ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಪ್ರಧಾನಮಂತ್ರಿಯವರ 'ಹರ್ ಘರ್ ದಸ್ತಕ್' ಅಭಿಯಾನವನ್ನು ಬಲಪಡಿಸುವ ಬಗ್ಗೆ ಡಾ. ಮನ್‌ಸುಖ್ ಮಾಂಡವಿಯಾ ಅವರು ರಾಜ್ಯ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದರು
ಯಾವುದೇ ನಾಗರಿಕರು ಕೋವಿಡ್-19 ಲಸಿಕೆಗಳ ʻಸುರಕ್ಷಾ ಕವಚʼದಿಂದ ವಂಚಿತರಾಗದಂತೆ ಕಾಯ್ದುಕೊಳ್ಳಲು ಸಾಮೂಹಿಕ ಪ್ರಯತ್ನಗಳಿಗಾಗಿ ಎಲ್ಲಾ ಆರೋಗ್ಯ ಸಚಿವರನ್ನು ಅವರು ಒತ್ತಾಯಿಸಿದರು
ಅಗತ್ಯವಿರುವ ಲಸಿಕೆ ಪೂರೈಕೆಯ ಬಗ್ಗೆ ರಾಜ್ಯಗಳಿಗೆ ಭರವಸೆ ನೀಡಿದರು: "ದೇಶದಲ್ಲಿ ಲಸಿಕೆಗಳ ಕೊರತೆ ಇಲ್ಲ"
ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆಯನ್ನು ಒತ್ತಿ ಹೇಳಿದರು: "ಲಸಿಕೆ ನಮ್ಮ 'ಸುರಕ್ಷಾ ಕವಚʼ ಆಗಿದ್ದರೂ, ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಮರೆಯಬಾರದು"
Posted On:
11 NOV 2021 2:09PM by PIB Bengaluru
"ಸಹಯೋಗ ಮತ್ತು ಬಹು-ಪಾಲುದಾರರ ಪ್ರಯತ್ನಗಳ ಮೂಲಕ ದೇಶದಲ್ಲಿ ಕೋವಿಡ್-19 ಲಸಿಕೆಯ 'ಸುರಕ್ಷಾ ಕವಚʼದಿಂದ ಯಾವ ಅರ್ಹ ನಾಗರಿಕರೂ ವಂಚಿತರಾಗದಂತೆ ನಾವು ಸಾಮೂಹಿಕವಾಗಿ ಕಾಯ್ದುಕೊಳ್ಳೋಣ. ನಾವು ದೇಶದ ಮೂಲೆ-ಮೂಲೆ, ಮನೆ-ಮನೆಯನ್ನೂ ತಲುಪೋಣ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಹರ್ ಘರ್ ದಸ್ತಕ್ʼ ಅಭಿಯಾನದ ಅಡಿಯಲ್ಲಿ ಎರಡೂ ಡೋಸ್ ಲಸಿಕೆಗಳನ್ನು ಪಡೆಯುವಂತೆ ಜನರನ್ನು ಪ್ರೇರೇಪಿಸೋಣ" - ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್‌ಸುಖ್ ಮಾಂಡವಿಯಾ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಅವರ ಸಮ್ಮುಖದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ನಡೆಸಿದ ಸಂವಾದದಲ್ಲಿ ಹೀಗೆಂದು ಕರೆ ನೀಡಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಕೈಗೊಂಡ ಕ್ರಮಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರಾದ ಶ್ರೀಮತಿ ವೀಣಾ ಜಾರ್ಜ್ (ಕೇರಳ), ಡಾ. ಧನ್‌ಸಿಂಗ್ ರಾವತ್ (ಉತ್ತರಾಖಂಡ್), ಶ್ರಿ ಬನ್ನಾ ಗುಪ್ತಾ (ಜಾರ್ಖಂಡ್), ಡಾ.ಲಾಲ್ತಂಗ್ಲಿಯನಾ (ಮಿಜೋರಾಂ), ಶ್ರಿ ಮಂಗಲ್ ಪಾಂಡೆ (ಬಿಹಾರ), ಡಾ. ಕೆ. ಸುಧಾಕರ್ (ಕರ್ನಾಟಕ), ಶ್ರೀ ರಾಜೇಶ್ ತೋಪೆ (ಮಹಾರಾಷ್ಟ್ರ), ಡಾ. ಪ್ರಭುರಾಮ್ ಚೌಧರಿ (ಮಧ್ಯಪ್ರದೇಶ), ಶ್ರಿ ಜೈಪ್ರತಾಪ್ ಸಿಂಗ್ (ಉತ್ತರ ಪ್ರದೇಶ), ಶ್ರೀ ಮಾಸುಬ್ರಮಣಿಯನ್ (ತಮಿಳುನಾಡು), ಶ್ರೀ ವಿಶ್ವಜಿತ್ ರಾಣೆ (ಗೋವಾ), ಶ್ರೀ ಋಷಿಕೇಶ್ ಗಣೇಶ್ ಭಾಯಿ ಪಟೇಲ್ (ಗುಜರಾತ್), ಶ್ರೀ ಕೇಶವ್ ಮಹಾಂತ (ಅಸ್ಸಾಂ), ಶ್ರೀ ಸತ್ಯೇಂದರ್ ಜೈನ್ (ದೆಹಲಿ) ಸಭೆಯಲ್ಲಿ ಹಾಜರಿದ್ದರು ಇಂಯಿಂಗ್. ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು/ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ ಯೋಜನಾ ನಿರ್ದೇಶಕರು(ಎನ್‌ಎಚ್‌ಎಂ) ಸಹ ಉಪಸ್ಥಿತರಿದ್ದರು.
ಪ್ರಸ್ತುತ ವಯಸ್ಕ ಜನಸಂಖ್ಯೆಯ 79% ಮಂದಿ ಕೋವಿಡ್-19 ಲಸಿಕೆಯ 1ನೇ ಡೋಸ್ ಅನ್ನು ಪಡೆದಿದ್ದಾರೆ ಮತ್ತು ಅರ್ಹ ಜನಸಂಖ್ಯೆಯ 38% ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ಇನ್ನೂ 12 ಕೋಟಿಗೂ ಹೆಚ್ಚು ಫಲಾನುಭವಿಗಳು 2ನೇ ಡೋಸ್ ಕೋವಿಡ್-19 ಲಸಿಕೆ ಪಡೆಯುವುದು ಬಾಕಿ ಇರುವ ಬಗ್ಗೆ ಮಾತನಾಡಿದ ಸಚಿವರು, ಪ್ರಸ್ತುತ ನಡೆಯುತ್ತಿರುವ 'ಹರ್ ಘರ್ ದಸ್ತಕ್' ಅಭಿಯಾನದಡಿ ಎಲ್ಲಾ ವಯಸ್ಕ ಜನಸಂಖ್ಯೆ ಮೊದಲ ಡೋಸ್ ಪಡೆಯುವುದು ಖಾತರಿಪಡಿಸಿಕೊಳ್ಳುವಂತೆ ಹಾಗೂ ಎರಡನೇ ಡೋಸ್ ಬಾಕಿ ಇರುವವರು ಲಸಿಕೆ ಪಡೆಯಲು ಮುಂದೆ ಬರಲು ಪ್ರೇರೇಪಿಸುವಂತೆ ರಾಜ್ಯ ಆರೋಗ್ಯ ಸಚಿವರನ್ನು ಒತ್ತಾಯಿಸಿದರು.
'ಪ್ರಚಾರ್ ರಾಯಭಾರಿʼಯನ್ನು ಹಳ್ಳಿಗಳಿಗೆ ಮುಂಚಿತವಾಗಿ ನಿಯೋಜಿಸುವುದು ಸೇರಿದಂತೆ 'ಹರ್ ಘರ್ ದಸ್ತಕ್' ಅಭಿಯಾನವನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಕಾರ್ಯತಂತ್ರಗಳನ್ನು ಕೇಂದ್ರ ಆರೋಗ್ಯ ಸಚಿವರು ಪುನರುಚ್ಛರಿಸಿದರು. ಇದರಿಂದ ಜಾಗೃತಿ ಅಭಿಯಾನಗಳೊಂದಿಗೆ ಅರ್ಹ ಜನರನ್ನು ಒಟ್ಟುಗೂಡಿಸಲು ಮತ್ತು ಅವರಿಗೆ ಸಮಾಲೋಚನೆ ನಡೆಸಲು ನೆರವಾಗುತ್ತದೆ. ನಂತರ 'ಲಸಿಕೆ ರಾಯಭಾರಿʼಯು ಅರ್ಹ ನಾಗರಿಕರಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆಹಾಕುವುದನ್ನು ಖಾತರಿಪಡಿಸುತ್ತಾರೆ ಎಂದು ಹೇಳಿದರು. ನಿಗದಿತ ಪ್ರದೇಶದಲ್ಲಿ ಕಾಲಮಿತಿಯೊಳಗೆ 100% ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ʻಬಹು ಲಸಿಕಾ ತಂಡʼಗಳ (50-100) ಕಾರ್ಯತಂತ್ರ; ಕೋವಿಡ್-19 ಲಸಿಕೆಯ ಪ್ರಗತಿಗೆ ಪ್ರೇರೇಪಿಸಲು 24 ಗಂಟೆಯಲ್ಲಿ ಗರಿಷ್ಠ ಸಂಖ್ಯೆಯ ಲಸಿಕೆ ಡೋಸ್‌ಗಳನ್ನು ನೀಡುವ ಲಸಿಕಾ ತಂಡಗಳನ್ನು (ಜಿಲ್ಲಾ ಮತ್ತು ಬ್ಲಾಕ್) ಗುರುತಿಸಿ, ಸನ್ಮಾನಿಸಲು ಶ್ರೇಯಾಂಕ ಕಾರ್ಯವಿಧಾನ; ಜಾಗೃತಿ ಮೂಡಿಸಲು ಮತ್ತು ಲಸಿಕೆ ಸೇವೆಗಳನ್ನು ಒದಗಿಸಲು ಸ್ಥಳೀಯ ಸಂತೆಗಳು ಮತ್ತು ಪರಿಷೆಗಳನ್ನು ಬಳಸಿಕೊಳ್ಳುವುದು; ಸ್ಥಳೀಯ ಧಾರ್ಮಿಕ ಮತ್ತು ಸಮುದಾಯದ ನಾಯಕರೊಂದಿಗೆ ಸಹಕರಿಸುವುದು; ಗ್ರಾಮೀಣ/ನಗರ ಪ್ರದೇಶಗಳಲ್ಲಿ ಲಸಿಕೆ ಪಡೆಯದವರನ್ನು ಪ್ರೇರೇಪಿಸಲು ʻಸಿಎಸ್ಒʼಗಳು, ʻಎನ್‌ಜಿಒʼಗಳು, ʻಎನ್‌ಎಸ್‌ಎಸ್ʼ, ಎನ್‌ವೈಕೆʼ ಮುಂತಾದವುಗಳೊಂದಿಗೆ ಸಹಯೋಗ;; ಲಸಿಕೆ ವಿರೋಧಿ ವದಂತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ʻಮಲ್ಟಿಮೀಡಿಯಾ ಐಇಸಿʼ ಜಾಗೃತಿ ಅಭಿಯಾನಗಳು; ಅಧಿಕ ಲಸಿಕೆ ವ್ಯಾಪ್ತಿ ಹೊಂದಿರುವ ಅದೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅನುಸರಿಸಲಾಗುತ್ತಿರುವ ವಿನೂತನ ಕಾರ್ಯವಿಧಾನ ಹಾಗೂ ಅಭ್ಯಾಸಗಳನ್ನು ಅನುಸರಿಸುವಂತೆ ಇತರೆ ಜಿಲ್ಲೆಗಳಿತಗೆ ಸೂಚಿಸುವುದು ಮುಂತಾದ ಅಂಶಗಳನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ. ಮನ್‌ಸುಖ್ ಮಾಂಡವಿಯಾ ಅವರು ಒತ್ತಿ ಹೇಳಿದರು. ನಡವಳಿಕೆ ಬದಲಾವಣೆ ತರಲು ಮಕ್ಕಳು ಅತ್ಯುತ್ತಮ ರಾಯಭಾರಿಗಳಾಗಬಲ್ಲರು ಎಂದು ಹೇಳಿದ ಸಚಿವರು, ಪರಿಪೂರ್ಣ ಲಸಿಕೆ ಕುರಿತ ಸಂದೇಶವನ್ನು ಜನರಿಗೆ ತಲುಪಿಸಲು ಮಕ್ಕಳನ್ನು ಬಳಸಿಕೊಳ್ಳುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯಿಸಿದರು. "ಮಕ್ಕಳು ತಮ್ಮ ಪೋಷಕರು ಮತ್ತು ಇತರ ಕುಟುಂಬ ಸದಸ್ಯರನ್ನು ಎರಡೂ ಡೋಸ್ ಲಸಿಕೆ ಪಡೆಯುವಂತೆ ಪ್ರೇರೇಪಿಸಲಿ", ಎಂದು ಅವರು ಹೇಳಿದರು.
"ನಾವು ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮುಂತಾದೆಡೆ, ವಿಶೇಷವಾಗಿ ದೊಡ್ಡ ಮಹಾನಗರಗಳಲ್ಲಿ ಕೋವಿಡ್ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸೋಣ, ಏಕೆಂದರೆ ಇವು ನಗರವನ್ನು ಪ್ರವೇಶಿಸುವ ಹೆಚ್ಚಿನ ಜನರು ಮೊದಲು ತಲುಪುವ ಸ್ಥಳಗಳಾಗಿವೆ. ಕೆಲವು ರಾಜ್ಯಗಳು 'ರೋಕೊ ಮತ್ತು ಟೋಕೊ' ಅಭಿಯಾನವನ್ನು ಪ್ರಾರಂಭಿಸಿವೆ. ಅಲ್ಲಿ ಬಸ್ಸುಗಳು, ರೈಲುಗಳು, ರಿಕ್ಷಾಗಳು ಇತ್ಯಾದಿಗಳಿಂದ ಇಳಿಯುವ ಪ್ರಯಾಣಿಕರಿಗೆ ಲಸಿಕೆಯ ಡೋಸ್‌ಗಳನ್ನು ಪಡೆಯುವಂತೆ ಪ್ರೇರೇಪಿಸಲಾಗುತ್ತದೆ." ಎಂದರು. 'ಹರ್ ಘರ್ ದಸ್ತಕ್' ಅಭಿಯಾನದ ಪ್ರತಿ ದಿನವನ್ನು, ಬೇರೆ ಬೇರೆ ಗುಂಪುಗಳ ಫಲಾನುಭವಿಗಳನ್ನು ಒಟ್ಟುಗೂಡಿಸಲು ಮತ್ತು ಲಸಿಕೆ ನೀಡಲು ಮೀಸಲಿಡಬಹುದು ಎಂದು ಅವರು ಸಲಹೆ ನೀಡಿದರು. "ಒಂದು ದಿನ ವ್ಯಾಪಾರಿಗಳು, ಬೀದಿ ಬದಿ ಮಾರಾಟಗಾರರು ಮುಂತಾದವರಿಗೆ ಮೀಸಲಿಡಬಹುದು. ಇತರ ದಿನಗಳಲ್ಲಿ ನಾವು ರಿಕ್ಷಾ ಎಳೆಯುವವರು ಮತ್ತು ಆಟೋ ಚಾಲಕರನ್ನು ಲಸಿಕೆಗೆ ಸಜ್ಜುಗೊಳಿಸಬಹುದು. ಮತ್ತೊಂದು ದಿನ ಕಾರ್ಮಿಕರು ಮತ್ತು ರೈತರಿಗೆ ಸಮರ್ಪಿಸಬಹುದು", ಎಂದು ಅವರು ಹೇಳಿದರು.
ಪ್ರಸ್ತುತ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ಕೈಗೊಳ್ಳಲಾದ ಸಾರ್ವಜನಿಕ ಆರೋಗ್ಯ ಉಪಕ್ರಮಗಳನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವರು, ಕೋವಿಡ್-19 ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ ಎಂದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದರು. “ಕೋವಿಡ್ ಮುಗಿದಿದೆ ಎಂದು ನಾವು ಭಾವಿಸಬಾರದು. ಜಾಗತಿಕವಾಗಿ ಪ್ರಕರಣಗಳು ಹೆಚ್ಚುತ್ತಿವೆ. ಸಿಂಗಾಪುರ, ಬ್ರಿಟನ್, ರಷ್ಯಾ ಮತ್ತು ಚೀನಾದಲ್ಲಿ ಶೇ. 80ರಷ್ಟು ಲಸಿಕೀಕರಣದ ಹೊರತಾಗಿಯೂ ಪ್ರಕರಣಗಳು ಮತ್ತೆ ಕಂಡು ಬರುತ್ತಿವೆ. ಲಸಿಕೀಕರಣ ಮತ್ತು ಕೋವಿಡ್ ಸೂಕ್ತ ನಡವಳಿಕೆ (ಸಿಎಬಿ) ಜೊತೆಜೊತೆಯಾಗಿ ಸಾಗಬೇಕು",ಎಂದು ಅವರು ಒತ್ತಿ ಹೇಳಿದರು. ಲಸಿಕೆಯು ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಹೌದಾದರೂ, ಇಲ್ಲಿಯವರೆಗೆ ನಾವು ಸಾಮೂಹಿಕವಾಗಿ ಗಳಿಸಿದ ಲಾಭಗಳು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಕೋವಿಡ್-19 ಪ್ರಕರಣಗಳು ಪುನಃ ಏರದಂತೆ ಖಾತರಿಪಡಿಸಿಕೊಳ್ಳಲು ಕೋವಿಡ್ ಸೂಕ್ತ ನಡವಳಿಕೆಗೆ ನಾವು ಬದ್ಧರಾಗಿರುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದರು. ಕೋವಿಡ್-19 ವಿರುದ್ಧ ಹೋರಾಟ ಅಂತಿಮ ಹಂತದಲ್ಲಿದೆ ಎಂದು ಡಾ. ಮಾಂಡವೀಯಾ ಉಲ್ಲೇಖಿಸಿದರು. "ಲಸಿಕೆ ಮತ್ತು ʻಕೋವಿಡ್ ಸೂಕ್ತ ನಡವಳಿಕೆʼ ಅಸ್ತ್ರಗಳು ಸಾಂಕ್ರಾಮಿಕದ ವಿರುದ್ಧ ನಮ್ಮ ದೊಡ್ಡ ರಕ್ಷಣೆಯಾಗಿದೆ. ಹೋರಾಟ ಸಂಪೂರ್ಣವಾಗಿ ಮುಗಿಯುವ ಮುನ್ನವೇ ನಾವು ನಮ್ಮ ಅಸ್ತ್ರಗಳನ್ನು ಕೆಳಗಿರಿಸಬಾರದು,ʼʼ ಎಂದರು. ಲಸಿಕೆಯನ್ನು ʻಸುರಕ್ಷಾ ಕವಚʼ ಎಂದು ಬಣ್ಣಿಸಿದ ಅವರು, “ದವಾಯಿ ಭಿ ಕಡಾಯಿ ಭೀ!ʼ ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕರೆಯನ್ನು ಪುನರುಚ್ಛರಿಸಿದರು.
ಕೋವಿಡ್ ನಿರ್ವಹಣೆಗೆ ಲಸಿಕೆಗಳು, ಔಷಧಗಳು, ಹಣಕಾಸು ಮತ್ತು ತಾಂತ್ರಿಕ ಸಂಪನ್ಮೂಲಗಳ ಪೂರೈಕೆಗಾಗಿ ಕೇಂದ್ರ ಆರೋಗ್ಯ ಸಚಿವರಿಗೆ ರಾಜ್ಯಗಳ ಆರೋಗ್ಯ ಸಚಿವರು ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಜಿಲ್ಲೆಗಳಲ್ಲಿ ಲಸಿಕೆಯ ವೇಗವನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ನವೀನ ಕ್ರಮಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಇದೇ ವೇಳೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ಅಪಾರ ಬೆಂಬಲಕ್ಕಾಗಿ ಡಾ. ಮಾಂಡವಿಯಾ ಅವರು ಧನ್ಯವಾದ ಅರ್ಪಿಸಿದರು ಮತ್ತು ಇತರರು ಅನುಸರಿಸುತ್ತಿರುವ ಉತ್ತಮ ಕಾರ್ಯವಿಧಾನಗಳನ್ನು ಪರಸ್ಪರ ಅನುಕರಿಸುವಂತೆ ಒತ್ತಾಯಿಸಿದರು. ʻಹರ್ ಘರ್ ದಸ್ತಕ್ʼ ಅಭಿಯಾನದಡಿ ಪ್ರತಿಯೊಂದು ಮನೆಗೂ ತಲುಪುವಂತೆ ಅವರು ಎಲ್ಲಾ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಕರೆ ನೀಡಿದರು.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್, ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ್ ಭಾರ್ಗವ, ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ. ಸುನಿಲ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಡಾ. ಮನೋಹರ್ ಅಗ್ನಾನಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಯೋಜನಾ ನಿರ್ದೇಶಕ ಶ್ರೀ ವಿಕಾಸ್ ಶೀಲ್, ಹೆಚ್ಚುವರಿ ಕಾರ್ಯದರ್ಶಿ ಮತ್ತು ಯೋಜನಾ ನಿರ್ದೇಶಕಿ (ಎನ್ಎಚ್ಎಂ) ಶ್ರೀಮತಿ ಆರ್ತಿ ಅಹುಜಾ, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರಿ ಲವ ಅಗರ್ವಾಲ್, ಜೆಟಿ ಕಾರ್ಯದರ್ಶಿ (ಆರೋಗ್ಯ) ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***
(Release ID: 1770941)
Visitor Counter : 291
Read this release in:
English
,
Urdu
,
Hindi
,
Marathi
,
Manipuri
,
Bengali
,
Gujarati
,
Odia
,
Tamil
,
Telugu
,
Malayalam