ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

2021 ರ ಸಿಐಐ ಏಷ್ಯಾ ಆರೋಗ್ಯ ಶೃಂಗ ಸಭೆ ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದ ಡಾ. ಮನ್ಸುಖ್ ಮಾಂಡವೀಯ


ಗೌರವಾನ್ವಿತ ಪ್ರಧಾನಮಂತ್ರಿಯರ ದೃಷ್ಟಿಕೋನಕ್ಕೆ ಅನುಗುಣವಾಗಿ ಆರೋಗ್ಯ ಕ್ಷೇತ್ರದ ಉತ್ತಮ ಭವಿಷ್ಯಕ್ಕಾಗಿ ಸುಗಮ, ಕೈಗೆಟುಕುವ, ಅಳವಡಿಕೆಗೆ ಸೂಕ್ತವಾದ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಬದ್ಧ: ಕೇಂದ್ರ ಆರೋಗ್ಯ ಸಚಿವರು

“ಆರೋಗ್ಯಕರ ಸಮಾಜ ಶ್ರೀಮಂತ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ”

Posted On: 28 OCT 2021 2:37PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು 2021 ರ ಸಿಐಐ ಏಷ್ಯಾ ಆರೋಗ್ಯ ಶೃಂಗಸಭೆ ಉದ್ದೇಶಿಸಿ ಇಂದು ಮಾತನಾಡಿದರು. “ಉತ್ತಮ ಭವಿಷ್ಯಕ್ಕಾಗಿ ಆರೋಗ್ಯ ರಕ್ಷಣೆಯಲ್ಲಿ ಪರಿವರ್ತನೆ“ ಶೃಂಗ ಸಭೆಯ ವಿಷಯವಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದಂತೆ ಭಾರತದ ಅಭಿವೃದ್ಧಿ ಜತೆ ಆರೋಗ್ಯ ಸಂಪರ್ಕ ಹೊಂದಿದೆ. ರೋಗ ಬಾರದಂತೆ ತಡೆಯುವುದು ಆರೋಗ್ಯ ಕ್ಷೇತ್ರದ ಅಗತ್ಯವಾದ ಅಂಶವಾಗಿದೆ. ಖೇಲೋ ಇಂಡಿಯಾ, ಯೋಗ ಮುಂತಾದ ಉಪಕ್ರಮಗಳು ಆರೋಗ್ಯಕರ ಸಮಾಜದ ಗುರಿಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.  

ಆರೋಗ್ಯ ಕ್ಷೇತ್ರದ ಉತ್ತಮ ಭವಿಷ್ಯಕ್ಕಾಗಿ ಸುಗಮ, ಕೈಗೆಟುಕುವ, ಅಳವಡಿಕೆಗೆ ಸೂಕ್ತವಾದ ಮತ್ತು ಆರೋಗ್ಯ ವಲಯದಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಬದ್ಧವಾಗಿದೆ ಮತ್ತು ಈ ಉದ್ದೇಶಗಳನ್ನು ಸಾಧಿಸಲು ಶ್ರೆದ್ಧೆಯಿಂದ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿದ್ದು, ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ [ಆರೋಗ್ಯ ವಿಮಾ ಯೋಜನೆ]. ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಜನರಿಕ್ ಔಷಧಿಗಳಿಗಾಗಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ [ಪಿ.ಎಂ.ಬಿ.ಜೆ.ಪಿ], ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ [ಎ.ಬಿ.ಡಿ.ಎಂ] ಮತ್ತು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನ ಮತ್ತಿತರ ಕಾರ್ಯಕ್ರಮಗಳು ಆರೋಗ್ಯ ಕ್ಷೇತ್ರವನ್ನು ಸುಲಭದರಲ್ಲಿ ಮತ್ತು ಕೈಗೆಟುವಂತೆ ಮಾಡಿವೆ ಎಂದರು.   

“ಟೋಕನ್ ನಿಂದ ಸಂಪೂರ್ಣ ಆರೋಗ್ಯದವರೆಗೆ” ಎಂಬ ವಿಷಯ ಕುರಿತು ಸರ್ಕಾರ ಗಮನಹರಿಸುತ್ತಿದೆ. ಈ ದಿಸೆಯಲ್ಲಿ 2021 ರ ಅಕ್ಟೋಬರ್ 25 ರಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನಕ್ಕೆ ಚಾಲನೆ ನೀಡಿದರು. ಇದರಿಂದ ದೇಶದಲ್ಲಿ ಆರೋಗ್ಯ ಮೂಲ ಸೌಕರ್ಯ ಬಲಗೊಳ್ಳಲು ಸಹಕಾರಿಯಾಗಿದೆ.    

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಬೆಳಕು ಚೆಲ್ಲಿದ ಕೇಂದ್ರ ಸಚಿವರು, ಆಧುನಿಕ ನ್ಯಾನೋ ಮತ್ತು ರೊಬಾಟಿಕ್ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು. ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನ ಇಂತಹ ಕ್ರಮಗಳಲ್ಲಿ ಒಂದಾಗಿದ್ದು, ಸುಗಮ ಜೀವನಕ್ಕಾಗಿ ಡಿಜಿಟಲ್ ಉಪಕ್ರಮಗಳನ್ನು ಬಳಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.  

ಅರಿವು ಮೂಡಿಸುವ ಮಹತ್ವದ ಕುರಿತು ಕೇಂದ್ರ ಆರೋಗ್ಯ ಸಚಿವರು ಬೆಳಕು ಚೆಲ್ಲಿದರು. ಗೌರವಾನ್ವಿತ ಪ್ರಧಾನಮಂತ್ರಿ ಅವರು ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ಜನಜಾಗೃತಿಗೆ ಒತ್ತು ನೀಡಿದರು. “ದವಾಯಿ ಭಿ ಕಡಾಯಿ ಭಿ” ಮತ್ತು ದೋ ಗಜ್ ಕಿ ದೂರಿ, ಮಾಸ್ಕ್ ಹೈ ಜರೂರಿ” ಯಂತಹ ಅಭಿಯಾನಗಳು ಹೇಗೆ ಜನ ಸಾಮಾನ್ಯರನ್ನು ತಲುಪಿದವು ಮತ್ತು ದೇಶದಲ್ಲಿ ಕೋವಿಡ್ -19 ಸೋಂಕನ್ನು ನಿಯಂತ್ರಿಸಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು. ಇದೇ ರೀತಿಯಲ್ಲಿ ಕ್ಷಯ [ಟಿಬಿ], ಏಡ್ಸ್ ಮತ್ತಿತರ ರೋಗಗಳ ನಿಯಂತ್ರಣದಲ್ಲಿ ಅಭಿಯಾನ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.  

ಭಾರತೀಯ ಆರೋಗ್ಯ ವಲಯದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿವೆ ಎಂದು ಹೇಳಿದ ಅವರು, ಭಾರತೀಯ ಆರೋಗ್ಯ ವಲಯದಲ್ಲಿ ಖಾಸಗಿ ವಲಯ ಹೂಡಿಕೆ ಮಾಡಬೇಕು. ಭಾರತ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲಾ ಸಾಧ್ಯತೆಗಳಿವೆ. “ಆರೋಗ್ಯಕರ ಸಮಾಜ ಶ್ರೀಮಂತ ರಾಷ್ಟ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ” ಮತ್ತು ದೇಶದಲ್ಲಿ ಇದನ್ನು ಖಚಿತಪಡಿಸಲು ದಣಿವರಿಯದೇ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿನೋದ್ ಕೆ ಪಾಲ್, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿ.ಇ.ಓ ಡಾ. ಆರ್.ಎಸ್. ಶರ್ಮಾ ಹಾಗೂ ಸಿಐಐ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 ***


(Release ID: 1767238) Visitor Counter : 220