ಪ್ರಧಾನ ಮಂತ್ರಿಯವರ ಕಛೇರಿ

ಕಾನ್ಪುರ ಮೆಟ್ರೋ ರೈಲು ಯೋಜನೆ ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ


ಬಿನಾ-ಪಾನಕಿ ಬಹುಉತ್ಪಾದನಾ ಕೊಳವೆ ಮಾರ್ಗ ಯೋಜನೆ ಉದ್ಘಾಟನೆ

“ಉತ್ತರ ಪ್ರದೇಶದ ಎರಡು ಇಂಜಿನ್ ಗಳ ಸರಕಾರ ಇಂದು ಹಿಂದೆ ನಷ್ಟವಾದ ಸಮಯವನ್ನು ಸರಿಹೊಂದಿಸಲು ಪ್ರಯತ್ನಿಸುತ್ತಿದೆ. ನಾವು ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಿದ್ದೇವೆ”

“ನಮ್ಮ ಸರಕಾರ ಕಾನ್ಪುರ ಮೆಟ್ರೋಗೆ ಶಿಲಾನ್ಯಾಸ ಮಾಡಿತು, ಮತ್ತು ನಮ್ಮ ಸರಕಾರ ಅದನ್ನು ಲೋಕಾರ್ಪಣೆ ಕೂಡಾ ಮಾಡುತ್ತಿದೆ. ನಮ್ಮ ಸರಕಾರ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಿಲಾನ್ಯಾಸ ಮಾಡಿತು, ಮತ್ತು ನಮ್ಮ ಸರಕಾರ ಆ ಕಾಮಗಾರಿಯನ್ನು ಪೂರ್ಣಗೊಳಿಸಿತು”

“ನಾವು ಇಂದು ಕಾನ್ಪುರ ಮೆಟ್ರೋವನ್ನು ಸೇರಿಸಿದರೆ ಉತ್ತರ ಪ್ರದೇಶದಲ್ಲಿ ಮೆಟ್ರೋ ಉದ್ದ ಈಗ 90 ಕಿಲೋ ಮೀಟರ್ ದಾಟಿದೆ. 2014ರಲ್ಲಿ ಇದು 9 ಕಿಲೋ ಮೀಟರ್ ಮತ್ತು 2017ರಲ್ಲಿ 18 ಕಿಲೋ ಮೀಟರ್ ಇತ್ತು”

“ರಾಜ್ಯಗಳ ಮಟ್ಟದಲ್ಲಿ ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕುವುದೂ ಮುಖ್ಯ. ಅದರಿಂದಾಗಿಯೇ ನಮ್ಮ ಸರಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಕಾರ್ಯಾಚರಿಸುತ್ತಿದೆ “

“ಎರಡು ಇಂಜಿನ್ ಗಳ ಸರಕಾರ ದೊಡ್ಡ ಗುರಿಗಳನ್ನು ಹೇಗೆ ನಿಗದಿ ಮಾಡಬೇಕು ಮತ್ತು ಅವುಗಳನ್ನು ಹೇಗೆ ಸಾಧಿಸಬೇಕು ಎಂಬುದನ್ನು ತಿಳಿದಿದೆ”

Posted On: 28 DEC 2021 3:53PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕಾನ್ಪುರ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಅವರು ಕಾನ್ಪುರ ಮೆಟ್ರೋ ರೈಲ್ ಯೋಜನೆಯನ್ನು ಪರಿಶೀಲಿಸಿದರು ಮತ್ತು ಐ.ಐ.ಟಿ. ಮೆಟ್ರೋ ನಿಲ್ದಾಣದಿಂದ ಗೀತಾ ನಗರಕ್ಕೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಅವರು ಬಿನಾ-ಪಾನಕಿ ಬಹು ಉತ್ಪಾದನಾ ಕೊಳವೆ ಮಾರ್ಗ ಯೋಜನೆಯನ್ನೂ ಉದ್ಘಾಟಿಸಿದರು. ಈ ಕೊಳವೆ ಮಾರ್ಗ ಮಧ್ಯಪ್ರದೇಶದ ಬಿನಾ ತೈಲ ಶುದ್ದೀಕರಣಾಗಾರದಿಂದ ಕಾನ್ಪುರದ ಪಾನಕಿವರೆಗೆ ವಿಸ್ತರಿಸಲ್ಪಟ್ಟಿದೆ. ಮತ್ತು ಅದು ಈ ವಲಯಕ್ಕೆ ಬಿನಾ ತೈಲ ಶುದ್ದೀಕರಣಾಗಾರದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಪಡೆಯಲು  ಸಹಾಯ ಮಾಡಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ಶ್ರೀ ಹರದೀಪ್ ಪುರಿ ಈ ಸಂದರ್ಭದಲ್ಲಿ ಹಾಜರಿದ್ದರು.

 

ಪ್ರಧಾನ ಮಂತ್ರಿ ಅವರು ಮೆಟ್ರೋ ಸಂಪರ್ಕಕ್ಕಾಗಿ ಮತ್ತು  ಕೊಳವೆ ಮಾರ್ಗದ ಯೋಜನೆ ಉದ್ಘಾಟನೆಗಾಗಿ ಕಾನ್ಪುರದ ಜನತೆಯನ್ನು ಅಭಿನಂದಿಸಿದರು. ನಗರದ ಜೊತೆ ತಮ್ಮ ದೀರ್ಘಕಾಲದ ಬಾಂಧವ್ಯವನ್ನು ನೆನಪಿಸಿಕೊಂಡು ತಮ್ಮ ಭಾಷಣ ಆರಂಭಿಸಿದ ಅವರು ಅನೇಕ ಸ್ಥಳೀಯ ಸಂಗತಿಗಳನ್ನು ಪ್ರಸ್ತಾಪಿಸಿದರು ಹಾಗು ಕಾನ್ಪುರದ ಜನತೆಯ ವಿನೋದಪ್ರಿಯತೆಯನ್ನೂ ಉಲ್ಲೇಖಿಸಿದರು. ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮತ್ತು ಸುಂದರ್ ಸಿಂಗ್ ಭಂಡಾರಿ ಅವರಂತಹ ದಿಗ್ಗಜರನ್ನು ರೂಪಿಸುವಲ್ಲಿ ನಗರದ ಪಾತ್ರವನ್ನೂ ಅವರು ಪ್ರಸ್ತಾಪಿಸಿದರು. ಇಂದಿನ ದಿನ ಮಂಗಳವಾರವಾಗಿರುವುದನ್ನು ಉಲ್ಲೇಖಿಸಿದ ಅವರು ಪಾನ್ಕಿ ವಾಲೇ ಹನುಮಾನ್ ಜೀ ಆಶೀರ್ವಾದದಿಂದ ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ಇನ್ನೊಂದು ಸುವರ್ಣ ಅಧ್ಯಾಯ ಆರಂಭವಾಗಲಿದೆ ಎಂದರು.  “ಉತ್ತರ ಪ್ರದೇಶದ ಎರಡು ಇಂಜಿನ್ ಗಳ ಸರಕಾರ ಇಂದು ಈ ಹಿಂದೆ ವ್ಯರ್ಥವಾದ ಸಮಯವನ್ನು ಸರಿಹೊಂದಿಸಲು ಪ್ರಯತ್ನಪಡುತ್ತಿದೆ. ನಾವು ದುಪ್ಪಟ್ಟು ವೇಗದಿಂದ ಕೆಲಸ ಮಾಡುತ್ತಿದ್ದೇವೆ” ಎಂದವರು ಹೇಳಿದರು.

 

ಉತ್ತರ ಪ್ರದೇಶ ರಾಜ್ಯದ ಪ್ರತಿಷ್ಠೆಗೆ ಸಂಬಂಧಿಸಿ ಆಗಿರುವ ಬದಲಾವಣೆಗಳನ್ನು ಪ್ರಧಾನ ಮಂತ್ರಿ ಅವರು ಪ್ರಸ್ತಾಪಿಸಿದರು. ಒಂದು ಕಾಲದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳಿಗೆ ಹೆಸರಾಗಿದ್ದ ರಾಜ್ಯ ಈಗ ರಕ್ಷಣಾ ಕಾರಿಡಾರ್ ಆಗಿದೆ ಮತ್ತು ದೇಶದ ಸುರಕ್ಷೆ ಹಾಗು ಭದ್ರತೆಗೆ ಕೊಡುಗೆ ನೀಡುತ್ತಿದೆ ಎಂದವರು ಹೇಳಿದರು. ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸುವ ಕೆಲಸದ ಸಂಸ್ಕೃತಿಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಅವರು ಎರಡು ಇಂಜಿನ್ ಗಳ ಸರಕಾರಗಳು ಶಿಲಾನ್ಯಾಸ ಮಾಡಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿವೆ ಎಂದರು. “ನಮ್ಮ ಸರಕಾರ ಕಾನ್ಪುರ ಮೆಟ್ರೋಗೆ ಶಿಲಾನ್ಯಾಸ ಮಾಡಿತು, ನಮ್ಮ ಸರಕಾರ ಅದನ್ನು ಲೋಕಾರ್ಪಣೆ ಕೂಡಾ ಮಾಡುತ್ತಿದೆ. ನಮ್ಮ ಸರಕಾರ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಿಲಾನ್ಯಾಸ ಮಾಡಿತು, ನಮ್ಮ ಸರಕಾರ ಆ ಕಾಮಗಾರಿಯನ್ನು ಪೂರ್ಣಗೊಳಿಸಿತು”, ಎಂದೂ ಶ್ರೀ ಮೋದಿ ಸ್ಪಷ್ಟಪಡಿಸಿದರು. ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿರುವ ಬೃಹತ್  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಅತ್ಯಂತ ಉದ್ದದ ಎಕ್ಸ್ ಪ್ರೆಸ್ ವೇ ರಾಜ್ಯದಲ್ಲಿ ನಿರ್ಮಾಣ ಆಗುತ್ತಿರುವುದು ಮತ್ತು ಸರಕು ಸಾಗಾಣಿಕೆಗಾಗಿಯೇ ಇರುವ ಪ್ರತ್ಯೇಕ ಕಾರಿಡಾರ್ ಗಳು ಉತ್ತರ ಪ್ರದೇಶದಲ್ಲಿ ಬರುತ್ತಿರುವುದನ್ನು ಅವರು ಪಟ್ಟಿ ಮಾಡಿದರು.

 

2014 ಕ್ಕೆ ಮೊದಲು ಉತ್ತರ ಪ್ರದೇಶದಲ್ಲಿ ಒಟ್ಟು 9 ಕಿಲೋ ಮೀಟರ್ ಮೆಟ್ರೊ ಓಡುತ್ತಿತ್ತು. 2014ರಿಂದ 2017ರ ನಡುವೆ ಮೆಟ್ರೋ ಉದ್ದ ಒಟ್ಟು 18 ಕಿಲೋ ಮೀಟರ್ ಹೆಚ್ಚಿತು. ನಾವು ಇಂದು ಕಾನ್ಪುರ ಮೆಟ್ರೋವನ್ನು ಸೇರಿಸಿದರೆ ರಾಜ್ಯದಲ್ಲಿ ಮೆಟ್ರೋ ಉದ್ದ ಈಗ 90 ಕಿಲೋ ಮೀಟರ್ ದಾಟಿದೆ ಎಂದವರು ಹೇಳಿದರು.

 

ಈ ಹಿಂದಿನ ಅಸಮರ್ಪಕ ಅಭಿವೃದ್ಧಿಯ ಬಗ್ಗೆ ಗಮನ ಸೆಳೆದ ಪ್ರಧಾನ ಮಂತ್ರಿ ಅವರು ದಶಕಗಳಿಂದ ಒಂದು ಭಾಗ ಅಭಿವೃದ್ಧಿ ಮಾಡಿದರೆ, ಇನ್ನೊಂದು ಭಾಗ ಹಿಂದುಳಿಯುತ್ತದೆ ಎಂದರು. “ರಾಜ್ಯಗಳ ಮಟ್ಟದಲ್ಲಿ ಸಮಾಜದಲ್ಲಿರುವ ಈ ಅಸಮಾನತೆಯನ್ನು ತೊಡೆದು ಹಾಕುವುದೂ ಅಷ್ಟೇ ಮುಖ್ಯ.  ಅದರಿಂದಾಗಿಯೇ ನಮ್ಮ ಸರಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಕಾರ್ಯಾಚರಿಸುತ್ತಿದೆ “ ಎಂಬುದನ್ನವರು ಒತ್ತಿ ಹೇಳಿದರು. ರಾಜ್ಯದ ಅವಶ್ಯಕತೆಗಳನ್ನು ಅರ್ಥೈಸಿಕೊಂಡು ಎರಡು ಇಂಜಿನ್ ಗಳ ಸರಕಾರ ದೃಢವಾದ ಕೆಲಸಗಳನ್ನು ಮಾಡುತ್ತಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು. ಮೊದಲು ಉತ್ತರ ಪ್ರದೇಶದ ಕೋಟ್ಯಾಂತರ ಮನೆಗಳಿಗೆ ಕೊಳವೆ ಮೂಲಕ ನೀರು ಲಭ್ಯ ಇರಲಿಲ್ಲ. ಇಂದು ನಾವು ಉತ್ತರ ಪ್ರದೇಶದ ಪ್ರತೀ ಮನೆಗೂ ಹರ್ ಘರ್ ಜಲ್ ಮಿಷನ್ ಮೂಲಕ ಸ್ವಚ್ಛ ನೀರು ಒದಗಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ” ಎಂದೂ ಪ್ರಧಾನ ಮಂತ್ರಿ ನುಡಿದರು.

 

ಉತ್ತರ ಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಎರಡು ಇಂಜಿನ್ ಗಳ ಸರಕಾರ ಪ್ರಾಮಾಣಿಕವಾಗಿ ಮತ್ತು ಉತ್ತರದಾಯಿತ್ವದೊದಿಗೆ ಕೆಲಸ ಮಾಡುತ್ತಿದೆ.ಎರಡು ಇಂಜಿನ್ ಗಳ ಸರಕಾರ ದೊಡ್ಡ ಗುರಿಗಳನ್ನು ಹೇಗೆ ನಿಗದಿ ಮಾಡಬೇಕು ಮತ್ತು ಅವುಗಳನ್ನು ಹೇಗೆ ಸಾಧಿಸಬೇಕು ಎಂಬುದನ್ನು ತಿಳಿದುಕೊಂಡಿದೆ ಎಂದ ಅವರು ವಿದ್ಯುತ್ ಸರಬರಾಜು, ವಿದ್ಯುತ್ ಸ್ಥಿತಿಗತಿ, ನಗರಗಳಲ್ಲಿ ಮತ್ತು ನದಿಗಳಲ್ಲಿ ಸ್ವಚ್ಛತೆ ಸುಧಾರಣೆಯ ಉದಾಹರಣೆಗಳನ್ನು ನೀಡಿದರು. 2014ರಲ್ಲಿ ನಗರ ಬಡವರಿಗೆ ಬರೇ 2.5 ಲಕ್ಷ ಮನೆಗಳಿದ್ದುದನ್ನು ಕಳೆದ ನಾಲ್ಕುವರೆ ವರ್ಷಗಳಲ್ಲಿ 17 ಲಕ್ಷ ಮನೆಗಳಿಗೆ ಮಂಜೂರಾತಿ ಮಾಡಿದುದನ್ನು ಅವರು ತುಲನೆ ಮಾಡಿದರು. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಇದೇ ಮೊದಲ ಬಾರಿಗೆ ಸರಕಾರದ ಗಮನ ಹರಿದಿದೆ ಮತ್ತು ಪ್ರಧಾನ ಮಂತ್ರಿ ಸ್ವನಿಧಿ ಯೋಜನಾ ಮೂಲಕ ರಾಜ್ಯದಲ್ಲಿ 7 ಲಕ್ಷಕ್ಕೂ ಹೆಚ್ಚು ಜನರಿಗೆ  700 ಕೋ.ರೂ.ಗಳಷ್ಟು ಹಣಕಾಸು ನೆರವು ಲಭಿಸಿದೆ . ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಸರಕಾರ ರಾಜ್ಯದ 15 ಕೋಟಿಗೂ ಅಧಿಕ ನಾಗರಿಕರಿಗೆ ಉಚಿತ ಪಡಿತರ ವ್ಯವಸ್ಥೆ ಮಾಡಿದೆ. 2014ರಲ್ಲಿ ದೇಶದಲ್ಲಿ ಬರೇ 14 ಕೋಟಿ ಎಲ್.ಪಿ.ಜಿ. ಸಂಪರ್ಕಗಳು ಇದ್ದವು. ಈಗ 30 ಕೋಟಿಗೂ ಅಧಿಕವಿವೆ. ಉತ್ತರ ಪ್ರದೇಶದಲ್ಲಿಯೇ 1.60 ಕೋಟಿ ಕುಟುಂಬಗಳು ಹೊಸ ಎಲ್.ಪಿ.ಜಿ. ಸಂಪರ್ಕ ಪಡೆದಿವೆ.

 

ಕಾನೂನು ಸುವ್ಯವಸ್ಥೆ ಸುಧಾರಿಸಿರುವುದನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಯೋಗೀ ಸರಕಾರ ಮಾಫಿಯಾ ಸಂಸ್ಕೃತಿಯನ್ನು ತೊಡೆದು ಹಾಕಿರುವುದರಿಂದ ಉತ್ತರ ಪ್ರದೇಶದಲ್ಲಿ ಹೂಡಿಕೆಯಲ್ಲಿ ಹೆಚ್ಚಳವಾಗಿದೆ ಎಂದರು. ವ್ಯಾಪಾರೋದ್ಯಮ ಮತ್ತು ಕೈಗಾರಿಕಾ ಸಂಸ್ಕೃತಿಯನ್ನು ಉತ್ತೇಜಿಸಲು ಸರಕಾರವು ಕಾನ್ಪುರ ಮತ್ತು ಫಜಲ್ಗಂಜ್ ನಲ್ಲಿ ಬೃಹತ್ ಚರ್ಮೋದ್ಯಮ ಗುಚ್ಛಕ್ಕೆ ಅನುಮೋದನೆ ನೀಡಿದೆ. ರಕ್ಷಣಾ ಕಾರಿಡಾರ್ ಮತ್ತು ಒಂದು ಜಿಲ್ಲೆ ಒಂದು ಉತ್ಪನ್ನದಂತಹ ಯೋಜನೆಗಳಿಂದ ಕಾನ್ಪುರದ ಉದ್ಯಮಿಗಳಿಗೆ, ವ್ಯಾಪಾರೋದ್ಯಮಿಗಳಿಗೆ ಲಾಭವಾಗಲಿದೆ ಎಂದವರು ನುಡಿದರು. ಕ್ರಿಮಿನಲ್ ಗಳು ಕಾನೂನಿನ ಭಯದಿಂದ ಹಿಂದೆ ಸರಿದಿದ್ದಾರೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. ಇತ್ತೀಚೆಗೆ ಅಧಿಕೃತ ದಾಳಿಗಳ ಮೂಲಕ ಅಕ್ರಮ ಸಂಪತ್ತನ್ನು ಪತ್ತೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ ಅವರು ಇಂತಹ ಕೆಲಸದ ಸಂಸ್ಕೃತಿಯನ್ನು ಜನರು ನೋಡುತ್ತಿದ್ದಾರೆ ಎಂದೂ ಹೇಳಿದರು.

 

****



(Release ID: 1786007) Visitor Counter : 199