ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ಎಐಐಎಂಎಸ್, ರಸಗೊಬ್ಬರ ಉತ್ಪಾದನಾ ಘಟಕ ಮತ್ತು ಐಸಿಎಂಆರ್ ಕೇಂದ್ರ  ಉದ್ಘಾಟನೆ

ಡಬಲ್ ಇಂಜಿನ್ ಸರ್ಕಾರವು ಅಭಿವೃದ್ಧಿ ಕಾರ್ಯಗಳ ವೇಗವನ್ನು ದ್ವಿಗುಣಗೊಳಿಸುತ್ತದೆ: ಪ್ರಧಾನಿ

"ವಂಚಿತರು ಮತ್ತು ಶೋಷಿತರ ಬಗ್ಗೆ ಯೋಚಿಸುವ ಸರ್ಕಾರವು ಕಠಿಣ ಪರಿಶ್ರಮ ಪಡುತ್ತದೆ ಮತ್ತು ಫಲಿತಾಂಶಗಳನ್ನು ಪಡೆಯುತ್ತದೆ"

"ಇಂದಿನ ಕಾರ್ಯಕ್ರಮವು ಯಾವುದೂ ಅಸಾಧ್ಯವಲ್ಲದ ನವ ಭಾರತದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ"

ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಮಾಡಿದ ಕೆಲಸಕ್ಕೆ ಪ್ರಧಾನಿ ಶ್ಲಾಘನೆ

Posted On: 07 DEC 2021 4:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಎಐಐಎಂಎಸ್ ಮತ್ತು ರಸಗೊಬ್ಬರ ಘಟಕ ಹಾಗೂ ಗೋರಖ್ಪುರದಲ್ಲಿ ಐಸಿಎಂಆರ್ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಗಾಗಿ ಉತ್ತರ ಪ್ರದೇಶದ ಜನರನ್ನು ಪ್ರಧಾನಿ ಅಭಿನಂದಿಸಿದರು. 5 ವರ್ಷಗಳ ಹಿಂದೆ ಎಐಐಎಂಎಸ್ ಮತ್ತು ರಸಗೊಬ್ಬರ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದ ಅವರು ಇಂದು ಎರಡನ್ನೂ ಉದ್ಘಾಟಿಸಿದರು. ಒಮ್ಮೆ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸುವ ಸರ್ಕಾರದ ಕಾರ್ಯಶೈಲಿಯನ್ನು ಪ್ರಧಾನಿ ಒತ್ತಿ ಹೇಳಿದರು.

ಡಬಲ್ ಇಂಜಿನ್ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ವೇಗವೂ ದ್ವಿಗುಣಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು. ಸದುದ್ದೇಶದಿಂದ ಕೆಲಸ ಮಾಡಿದಾಗ ಯಾವುದೇ ವಿಪತ್ತುಗಳೂ ಅಡ್ಡಿಯಾಗಲಾರವು. ಬಡವರು, ದುರ್ಬಲರು ಮತ್ತು ಹಿಂದುಳಿದವರ ಬಗ್ಗೆ ಕಾಳಜಿ ವಹಿಸುವ ಸರ್ಕಾರವಿದ್ದಾಗ, ಅದು ಕಷ್ಟಪಟ್ಟು ಕೆಲಸ ಮಾಡುತ್ತದೆ ಮತ್ತು ಫಲಿತಾಂಶಗಳನ್ನು ತೋರಿಸುತ್ತದೆ ಎಂದರು. ನವ ಭಾರತವು ಸಂಕಲ್ಪ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಮೂರು ಹಂತದ ವಿಧಾನದಲ್ಲಿ, ಶೇ.100 ರಷ್ಟು ಬೇವಿನ ಲೇಪನದ ಯೂರಿಯಾವನ್ನು ಪರಿಚಯಿಸುವ ಮೂಲಕ ಸರ್ಕಾರವು ಯೂರಿಯಾದ ದುರ್ಬಳಕೆಯನ್ನು ತಡೆದಿದೆ ಎಂದು ಪ್ರಧಾನಿ ಹೇಳಿದರು. ಕೋಟ್ಯಂತರ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಇದರಿಂದ ಅವರ ಜಮೀನಿಗೆ ಯಾವ ರೀತಿಯ ಗೊಬ್ಬರ ಬೇಕು ಎಂದು ನಿರ್ಧರಿಸಬಹುದು ಎಂದು ಹೇಳಿದರು. ಯೂರಿಯಾ ಉತ್ಪಾದನೆ ಹೆಚ್ಚಿಸಲು ಸರ್ಕಾರ ಒತ್ತು ನೀಡಿದೆ. ಉತ್ಪಾದನೆಯನ್ನು ಹೆಚ್ಚಿಸಲು ಮುಚ್ಚಿದ ರಸಗೊಬ್ಬರ ಘಟಕಗಳನ್ನು ಮತ್ತೆ ತೆರೆಯಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ 5 ರಸಗೊಬ್ಬರ ಘಟಕಗಳು ಪೂರ್ಣಗೊಂಡರೆ, ದೇಶದಲ್ಲಿ 60 ಲಕ್ಷ ಟನ್ ಯೂರಿಯಾ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಗಾರರಿಗಾಗಿ ಮಾಡಿದ ಅಭೂತಪೂರ್ವ ಕೆಲಸಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ಪ್ರಧಾನಿ ಶ್ಲಾಘಿಸಿದರು. ಸರ್ಕಾರವು ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆಯನ್ನು ಇತ್ತೀಚೆಗೆ 300 ರೂ.ವರೆಗೆ ಹೆಚ್ಚಿಸಿದೆ ಮತ್ತು ಹಿಂದಿನ ಸರ್ಕಾರಗಳು ಕಳೆದ 10 ವರ್ಷಗಳಲ್ಲಿ ಕಬ್ಬು ರೈತರಿಗೆ ಪಾವತಿಸಿದಷ್ಟೇ ಹಣವನ್ನು ಈಗ ನೀಡಲಾಗಿದೆ ಎಂದು ಅವರು ಶ್ಲಾಘಿಸಿದರು.

ಸ್ವಾತಂತ್ರ್ಯದ ನಂತರ ಶತಮಾನದ ಆರಂಭದವರೆಗೂ ದೇಶದಲ್ಲಿ ಒಂದೇ ಒಂದು ಎಐಐಎಂಎಸ್ ಇತ್ತು ಎಂದು ಪ್ರಧಾನಿ ಹೇಳಿದರು. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ 6 ಏಮ್ಸ್ಗೆ ಅನುಮೋದನೆ ನೀಡಿದ್ದರು. ಕಳೆದ 7 ವರ್ಷಗಳಲ್ಲಿ 16 ಹೊಸ ಏಮ್ಸ್ಗಳನ್ನು ನಿರ್ಮಿಸುವ ಕೆಲಸ ದೇಶಾದ್ಯಂತ ನಡೆಯುತ್ತಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಇರಬೇಕು ಎಂಬುದು ತಮ್ಮ ಸರ್ಕಾರದ ಗುರಿ ಎಂದು ಅವರು ಘೋಷಿಸಿದರು.

ಪ್ರದೇಶದ ರೈತರಿಗೆ ರಸಗೊಬ್ಬರ ಮತ್ತು ಉದ್ಯೋಗವನ್ನು ಒದಗಿಸುವಲ್ಲಿ ಗೋರಖ್ಪುರದ ರಸಗೊಬ್ಬರ ಘಟಕದ ಮಹತ್ವ ಎಲ್ಲರಿಗೂ ತಿಳಿದಿದೆ ಎಂದು ಪ್ರಧಾನಿ ಹೇಳಿದರು. ಘಟಕದ  ಮಹತ್ವ ತಿಳಿದಿದ್ದರೂ ಹಿಂದಿನ ಸರಕಾರಗಳು ಪುನರಾರಂಭಿಸಲು ಆಸಕ್ತಿ ತೋರಿಸಲಿಲ್ಲ ಎಂದರು. ಗೋರಖ್ಪುರದಲ್ಲಿ ಎಐಐಎಂಎಸ್ಗಾಗಿ ಹಲವು ವರ್ಷಗಳಿಂದ ಬೇಡಿಕೆ ಇರುವುದು ಎಲ್ಲರಿಗೂ ತಿಳಿದಿತ್ತು. ಆದರೆ 2017 ಮೊದಲು ಸರ್ಕಾರವನ್ನು ನಡೆಸುತ್ತಿದ್ದವರು ಗೋರಖ್ಪುರದಲ್ಲಿ ಏಮ್ಸ್ ನಿರ್ಮಾಣಕ್ಕೆ ಭೂಮಿ ನೀಡದೆ ಇರಲು ಎಲ್ಲಾ ರೀತಿಯ ಸಮರ್ಥನೆಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದರು.   ಪ್ರದೇಶದಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳಲ್ಲಿ ತೀವ್ರ ಇಳಿಕೆ ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಬೆಳವಣಿಗೆಯನ್ನು ಪ್ರಧಾನಿ ಗಮನಿಸಿದರು. ಏಮ್ಸ್ ಮತ್ತು ಐಸಿಎಂಆರ್ ಕೇಂದ್ರದೊಂದಿಗೆ ಜಪಾನೀಸ್ ಎನ್ಸೆಫಾಲಿಟಿಸ್ ವಿರುದ್ಧದ ಹೋರಾಟವು ಹೊಸ ಶಕ್ತಿಯನ್ನು ಪಡೆಯುತ್ತದೆ ಎಂದು ಅವರು ಹೇಳಿದರು.

ಅಧಿಕಾರದ ಪ್ರದರ್ಶನ, ಅಧಿಕಾರ ರಾಜಕಾರಣ, ಹಗರಣಗಳು ಮತ್ತು ಮಾಫಿಯಾಗಳು ಹಿಂದೆ ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡಿದ್ದವು ಎಂದು ಪ್ರಧಾನಿ ಟೀಕಿಸಿದರು. ಇಂತಹ ಶಕ್ತಿಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದರು.

ಇಂದು ನಮ್ಮ ಸರ್ಕಾರ ಬಡವರಿಗಾಗಿ ಸರ್ಕಾರಿ ಗೋಡೌನ್ಗಳನ್ನು ತೆರೆದಿದೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯವರು  ಪ್ರತಿ ಮನೆಗೆ ಆಹಾರವನ್ನು ತಲುಪಿಸುವಲ್ಲಿ ನಿರತರಾಗಿದ್ದಾರೆ. ಉತ್ತರ ಪ್ರದೇಶದ ಸುಮಾರು 15 ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತೀಚೆಗೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಹೋಳಿಯ ನಂತರಕ್ಕೂ ವಿಸ್ತರಿಸಲಾಗಿದೆ. ಹಿಂದಿನ ಸರ್ಕಾರಗಳು ಕ್ರಿಮಿನಲ್ಗಳಿಗೆ ರಕ್ಷಣೆ ನೀಡುವ ಮೂಲಕ ಉತ್ತರ ಪ್ರದೇಶದ ಹೆಸರನ್ನು ಕೆಡಿಸಿದ್ದವು. ಇಂದು ಮಾಫಿಯಾ ಜೈಲಿನಲ್ಲಿದೆ ಮತ್ತು ಹೂಡಿಕೆದಾರರು ರಾಜ್ಯದಲ್ಲಿ ಮುಕ್ತವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಡಬಲ್ ಎಂಜಿನ್ ಡಬಲ್ ಅಭಿವೃದ್ಧಿಯಾಗಿದೆ. ಅದಕ್ಕಾಗಿಯೇ ಉತ್ತರ ಪ್ರದೇಶ ಡಬಲ್ ಎಂಜಿನ್ ಸರ್ಕಾರದಲ್ಲಿ ನಂಬಿಕೆ ಹೊಂದಿದೆ ಎಂದು ಪ್ರಧಾನಿ ಹೇಳಿದರು.

***


(Release ID: 1778937) Visitor Counter : 222