ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

39ನೇ ʻಪ್ರಗತಿʼ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ

Posted On: 24 NOV 2021 7:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಸಿಟಿ ಆಧಾರಿತ, ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ ಉದ್ದೇಶಿದ, ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಒಳಗೊಂಡ  ʻಪ್ರಗತಿʼ ಬಹು ಮಾದರಿ ವೇದಿಕೆಯ 39ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ, ಎಂಟು ಯೋಜನೆಗಳು ಮತ್ತು ಒಂದು ಕಾರ್ಯಕ್ರಮ ಸೇರಿದಂತೆ ಒಂಬತ್ತು ಕಾರ್ಯಸೂಚಿ ಅಂಶಗಳನ್ನು ಪರಿಶೀಲನೆ ನಡೆಸಲಾಯಿತು. ಎಂಟು ಯೋಜನೆಗಳಲ್ಲಿ ಮೂರು ಯೋಜನೆಗಳು ರೈಲ್ವೆ ಸಚಿವಾಲಯಕ್ಕೆ ಸೇರಿದವು, ತಲಾ ಎರಡು ಯೋಜನೆಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ವಿದ್ಯುತ್ ಸಚಿವಾಲಯಕ್ಕೆ ಸೇರಿದಂಥವು. ಮತ್ತು ಒಂದು ಯೋಜನೆಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಸೇರಿದ್ದಾಗಿತ್ತು. ಸುಮಾರು 20,000 ಕೋಟಿ ರೂ.ಗಳ ಸಂಚಿತ ವೆಚ್ಚವನ್ನು ಹೊಂದಿರುವ ಎಂಟು ಯೋಜನೆಗಳು ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಏಳು ರಾಜ್ಯಗಳಿಗೆ ಸಂಬಂಧಿಸಿವೆ. ವೆಚ್ಚದ ಹೊರೆ ಹೆಚ್ಚಾಗುವುದನ್ನು ತಪ್ಪಿಸಲು ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು.

ಸಂವಾದದ ವೇಳೆ ಪ್ರಧಾನಮಂತ್ರಿಯವರು ʻಪೋಷಣ್‌ʼ ಅಭಿಯಾನದ ಬಗ್ಗೆಯೂ ಪರಿಶೀಲಿಸಿದರು. ʻಪೋಷಣ್ʼ ಅಭಿಯಾನವನ್ನು ಪ್ರತಿ ರಾಜ್ಯದಲ್ಲಿ ಸಮರೋಪಾದಿಯಲ್ಲಿ, ಸರಕಾರದ ಪರಿಪೂರ್ಣ ತೊಡಗಿಸಿಕೊಳ್ಳುವಿಕೆಯೊಂದಿಗೆ ಜಾರಿಗೆ ತರಬೇಕು ಎಂದು ಪ್ರಧಾನಿ ಹೇಳಿದರು. ತಳಮಟ್ಟದಲ್ಲಿ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸ್ವಸಹಾಯ ಗುಂಪುಗಳು (ಸ್ವಸಹಾಯ ಸಂಘಗಳು) ಮತ್ತು ಇತರ ಸ್ಥಳೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಅವರು ಮಾತನಾಡಿದರು. ಇದು ಅಭಿಯಾನವನ್ನು ಸುಧಾರಿಸಲು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.

ʻಪ್ರಗತಿʼ ಸಭೆಗಳ ಹಿಂದಿನ 38 ಆವೃತ್ತಿಗಳಲ್ಲಿ, ಒಟ್ಟು 14.64 ಲಕ್ಷ ಕೋಟಿ ರೂ. ವೆಚ್ಚದ 303 ಯೋಜನೆಗಳನ್ನು ಪರಿಶೀಲಿಸಲನೆಗೆ ಒಳಪಡಿಸಲಾಗಿದೆ.

***


(Release ID: 1774981) Visitor Counter : 238