ್ನು ಬಲಪಡಿಸುತ್ತಿದೆ. ಕೃಷಿಯಲ್ಲಿ ಎರಡು ಇಂಜಿನ್ ಗಳ ಸರಕಾರ ಸತತವಾಗಿ ಸಹಜ ಅಥವಾ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಂದು  ಸಾವಯವ ಕೃಷಿ ಉತ್ಪಾದನೆಗಳಿಗೆ ಬೇಡಿಕೆ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಇಂದು ರಾಸಾಯನಿಕ ಮುಕ್ತ ಕೃಷಿ ಉತ್ಪನ್ನಗಳು ವಿಶೇಷ ಆಕರ್ಷಣೆಯ ಕೇಂದ್ರವಾಗಿವೆ. ಹಿಮಾಚಲ ನಿಟ್ಟಿನಲ್ಲಿ ಬಹಳ ದೊಡ್ಡ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ ಮತ್ತು ರಾಜ್ಯದಲ್ಲಿ ಹಲವು ಜೈವಿಕ ಗ್ರಾಮಗಳು ಸ್ಥಾಪನೆಯಾಗಿವೆ. ಸಹಜ ಅಥವಾ ಸಾವಯವ ಕೃಷಿಯ ಹಾದಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ನಾನು ಹಿಮಾಚಲದ ರೈತರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಇಂತಹ ಸಣ್ಣ ರಾಜ್ಯದಲ್ಲಿ, ಬಹಳ ಸಣ್ಣ ಅವಧಿಯಲ್ಲಿ  1.5 ಲಕ್ಷಕ್ಕೂ ಅಧಿಕ ರೈತರು ರಾಸಾಯನಿಕ ಮುಕ್ತ ಸಾವಯವ ಕೃಷಿಯನ್ನು ಅನುಸರಿಸುತಿರುವುದಾಗಿ ನನಗೆ ತಿಳಿಸಲಾಗಿದೆ. ಇಂದು ನಾನು ಸಾವಯವ ಕೃಷಿಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ನೋಡಿದೆ. ಉತ್ಪನ್ನಗಳ ಗಾತ್ರ ಮತ್ತು ಬಣ್ಣ ಬಹಳ ಮನ ಸೆಳೆಯುವಂತಿತ್ತು. ನಾನು ಬಹಳ ಸಂತೋಷಗೊಂಡಿದ್ದೇನೆ ಮತ್ತು ಹಿಮಾಚಲವನ್ನು, ಹಿಮಾಚಲದ ರೈತರನ್ನು ಇದಕ್ಕಾಗಿ ಮನಪೂರ್ವಕವಾಗಿ ಅಭಿನಂದಿಸುತ್ತೇನೆ ಹಾಗೂ ಹಿಮಾಚಲದ ರೈತರು ಆಯ್ಕೆ ಮಾಡಿರುವ ಹಾದಿ ಕೃಷಿಯ ಅತ್ಯುತ್ತಮ ಹಾದಿ ಎಂದು ಹೇಳುತ್ತೇನೆ. ಇಂದು ಪ್ಯಾಕೇಜ್ ಮಾಡಲಾದ ಆಹಾರದ ಪ್ರವೃತ್ತಿ ಹೆಚ್ಚುತ್ತಿರುವಾಗ, ಇದರಲ್ಲಿ ಹಿಮಾಚಲ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಬಲ್ಲದು.

ಸ್ನೇಹಿತರೇ,

ಹಿಮಾಚಲ ಪ್ರದೇಶವು ದೇಶದ ಬಹಳ ಪ್ರಮುಖ ಔಷಧಿ ತಯಾರಿಕಾ ತಾಣಗಳಲ್ಲಿ ಒಂದಾಗಿದೆ. ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯುವುದಿದ್ದರೆ, ಆಗ ಅದರ ಹಿಂದಿರುವ ಶಕ್ತಿ ಹಿಮಾಚಲ. ಹಿಮಾಚಲ ಪ್ರದೇಶ ಕೊರೊನಾ ಜಾಗತಿಕ ಸಾಂಕ್ರಾಮಿಕ ಕಾಲದಲ್ಲಿ ಇತರ ರಾಜ್ಯಗಳಿಗೆ ಸಹಾಯ ಮಾಡಿದೆ ಮಾತ್ರವಲ್ಲ, ಇತರ ದೇಶಗಳಿಗೂ ನೆರವಾಗಿದೆ. ಔಷಧ ತಯಾರಿಕಾ ಉದ್ಯಮವಲ್ಲದೆ ಅದರ ಜೊತೆಗೆ ನಮ್ಮ ಸರಕಾರ ಆಯುಷ್ ಉದ್ಯಮ-ಪ್ರಾಕ್ರತಿಕ  ಔಷಧಿಗೆ ಸಂಬಂಧಿಸಿದ ಉದ್ಯಮಗಳಿಗೂ ಉತ್ತೇಜನ  ನೀಡುತ್ತಿದೆ

ಸ್ನೇಹಿತರೇ,

ಇಂದು, ಸರಕಾರವನ್ನು ನಡೆಸುವ ಎರಡು ಪ್ರತ್ಯೇಕ ಮಾದರಿಗಳು ದೇಶದಲ್ಲಿವೆ. ಒಂದು ಮಾದರಿ-“ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” (ಪ್ರತಿಯೊಬ್ಬರ ಸಹಕಾರ, ಪ್ರತಿಯೊಬ್ಬರ ಅಭಿವೃದ್ಧಿ, ಪ್ರತಿಯೊಬ್ಬರ  ವಿಶ್ವಾಸ ಮತ್ತು ಪ್ರತಿಯೊಬ್ಬರ ಪ್ರಯತ್ನ). ಅಲ್ಲಿ ಇನ್ನೊಂದು ಮಾದರಿಯೂ ಇದೆ, ಅದುಖುದ್ ಕಾ ಸ್ವಾರ್ಥ್, ಪರಿವಾರ್ ಕಾ ಸ್ವಾರ್ಥ್ ಔರ್ ವಿಕಾಸ್ ಭೀ ಖುದ್ ಕೇ ಪರಿವಾರ್ ಕಾ” (ಸ್ವ ಹಿತಾಸಕ್ತಿ, ಕುಟುಂಬದ ಹಿತಾಸಕ್ತಿ, ಮತ್ತು ಕುಟುಂಬದ ಅಭಿವೃದ್ಧಿ ). ನಾವು ಹಿಮಾಚಲದಲ್ಲಿಯೇ ನೋಡಿದರೆ, ನಾವು ಇಲ್ಲಿಗೆ ತಂದ ಮೊದಲನೆಯ ಮಾದರಿ ಪೂರ್ಣ ಶಕ್ತಿಯಿಂದ ರಾಜ್ಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಇದರ ಪರಿಣಾಮವಾಗಿ ಹಿಮಾಚಲವು ತನ್ನ ಎಲ್ಲಾ ವಯಸ್ಕ ಜನಸಂಖ್ಯೆಯನ್ನು ಲಸಿಕಾಕರಣಕ್ಕೆ ಒಳಪಡಿಸಿದ ಮೊದಲ ರಾಜ್ಯವಾಗಿದೆ. ಇಲ್ಲಿಯ ಸರಕಾರದಲ್ಲಿರುವರು ರಾಜಕೀಯ ಹಿತಾಸಕ್ತಿಯಲ್ಲಿ ತೊಡಗಿಲ್ಲ, ಬದಲು ಅವರು ತಮ್ಮ ಪೂರ್ಣ ಗಮನವನ್ನು ಹಿಮಾಚಲದ ನಾಗರಿಕರನ್ನು ಲಸಿಕಾಕರಣಕ್ಕೆ ಒಳಪಡಿಸುವಲ್ಲಿ ಕೇಂದ್ರೀಕರಿಸಿದ್ದಾರೆ. ಒಮ್ಮೆ ನನಗೆ ಕೆಲಸದಲ್ಲಿ ತೊಡಗಿರುವ ಜನರ ಜೊತೆ ವರ್ಚುವಲ್ ಮೂಲಕ ಮಾತನಾಡುವ ಅವಕಾಶ ಲಭಿಸಿತ್ತು. ಅದು ಬಹಳ ಉತ್ತೇಜನದಾಯಕವಾಗಿತ್ತು.

ಸಹೋದರರೇ ಮತ್ತು ಸಹೋದರಿಯರೇ,

ನಾವು ಹಿಮಾಚಲದ ಜನತೆಯ ಆರೋಗ್ಯದ ಬಗೆಗೆ ಕಳಕಳಿ ಹೊಂದಿದ್ದೇವೆ; ಆದುದರಿಂದ ಪ್ರತಿಯೊಬ್ಬರೂ ಬಹಳ ದುರ್ಗಮ ಪ್ರದೇಶದಲ್ಲಿಯೂ ಲಸಿಕೆಗಳನ್ನು ಪೂರೈಸಲು ಸಾಕಷ್ಟು ಶ್ರಮವಹಿಸಿದರು. ಇದು ನಮ್ಮ ಸೇವಾ ಭಾವನೆಯ ಮನೋಭಾವವನ್ನು ತೋರಿಸುತ್ತದೆ. ಜನತೆಯೆಡೆಗೆ ಇರುವ ಜವಾಬ್ದಾರಿಯ ಭಾವನೆಯನ್ನು ತೋರಿಸುತ್ತದೆ. ಇಲ್ಲಿಯ ಸರಕಾರ ಜನತೆಯ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಹಲವು ಹೊಸ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಟಾನಿಸಿದೆ. ಇದು ಹಿಮಾಚಲ ಸರಕಾರ ಜನರ ಬಗ್ಗೆ ಮತ್ತು ಬಡವರ ಬಗ್ಗೆ ಎಷ್ಟು ಗಮನ ಹರಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಇಂದು ನಮ್ಮ ಸರಕಾರ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಇರುವಂತಹ ಹಕ್ಕುಗಳನ್ನು ನೀಡಲು ಪ್ರಯತ್ನಗಳನ್ನು ಮಾಡುತ್ತಿದೆ. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಸಮಾನರು. ಇಂತಹ ಬೃಹತ್ ಸಂಖ್ಯೆಯ ತಾಯಂದಿರು ಮತ್ತು ಸಹೋದರಿಯರು ಇಲ್ಲಿಗೆ ಬಂದಿದ್ದಾರೆ ಮತ್ತು ಅವರ ಆಶೀರ್ವಾದ ನಿಟ್ಟಿನಲ್ಲಿ ಕೆಲಸ ಮಾಡಲು ನಮಗೆ ಶಕ್ತಿಯನ್ನು ಒದಗಿಸಲಿದೆ. ಹೆಣ್ಣು ಮಕ್ಕಳ ಮದುವೆಯ ವಯಸ್ಸು ಗಂಡು ಮಕ್ಕಳಿಗೆ ಮದುವೆಗೆ ಅವಕಾಶ ನೀಡುವ ವಯಸ್ಸೂ ಒಂದೇ ಆಗಿರಬೇಕು ಎಂದು ನಾವು  ನಿರ್ಧರಿಸಿದ್ದೇವೆ. ನೋಡಿ, ನಮ್ಮ ಸಹೋದರಿಯರು ಇದಕ್ಕೆ ಬಹಳ ಚಪ್ಪಾಳೆ ತಟ್ಟುತ್ತಿದ್ದಾರೆ. ಹೆಣ್ಣು ಮಕ್ಕಳ ಮದುವೆಯ ವಯಸ್ಸು 21ವರ್ಷಕ್ಕೇರುವುದರಿಂದ ಅವರಿಗೆ ಅಧ್ಯಯನಕ್ಕೆ ಸಾಕಷ್ಟು ಸಮಯ ದೊರೆಯುತ್ತದೆ. ಮತ್ತು ಅವರೂ ತಮ್ಮ ಉದ್ಯೋಗದ ಭವಿತವ್ಯವನ್ನು ರೂಪಿಸಿಕೊಳ್ಳಲು  ಸಾಧ್ಯವಾಗುತ್ತದೆ. ನಮ್ಮ ಎಲ್ಲಾ ಪ್ರಯತ್ನಗಳ ನಡುವೆಯೂ ನೀವು ಸ್ವ-ಹಿತಾಸಕ್ತಿಯ ಮತ್ತು ಮತ ಬ್ಯಾಂಕಿನ ಬಗೆಗೆ ಕಾಳಜಿ ಹೊಂದಿರುವ ಇನ್ನೊಂದು ಮಾದರಿಯನ್ನು ಕಾಣಬಹುದು. ಅವರು ಸರಕಾರವನ್ನು ನಡೆಸುತ್ತಿರುವ ರಾಜ್ಯಗಳಲ್ಲಿ ಬಡವರ ಕಲ್ಯಾಣ ಅವರ ಉದ್ದೇಶವಾಗಿಲ್ಲ, ಬದಲು ಅವರ ಕುಟುಂಬದ ಕಲ್ಯಾಣವೇ ಅವರಿಗೆ ಆದ್ಯತೆಯಾಗಿದೆ. ದೇಶದ ತಜ್ಞರು ರಾಜ್ಯಗಳ ಲಸಿಕಾಕರಣದ ದಾಖಲೆಗಳನ್ನು ನೋಡಬೇಕು ಎಂದು ನಾನು ಅವರನ್ನು ಕೋರಿಕೊಳ್ಳಲು ಇಚ್ಛಿಸುತ್ತೇನೆ. ಅವರ ಲಸಿಕಾಕರಣ ದಾಖಲೆಗಳು ಕೂಡಾ ಅವರು ಅವರ ರಾಜ್ಯಗಳ ಜನತೆಯ ಬಗೆಗೆ  ಕಾಳಜಿ ಹೊಂದಿಲ್ಲದಿರುವುದನ್ನು ತೋರಿಸುತ್ತದೆ.

ಸ್ನೇಹಿತರೇ,

ನಮ್ಮ ಸರಕಾರವು ನಿಮ್ಮ ಪ್ರತಿಯೊಂದು ಆವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಪೂರ್ಣ ಸೂಕ್ಷ್ಮತ್ವದಿಂದ ಮತ್ತು ಎಚ್ಚರಿಕೆಯಿಂದ ನಿರಂತರವಾಗಿ ಕೆಲಸ ಮಾಡುತ್ತಿದೆ. ಈಗ ಸರಕಾರವು ಜನವರಿ 3, ಸೋಮವಾರದಿಂದ 15 ಮತ್ತು 18 ವರ್ಷದೊಳಗಿನ ಮಕ್ಕಳಿಗೆ, ಗಂಡು ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಲಸಿಕೆಯನ್ನು ಹಾಕಲು ನಿರ್ಧರಿಸಿದೆ. ಜನವರಿ 3 ಸೋಮವಾರದಿಂದ ಸಕಲ ಸಿದ್ಧತೆಗಳೊಂದಿಗೆ ಆಂದೋಲನ ಆರಂಭವಾಗಲಿದೆ. ಹಿಮಾಚಲ ಪ್ರದೇಶವು ಆಂದೋಲನದಲ್ಲಿ ಕೂಡಾ ದೊಡ್ಡ ಕೆಲಸವನ್ನು ಮಾಡಲಿದೆ ಎಂಬುದಾಗಿ ನನಗೆ ವಿಶ್ವಾಸವಿದೆ. ಹಿಮಾಚಲವು ದೇಶಕ್ಕೆ ದಿಕ್ಕು ದಿಶೆಗಳನ್ನು ನೀಡುವ ಕೆಲಸವನ್ನು ಮುಂದುವರೆಸಲಿದೆ. ಆರೋಗ್ಯ ವಲಯದಲ್ಲಿರುವ ನಮ್ಮ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕಳೆದ ಎರಡು ವರ್ಷಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಶಕ್ತಿಯಾಗಿ ಉಳಿದಿದ್ದಾರೆ. ಅವರಿಗೂಮುಂಜಾಗರೂಕತಾ ಡೋಸ್ಜನವರಿ 10ರಿಂದ ಆರಂಭಗೊಳ್ಳಲಿದೆ. ಗಂಭೀರ ಖಾಯಿಲೆಗಳಿರುವ, 60 ವರ್ಷಕ್ಕಿಂತ ಹಿರಿಯ ನಾಗರಿಕರಿಗೂ ವೈದ್ಯರ ಸಲಹೆ ಮೇರೆಗೆಮುಂಜಾಗರೂಕತಾ ಡೋಸಿ ಆಯ್ಕೆಯ ಅವಕಾಶವನ್ನು ನೀಡಲಾಗಿದೆ. ಎಲ್ಲಾ ಪ್ರಯತ್ನಗಳು ಹಿಮಾಚಲದ ಜನತೆಗೆ ಭದ್ರತೆಯನ್ನು ನೀಡುವುದಲ್ಲದೆ, ಅವುಗಳು ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಬಹಳ ದೊಡ್ಡ ಸಹಾಯವನ್ನು ಮಾಡಲಿವೆ.

ಸ್ನೇಹಿತರೇ,

ಪ್ರತೀ ದೇಶವು ತನ್ನದೇ ಆದ ವಿಭಿನ್ನ ತಾತ್ವಿಕತೆಯನ್ನು ಹೊಂದಿರುತ್ತದೆ, ಆದರೆ ಇಂದು ನಮ್ಮ ದೇಶದ ಜನತೆ ಬಹಳ ಸ್ಪಷ್ಟವಾಗಿ ಎರಡು ತಾತ್ವಿಕತೆಗಳನ್ನು ಗಮನಿಸುತ್ತಿದ್ದಾರೆ. ಒಂದು ತಾತ್ವಿಕತೆ ಎಂದರೆ ವಿಳಂಬ ಮಾಡುವುದು ಮತ್ತು ಇನ್ನೊಂದು ಅಭಿವೃದ್ಧಿಯದ್ದು. ಆಲಸ್ಯದ ತಾತ್ವಿಕತೆ, ಚಿಂತನೆ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನತೆಯ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ಅದು ಮೂಲಸೌಕರ್ಯ ಇರಲಿ ಅಥವಾ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವುದಿರಲಿ, ವಿಳಂಬ ತಾತ್ವಿಕತೆಗಳು ಹಿಮಾಚಲದ ಜನತೆ ದಶಕಗಳ ಕಾಲ ಕಾಯುವಂತೆ ಮಾಡಿದವು. ಇದರ ಪರಿಣಾಮವಾಗಿ ಅಟಲ್ ಸುರಂಗ ವರ್ಷಗಳ ಕಾಲ ವಿಳಂಬವಾಯಿತು. ರೇಣುಕಾಜೀ ಯೋಜನೆ ಕೂಡಾ ಮೂರು ದಶಕಗಳ ಕಾಲ ವಿಳಂಬಿತಗೊಂಡಿತು. ವಿಳಂಬ ತಾತ್ವಿಕತೆ, ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ನಮ್ಮ ಬದ್ಧತೆ ಎಂದರೆ ಅಭಿವೃದ್ಧಿ ಮಾತ್ರ ಮತ್ತು ತ್ವರಿತ ಬೆಳವಣಿಗೆ. ನಾವು ಅಟಲ್ ಸುರಂಗವನ್ನು ಪೂರ್ಣಗೊಳಿಸಿದೆವು. ನಾವು ಚಂಡೀಗಢದಿಂದ ಮನಾಲಿ ಮತ್ತು ಸಿಮ್ಲಾ ಸಂಪರ್ಕ ರಸ್ತೆಯನ್ನು ಅಗಲ ಮಾಡಿದೆವು. ನಾವು ಹೆದ್ದಾರಿಗಳನ್ನು ಮತ್ತು ರೈಲ್ವೇ ಮೂಲಸೌಕರ್ಯವನ್ನು ಮಾತ್ರ ಅಭಿವೃದ್ಧಿ ಮಾಡುತ್ತಿರುವುದಲ್ಲ, ಜೊತೆಗೆ ಹಲವು ಸ್ಥಳಗಳಲ್ಲಿ ರೋಪ್ ವೇಗಳನ್ನೂ ಸ್ಥಾಪಿಸುತ್ತಿದ್ದೇವೆ. ನಾವು ದುರ್ಗಮ ಹಳ್ಳಿಗಳನ್ನು, ಗ್ರಾಮಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಮೂಲಕ ಜೋಡಿಸುತ್ತಿದ್ದೇವೆ.

ಸ್ನೇಹಿತರೇ,

ಎರಡು ಇಂಜಿನ್ ಗಳ ಸರಕಾರ ಕಳೆದ 6-7 ವರ್ಷಗಳಲ್ಲಿ ನಿರ್ದಿಷ್ಟವಾಗಿ ನಮ್ಮ ಸಹೋದರಿಯರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಮೊದಲು ನಮ್ಮ ಸಹೋದರಿಯರು ಅಡುಗೆಗೆ ಕಟ್ಟಿಗೆಯನ್ನು ಹೊಂದಿಸುವುದಕ್ಕೆ ಬಹಳಷ್ಟು ಸಮಯ ವ್ಯಯ ಮಾಡಬೇಕಾಗಿತ್ತು. ಇಂದು ಅನಿಲ ಸಿಲಿಂಡರುಗಳು ಪ್ರತೀ ಮನೆಯನ್ನು ತಲುಪಿವೆ. ಸಹೋದರಿಯರಿಗೆ ಶೌಚಾಲಯ ಸೌಲಭ್ಯದಿಂದಾಗಿ ಬಹಳಷ್ಟು ನೆರವಾಗಿದೆ. ನೀರಿಗಾಗಿ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಎಷ್ಟೊಂದು ಪರದಾಡಬೇಕಾಗಿತ್ತು ಎಂಬುದನ್ನು ನಿಮಗಿಂತ ಹೆಚ್ಚು  ಬೇರೆ ಯಾರಿಗೆ ತಿಳಿದಿದೆ. ಬರೇ ನೀರಿನ ಸಂಪರ್ಕಕ್ಕಾಗಿ ಸರಕಾರಿ ಕಚೇರಿಗಳಿಗೆ ಅನೇಕ ಬಾರಿ ಹೋಗಬೇಕಾದ, ಅಲೆದಾಡಬೇಕಾದ ಕಾಲವೊಂದಿತ್ತು. ಇಂದು ಸರಕಾರವೇ ನಿಮಗೆ ನೀರಿನ ಸಂಪರ್ಕ ನೀಡಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಸ್ವಾತಂತ್ರ್ಯದ ಏಳು ದಶಕಗಳಲ್ಲಿ ಹಿಮಾಚಲದ ಏಳು ಲಕ್ಷ ಕುಟುಂಬಗಳಿಗೆ ಕೊಳವೆ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಏಳು ಲಕ್ಷ ಕುಟುಂಬಗಳು ಏಳು ದಶಕಗಳಲ್ಲಿ!. ಬರೇ ಎರಡು ವರ್ಷಗಳಲ್ಲಿ ಮತ್ತು ಅದೂ ಕೊರೊನಾ ಅವಧಿಯಲ್ಲಿ ಏಳು ಲಕ್ಷಕ್ಕೂ ಅಧಿಕ ಹೊಸ ಕುಟುಂಬಗಳಿಗೆ ಕೊಳವೆ ಮೂಲಕ ನೀರು ಪೂರೈಸಲಾಗಿದೆ. ಎಷ್ಟು? ಏಳು ಲಕ್ಷ ಏಳು ದಶಕಗಳಲ್ಲಿ! ಏಳು ದಶಕಗಳಲ್ಲಿ ಎಷ್ಟು? ಅಲ್ಲಿಂದ ಧ್ವನಿ ಬರಲಿ? ಏಳು ಲಕ್ಷ ಏಳು ದಶಕಗಳಲ್ಲಿ! ಮತ್ತು ನಾವು ಏಳು ಲಕ್ಷ ಹೊಸ ಸಂಪರ್ಕಗಳನ್ನು ಎರಡು ವರ್ಷಗಳಲ್ಲಿ ನೀಡಿದೆವು. ಎಷ್ಟು?.ಏಳು ಲಕ್ಷ ಮನೆಗಳಿಗೆ ನೀರು ಪೂರೈಕೆ!. ಈಗ 90 ಪ್ರತಿಶತ ಜನಸಂಖ್ಯೆಗೆ ಕೊಳವೆ ಮೂಲಕ ಪೂರೈಕೆಯಾಗುವ ನೀರು ಲಭ್ಯವಾಗುತ್ತಿದೆ. ಇದು ಎರಡು ಇಂಜಿನ್ ಗಳ ಸರಕಾರದಿಂದಾಗುತ್ತಿರುವ ಪ್ರಯೋಜನ. ಕೇಂದ್ರ ಸರಕಾರದ ಒಂದು ಇಂಜಿನ್ ಯೋಜನೆಗಳನ್ನು ಆರಂಭ ಮಾಡುತ್ತದೆ ಮತ್ತು ರಾಜ್ಯ ಸರಕಾರದ ಎರಡನೇ ಇಂಜಿನ್ ಯೋಜನೆಯನ್ನು ಬಹಳ ತ್ವರಿತಗತಿಯಿಂದ ಮುಂದೆ ಕೊಂಡೊಯ್ಯುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಿ. ಯೋಜನೆಯನ್ನು ಮುಂದುವರೆಸಿ ರಾಜ್ಯ ಸರಕಾರವು ಹಿಮ್ ಕೇರ್ ಯೋಜನೆಯನ್ನು ಆರಂಭ ಮಾಡಿತು ಮತ್ತು ಹೆಚ್ಚು ಜನರನ್ನು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ವ್ಯಾಪ್ತಿಯಡಿ ತಂದಿತು. ಹಿಮಾಚಲದ ಸುಮಾರು 1.5 ಲಕ್ಷ ರೋಗಿಗಳು ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಅದೇ ರೀತಿ ಇಲ್ಲಿಯ ಸರ್ಕಾರ ಉಜ್ವಲಾ ಯೋಜನೆಯ ಫಲಾನುಭವಿಗಳನ್ನು ಗೃಹಿಣಿ ಸುವಿಧಾ ಯೋಜನಾ ಮೂಲಕ ಇನ್ನಷ್ಟು ವಿಸ್ತರಿಸಿತು. ಇದರಿಂದ ಮಿಲಿಯಾಂತರ ಸಹೋದರಿಯರಿಗೆ ಪ್ರಯೋಜನಗಳು ದೊರಕಿದವು. ರಾಜ್ಯ ಸರಕಾರವು ಕೇಂದ್ರ ಸರಕಾರದ ಉಚಿತ ಪಡಿತರವನ್ನು ಪ್ರತೀ ಫಲಾನುಭವಿಗಳಿಗೂ ತ್ತ್ವರಿತಗತಿಯಿಂದ ವಿತರಿಸುತ್ತಿದೆ.

ಸ್ನೇಹಿತರೇ,

ಹಿಮಾಚಲವು ಹೀರೋಗಳ ಭೂಮಿ. ಶಿಸ್ತಿನ ಭೂಮಿ ಮತ್ತು ದೇಶದ ವೈಭವ ಹಾಗು ಹೆಮ್ಮೆಯನ್ನು ಎತ್ತರಿಸುವ ನೆಲ. ಹಿಮಾಚಲ ಪ್ರದೇಶದ ಪ್ರತೀ ಮನೆಯಲ್ಲಿಯೂ ದೇಶವನ್ನು ರಕ್ಷಿಸುವ ವೀರ ಪುತ್ರರು ಮತ್ತು ಪುತ್ರಿಯರು ಇದ್ದಾರೆ. ಹಿಮಾಚಲದ ಜನತೆ ಕಳೆದ ಏಳು ವರ್ಷಗಳಲ್ಲಿ ದೇಶದ ಭದ್ರತೆ ಹೆಚ್ಚಿಸುವ ಕುರಿತು ನಮ್ಮ ಸರಕಾರ ಕೈಗೊಂಡ ನಿರ್ಧಾರಗಳಿಂದ ಬಹಳ ಪ್ರಯೋಜನಗಳನ್ನು ಪಡೆದಿದ್ದಾರೆ. ಸೈನಿಕರು ಮತ್ತು ನಿವೃತ್ತ ಸೈನಿಕರಿಗೆ  ಇದರಿಂದ ಪ್ರಯೋಜನಗಳಾಗಿವೆ. ಒಂದು ಶ್ರೇಣಿ ಒಂದು ನಿವೃತ್ತಿ ವೇತನ ನಿರ್ಧಾರ ವಿಳಂಬ ಮಾಡುವ ತಾತ್ವಿಕತೆಯಿಂದಾಗಿ ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಆದುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವುದು ಮತ್ತು ಸೇನೆಗೆ ಗುಂಡು ನಿರೋಧಕ ಜಾಕೆಟ್ ಗಳನ್ನು ಒದಗಿಸುವುದು, ಅಥವಾ ಶೀತ ಪ್ರದೇಶದಲ್ಲಿ ಬಳಲುವ ಸಮಸ್ಯೆಗಳನ್ನು ನಿವಾರಿಸಲು ಅವಶ್ಯ ಸಂಪನ್ಮೂಲಗಳನ್ನು ಒದಗಿಸುವುದು ಅಥವಾ ಸಂಚಾರಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವುದು ಇರಲಿ ಎಲ್ಲಾ ವಲಯಗಳಲ್ಲಿ ಸರಕಾರದ ಪ್ರಯತ್ನಗಳ ಪ್ರಯೋಜನ ಹಿಮಾಚಲದ ಮನೆಮಂದಿಯನ್ನು ತಲುಪುತ್ತಿದೆ.

ಸ್ನೇಹಿತರೇ,

ಪ್ರವಾಸೋದ್ಯಮ ಮತ್ತು ತೀರ್ಥ ಯಾತ್ರೆಗಳು ಅಂತರ್ಸಂಪರ್ಕಿತವಾದಂತಹವು. ತೀರ್ಥ ಯಾತ್ರೆಯಲ್ಲಿ ಹಿಮಾಚಲದ ಸಾಮರ್ಥ್ಯಕ್ಕೆ ಹೋಲಿಕೆ ಇಲ್ಲ. ಇದು ಶಿವ ಮತ್ತು ಶಕ್ತಿಯ ನೆಲೆವೀಡು. ಪಂಚ ಕೈಲಾಸಗಳಲ್ಲಿ ಮೂರು ಹಿಮಾಚಲ ಪ್ರದೇಶದಲ್ಲಿವೆ. ಅದೇ ರೀತಿ ಹಿಮಾಚಲದಲ್ಲಿ ಹಲವು ಶಕ್ತಿ ಪೀಠಗಳಿವೆ. ಬುದ್ಧ ಧರ್ಮದ ನಂಬಿಕೆಯ ಮತ್ತು ಸಂಸ್ಕೃತಿಯ ಪ್ರಮುಖ ಸ್ಥಳವೂ ಇಲ್ಲಿದೆ. ಎರಡು ಇಂಜಿನ್ ಗಳ ಸರಕಾರ ಹಿಮಾಚಲದ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಿದೆ.

ಮಂಡಿಯಲ್ಲಿ ಶೈವಧಾಮದ ನಿರ್ಮಾಣ ಕೂಡಾ ಬದ್ಧತೆಯ ಫಲ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಹಿಮಾಚಲ ಕೂಡಾ ಸಂಪೂರ್ಣ ರಾಜ್ಯ ಸ್ಥಾನ ಮಾನ ಪಡೆದ ಸುವರ್ಣ ಮಹೋತ್ಸವ ಆಚರಣೆಯಲ್ಲಿದೆ. ಹಿಮಾಚಲದ ಹೊಸ ಸಾಧ್ಯತೆಗಳ ನಿಟ್ಟಿನಲ್ಲಿ  ಕೆಲಸ ಮಾಡಲು ಇದು ಸಕಾಲ. ಹಿಮಾಚಲವು ಪ್ರತಿಯೊಂದು ರಾಷ್ಟ್ರೀಯ ನಿರ್ಧಾರಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಉತ್ಸಾಹ ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದೆ. ಮತ್ತೊಮ್ಮೆ ಅಭಿವೃದ್ಧಿ ಮತ್ತು ವಿಶ್ವಾಸದ 5ನೇ ವರ್ಷದ ಶುಭಾಶಯಗಳು ಮತ್ತು ಹೊಸ ವರ್ಷದ ಶುಭಾಶಯಗಳು!. ನಮಗೆ ಇಷ್ಟೊಂದು ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದ ನಿಮಗೆಲ್ಲ ಶುಭಾಶಯಗಳು. ನಾನು ಮತ್ತೊಮ್ಮೆ ದೇವಭೂಮಿಗೆ ನಮಿಸುತ್ತೇನೆ.

ನನ್ನೊಂದಿಗೆ ಹೇಳಿ

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1786479) Visitor Counter : 210