ಪ್ರಧಾನ ಮಂತ್ರಿಯವರ ಕಛೇರಿ
ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಗೆ ಪ್ರಧಾನಮಂತ್ರಿ ಚಾಲನೆ
“ಸ್ವಾತಂತ್ರ್ಯಾ ನಂತರದ ದೀರ್ಘಾವಧಿಯವರೆಗೆ ಭಾರತದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನಹರಿಸದ ಕಾರಣ ನಾಗರಿಕರು ಸೂಕ್ತ ಚಿಕಿತ್ಸೆಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು, ಇದರಿಂದ ಪರಿಸ್ಥಿತಿ ಮತ್ತಷ್ಟು ದುಸ್ಥಿತಿಗೆ ದೂಡಲ್ಪಟ್ಟು, ಆರ್ಥಿಕ ಹೊರೆ ಅಧಿಕವಾಯಿತು’’
“ಬಡವರು, ದುರ್ಬಲರು, ಶೋಷಿತರು, ಹಿಂದುಳಿದವರು ಮತ್ತು ಮಧ್ಯಮ ವರ್ಗದವರ ನೋವನ್ನು ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರ ಅರ್ಥಮಾಡಿಕೊಂಡಿದೆ’’
“ಪಿಎಂ-ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ನಿಂದ ದೇಶದ ಪ್ರತಿಯೊಂದು ಮೂಲೆಯಲ್ಲಿ ನಿರ್ಣಾಯಕ ಸಂಶೋಧನೆಯಿಂದ ಹಿಡಿದು ಚಿಕಿತ್ಸೆಯವರೆಗೆ ಎಲ್ಲ ಆರೋಗ್ಯ ಸೇವೆಗಳ ಸಮಗ್ರ ವ್ಯವಸ್ಥೆ ಸೃಷ್ಟಿ’’
“ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಆರೋಗ್ಯದ ಜತೆಗೆ ಆತ್ಮನಿರ್ಭರ ಭಾರತ ಸಾಧನೆಯ ಸಾಧನ”
“ಕಾಶಿಯ ಹೃದಯ ಹಾಗೆಯೇ ಇದೆ, ಮನಸ್ಸೂ ಕೂಡ ಹಾಗೆಯೇ, ಆದರೆ ದೇಹವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿವೆ’’
“ಇಂದು ಬಿಎಚ್ ಯುನಲ್ಲಿ ತಂತ್ರಜ್ಞಾನದಿಂದ ಆರೋಗ್ಯದವರೆಗೆ ಅದ್ಭುತ ಸೌಕರ್ಯಗಳನ್ನು ಸೃಷ್ಟಿಸಲಾಗಿದೆ; ಇಲ್ಲಿ ಅಧ್ಯಯನಕ್ಕಾಗಿ ದೇಶಾದ್ಯಂತ ಯುವ ಮಿತ್ರರು ಬರುತ್ತಿದ್ದಾರೆ’’
Posted On:
25 OCT 2021 3:18PM by PIB Bengaluru
ಪಿಎಂ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಯೋಜನೆಯ ಗುರಿ ಈ ಕೊರತೆಗಳನ್ನು ನೀಗಿಸುವುದಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಮುಂದಿನ ನಾಲ್ಕೈದು ವರ್ಷಗಳಲ್ಲಿ ಗ್ರಾಮದಿಂದ ಬ್ಲಾಕ್ ಮಟ್ಟದವರೆಗೆ, ಬ್ಲಾಕ್ ಮಟ್ಟದಿಂದ ಜಿಲ್ಲಾಮಟ್ಟ ಹಾಗೂ ಪ್ರಾದೇಶಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ನಿರ್ಣಾಯಕ ಆರೋಗ್ಯ ರಕ್ಷಣಾ ಜಾಲವನ್ನು ಬಲವರ್ಧನೆಗೊಳಿಸುವ ಗುರಿ ಇದೆ. ಹೊಸ ಮಿಷನ್ ಅಡಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನು ವಿವರಿಸಿದ ಪ್ರಧಾನ ಮಂತ್ರಿ ಅವರು ದೇಶದ ಆರೋಗ್ಯ ವಲಯದಲ್ಲಿನ ನಾನಾ ಅಂತರಗಳನ್ನು ತುಂಬಲು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿ ಮೂರು ಪ್ರಮುಖ ಅಂಶಗಳಿಗೆ ಗಮನ ನೀಡಲಾಗಿದೆ ಎಂದರು. ಮೊದಲನೆಯದಾಗಿ ರೋಗ ಪತ್ತೆ (ಡಯಾಗ್ನೋಸ್ಟಿಕ್) ಮತ್ತು ಚಿಕಿತ್ಸೆಗೆ ವ್ಯಾಪಕ ಸೌಕರ್ಯಗಳನ್ನು ಸೃಷ್ಟಿಸುವುದಾಗಿದೆ. ಇದರಡಿ ನಗರ ಮತ್ತು ಗ್ರಾಮಗಳಲ್ಲಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗುವುದು. ಅದರಲ್ಲಿ ರೋಗಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚುವಂತಹ ಸೌಕರ್ಯಗಳನ್ನು ಒದಗಿಸಲಾಗುವುದು. ಅಲ್ಲದೆ ಉಚಿತ ವೈದ್ಯಕೀಯ ಸಮಾಲೋಚನೆ, ಉಚಿತ ಪರೀಕ್ಷೆ, ಉಚಿತ ಔಷಧಗಳು ಈ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಗಂಭೀರ ಕಾಯಿಲೆಗಳಿಗೆ 35 ಸಾವಿರ ಹೊಸ ಗಂಭೀರ ಆರೈಕೆ ಸಂಬಂಧಿ ಹಾಸಿಗೆಗಳನ್ನು 125 ಜಿಲ್ಲೆಗಳಲ್ಲಿನ 600 ಜಿಲ್ಲಾ ಮತ್ತು ರೆಫರೆಲ್ ಆಸ್ಪತ್ರೆಗಳಲ್ಲಿ ಸೃಷ್ಟಿಸಲಾಗುವುದು.
ಯೋಜನೆಯ ಎರಡನೆಯ ಪ್ರಮುಖ ಅಂಶವೆಂದರೆ ರೋಗಗಳ ಪತ್ತೆ(ಡಯಾಗ್ನೋಸ್ಟಿಕ್) ಜಾಲವನ್ನು ವಿಸ್ತರಿಸುವುದಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಈ ಮಿಷನ್ ಅಡಿ ರೋಗಗಳ ಡಯಾಗ್ನೋಸಿಸ್ ಮತ್ತು ಮೇಲ್ವಿಚಾರಣೆಗೆ ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸಲಾಗುವುದು. ದೇಶದ 730 ಜಿಲ್ಲೆಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಲ್ಯಾಬ್ ಗಳನ್ನು ಮತ್ತು 3 ಸಾವಿರ ಬ್ಲಾಕ್ ಗಳಲ್ಲಿ ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳನ್ನು ಸೃಷ್ಟಿಸಲಾಗುವುದು. ಅಷ್ಟೇ ಅಲ್ಲದೆ ರೋಗಗಳ ನಿಯಂತ್ರಣಕ್ಕೆ 5 ಪ್ರಾದೇಶಿಕ ರಾಷ್ಟ್ರೀಯ ಕೇಂದ್ರಗಳು, 20 ಮೆಟ್ರೋ ಪಾಲಿಟನ್ ಘಟಕಗಳು ಮತ್ತು 15 ಬಿಎಸ್ಎಲ್ ಲ್ಯಾಬ್ ಗಳನ್ನು ತೆರೆಯುವ ಮೂಲಕ ಜಾಲವನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಗುವುದು ಎಂದು ಪ್ರಧಾನ ಮಂತ್ರಿ ಹೇಳಿದರು.
ಪ್ರಧಾನ ಮಂತ್ರಿ ಅವರ ಪ್ರಕಾರ ಮೂರನೇ ಅಂಶದಲ್ಲಿ ಸಾಂಕ್ರಾಮಿಕಗಳ ಅಧ್ಯಯನ ಕುರಿತಂತೆ ಹಾಲಿ ಇರುವ ಸಂಶೋಧನಾ ಕೇಂದ್ರಗಳನ್ನು ವಿಸ್ತರಿಸುವುದಾಗಿದೆ. ಹಾಲಿ ಇರುವ 80 ವೈರಾಣು ಡಯಾಗ್ನೋಸ್ಟಿಕ್ ಮತ್ತು ಸಂಶೋಧನಾ ಲ್ಯಾಬ್ ಗಳನ್ನು ಬಲವರ್ಧನೆಗೊಳಿಸಲಾಗುವುದು. 15 ಜೈವಿಕ ಸುರಕ್ಷಾ ಮಟ್ಟ, 15 ಲ್ಯಾಬ್ ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. 4 ಹೊಸ ವೈರಾಣು ರಾಷ್ಟ್ರೀಯ ಕೇಂದ್ರಗಳನ್ನು ಮತ್ತು ಒಂದು ರಾಷ್ಟ್ರೀಯ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಜಾಲದಡಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಂಶೋಧನಾ ವೇದಿಕೆಯನ್ನೂ ಸಹ ಬಲವರ್ಧನೆಗೊಳಿಸಲಾಗುವುದು. “ಇದರ ಅರ್ಥ ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ ಮೂಲಕ ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಚಿಕಿತ್ಸೆಯಿಂದ ನಿರ್ಣಾಯಕ ಸಂಶೋಧನೆವರೆಗೆ ಎಲ್ಲ ಆರೋಗ್ಯ ಸೇವೆಗಳ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿ ಇದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ಅಲ್ಲದೆ ಪ್ರಧಾನಮಂತ್ರಿ ಅವರು, ಸಂಭಾವ್ಯ ಉದ್ಯೋಗ ಸೃಷ್ಟಿಯ ಕ್ರಮಗಳನ್ನು ವಿವರಿಸಿದರು ಮತ್ತು ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ, ಆರೋಗ್ಯದ ಜತೆಗೆ ಆತ್ಮನಿರ್ಭರ ಭಾರತ ಸಾಧಿಸುವ ಸಾಧನವಾಗಿದೆ ಎಂದರು. “ಸಮಗ್ರ ಆರೋಗ್ಯ ರಕ್ಷಣೆ ಸಾಧಿಸುವ ಪ್ರಯತ್ನದ ಭಾಗ ಇದಾಗಿದೆ. ಅದರ ಅರ್ಥ ಆರೋಗ್ಯ ರಕ್ಷಣೆ ಎಲ್ಲರಿಗೂ ಲಭ್ಯವಾಗುವಂತೆ ಮತ್ತು ಕೈಗೆಟಕುವಂತೆ ಮಾಡುವುದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆರೋಗ್ಯದ ಜತೆಗೆ ಯೋಗಕ್ಷೇಮಕ್ಕೂ ಸಮಗ್ರ ಆರೋಗ್ಯ ಮೂಲಸೌಕರ್ಯ ವೃದ್ಧಿಸಲಾಗುವುದು ಎಂದರು. ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್, ಉಜ್ವಲ, ಪೋಷಣ್ ಅಭಿಯಾನ, ಮಿಷನ್ ಇಂದ್ರಧನುಷ್ ಮತ್ತಿತರ ಯೋಜನೆಗಳು ಕೋಟ್ಯಂತರ ಜನರನ್ನು ರೋಗಗಳಿಂದ ರಕ್ಷಿಸಿದೆ. ಎರಡು ಕೋಟಿಗೂ ಅಧಿಕ ಬಡಜನರು ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆದಿದ್ದಾರೆ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಮೂಲಕ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಬಡವರು, ದುರ್ಬಲರು, ಶೋಷಿತರು, ಹಿಂದುಳಿದವರು ಮತ್ತು ಮಧ್ಯಮ ವರ್ಗದವರ ನೋವು ಇಂದು ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಕ್ಕೆ ಅರ್ಥವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ದೇಶದ ಆರೋಗ್ಯ ಸೌಕರ್ಯಗಳನ್ನು ಸುಧಾರಿಸಲು ನಾವು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ಉತ್ತರ ಪ್ರದೇಶ ರಾಜ್ಯದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಎಷ್ಟು ವೇಗವಾಗಿ ಆರಂಭವಾಗುತ್ತಿವೆ ಎಂದರೆ ಅವುಗಳ ಬಹುದೊಡ್ಡ ಪರಿಣಾಮ ರಾಜ್ಯದಲ್ಲಿನ ವೈದ್ಯಕೀಯ ಸೀಟುಗಳು ಮತ್ತು ವೈದ್ಯರ ಸಂಖ್ಯೆಯ ಮೇಲೆ ಆಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೆಚ್ಚಿನ ಸೀಟುಗಳು ಲಭ್ಯವಾಗುವುದರಿಂದ ಇದೀಗ ಬಡಜನರ ಮಕ್ಕಳೂ ಸಹ ವೈದ್ಯರಾಗುವ ಕನಸು ಕಾಣಬಹುದು ಮತ್ತು ಆ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಪ್ರಧಾನ ಮಂತ್ರಿ ಹೇಳಿದರು.
ಪವಿತ್ರ ಕಾಶಿ ನಗರದ ಹಿಂದಿನ ದುಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ನಗರ ಮೂಲಸೌಕರ್ಯಗಳ ಕರುಣಾಜನಕ ಸ್ಥಿತಿಗೆ ಹಲವರು ರಾಜೀನಾಮೆ ನೀಡಿದ್ದರು ಎಂದರು. ಆದರೆ ಇದೀಗ ಸ್ಥಿತಿ ಬದಲಾಗಿದೆ. ಇಂದು ಕಾಶಿಯ ಹೃದಯ ಹಾಗೆಯೇ ಇದೆ. ಮನಸ್ಸು ಕೂಡ ಹಾಗೆಯೇ ಇದೆ. ಆದರೆ ದೇಹವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆದಿವೆ ಎಂದರು. “ಕಳೆದ ಹಲವು ದಶಕಗಳ ಕಾಲ ಮಾಡದೇ ಇದ್ದ ಕೆಲಸ ಕಾರ್ಯಗಳನ್ನು ವಾರಾಣಸಿಯಲ್ಲಿ ಕಳೆದ 7 ವರ್ಷಗಳಲ್ಲಿ ಮಾಡಲಾಗಿದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಗತಿ ಕುರಿತು ವಿವರಿಸಿದ ಪ್ರಧಾನ ಮಂತ್ರಿ ಅವರು, ಕಳೆದ ಕೆಲವು ವರ್ಷಗಳಿಂದೀಚೆಗೆ ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆ ಸಂಪಾದಿಸಿರುವುದು ಪ್ರಮುಖ ಸಾಧನೆಯಾಗಿದೆ ಎಂದರು. “ಬಿಎಚ್ ಯುನಲ್ಲಿ ಆರೋಗ್ಯದಿಂದ ತಂತ್ರಜ್ಞಾನದ ವರೆಗೆ ಅಭೂತಪೂರ್ವ ಸೌಕರ್ಯಗಳನ್ನು ಇಂದು ಸೃಷ್ಟಿಸಲಾಗಿದೆ. ಹಾಗಾಗಿ ದೇಶದ ಎಲ್ಲೆಡೆಯಿಂದ ಯುವ ಮಿತ್ರರು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ” ಎಂದು ಅವರು ಹೇಳಿದರು.
ವಾರಾಣಸಿಯಲ್ಲಿ ಕಳೆದ 5 ವರ್ಷಗಳಲ್ಲಿ ಖಾದಿ ಮಾರಾಟ ಮತ್ತು ಇತರೆ ಗುಡಿ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಶೇಕಡ 90ರಷ್ಟು ಮತ್ತು ಉತ್ಪಾದನೇ ಶೇಕಡ 60ರಷ್ಟು ಹೆಚ್ಚಾಗಿರುವುದಕ್ಕೆ ಪ್ರಧಾನ ಮಂತ್ರಿ ಅವರು ಶ್ಲಾಘಿಸಿದರು ಹಾಗೂ ಮತ್ತೊಮ್ಮೆ ದೇಶದ ಜನರಲ್ಲಿ ‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ – ವೋಕಲ್ ಫಾರ್ ಲೋಕಲ್’ ಗೆ ಒತ್ತು ನೀಡಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಿ ಎಂದು ಮನವಿ ಮಾಡಿದರು. ಸ್ಥಳೀಯ ಉತ್ಪನ್ನಗಳೆಂದರೆ ಕೇವಲ ದೀಪಗಳಲ್ಲ, ದೇಶವಾಸಿಗಳ ಪರಿಶ್ರಮದ ಫಲವಾದ ಯಾವುದೇ ಉತ್ಪನ್ನಕ್ಕೆ ಹಬ್ಬಗಳ ಸಂದರ್ಭದಲ್ಲಿ ದೇಶವಾಸಿಗಳ ಉತ್ತೇಜನ ಮತ್ತು ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳಿದರು.
***
(Release ID: 1766445)
Visitor Counter : 529
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam