ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 3

2021 ನೇ ಸಾಲಿನ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿ ಪ್ರಕಟಿಸಿದ ಶ್ರೀ ಅನುರಾಗ್ ಠಾಕೂರ್


52 ನೇ ಐಎಫ್ಎಫ್ಐ ನಲ್ಲಿ ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಶಿ ಅವರಿಗೆ ಪ್ರಶಸ್ತಿ ಪ್ರದಾನ

2021 ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಯನ್ನು ಶ್ರೀಮತಿ ಹೇಮಾ ಮಾಲಿನಿ ಮತ್ತು ಶ್ರೀ ಪ್ರಸೂನ್ ಜೋಶಿ ಅವರಿಗೆ ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್  ಘೋಷಿಸಿದ್ದಾರೆ.

ಪ್ರಶಸ್ತಿಗಳನ್ನು ಪ್ರಕಟಿಸಿದ ಶ್ರೀ ಠಾಕೂರ್ ಅವರು "ಉತ್ತರ ಪ್ರದೇಶದ ಮಥುರಾ ಸಂಸದರಾದ ನಟಿ, ಶ್ರೀಮತಿ ಹೇಮಾ ಮಾಲಿನಿ ಮತ್ತು ಗೀತರಚನೆಕಾರ ಮತ್ತು ಸಿ ಬಿ ಎಫ್ ಸಿ  ಅಧ್ಯಕ್ಷರಾದ ಶ್ರೀ ಪ್ರಸೂನ್ ಜೋಶಿ ಅವರನ್ನು 2021 ನೇ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿಗಳು ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದರು. ಭಾರತೀಯ ಸಿನಿಮಾ ಕ್ಷೇತ್ರಕ್ಕೆ ದಶಕಗಳಿಂದ ಅವರು ಕೊಡುಗೆ ನೀಡಿದ್ದಾರೆ ಮತ್ತು ಅವರ ಕೆಲಸವು ತಲೆಮಾರುಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಅವರು ವಿಶ್ವದಾದ್ಯಂತ ಮೆಚ್ಚುವ ಮತ್ತು ಗೌರವಿಸುವ ಭಾರತೀಯ ಚಿತ್ರರಂಗದ ಐಕಾನ್‌ಗಳಾಗಿದ್ದಾರೆ. ಅವರಿಗೆ ಗೋವಾದಲ್ಲಿ ನಡೆಯುವ 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಗೌರವಾನ್ವಿತ ಪ್ರಶಸ್ತಿ ವಿಜೇತರ ಕುರಿತು:

ಶ್ರೀಮತಿ ಹೇಮಾ ಮಾಲಿನಿ, ನಟಿ ಹಾಗೂ ಮಥುರಾ ಸಂಸದೆ

ಅಕ್ಟೋಬರ್ 16, 1948 ರಂದು ತಮಿಳುನಾಡಿನ ಅಮ್ಮನ್ ಕುಡಿಯಲ್ಲಿ ಜನಿಸಿದ ಶ್ರೀಮತಿ ಹೇಮಾ ಮಾಲಿನಿ ಭಾರತೀಯ ನಟಿ, ಲೇಖಕಿ, ನಿರ್ದೇಶಕಿ, ನಿರ್ಮಾಪಕಿ, ನೃತ್ಯಗಾರ್ತಿ ಮತ್ತು ರಾಜಕಾರಣಿ. ಅವರು 1963 ರಲ್ಲಿ ತಮಿಳು ಚಲನಚಿತ್ರ ಇದುಸಾಧ್ಯಂ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ 1968 ರಲ್ಲಿ ಸಪ್ನೋಕಾ ಸೌದಾಗರ್ ಚಿತ್ರದ ನಾಯಕಿಯಾಗಿ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು. ಅಂದಿನಿಂದ, ಅವರು ಶೋಲೆ, ಸೀತಾ ಔರ್ ಗೀತಾ, ಸತ್ತೆಪೆಸತ್ತಾ ಮತ್ತು ಬಾಗ್ಬಾನ್ ಸೇರಿದಂತೆ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

‘ಡ್ರೀಮ್ ಗರ್ಲ್’ಎಂದೂ ಕರೆಯಲಾಗುವ ಹೇಮಾ ಮಾಲಿನಿ ಅವರು ನಟನಾ ಕೌಶಲ್ಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2000 ರಲ್ಲಿ ಭಾರತ ಸರ್ಕಾರವು ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2012 ರಲ್ಲಿ ಸರ್ ಪದಂಪತ್ ಸಿಂಘಾನಿಯಾ ವಿಶ್ವವಿದ್ಯಾನಿಲಯವು ಶ್ರೀಮತಿ ಹೇಮಾ ಮಾಲಿನಿ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿತು. ಅವರು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಮತಿ ಹೇಮಾ ಮಾಲಿನಿ, ತರಬೇತಿ ಪಡೆದ ಭರತನಾಟ್ಯ ನೃತ್ಯಗಾರ್ತಿ, ಭಾರತೀಯ ಸಂಸ್ಕೃತಿ ಮತ್ತು ನೃತ್ಯಕ್ಕೆ ನೀಡಿದ ಕೊಡುಗೆ ಮತ್ತು ಸೇವೆಗಾಗಿ 2006 ರಲ್ಲಿ ಸೊಪೋರಿ ಅಕಾಡೆಮಿ ಆಫ್ ಮ್ಯೂಸಿಕ್ & ಪರ್ಫಾರ್ಮಿಂಗ್ ಆರ್ಟ್ಸ್ (SaMaPa) ವಿತಾಸ್ತ ಪ್ರಶಸ್ತಿಯನ್ನು ಪಡೆದರು. ಅವರು ಭಾರತದ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡು 2003-2009 ರವರೆಗೆ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದರು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಮತಿ ಮಾಲಿನಿ ಅವರು ಮಥುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಅಂದಿನಿಂದ, ಅವರು ಮಥುರಾ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಪ್ರಸೂನ್ ಜೋಶಿ, ಗೀತ ರಚನೆಕಾರರು ಸಾಹಿತಿಗಳು ಸಿ ಬಿ ಎಫ್ ಸಿ ಅಧ್ಯಕ್ಷರು

ಶ್ರೀ ಪ್ರಸೂನ್ ಜೋಶಿ ಅವರು ಕವಿ, ಬರಹಗಾರ, ಗೀತರಚನೆಕಾರ, ಚಿತ್ರಕಥೆಗಾರ ಮತ್ತು ಸಂವಹನ ತಜ್ಞರು. ಅವರು 17 ನೇ ವಯಸ್ಸಿನಲ್ಲಿ ತಮ್ಮ ಮೊದಲ ಗದ್ಯ ಮತ್ತು ಪದ್ಯ ಪುಸ್ತಕವನ್ನು ಪ್ರಕಟಿಸಿದರು. ಪ್ರಸ್ತುತ ಅವರು ಮೆಕ್ಯಾನ್ ವರ್ಲ್ಡ್ ಗ್ರೂಪ್ ಇಂಡಿಯಾದ ಏಷ್ಯಾ ಅಧ್ಯಕ್ಷ ಮತ್ತು ಸಿಇಒ.

ಶ್ರೀ ಪ್ರಸೂನ್ ಜೋಶಿ ಅವರು ಶ್ರೀ ರಾಜ್‌ಕುಮಾರ್ ಸಂತೋಷಿ ಅವರ ಲಜ್ಜಾ ಚಿತ್ರದ ಮೂಲಕ 2001 ರಲ್ಲಿ ಗೀತರಚನೆಕಾರರಾಗಿ ಭಾರತೀಯ ಚಿತ್ರರಂಗವನ್ನು ಪ್ರವೇಶಿಸಿದರು ಮತ್ತು ಅಂದಿನಿಂದ ಅವರು ಹಲವಾರು ಯಶಸ್ವಿ ಬಾಲಿವುಡ್ ಚಲನಚಿತ್ರಗಳ ಭಾಗವಾಗಿದ್ದಾರೆ. ಇಂದು ಅವರು ಶಾಸ್ತ್ರೀಯ ಕಾವ್ಯ ಮತ್ತು ಸಾಹಿತ್ಯದ ಶ್ರೇಷ್ಠ ಸಂಪ್ರದಾಯಕ್ಕಾಗಿ ಜನಮಾನಸದಲ್ಲಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ತಾರೆ ಜಮೀನ್ ಪರ್, ರಂಗ್ ದೇ ಬಸಂತಿ, ಭಾಗ್ ಮಿಲ್ಕಾ ಭಾಗ್, ನೀರ್ಜಾ, ಮಣಿಕರ್ಣಿಕಾ, ದೆಹಲಿ 6 ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ತಮ್ಮ ಬರವಣಿಗೆಯ ಮೂಲಕ, ಜನಪ್ರಿಯ ಪ್ರಕಾರದಲ್ಲಿ ಉನ್ನತ ಮಟ್ಟದ ಕೆಲಸದ ಮೂಲಕ ಸಮಾಜಕ್ಕೆ ರಚನಾತ್ಮಕ ನಿರ್ದೇಶನವನ್ನು ನೀಡಬಹುದು ಎಂಬ ನಂಬಿಕೆಯನ್ನು ಅವರು ಗಟ್ಟಿಗೊಳಿಸಿದ್ದಾರೆ.

ಶ್ರೀ ಜೋಶಿಯವರು ಭಾರತದಲ್ಲಷ್ಟೇ ಅಲ್ಲದೆ, ಜಾಗತಿಕವಾಗಿಯೂ ಮನ್ನಣೆಯನ್ನು ಪಡೆದಿದ್ದಾರೆ. ತಾರೆ ಜಮೀನ್ ಪರ್ (2007) ಮತ್ತು ಚಿತ್ತಗಾಂಗ್ (2013) ಗಾಗಿ ಅವರು ಎರಡು ಬಾರಿ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 2015 ರಲ್ಲಿ, ಭಾರತ ಸರ್ಕಾರವು ಕಲೆ, ಸಾಹಿತ್ಯ ಮತ್ತು ಜಾಹೀರಾತು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅವರು ಫಿಲ್ಮ್‌ಫೇರ್, ಐಐಎಫ್ಎ, ಸ್ಕ್ರೀನ್‌ನಂತಹ ಜನಪ್ರಿಯ ಚಲನಚಿತ್ರ ಪ್ರಶಸ್ತಿಗಳನ್ನು ಹಲವಾರು ಬಾರಿ ಗೆದ್ದಿದ್ದಾರೆ. 2014 ರಲ್ಲಿ ಅವರನ್ನು ಕೇನ್ಸ್ ಟೈಟಾನಿಯಂ ತೀರ್ಪುಗಾರರ ಅಧ್ಯಕ್ಷರಾಗಿ ಆಹ್ವಾನಿಸಲಾಯಿತು. ಅವರು ಇಂಟರ್ನ್ಯಾಷನಲ್ ಕ್ಯಾನೆಸ್ ಲಯನ್ ಟೈಟಾನಿಯಂ ಪ್ರಶಸ್ತಿಗಳ ಅಧ್ಯಕ್ಷತೆಯನ್ನು ವಹಿಸಿದ ಮೊದಲ ಏಷ್ಯನ್ ಆಗಿದ್ದರು. ಅವರು ವಿಶ್ವ ಆರ್ಥಿಕ ವೇದಿಕೆಯಿಂದ ಯುವ ಜಾಗತಿಕ ನಾಯಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ.

ಶ್ರೀ ಜೋಶಿ ಅವರು 2010 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಿಗಾಗಿ ಆಯ್ದ ಮೂವರು ಸದಸ್ಯರ ಸೃಜನಾತ್ಮಕ ಸಲಹಾ ಸಮಿತಿಯ ಭಾಗವಾಗಿದ್ದರು. ಅವರು 52 ನೇ ಐಐಎಫ್ಐ ನಲ್ಲಿ '75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ದ ತೀರ್ಪುಗಾರರ ತಂಡದಲ್ಲಿದ್ದಾರೆ.

***

iffi reel

(Release ID: 1772977) Visitor Counter : 358