ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 25ರಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಸಂಪರ್ಕಜಾಲವನ್ನು ವಿಸ್ತರಿಸುವ ಮತ್ತು ಭವಿಷ್ಯ ಸನ್ನದ್ಧ ವಾಯುಯಾನ ವಲಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ವಿಮಾನ ನಿಲ್ದಾಣ ನಿರ್ಮಾಣ

ಐದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯವಾಗಿ ಉತ್ತರ ಪ್ರದೇಶಕ್ಕೆ ಹೆಗ್ಗಳಿಕೆ

2024ರ ವೇಳೆಗೆ ಮೊದಲ ಹಂತದ ಕೆಲಸ ಪೂರ್ಣಗೊಳ್ಳಲಿದೆ

ಭಾರತದಲ್ಲಿ ಇದೇ ಮೊದಲ ಬಾರಿಗೆ, ವಿಮಾನ ನಿಲ್ದಾಣವೊಂದನ್ನು ಸಮಗ್ರ ಬಹು ಮಾದರಿ ಸರಕು ಕೇಂದ್ರದ ಪರಿಕಲ್ಪನೆಯೊಂದಿಗೆ ನಿರ್ಮಿಸಲಾಗುತ್ತಿದೆ

ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು-ಸಾಗಣೆ ಮಹಾದ್ವಾರವಾಗಲಿದೆ ಮತ್ತು ಜಾಗತಿಕ ಸರಕು-ಸಾಗಣೆ ನಕ್ಷೆಯಲ್ಲಿ ಉತ್ತರ ಪ್ರದೇಶಕ್ಕೆ ಸ್ಥಾನ ಕಲ್ಪಿಸಲು ಸಹಾಯಕವಾಗಲಿದೆ

ಕೈಗಾರಿಕಾ ಉತ್ಪನ್ನಗಳ ತಡೆರಹಿತ ಸಾಗಣೆಯನ್ನು ಸುಗಮಗೊಳಿಸುವ ಮೂಲಕ, ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ತ್ವರಿತ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ

ವಿಮಾನ ನಿಲ್ದಾಣದ ಪ್ರಮುಖ ವೈಶಿಷ್ಟ್ಯ: ಬಹು ಮಾದರಿ ತಡೆರಹಿತ ಸಂಪರ್ಕ

ಇದು ಭಾರತದ ಮೊಟ್ಟ ಮೊದಲ ನಿವ್ವಳ ಶೂನ್ಯ ಮಾಲಿನ್ಯ ಹೊರಸೂಸುವಿಕೆ ವಿಮಾನ ನಿಲ್ದಾಣವಾಗಲಿದೆ

Posted On: 23 NOV 2021 9:29AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ನವೆಂಬರ್ 25ರಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೆವಾರ್‌ನಲ್ಲಿ ʻನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼಕ್ಕೆ (ಎನ್‌ಐಎ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆಇದರೊಂದಿಗೆ ಉತ್ತರ ಪ್ರದೇಶವು ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯವೆಂಬ ಹೆಗ್ಗಳಿಕೆ ಪಡೆಯಲಿದೆ.

ದೇಶದಲ್ಲಿ ಸಂಪರ್ಕಜಾಲವನ್ನು ವಿಸ್ತರಿಸುವ ಮತ್ತು ಭವಿಷ್ಯ ಸನ್ನದ್ಧ ವಾಯುಯಾನ ವಲಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ. ಇತ್ತೀಚೆಗೆ ಉದ್ಘಾಟನೆಗೊಂಡ ಕುಶಿನಗರ ವಿಮಾನ ನಿಲ್ದಾಣ ಮತ್ತು ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಾಕ್ಷಿಯಾಗಿರುವ ಉತ್ತರ ಪ್ರದೇಶದ ಮೇಲೆ ಪ್ರಧಾನಿ ಅವರ ದೂರದೃಷ್ಟಿಯ ವಿಚಾರದಲ್ಲಿ ವಿಶೇಷ ಗಮನ ಹರಿಸಲಾಗಿದೆ.

ವಿಮಾನ ನಿಲ್ದಾಣವು ದೆಹಲಿ ಎನ್‌ಸಿಆರ್‌ನಲ್ಲಿ ಬರುವ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಇದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಮಾನ ನಿಲ್ದಾಣದ ಜಾಗವು ವ್ಯೂಹಾತ್ಮಕವಾಗಿ ನೆಲೆಗೊಂಡಿದ್ದು ದೆಹಲಿ, ನೋಯ್ಡಾ, ಗಾಜಿಯಾಬಾದ್, ಅಲಿಗಢ, ಆಗ್ರಾ, ಫರಿದಾಬಾದ್ ನಗರಗಳು ಮತ್ತು ನೆರೆಯ ಪ್ರದೇಶಗಳ ಜನರಿಗೆ ಸೇವೆ ಒದಗಿಸಲಿದೆ.

ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು-ಸಾಗಣೆಯ ಮಹಾದ್ವಾರವಾಗಲಿದೆ. ಅದರ ಪ್ರಮಾಣ ಮತ್ತು ಸಾಮರ್ಥ್ಯದಿಂದಾಗಿ, ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಪಾಲಿಗೆ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದು ಉತ್ತರ ಪ್ರದೇಶದ ಶಕ್ತಿ-ಸಾಮರ್ಥ್ಯವನ್ನು ಜಗತ್ತಿಗೆ ಅನಾವರಣಗೊಳಿಸಲಿದೆ ಮತ್ತು ಜಾಗತಿಕ ಸರಕು-ಸಾಗಣೆ ನಕ್ಷೆಯಲ್ಲಿ ರಾಜ್ಯಕ್ಕೆ ಸ್ಥಾನ ಕಲ್ಪಿಸಲು ಸಹಾಯ ಮಾಡಲಿದೆ. ಮೊದಲ ಬಾರಿಗೆ, ಭಾರತದ ವಿಮಾನ ನಿಲ್ದಾಣವನ್ನು ಸಮಗ್ರ ಬಹು ಮಾದರಿ ಸರಕು ಕೇಂದ್ರದ ಪರಿಕಲ್ಪನೆಯೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದರ ಮೂಲಕ ಸರಕು-ಸಾಗಣೆಯ  ಒಟ್ಟಾರೆ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ವಿಶೇಷ ಕಾರ್ಗೋ ಟರ್ಮಿನಲ್ 20 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹೊಂದಿರಲಿದೆ, ಇದನ್ನು 80 ಲಕ್ಷ ಮೆಟ್ರಿಕ್‌ ಟನ್‌ಗೆ ವಿಸ್ತರಿಸಲಾಗುವುದು. ಕೈಗಾರಿಕಾ ಉತ್ಪನ್ನಗಳ ತಡೆರಹಿತ ಸಾಗಣೆಯನ್ನು ಸುಗಮಗೊಳಿಸುವ ಮೂಲಕ, ವಿಮಾನ ನಿಲ್ದಾಣವು ಪ್ರದೇಶದತ್ತ ಬೃಹತ್ ಹೂಡಿಕೆಗಳನ್ನು ಆಕರ್ಷಿಸಲು, ತ್ವರಿತ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸ್ಥಳೀಯ ಉತ್ಪನ್ನಗಳನ್ನು ತಲುಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಹಲವಾರು ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಮತ್ತು ಅದ್ಭುತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ವಿಮಾನ ನಿಲ್ದಾಣವು ಬಹುಮಾದರಿ ಸಾರಿಗೆ ಕೇಂದ್ರವನ್ನು ಹೊಂದಿರಲಿದೆ. ಮೆಟ್ರೋ ಮತ್ತು ಹೈಸ್ಪೀಡ್ ರೈಲು ನಿಲ್ದಾಣಗಳು, ಟ್ಯಾಕ್ಸಿ, ಬಸ್ ಸೇವೆಗಳು ಮತ್ತು ಖಾಸಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಿರುವ ಭೂಸಾರಿಗೆ ಕೇಂದ್ರವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ರಸ್ತೆ, ರೈಲು ಮತ್ತು ಮೆಟ್ರೋದೊಂದಿಗೆ ವಿಮಾನ ನಿಲ್ದಾಣದ ತಡೆರಹಿತ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ನೋಯ್ಡಾ ಮತ್ತು ದೆಹಲಿಯಿಂದ ವಿಮಾನ ನಿಲ್ದಾಣಕ್ಕೆ ತಡೆರಹಿತ ಮೆಟ್ರೋ ಸೇವೆಯ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಹತ್ತಿರದ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ಹೆದ್ದಾರಿಗಳಾದ ʻಯಮುನಾ ಎಕ್ಸ್‌ಪ್ರೆಸ್‌ವೇʼ, ʻವೆಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇʼ, ʻಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇʼ, ʻದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇʼ ಮತ್ತು ಇತರ ಪ್ರಮುಖ ಹೆದ್ದಾರಿಗಳನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಾಗುವುದು. ವಿಮಾನ ನಿಲ್ದಾಣವನ್ನು ಉದ್ದೇಶಿತ ದೆಹಲಿ-ವಾರಾಣಸಿ ಹೈಸ್ಪೀಡ್ ರೈಲ್‌ ಸೇವೆಯೊಂದಿಗೆ ಸಂಪರ್ಕಿಸಲಾಗುವುದು, ಇದರಿಂದ ದೆಹಲಿ ಮತ್ತು ವಿಮಾನ ನಿಲ್ದಾಣದ ನಡುವೆ ಕೇವಲ 21 ನಿಮಿಷಗಳಲ್ಲಿ ಪ್ರಯಾಣಕ್ಕೆ ಅನುವಾಗಲಿದೆ.

ವಿಮಾನ ನಿಲ್ದಾಣವು ಅತ್ಯಾಧುನಿಕ ʻಎಂಆರ್‌ಒʼ (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರಿಶೀಲನೆ) ಸೇವೆಯನ್ನು ಸಹ ಹೊಂದಿರುತ್ತದೆ. ಕಡಿಮೆ ನಿರ್ವಹಣಾ ವೆಚ್ಚ, ಪ್ರಯಾಣಿಕರ ತಡೆರಹಿತ ಮತ್ತು ತ್ವರಿತ ವರ್ಗಾವಣೆಗೆ ವಿಮಾನ ನಿಲ್ದಾಣದ ವಿನ್ಯಾಸದಲ್ಲಿ ಗಮನ ಕೇಂದ್ರೀಕರಿಸಲಾಗಿದೆ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ʻಸ್ವಿಂಗ್ ಏರ್‌ಕ್ರಾಫ್ಟ್ ಸ್ಟ್ಯಾಂಡ್ʼ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಇದು ವಿಮಾನವನ್ನು ಸ್ಥಾನಪಲ್ಲಟ ಮಾಡದೆಯೇ, ಒಂದೇ ಸಂಪರ್ಕ ಸ್ಟ್ಯಾಂಡ್‌ನಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಹಾರಾಟವನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ಒದಗಿಸುತ್ತದೆ. ಇದು ವಿಮಾನ ನಿಲ್ದಾಣದಲ್ಲಿ ತ್ವರಿತ ಮತ್ತು ದಕ್ಷ ವಿಮಾನ ಲ್ಯಾಂಡಿಗ್‌-ಟೇಕಾಫ್‌ ಪ್ರಕ್ರಿಯೆಗಳನ್ನು ಖಾತರಿಪಡಿಸುತ್ತದೆ, ಜೊತೆಗೆ ಸುಗಮ ಮತ್ತು ತಡೆರಹಿತ ಪ್ರಯಾಣಿಕರ ವರ್ಗಾವಣೆ ಪ್ರಕ್ರಿಯೆಯನ್ನು ಖಾತರಿಪಡಿಸುತ್ತದೆ.

ಇದು ಭಾರತದ ಮೊದಲ ನಿವ್ವಳ ಶೂನ್ಯ ಮಾಲಿನ್ಯ ಹೊರಸೂಸುವಿಕೆ ವಿಮಾನ ನಿಲ್ದಾಣವಾಗಲಿದೆ. ಯೋಜನಾ ಸ್ಥಳದಲ್ಲಿರುವ ಮರಗಳನ್ನೇ ಬಳಸಿಕೊಂಡು ಅರಣ್ಯ ಉದ್ಯಾನವಾಗಿ ಅಭಿವೃದ್ಧಿಪಡಿಸಲು ಭೂಮಿಯನ್ನು ಮೀಸಲಿರಿಸಲಾಗಿದೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಲ್ಲಾ ಸ್ಥಳೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುತ್ತದೆ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿಯುದ್ದಕ್ಕೂ ಪ್ರಕೃತಿಯ ಮೇಲೆ  ಸಕಾರಾತ್ಮಕ ಪರಿಣಾಮ ಬೀರಲಿದೆ.

ವಿಮಾನ ನಿಲ್ದಾಣದ ಮೊದಲ ಹಂತದ ಅಭಿವೃದ್ಧಿಗೆ 10,050 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೊತ್ತ ವ್ಯಯಿಸಲಾಗುತ್ತಿದೆ. 1300 ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ವಿಸ್ತರಿಸಿರುವ ವಿಮಾನ ನಿಲ್ದಾಣವು ಮೊದಲ ಹಂತದ ನಿರ್ಮಾಣ ಪೂರ್ಣಗೊಂಡ ನಂತರ ವರ್ಷಕ್ಕೆ ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದರ ಪೂರ್ಣ ಕಾಮಗಾರಿಯನ್ನು 2024 ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯನ್ನು ಅಂತರರಾಷ್ಟ್ರೀಯ ಬಿಡ್ಡರ್ ʻಜ್ಯೂರಿಚ್ ಏರ್‌ಪೋರ್ಟ್‌ ಇಂಟರ್‌ನ್ಯಾಷನಲ್‌ ಎಜಿʼ ರಿಯಾಯಿತಿದಾರ ಸಂಸ್ಥೆಯಾಗಿ ಕಾರ್ಯಗತಗೊಳಿಸಲಿದೆ. ಭೂ ಸ್ವಾಧೀನ ಮತ್ತು ಬಾಧಿತ ಕುಟುಂಬಗಳ ಪುನರ್ವಸತಿಗೆ ಸಂಬಂಧಿಸಿದ ಮೊದಲ ಹಂತದ ಕೆಲಸ ಪೂರ್ಣಗೊಂಡಿದೆ.

***(Release ID: 1774188) Visitor Counter : 154