ಪ್ರಧಾನ ಮಂತ್ರಿಯವರ ಕಛೇರಿ

ಬಹು ಮಾದರಿ ಸಂಪರ್ಕಕ್ಕಾಗಿರುವ ರಾಷ್ಟ್ರೀಯ ಮಹಾ ಯೋಜನೆ ಗತಿಶಕ್ತಿ ಕಾರ್ಯಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 13 OCT 2021 3:00PM by PIB Bengaluru

ನಮಸ್ಕಾರ್!

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ನಿತಿನ್ ಗಡ್ಕರಿ ಜೀ, ಶ್ರೀ ಪೀಯೂಷ್ ಗೋಯಲ್ ಜೀ, ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಶ್ರೀ ಸರ್ಭಾನಂದ ಸೋನೋವಾಲ್ ಜೀ, ಶ್ರೀ ಜ್ಯೋತಿರಾದಿತ್ಯ ಸಿಂಧ್ಯಾ ಜೀ, ಶ್ರೀ ಅಶ್ವಿನಿ ವೈಷ್ಣವ್ ಜೀ, ಶ್ರೀ ರಾಜ ಕುಮಾರ್ ಸಿಂಗ್ ಜೀ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೇ, ಉಪ ರಾಜ್ಯಪಾಲರೇ, ರಾಜ್ಯ ಸಂಪುಟಗಳ ಸದಸ್ಯರೇ, ಕೈಗಾರಿಕೋದ್ಯಮಗಳ ಸಹೋದ್ಯೋಗಿಗಳೇ, ಇತರ ಗೌರವಾನ್ವಿತರೇ ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ,

ಇಂದು ದುರ್ಗಾ ಅಷ್ಟಮಿ. ಇಂದು ದೇಶಾದ್ಯಂತ ಶಕ್ತಿ ಸ್ವರೂಪವನ್ನು ಆರಾಧಿಸಲಾಗುತ್ತಿದೆ ಮತ್ತು ಕನ್ಯಾ ಪೂಜೆಯನ್ನೂ ನೆರವೇರಿಸಲಾಗುತ್ತಿದೆ. ಮತ್ತು ಶಕ್ತಿಯನ್ನು ಪೂಜಿಸುವ ಪ್ರಶಸ್ತ  ಸಂದರ್ಭದಲ್ಲಿ ದೇಶದ ಅಭಿವೃದ್ಧಿಯ ವೇಗಕ್ಕೆ ಶಕ್ತಿಯನ್ನು ನೀಡುವ ಪವಿತ್ರ ಕೆಲಸವನ್ನು ಮಾಡಲಾಗುತ್ತಿದೆ.

ಕಾಲಾವಧಿ ದೇಶದ ಸ್ವಾತಂತ್ರ್ಯದ 75 ವರ್ಷಗಳ ಕಾಲಾವಧಿ, ಸ್ವಾತಂತ್ರ್ಯದ ಪುಣ್ಯಕರ ಶಕೆ ಇದು. ಆತ್ಮ ನಿರ್ಭರ ಭಾರತದ ದೃಢ ನಿರ್ಧಾರದೊಂದಿಗೆ, ನಾವು ಮುಂದಿನ 25 ವರ್ಷಗಳ ಭಾರತಕ್ಕೆ ಅಡಿಪಾಯವನ್ನು ಹಾಕುತ್ತಿದ್ದೇವೆ. ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯು ಭಾರತದ ಸ್ವಾವಲಂಬನೆಯ ದೃಢ ನಿರ್ಧಾರದತ್ತ ಆತ್ಮ ವಿಶ್ವಾಸವನ್ನು ವೃದ್ಧಿಸಲಿದೆ. ರಾಷ್ಟ್ರೀಯ ಮಹಾ ಯೋಜನೆ 21 ನೇ ಶತಮಾನದ ಭಾರತಕ್ಕೆ ವೇಗವನ್ನು ಒದಗಿಸಲಿದೆ. ಮುಂದಿನ ತಲೆಮಾರಿನ ಮೂಲಸೌಕರ್ಯ ಮತ್ತು ಬಹುಮಾದರಿ ಸಂಪರ್ಕಗಳು ರಾಷ್ಟ್ರೀಯ ಯೋಜನೆಯಿಂದಾಗಿ ವೇಗ ಗಳಿಸಿಕೊಳ್ಳಲಿವೆ. ರಾಷ್ಟ್ರೀಯ ಯೋಜನೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸರಕಾರಿ ನೀತಿಗಳಿಗೆ, ಯೋಜನೆಯಿಂದ ಹಿಡಿದು ಅನುಷ್ಠಾನದವರೆಗೆ ವೇಗವನ್ನು ದೊರಕಿಸಿಕೊಡಲಿದೆ. ಗತಿಶಕ್ತಿ ರಾಷ್ಟ್ರೀಯ ಯೋಜನೆ ಸರಕಾರಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ಖಚಿತ ಮಾಹಿತಿ ಮತ್ತು ಮಾರ್ಗದರ್ಶನವನ್ನು ಒದಗಿಸಲಿದೆ.

ಗತಿ ಶಕ್ತಿಯ (ವೇಗ ಮತ್ತು ಶಕ್ತಿ) ಬಹು ದೊಡ್ಡ ಆಂದೋಲನದ ಕೇಂದ್ರದಲ್ಲಿ ಜನರು, ಉದ್ಯಮ, ವ್ಯಾಪಾರೀ ಜಗತ್ತು, ಉತ್ಪಾದಕರು ಮತ್ತು ಭಾರತದ ರೈತರು ಇರುತ್ತಾರೆ. ಇದು ಭಾರತದ ಪ್ರಸ್ತುತ ಮತ್ತು ಭವಿಷ್ಯದ ಜನಾಂಗಗಳಿಗಾಗಿ 21 ನೇ ಶತಮಾನದ ಭಾರತವನ್ನು ನಿರ್ಮಾಣ ಮಾಡಲು ಹೊಸ ಶಕ್ತಿಯನ್ನು ನೀಡುತ್ತದೆ, ಮತ್ತು ದಾರಿಯಲ್ಲಿರುವ ಎಡರು ತೊಡರುಗಳನ್ನು ನಿವಾರಿಸುತ್ತದೆ. ಪವಿತ್ರ ದಿನದಂದು ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯನ್ನು ಆರಂಭ ಮಾಡುವ ಅವಕಾಶ ನನಗೆ ದೊರಕಿದುದು ನನ್ನ ಸೌಭಾಗ್ಯ.

ಸ್ನೇಹಿತರೇ,

ಇಂದು ಪ್ರಗತಿ ಮೈದಾನದಲ್ಲಿ ನಿರ್ಮಾಣ ಮಾಡಲಾದ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರಗಳ ನಾಲ್ಕು ಪ್ರದರ್ಶನ ಸಭಾಂಗಣಗಳನ್ನು ಉದ್ಘಾಟಿಸಲಾಗಿದೆ. ದಿಲ್ಲಿಯಲ್ಲಿ ಆಧುನಿಕ ಮೂಲಸೌಕರ್ಯಗಳಿಗೆ ಸಂಬಂಧಿಸಿ ಇದು ಪ್ರಮುಖ ಹೆಜ್ಜೆಯಾಗಿದೆ. ಪ್ರದರ್ಶನ ಕೇಂದ್ರಗಳು ಎಂ.ಎಸ್.ಎಂ..ಗಳು, ಕರಕುಶಲಕಲೆಗಳು, ಮತ್ತು ಗುಡಿ ಕೈಗಾರಿಕೆಗಳು ಅವುಗಳ ಉತ್ಪಾದನೆಗಳನ್ನು ಪ್ರದರ್ಶಿಸಲು ಮತ್ತು ಜಾಗತಿಕ ಮಾರುಕಟ್ಟೆಗೆ ಅವುಗಳ ತಲುಪುವಿಕೆಯನ್ನು ವಿಸ್ತರಿಸಲು ಬಹಳ ದೊಡ್ಡ ಸಹಾಯವನ್ನು ಮಾಡಲಿವೆ. ದಿಲ್ಲಿಯ ಮತ್ತು ದೇಶದ ಜನರಿಗೆ ನಾನು ನನ್ನ ಶುಭಾಶಯಗಳನ್ನು ಹೇಳುತ್ತೇನೆ.

ಸ್ನೇಹಿತರೇ,

ದಶಕಗಳಿಂದ ಸರಕಾರಿ ವ್ಯವಸ್ಥೆ ಕೆಲಸ ಮಾಡಿಕೊಂಡು ಬಂದ ರೀತಿ, ಸರಕಾರದ ಕುರಿತಂತೆ ಜನರ ಭಾವನೆಗಳು, ಅಭಿಪ್ರಾಯಗಳು ಹೇಗಿವೆ ಎಂದರೆ ಕಳಪೆ ಗುಣಮಟ್ಟ, ವಿಳಂಬ, ಅನವಶ್ಯಕ ಅಡ್ಡಿ ಆತಂಕಗಳು ಮತ್ತು ಸಾರ್ವಜನಿಕ ಹಣಕಾಸಿಗೆ ಅವಮಾನ. ನಾನು ಅವಮಾನ ಎಂಬ ಶಬ್ದವನ್ನು ಬಳಸುತ್ತಿದ್ದೇನೆ, ಯಾಕೆಂದರೆ ಅಧಿಕಾರ ನಡೆಸಿದ ಸರಕಾರಗಳು ನಿರಂತರವಾಗಿ ತೆರಿಗೆಗಳ ರೂಪದಲ್ಲಿ ಜನರು ಸರಕಾರಕ್ಕೆ ನೀಡಿದ ಸಾರ್ವಜನಿಕ ಹಣದ ಬಳಕೆಯಲ್ಲಿ  ಒಂದು ರೂಪಾಯಿ ಕೂಡಾ ಅಪವ್ಯಯವಾಗಬಾರದು ಎಂಬ ಬಗ್ಗೆ ಕಾಳಜಿ ವಹಿಸಲೇ ಇಲ್ಲ. ಇದು ಹೀಗೆಯೇ ಮುಂದುವರಿಯಿತು. ಜನತೆ ಕೂಡಾ ದೇಶ ಇದೇ ರೀತಿ ನಡೆಯುವುದು  ಎಂಬುದಕ್ಕೆ ಹೊಂದಿ ಕೊಂಡರು. ಅವರು ಇತರ ದೇಶಗಳ ಪ್ರಗತಿಯ ವೇಗ ನೋಡಿ ದುಃಖಿತರಾಗಿದ್ದರು ಮತ್ತು ಮಾನಸಿಕ ಕ್ಲೇಷಗಳನ್ನು ಅನುಭವಿಸಿದರು. ಮತ್ತು ಯಾವುದೂ ಬದಲಾಗದು ಎಂದು ತಮ್ಮನ್ನು ತಾವು ಸಮಾಧಾನಪಡಿಸಿಕೊಂಡರು. ಈಗಷ್ಟೇ ನಾವು ನೋಡಿದ ಸಾಕ್ಷ್ಯಚಿತ್ರ, ಅದು ಎಲ್ಲಾ ಕಡೆಯೂ ಕಂಡು ಬರುವಂತಹದು-ಕೆಲಸ ಪ್ರಗತಿಯಲ್ಲಿದೆ ಎಂಬ ಸಂಕೇತ. ಆದರೆ ಕೆಲಸ ಪೂರ್ಣಗೊಳ್ಳುತ್ತದೆ ಮತ್ತು ಅದೂ ಸಮಯದ ಮಿತಿಯೊಳಗೆ ಮುಕ್ತಾಯಗೊಳುತ್ತದೆ ಎಂಬ ಬಗ್ಗೆ ಜನತೆಗೆ ಖಾತ್ರಿ ಇರಲಿಲ್ಲ. ಕೆಲಸ ಪ್ರಗತಿಯಲ್ಲಿದೆ ಎಂಬ ಹೇಳಿಕೆ ಅಪನಂಬಿಕೆಯ ಸಂಕೇತವಾಗಿ ಅರ್ಥೈಸಲ್ಪಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ದೇಶವು ಹೇಗೆ ಪ್ರಗತಿ ಸಾಧಿಸಬಹುದು?. ಅಲ್ಲಿ ವೇಗ ಇದ್ದಾಗ ಮಾತ್ರ ಅದನ್ನು ಪ್ರಗತಿ ಎಂದು ಪರಿಗಣಿಸಲಾಗುತ್ತದೆ. ವೇಗದ ಬಗ್ಗೆ ತಾಳ್ಮೆ ಇಲ್ಲದಿರುವಿಕೆ ಮತ್ತು ಸಾಮೂಹಿಕ ಪ್ರಯತ್ನಗಳು ಪ್ರಗತಿಯನ್ನು ನಿರ್ಧರಿಸುತ್ತವೆ.

ಸರಕಾರದ ಹಳೆಯ ಮಾದರಿಯ ಧೋರಣೆಯನ್ನು ಬದಿಗಿರಿಸಿ, 21 ನೇ ಶತಮಾನದ ಭಾರತ ಮುನ್ನಡೆಯುತ್ತಿದೆ. ಇಂದಿನ ಮಂತ್ರ-“ಪ್ರಗತಿಗಾಗಿ ಇಚ್ಛಾಶಕ್ತಿ, “ಪ್ರಗತಿಗಾಗಿ ಕೆಲಸ” “ಪ್ರಗತಿಗಾಗಿ ಸಂಪತ್ತು, “ಪ್ರಗತಿಗಾಗಿ ಯೋಜನೆಮತ್ತುಪ್ರಗತಿಗೆ ಆದ್ಯತೆಗಳಾಗಿವೆ. ನಿಗದಿತ ಕಾಲಾವಧಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸದ ಸಂಸ್ಕೃತಿಯನ್ನು ನಾವು ಬೆಳೆಸಿದ್ದಲ್ಲದೆ ಈಗ ಯೋಜನೆಗಳನ್ನು ನಿಗದಿತ ಕಾಲಾವಧಿಗೆ ಮೊದಲೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂದಿನ ಭಾರತ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲು ಗರಿಷ್ಠ ಹೂಡಿಕೆಗೆ ಬದ್ಧವಾಗಿದೆ ಮಾತ್ರವಲ್ಲ ಯೋಜನೆಗಳು ವಿಳಂಬಗೊಳ್ಳದಂತೆ, ಅಲ್ಲಿ ಯಾವುದೇ ಅಡ್ಡಿ, ಆತಂಕಗಳು ಎದುರಾಗದಂತೆ ಮತ್ತು ಕಾಮಗಾರಿ ಸಕಾಲದಲ್ಲಿ ಮುಗಿಯುವಂತೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸ್ನೇಹಿತರೇ,

ಸಣ್ಣ ಮನೆ ಕಟ್ಟುವ ಸಾಮಾನ್ಯ ಮನುಷ್ಯ ಕೂಡಾ ಸರಿಯಾದ ಯೋಜನೆ ತಯಾರಿಸುತ್ತಾನೆ. ದೊಡ್ಡ ವಿಶ್ವವಿದ್ಯಾಲಯ ಅಥವಾ ಕಾಲೇಜು ನಿರ್ಮಾಣ ಮಾಡಿದಾಗ ಕೂಡಾ ಅದನ್ನು ಸಂಪೂರ್ಣ ಯೋಜನೆಯೊಂದಿಗೆ ನಿರ್ಮಾಣ ಮಾಡಲಾಗಿರುತ್ತದೆ. ಅದರ ವಿಸ್ತರಣೆಯ ವ್ಯಾಪ್ತಿಯನ್ನು ಕೂಡಾ ಮುಂಚಿತವಾಗಿ ಪರಿಗಣಿಸಲಾಗಿರುತ್ತದೆ. ಆದರೆ ದುರದೃಷ್ಟವಶಾತ್ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿ ಸಮಗ್ರ  ಯೋಜನೆಯಲ್ಲಿ ಹಲವು ಹಿಂಜರಿತಗಳು ನಮ್ಮ ಗಮನಕ್ಕೆ ಬರುತ್ತವೆ. ಸಣ್ಣ ಕೆಲಸವಾದರೂ ರೈಲ್ವೇಯು ತನ್ನದೇ ಯೋಜನೆಯನ್ನು ರೂಪಿಸುತ್ತದೆ. ರಸ್ತೆ ಸಾರಿಗೆ ಇಲಾಖೆಯೂ ತನ್ನದೇ ಯೋಜನೆಯನ್ನು ರೂಪಿಸುತ್ತದೆ, ಟೆಲಿಕಾಂ ಇಲಾಖೆಗೆ ತನ್ನದೇ ಯೋಜನೆ ಇದೆ. ಅನಿಲ ಜಾಲವನ್ನು ಬೇರೆಯದೇ ಯೋಜನೆ ಮೂಲಕ ಮಾಡಲಾಗುತ್ತದೆ. ಅದೇ ರೀತಿ, ವಿವಿಧ ಇಲಾಖೆಗಳು ಬೇರೆ ಬೇರೆ ಯೋಜನೆಗಳನ್ನು ಮಾಡುತ್ತವೆ.

ನಾವು ಆಗಾಗ ನೋಡುತ್ತೇವೆ, ರಸ್ತೆಯೊಂದು ನಿರ್ಮಾಣ ಆದಾಗ, ಅದು ಪೂರ್ಣಗೊಂಡ ಬಳಿಕ ಜಲ ಇಲಾಖೆ ಅಲ್ಲಿಗೆ ಬರುತ್ತದೆ. ಅದು ಮತ್ತೆ ನೀರಿನ ಕೊಳವೆಗಳನ್ನು ಹಾಕಲು ರಸ್ತೆಯನ್ನು ಅಗೆಯುತ್ತದೆ. ಇದು ಹೀಗೆಯೇ ನಡೆಯುತ್ತದೆ. ಕೆಲವೊಮ್ಮೆ ರಸ್ತೆಗಳನ್ನು ನಿರ್ಮಾಣ ಮಾಡುವವರು ಡಿವೈಡರ್ ಗಳನ್ನು ನಿರ್ಮಿಸುತ್ತಾರೆ. ಬಳಿಕ ಸಂಚಾರ ವಿಭಾಗದ ಪೊಲೀಸರು ಬಂದು ಟ್ರಾಫಿಕ್ ಜಾಂ ಆಗುವುದರಿಂದ ಡಿವೈಡರ್ ಗಳನ್ನು ತೆಗೆಯಬೇಕು ಎಂದು ಹೇಳುತ್ತಾರೆ. ರಸ್ತೆಗಳು ಪರಸ್ಪರ ಸಂಧಿಸುವಲ್ಲಿ ವೃತ್ತವನ್ನು ನಿರ್ಮಾಣ ಮಾಡಿದರೆ ಅದರಿಂದ ವಾಹನ ಸಂಚಾರ ಸರಾಗವಾಗುವುದಕ್ಕೆ ಬದಲು ಅಲ್ಲಿ ಗೊಂದಲಗಳುಂಟಾಗುತ್ತವೆ. ಇಂತಹ ಘಟನೆಗಳು ದೇಶಾದ್ಯಂತ ಸಂಭವಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಯೋಜನೆಗಳನ್ನು ಸಂಯೋಜಿಸಬೇಕಾದ ನಿಟ್ಟಿನಲ್ಲಿ ಬಹಳ ದೊಡ್ಡ ಪ್ರಯತ್ನಗಳು ನಡೆಯಬೇಕಾಗಿದೆ. ತಪ್ಪುಗಳನು ಕಂಡು ಹಿಡಿಯಲು ಮತ್ತು ಸರಿಪಡಿಸಲು ಬಹಳಷ್ಟು ಪ್ರಯತ್ನಗಳು ಬೇಕಾಗುತ್ತವೆ.

ಸ್ನೇಹಿತರೇ,

ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಬೃಹತ್ ಯೋಜನೆ ಮತ್ತು ಕಿರು ಅನುಷ್ಠಾನಗಳ ನಡುವೆ ಇರುವ ಭಾರೀ ಅಂತರ. ವಿವಿಧ ಇಲಾಖೆಗಳಿಗೆ ಯಾವ ಇಲಾಖೆ ಯಾವ ಯೋಜನೆಯನ್ನು ಆರಂಭ ಮಾಡುತ್ತದೆ ಮತ್ತು ಎಲ್ಲಿ ಅನುಷ್ಠಾನವಾಗುತ್ತದೆ ಎಂಬ ಬಗ್ಗೆ ಅರಿವು ಇರುವುದಿಲ್ಲ. ರಾಜ್ಯಗಳಿಗೆ ಕೂಡಾ ಬಗ್ಗೆ ಮುಂಚಿತವಾದ ಮಾಹಿತಿ ಲಭ್ಯ ಇರುವುದಿಲ್ಲ.ಇಂತಹ ಸಮಸ್ಯೆಗಳಿಂದಾಗಿ ನಿರ್ಧಾರ ಪ್ರಕ್ರಿಯೆಗೂ ತೊಂದರೆಯಾಗುತ್ತದೆ ಮತ್ತು ಹಣಕಾಸಿನ ಅಪವ್ಯಯವೂ ಆಗುತ್ತದೆ. ಇದರ ಬಹಳ ದೊಡ್ಡ ಪರಿಣಾಮ ಎಂದರೆ ಶಕ್ತಿ ಹೆಚ್ಚುತ್ತ ಹೋಗುವುದಕ್ಕೆ ಬದಲು ಅದು ವಿಭಜನೆಯಾಗುತ್ತಾ ಹೋಗುತ್ತದೆ. ನಮ್ಮ ಖಾಸಗಿ ರಂಗದಲ್ಲಿರುವವರಿಗೂ ಭವಿಷ್ಯದಲ್ಲಿ ಪ್ರದೇಶದ ಮೂಲಕ ಯಾವುದಾದರೂ ರಸ್ತೆ ಹಾದು ಹೋಗುತ್ತದೆಯೇ ಎಂಬ ಬಗ್ಗೆಯೂ ಗೊತ್ತಿರುವುದಿಲ್ಲ. ಅಲ್ಲಿ ಕಾಲುವೆ ನಿರ್ಮಾಣ ಆಗುತ್ತದೆಯೇ ಎಂಬ ಬಗ್ಗೆಯೂ ತಿಳಿದಿರುವುದಿಲ್ಲ. ಅಥವಾ ವಿದ್ಯುತ್ ಕೇಂದ್ರ ನಿರ್ಮಾಣ ಆಗುತ್ತದೆಯೇ ಎಂಬ ಬಗ್ಗೆಯೂ ತಿಳಿದಿರುವುದಿಲ್ಲ. ಇದರ ಪರಿಣಾಮವೆಂದರೆ, ಅವರಿಗೂ ಉತ್ತಮ ರೀತಿಯಲ್ಲಿ ಯೋಜನೆ ರೂಪಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲಾ ಸಮಸ್ಯೆಗಳಿಗೆ ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆಯಲ್ಲಿ ಪರಿಹಾರವಿದೆ. ನಾವು ಮಹಾ ಯೋಜನೆಯನ್ವಯ ಮುಂದುವರಿದರೆ, ನಮ್ಮ ಸಂಪನ್ಮೂಲಗಳು ಕೂಡಾ ಗರಿಷ್ಠ ಪ್ರಮಾಣದಲ್ಲಿ ಬಳಕೆಗೆ ಬರುತ್ತವೆ.

ಸ್ನೇಹಿತರೇ,

ಮೂಲಸೌಕರ್ಯ ಎಂಬುದು ನಮ್ಮ ದೇಶದಲ್ಲಿ ಬಹುತೇಕ ರಾಜಕೀಯ ಪಕ್ಷಗಳ ಆದ್ಯತೆಯಿಂದ ದೂರ ಉಳಿದಿತ್ತು. ಅದು ಅವುಗಳ ಚುನಾವಣಾ ಪ್ರಣಾಳಿಕೆಯಲ್ಲೂ ಕಾಣಿಸುತ್ತಿರಲಿಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಕೆಲವು ರಾಜಕೀಯ ಪಕ್ಷಗಳು ದೇಶಕ್ಕೆ ಅವಶ್ಯವಾದ ಮೂಲಸೌಕರ್ಯಗಳ ನಿರ್ಮಾಣವನ್ನು ಟೀಕಿಸಲು ಆರಂಭ ಮಾಡಿವೆ. ಸುಸ್ಥಿರ ಅಭಿವೃದ್ಧಿಗಾಗಿ ಗುಣಮಟ್ಟದ ಮೂಲಸೌಕರ್ಯ ಹಲವು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ, ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತದೆ ಎಂಬುದು ಇಡೀ ಜಗತ್ತಿನಲ್ಲಿಯೇ ಒಪ್ಪಿರುವಂತಹ ಸಂಗತಿಯಾಗಿದೆ. ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಇಲ್ಲದೆ ನಾವು ಯಾವುದೇ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂಬಂತೆ, ಅದೇ ರೀತಿಯಲ್ಲಿ ನಾವು ಉತ್ತಮ ಮತ್ತು ಆಧುನಿಕ ಮೂಲಸೌಕರ್ಯ ಇಲ್ಲದಿದ್ದರೆ ಸರ್ವಾಂಗೀಣ ಪ್ರಗತಿ ಸಾಧಿಸುವುದೂ ಸಾಧ್ಯವಿಲ್ಲ.

ಸ್ನೇಹಿತರೇ,

ರಾಜಕೀಯ ಇಚ್ಛಾ ಶಕ್ತಿಯ ಕೊರತೆಯ ಜೊತೆಗೆ ದೇಶದ ಮೂಲಸೌಕರ್ಯ ಅಭಿವೃದ್ಧಿಯು ಸರಕಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಮತ್ತು ಒಳಗಣ ಕಚ್ಚಾಟದಿಂದ ಸಮಸ್ಯೆಗಳಿಗೆ ಒಳಗಾಗಿತ್ತು. ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ನಿಟ್ಟಿನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗುತ್ತಿದ್ದುದನ್ನೂ ನಾವು ನೋಡಿದ್ದೇವೆ. ಇದರ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸಹಾಯವಾಗುವಂತಿದ್ದ  ಯೋಜನೆಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗುವಂತಾಗಿದೆ. ಮೇಲಾಗಿ ಬಹಳ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಯೋಜನೆಗಳು ಅವುಗಳ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತವೆ. ಮತ್ತು ಅವುಗಳ ತುರ್ತು ಆವಶ್ಯಕತೆ ಕೂಡಾ ಲುಪ್ತವಾಗುವಂತಾಗಿದೆ. 2014ರಲ್ಲಿ ನಾನು ಹೊಸ ಜವಾಬ್ದಾರಿಯೊಂದಿಗೆ  ದಿಲ್ಲಿಗೆ ಬಂದಾಗ  ದಶಕಗಳಿಂದ ಬಾಕಿ ಉಳಿದಿದ್ದ ನೂರಾರು ಯೋಜನೆಗಳಿದ್ದವು. ನಾನು ವೈಯಕ್ತಿಕವಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಮೌಲ್ಯದ ಇಂತಹ ಯೋಜನೆಗಳನ್ನು ಪರಾಮರ್ಶೆ ಮಾಡಿದೆ. ನಾನು ಸರಕಾರದ ಎಲ್ಲಾ ಇಲಾಖೆಗಳನ್ನು ಮತ್ತು ಸಚಿವಾಲಯಗಳನ್ನು ಸಮಾನ ವೇದಿಕೆಯಡಿ ತಂದು ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿದೆ. ನನಗೀಗ ತೃಪ್ತಿ ಇದೆ, ಪ್ರತಿಯೊಬ್ಬರ ಗಮನ ಕೂಡಾ ಸಮನ್ವಯದ ಕೊರತೆಯಿಂದ ಯೋಜನೆಗಳು ಬಾಕಿಯಾಗಬಾರದು ಎಂಬುದರತ್ತ ಹರಿದಿದೆ. ಈಗ ಸರಕಾರದ ಸಾಮೂಹಿಕ ಶಕ್ತಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಬಳಕೆಯಾಗುತ್ತಿದೆ. ಇದರಿಂದಾಗಿ ದಶಕಗಳಿಂದ ಪೂರ್ಣಗೊಳ್ಳದೆ ಬಾಕಿಯಾಗಿದ್ದ ಹಲವು ಯೋಜನೆಗಳು ಪೂರ್ಣಗೊಂಡಿವೆ.

ಸ್ನೇಹಿತರೇ,

ಪ್ರಧಾನ ಮಂತ್ರಿ ಗತಿಶಕ್ತಿ 21 ನೇ ಶತಮಾನದ ಭಾರತ ಮೂಲಸೌಕರ್ಯ ಯೋಜನೆಗಳಲ್ಲಿ ಸಮನ್ವಯದ ಕೊರತೆಯಿಂದಾಗಿ ಹಣವನ್ನಾಗಲೀ, ಸಮಯವನ್ನಾಗಲೀ ಅಪವ್ಯಯ ಮಾಡುವುದಿಲ್ಲ ಎಂಬುದನ್ನು ಈಗ ಖಾತ್ರಿಪಡಿಸಲಿದೆ. ಪಿ.ಎಂ.ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಅಡಿಯಲ್ಲಿ ರಸ್ತೆಗಳಿಂದ ಹಿಡಿದು ರೈಲ್ವೇಗಳವರೆಗೆ, ವಾಯುಯಾನದಿಂದ ಹಿಡಿದು ಕೃಷಿಯವರೆಗೆ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಪರಸ್ಪರ ಜೋಡಿಸಲ್ಪಟ್ಟಿರುತ್ತವೆ. ಪ್ರತೀ ಬೃಹತ್ ಯೋಜನೆಗೆ ಸಂಬಂಧಿಸಿ ತಾಂತ್ರಿಕ ವೇದಿಕೆಯನ್ನು ಕೂಡಾ ರೂಪಿಸಲಾಗುತ್ತದೆ ಮತ್ತು ಇದರಿಂದ ಪ್ರತೀ ಇಲಾಖೆಗೆ ಸರಿಯಾದ ಮತ್ತು ನಿಖರವಾದ ಮಾಹಿತಿ ಸಕಾಲದಲ್ಲಿ ಸಿಗುತ್ತದೆ. ಇಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಇತರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಾನು ಎಲ್ಲಾ ರಾಜ್ಯಗಳಿಗೂ ಯೋಜನೆಗಳನ್ನು ತ್ವರಿತಗೊಳಿಸುವುದಕ್ಕಾಗಿ ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಯೋಜನೆಯೊಂದಿಗೆ ಸೇರಬೇಕು ಎಂದು ಮನವಿ ಮಾಡುತ್ತೇನೆ. ಇದರಿಂದ ರಾಜ್ಯಗಳ ಜನತೆಗೂ ಬಹಳ ಪ್ರಯೋಜನಗಳಾಗುತ್ತವೆ.

ಸ್ನೇಹಿತರೇ,

ಪಿ.ಎಂ. ಗತಿಶಕ್ತಿ ಮಹಾ ಯೋಜನೆ ಸರಕಾರಿ ಪ್ರಕ್ರಿಯೆಗಳನ್ನು ಮತ್ತು ಅದರ ವಿವಿಧ ಭಾಗೀದಾರರನ್ನು ಒಗ್ಗೂಡಿಸುವ ಉದ್ದೇಶವನ್ನು ಮಾತ್ರ ಹೊಂದಿರುವುದಲ್ಲ, ಅದು ವಿವಿಧ ಮಾದರಿಯ ಸಾರಿಗೆ ಸಂಚಾರವನ್ನು ಸಂಯೋಜಿಸಲೂ ಸಹಾಯ ಮಾಡುತ್ತದೆ. ಇದು ಸಮಗ್ರ ಆಡಳಿತದ ವಿಸ್ತರಣೆ. ಉದಾಹರಣೆಗೆ ಬಡವರಿಗಾಗಿರುವ ಸರಕಾರದ ಮನೆಗಳು ಆವರಣ ಗೋಡೆಯನ್ನು ಹೊಂದಿರುವುದು ಮಾತ್ರವಲ್ಲ, ಅಲ್ಲಿ ಶೌಚಾಲಯ, ವಿದ್ಯುತ್, ನೀರು ಮತ್ತು ಅಡುಗೆ ಅನಿಲ ಸಂಪರ್ಕ ಇತ್ಯಾದಿ ಸೌಲಭ್ಯಗಳೂ ಇರುತ್ತವೆ. ಅದೇ ಚಿಂತನೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಹಾ ಯೋಜನೆಯಲ್ಲೂ ಇದೆ. ಹಿಂದೆ ಕೈಗಾರಿಕೋದ್ಯಮಗಳಿಗೆ ವಿಶೇಷ ವಲಯಗಳನ್ನು ಘೋಷಿಸಿದ್ದನ್ನು ನಾವು ನೋಡಿದ್ದೇವೆ, ಆದರೆ ಸಂಪರ್ಕ ಒದಗಿಸುವಲ್ಲಿ ಅಥವಾ ವಿದ್ಯುತ್-ನೀರು-ಟೆಲಿಕಾಂ ಸೌಲಭ್ಯಗಳನ್ನು ಒದಗಿಸುವಲ್ಲಿ ಅಲ್ಲಿ ಗಂಭೀರ ಪ್ರಯತ್ನಗಳಾಗಿರಲಿಲ್ಲ.

ಸ್ನೇಹಿತರೇ,

ಗಣಿಗಾರಿಕೆ ನಡೆಯುವ ಬಹಳಷ್ಟು ಸ್ಥಳಗಳಿಗೆ ರೈಲ್ವೇ ಸಂಪರ್ಕ ಇಲ್ಲದಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ಬಂದರುಗಳಿರುವಲ್ಲಿ ಅವುಗಳನ್ನು ಜೋಡಿಸುವ ರೈಲು ಅಥವಾ ರಸ್ತೆ ಸೌಲಭ್ಯಗಳು ಇಲ್ಲದಿರುವುದನ್ನು ನಾವು ಕಂಡಿದ್ದೇವೆ. ಕಾರಣಗಳಿಂದಾಗಿ ಉತ್ಪಾದನಾ ವೆಚ್ಚ, ರಫ್ತು ವೆಚ್ಚ  ಮತ್ತು ಸಾಗಾಣಿಕಾ ವೆಚ್ಚಗಳು ಭಾರತದಲ್ಲ್ಲಿ ಅತೀ ಹೆಚ್ಚು ಆಗಿವೆ. ಸಂಶಯ ಇಲ್ಲ, ಇದು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಒಂದು ದೊಡ್ಡ ಎಡರು ತೊಡರು.

ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಸಾಗಾಣಿಕಾ ಖರ್ಚು ಜಿ.ಡಿ.ಪಿ. 13 ಶೇಕಡಾದಷ್ಟಿದೆ. ಜಗತ್ತಿನ ಪ್ರಮುಖ ದೇಶಗಳಲ್ಲಿ ಇಂತಹ ಸ್ಥಿತಿ ಇಲ್ಲ. ಸಾಗಾಣಿಕಾ ವೆಚ್ಚ ಹೆಚ್ಚು ಇರುವುದರಿಂದ ಭಾರತದ ರಫ್ತುಗಳ ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮವುಂಟಾಗಿದೆ. ಭಾರತೀಯ ರಫ್ತುದಾರರು ಸರಕುಗಳನ್ನು ಉತ್ಪಾದನಾ ತಾಣದಿಂದ ಬಂದರುಗಳಿಗೆ ಸಾಗಾಟ ಮಾಡಲು ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಬೇಕಾಗಿದೆ. ಇದರ ಪರಿಣಾಮವಾಗಿ ಅವರ ಸರಕುಗಳ ಬೆಲೆ ಇತರ ದೇಶಗಳಿಗೆ ಹೋಲಿಸಿದರೆ ಬಹಳ ಹೆಚ್ಚು ಇರುತ್ತದೆ. ಕೃಷಿ ವಲಯದಲ್ಲಿಯೂ ಕೂಡಾ ನಮ್ಮ ರೈತರು ಇದರಿಂದಾಗಿ ಬಹಳ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಆದುದರಿಂದ ಅಡೆತಡೆರಹಿತ ಸಂಪರ್ಕವನ್ನು ಹೆಚ್ಚಿಸುವುದು ಹೊತ್ತಿನ ಆವಶ್ಯಕತೆಯಾಗಿದೆ ಮತ್ತು ಭಾರತದಲ್ಲಿ ಕೊನೆಯ ಮೂಲೆಯವರೆಗೂ ಸಂಪರ್ಕವನ್ನು ಬಲಪಡಿಸಬೇಕಾಗಿದೆ. ಆದುದರಿಂದ ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆ ಬಹಳ ಮಹತ್ವದ ಕ್ರಮ. ಬರಲಿರುವ ದಿನಗಳಲ್ಲಿ ಪ್ರತಿಯೊಂದು ರೀತಿಯ ಮೂಲಸೌಕರ್ಯ ಕೂಡಾ ಪರಸ್ಪರ ಪೂರಕವಾಗಿರುತ್ತದೆ ಮತ್ತು ಬೆಂಬಲಿತವಾಗಿರುತ್ತದೆಮತ್ತು ಪ್ರತಿಯೊಬ್ಬ ಭಾಗೀದಾರರೂ ಇದರಲ್ಲಿ ಉತ್ಸಾಹದಿಂದ ಕೈಜೋಡಿಸಲು ಪ್ರೇರೇಪಣೆ ಪಡೆಯುವುದಕ್ಕೆ ಅನೇಕ ಕಾರಣಗಳಿವೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಹೂಡಿಕೆದಾರರಿಗೆ ಮತ್ತು ದೇಶದ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಭಾಗೀದಾರರಿಗೂ ವಿಶ್ಲೇಷಣಾತ್ಮಕ ಮತ್ತು ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತಹ ಸಲಕರಣೆಯನ್ನು ಒದಗಿಸುತ್ತದೆ.ಇದು ಸರಕಾರಗಳಿಗೆ ಸಮರ್ಪಕ ಯೋಜನೆ ಮತ್ತು ನೀತಿ ರೂಪಿಸಲು ಸಹಾಯ ಮಾಡುತ್ತದೆ ಮತ್ತು ಸರಕಾರದ ಅನಗತ್ಯ ವೆಚ್ಚಗಳನ್ನು ಉಳಿತಾಯ ಮಾಡುತ್ತದೆ ಹಾಗು ಉದ್ಯಮಪತಿಗಳಿಗೂ ಯೋಜನೆಗೆ ಸಂಬಂಧಿಸಿದ ಅವಶ್ಯವಾದ ಎಲ್ಲಾ ಮಾಹಿತಿಗಳು ಲಭ್ಯವಾಗುವಂತೆ ಮಾಡುತ್ತದೆ. ಇದು ರಾಜ್ಯ ಸರಕಾರಗಳಿಗೂ ಅವುಗಳ ಆದ್ಯತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇಂತಹ ದತ್ತಾಂಶ ಆಧಾರಿತ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬಂದಾಗ, ಪ್ರತೀ ರಾಜ್ಯ ಸರಕಾರವೂ ಹೂಡಿಕೆದಾರರಿಗೆ ಕಾಲಮಿತಿಯಲ್ಲಿ ಬದ್ಧತೆಗಳನ್ನು ನೀಡಲು ಸಮರ್ಥವಾಗುತ್ತದೆ.ಇದರ ಪರಿಣಾಮವಾಗಿ, ಹೂಡಿಕೆ ತಾಣವಾಗಿ ಭಾರತದ ವೃದ್ಧಿಸುತ್ತಿರುವ ಘನತೆ ಗೌರವ ಹೊಸ ಎತ್ತರಕ್ಕೆ ತಲುಪುತ್ತದೆ ಮತ್ತು ಹೊಸ ಆಯಾಮವನ್ನು ಗಳಿಸಿಕೊಳ್ಳುತ್ತದೆ. ದೇಶವಾಸಿಗಳು ಕಡಿಮೆ ಖರ್ಚಿನಲ್ಲಿ ಉತ್ತಮವಾದುದನ್ನು ಪಡೆಯುತ್ತಾರೆ ಮತ್ತು ಯುವಜನತೆಗೂ ಹಲವಾರು ಹೊಸ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ.

ಸ್ನೇಹಿತರೇ,

ದೇಶದ ಅಭಿವೃದ್ಧಿಗಾಗಿ ಎಲ್ಲಾ ಸರಕಾರಿ ಇಲಾಖೆಗಳ ನಡುವೆ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಂಯೋಜನೆ ಇರುವುದು ಅವಶ್ಯ ಮತ್ತು ಅವುಗಳು ಪರಸ್ಪರ ಸಾಮೂಹಿಕ ಶಕ್ತಿಯನ್ನು ಬಳಸಿಕೊಳ್ಳಬೇಕು. ವರ್ಷಗಳಿಂದ ಧೋರಣೆ ಭಾರತಕ್ಕೆ ಅಭೂತಪೂರ್ವ ವೇಗವನ್ನು ದೊರಕಿಸಿಕೊಟ್ಟಿದೆ. ಕಳೆದ 70 ವರ್ಷಗಳಿಗೆ ಹೋಲಿಸಿದರೆ, ಇಂದಿನ ಭಾರತ ಹಿಂದೆಂದಿಗಿಂತಲೂ ಹೆಚ್ಚು ವೇಗದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ.

ಸ್ನೇಹಿತರೇ,

ಭಾರತದಲ್ಲಿ ಮೊದಲ ಅಂತಾರಾಜ್ಯ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು 1987ರಲ್ಲಿ ಆರಂಭ ಮಾಡಲಾಯಿತು. ಬಳಿಕ 2014ರವರೆಗೆ ಅಂದರೆ 27 ವರ್ಷಗಳಲ್ಲಿ 15,000 ಕಿ.ಮೀ. ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಇಂದು ದೇಶಾದ್ಯಂತ 16,000 ಕೀ.ಮೀ.ಗೂ ಹೆಚ್ಚಿನ ಹೊಸ ಅನಿಲ ಕೊಳವೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ 5-6 ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ 27 ವರ್ಷಗಳಲ್ಲಿ ಮಾಡಲಾಗಿರುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು  ನಾವು ಅದರ ಅರ್ಧದಷ್ಟು ಅವಧಿಯಲ್ಲಿ ಮಾಡಲು ಉದ್ದೇಶಿಸಿದ್ದೇವೆ. ಇಂದು ವೇಗ ಭಾರತದ ಗುರುತಿಸುವಿಕೆಯಾಗುತ್ತಿದೆ. 2014ಕ್ಕೆ ಮೊದಲಿನ ಐದು ವರ್ಷಗಳಲ್ಲಿ 1,900 ಕಿ.ಮೀ.ಯಷ್ಟು ರೈಲು ಮಾರ್ಗವನ್ನು ಮಾತ್ರವೇ ದ್ವಿಪಥಗೊಳಿಸಲಾಗಿತ್ತು. ಕಳೆದ ಏಳು ವರ್ಷಗಳಲ್ಲಿ 9,000 ಕಿಲೋ ಮೀಟರಿಗೂ ಅಧಿಕ  ರೈಲೇ ಮಾರ್ಗವನ್ನು ದ್ವಿಪಥ ಮಾಡಲಾಗಿದೆ. 1,900 ಕೀ.ಮೀ. ಮತ್ತು 9,000ಕೀ.ಮೀ.ಗಳ ನಡುವಣ ಅಂತರವನ್ನು  ನೋಡಿ!. 2014ಕ್ಕೆ ಮೊದಲ ಐದು ವರ್ಷಗಳಲ್ಲಿ  ಬರೇ 3,000 ಕೀ.ಮೀ. ರೈಲೇ ಹಳಿಗಳನ್ನು ವಿದ್ಯುದ್ದೀಕರಣ ಮಾಡಲಾಗಿತ್ತು. ಕಳೆದ ಏಳು ವರ್ಷಗಳಲ್ಲಿ ನಾವು 24,000 ಕಿ.ಮೀ. ಗೂ ಅಧಿಕ ಮಾರ್ಗವನ್ನು ವಿದ್ಯುದ್ದೀಕರಣ ಮಾಡಿದ್ದೇವೆ. ಮೊದಲು 3,000 ಕಿ.ಮೀ ವಿದ್ಯುದ್ದೀಕರಣವಾಗಿದ್ದರೆ, ಈಗ 24,000 ಕೀ.ಮೀ. 2014ಕ್ಕೆ ಮೊದಲು ಮೆಟ್ರೋ ಬರೇ 250 ಕೀ.ಮೀ.ಯಷ್ಟು ಮಾರ್ಗದಲ್ಲಿ ಓಡುತ್ತಿತ್ತು. ಇಂದು ಮೆಟ್ರೋವನ್ನು 700ಕೀ.ಮೀ.ಗೆ ವಿಸ್ತರಿಸಲಾಗಿದೆ ಹಾಗು 1,000 ಹೊಸ ಮೆಟ್ರೋ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. 2014 ಕ್ಕೆ ಮೊದಲಿನ ಐದು ವರ್ಷಗಳಲ್ಲಿ 60 ಪಂಚಾಯತ್ ಗಳಿಗೆ ಮಾತ್ರ ಆಪ್ಟಿಕಲ್ ಫೈಬರ್ ಸಂಪರ್ಕ ಸಾಧ್ಯವಿತ್ತು. ಕಳೆದ ಏಳು ವರ್ಷಗಳಲ್ಲಿ ನಾವು 1.5 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಬೆಸೆದಿದ್ದೇವೆ. ಸಾಂಪ್ರದಾಯಿಕ ಸಂಪರ್ಕ ಮಾರ್ಗಗಳ ವಿಸ್ತರಣೆಯ ಜೊತೆಗೆ ಒಳನಾಡು ಜಲಮಾರ್ಗಗಳು ಮತ್ತು ಸಮುದ್ರ ವಿಮಾನಗಳ ಜೊತೆಗೆ ದೇಶವು ಹೊಸ ಮೂಲಸೌಕರ್ಯವನ್ನು ಹೊಂದುತ್ತಿದೆ. 2014 ರವರೆಗೆ ದೇಶದಲ್ಲಿ ಬರೇ ಐದು ಜಲಮಾರ್ಗಗಳು ಇದ್ದವು. ಇಂದು 13 ಜಲ ಮಾರ್ಗಗಳು ದೇಶದಲ್ಲಿ ಕಾರ್ಯಾಚರಿಸುತ್ತಿವೆ. 2014ಕ್ಕೆ ಮೊದಲು ನಮ್ಮ ಬಂದರುಗಳಲ್ಲಿ ಹಡಗುಗಳ ಆಗಮನ ನಿರ್ಗಮನ ನಿರ್ವಹಣಾ ಅವಧಿ 41 ಗಂಟೆಗಳಿಗೂ ಹೆಚ್ಚು ಇತ್ತು. ಈಗ ಇದು 27 ಗಂಟೆಗಳಿಗೆ ಇಳಿದಿದೆ. ಇದನ್ನು ಇನ್ನಷ್ಟು ಇಳಿಕೆ ಮಾಡಲು ಪ್ರಯತ್ನಗಳು ಜಾರಿಯಲ್ಲಿವೆ.

ಸ್ನೇಹಿತರೇ,

ಸಂಪರ್ಕ ಅಲ್ಲದೆ ಇತರ ಅವಶ್ಯ ಮೂಲ ಸೌಕರ್ಯಗಳ ನಿರ್ಮಾಣಕ್ಕೂ ಹೊಸ ವೇಗ, ಒತ್ತನ್ನು ನೀಡಲಾಗಿದೆ. ವಿದ್ಯುತ್ ಉತ್ಪಾದನೆಯಿಂದ ಹಿಡಿದು ಸಾಗಾಣಿಕೆವರೆಗಿನ ಇಡೀ ಜಾಲವನ್ನು ಪರಿವರ್ತಿಸಲಾಗಿದೆ ಮತ್ತು ಒಂದು ರಾಷ್ಟ್ರ,ಒಂದು ಪವರ್ ಗ್ರಿಡ್ ಎಂಬ ದೃಢ ನಿರ್ಧಾರವನ್ನು  ಅನುಷ್ಠಾನಕ್ಕೆ ತರಲಾಗುತ್ತಿದೆ. 2014 ರವರೆಗೆ ದೇಶದಲ್ಲಿ 3 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ ನಷ್ಟು ವಿದ್ಯುತ್ ಸರಬರಾಜು ಲೈನ್ ಗಳಿದ್ದವು. ಇಂದು ಅವು 4.25 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ ಗಳಿಗೂ ಅಧಿಕ ಪ್ರಮಾಣದಲ್ಲಿವೆ. ಹೊಸ ಮತ್ತು ಮರುನವೀಕೃತ ಇಂಧನ ಕ್ಷೇತ್ರದಲ್ಲಿ ನಾವು ಬಹಳ ಸಣ್ಣ ಆಟಗಾರನಾಗಿದ್ದೆವು, ಈಗ ನಾವು ಜಗತ್ತಿನ ಉನ್ನತ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. 100 ಗಿಗಾ ವ್ಯಾಟ್ ಗೂ ಅಧಿಕ ಪ್ರಮಾಣದಿಂದಾಗಿ ಭಾರತವು 2014 ರಲ್ಲಿದ್ದ ಸ್ಥಾಪಿತ ಸಾಮರ್ಥ್ಯಕ್ಕಿಂತ ಸುಮಾರು ಮೂರು ಪಟ್ಟು ಅಧಿಕ ಸಾಮರ್ಥ್ಯವನ್ನು ಗಳಿಸಿಕೊಂಡಿದೆ.

ಸ್ನೇಹಿತರೇ,

ಇಂದು ವಾಯುಯಾನಕ್ಕೆ ಸಂಬಂಧಿಸಿದ ಪರಿಸರ ವ್ಯವಸ್ಥೆಯನ್ನು ತ್ವರಿತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ದೇಶದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸಲು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವುದಲ್ಲದೆ, ಇನ್ನಷ್ಟು ವಾಯು ಮಾರ್ಗಗಳನ್ನು ತೆರೆಯಲಾಗಿದೆ. ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ  100ಕ್ಕೂ ಅಧಿಕ ವಾಯು ಮಾರ್ಗಗಳನ್ನು ಪರಿಷ್ಕರಿಸಿ ಅವುಗಳ ದೂರವನ್ನು ಕಡಿಮೆ ಮಾಡಲಾಗಿದೆನಿಷೇಧಿಸಲಾದ ಪ್ರದೇಶಗಳ ಮೇಲಿನ ಪ್ರಯಾಣಿಕ ವಿಮಾನಗಳ ಹಾರಾಟ ನಿಷೇಧವನ್ನು ತೆಗೆದುಹಾಕಲಾಗಿದೆ. ಒಂದು ನಿರ್ಧಾರ ಹಲವು ನಗರಗಳ ಹಾರಾಟದ ಅವಧಿಯನ್ನು ಕಡಿಮೆ ಮಾಡಿದೆ. ವಿಮಾನಯಾನ ಕ್ಷೇತ್ರವನ್ನು ಬಲಪಡಿಸಲು ಹೊಸ ಎಂ.ಆರ್.. ನೀತಿಯನ್ನು ರೂಪಿಸಲಾಗಿದೆ, ಜಿ.ಎಸ್.ಟಿ. ಕೆಲಸ ಪೂರ್ಣಗೊಂಡಿದ್ದು, ಪೈಲೆಟ್ ಗಳಿಗೆ ತರಬೇತಿ ನೀಡಲಾಗಿದೆ.

ಸ್ನೇಹಿತರೇ,

ಪ್ರಯತ್ನಗಳು ನಾವು ತ್ವರಿತವಾಗಿ ಕೆಲಸ ಮಾಡಬಲ್ಲೆವು ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಟ್ಟಿವೆ ಮತ್ತು ದೊಡ್ಡ ಗುರಿಗಳನ್ನು, ಕನಸುಗಳನ್ನು ಸಾಧಿಸಬಲ್ಲೆವು ಎಂಬ ಭರವಸೆಯನ್ನು ಮೂಡಿಸಿವೆ. ಈಗ ದೇಶದ ನಿರೀಕ್ಷೆಗಳು ಮತ್ತು ಆಶೋತ್ತರಗಳು ಹೆಚ್ಚಾಗಿವೆ. ಆದುದರಿಂದ ಮುಂದಿನ 3-4 ವರ್ಷಗಳಿಗೆ ನಮ್ಮ ದೃಢ ನಿರ್ಧಾರಗಳೂ ಬಹಳ ದೊಡ್ಡದಾಗಿವೆ. ಈಗ ದೇಶದ ಗುರಿ ಸಾಗಾಣಿಕಾ ವೆಚ್ಚವನ್ನು ಕಡಿಮೆ ಮಾಡಿ, ರೈಲ್ವೇಯ ಸರಕು ಸಾಗಾಣಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಬಂದರು ಸರಕು ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ ಹಾಗು ಹಡಗುಗಳ ನಿರ್ವಹಣೆಯ ಸಮಯವನ್ನು ಇಳಿಕೆ ಮಾಡುವುದಾಗಿದೆ. ದೇಶದಲ್ಲಿ ಮುಂದಿನ 4-5 ವರ್ಷಗಳಲ್ಲಿ 200ಕ್ಕೂ ಅಧಿಕ ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್ ಗಳು ಮತ್ತು ಜಲ ಏರೋಡ್ರೋಮ್ ಗಳು ಸಿದ್ಧಗೊಳ್ಳಲಿವೆ. ನಮ್ಮ ಪ್ರಸ್ತುತ ಅನಿಲ ಕೊಳವೆ ಮಾರ್ಗ ಜಾಲ ಸುಮಾರು 19,000 ಕಿ.ಮೀ ಕೂಡಾ ಸುಮಾರು ದುಪ್ಪಟ್ಟಾಗಲಿದೆ.

ಸ್ನೇಹಿತರೇ,

ರೈತರ ಮತ್ತು ಮೀನುಗಾರರ ಆದಾಯವನ್ನು ಹೆಚ್ಚಿಸಲು ಸಂಸ್ಕರಣೆಗೆ ಸಂಬಂಧಿಸಿದ ಮೂಲಸೌಕರ್ಯವನ್ನು ಕೂಡಾ ತ್ವರಿತವಾಗಿ ವಿಸ್ತರಿಸಲಾಗುತ್ತಿದೆ. 2014ರಲ್ಲಿ ದೇಶದಲ್ಲಿ ಬರೇ ಎರಡು ಬೃಹತ್ ಆಹಾರ ಪಾರ್ಕ್ ಗಳು ಇದ್ದವು. ಇಂದು ದೇಶದಲ್ಲಿ 19 ಬೃಹತ್ ಆಹಾರ ಪಾರ್ಕ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಈಗ ಸಂಖ್ಯೆಯನ್ನು 40 ಕ್ಕಿಂತ ಹೆಚ್ಚು ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ಮೀನುಗಾರಿಕಾ ಗುಚ್ಛಗಳು, ಮೀನುಗಾರಿಕಾ ಬಂದರುಗಳು ಮತ್ತು ಮೀನುಗಾರಿಕಾ ಇಳಿಕಾ ಕೇಂದ್ರಗಳು ಕಳೆದ ಏಳು 40 ರಿಂದ  ನೂರಕ್ಕೆ ಏರಿವೆ. ನಾವಿದನ್ನು ದುಪ್ಪಟ್ಟಿಗಿಂತ ಹೆಚ್ಚು ಮಾಡುವ ಇರಾದೆಯನ್ನು ಹೊಂದಿದ್ದೇವೆ.

ಸ್ನೇಹಿತರೇ,

ಇದೇ ಮೊದಲ ಬಾರಿಗೆ ರಕ್ಷಣಾ ವಲಯದಲ್ಲಿಯೂ ವ್ಯಾಪಕವಾದಂತಹ ಪ್ರಯತ್ನಗಳನ್ನು ಮಾಡಲಾಗಿದೆ. ತಮಿಳು ನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಎರಡು ರಕ್ಷಣಾ ಕಾರಿಡಾರುಗಳಿಗಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಇಂದು ನಾವು ವಿದ್ಯುನ್ಮಾನ ಮತ್ತು .ಟಿ. ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ದೇಶಗಳಾಗಿ ಹೊರಹೊಮ್ಮುತ್ತಿದ್ದೇವೆ. ಒಂದು ಹಂತದಲ್ಲಿ ನಾವು ಐದು ಉತ್ಪಾದನಾ ಗುಚ್ಛಗಳನ್ನು ಹೊಂದಿದ್ದೆವು. ಇಂದು ನಾವು 15 ಉತ್ಪಾದನಾ ಗುಚ್ಛಗಳನ್ನು ನಿರ್ಮಾಣ ಮಾಡಿದ್ದೇವೆ ಮತ್ತು ನಾವಿದನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ನಾಲ್ಕು ಕೈಗಾರಿಕಾ ಗುಚ್ಛಗಳನ್ನು ಆರಂಭ ಮಾಡಲಾಗಿದೆ ಮತ್ತು ಈಗ ಇಂತಹ ಗುಚ್ಛಗಳ ಸಂಖ್ಯೆಯು ಡಜನ್ನಿಗೇರಿದೆ.

ಸ್ನೇಹಿತರೇ,

ಪ್ಲಗ್ ಮಾಡಿ ಕಾರ್ಯಾಚರಣೆ ಮೂಲಕ ಮೂಲಸೌಕರ್ಯ ನಿರ್ಮಾಣ ಇಂದು ಸರಕಾರ ಕೆಲಸ ಮಾಡುತ್ತಿರುವ ಧೋರಣೆಗೆ ಒಂದು ನಿದರ್ಶನ. ಈಗ ಉದ್ಯಮಗಳಿಗೆ ಪ್ಲಗ್ ಮಾಡಿ ಕಾರ್ಯಾಚರಣೆಯೊಂದಿಗೆ ಮೂಲಸೌಕರ್ಯವನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ. ಅಂದರೆ ದೇಶೀಯ ಮತ್ತು ವಿದೇಶೀ ಹೂಡಿಕೆದಾರರು ಅವರ ವ್ಯವಸ್ಥೆಗಳನ್ನು ಸ್ಥಾಪಿಸಿ ಕೆಲಸ ಆರಂಭ ಮಾಡಬಹುದು. ಉದಾಹರಣೆಗೆ ಸಮಗ್ರ ಕೈಗಾರಿಕಾ ವಸಾಹತು ಅಥವಾ ಟೌನ್ ಶಿಪ್ ದಾದ್ರಿ, ಗ್ರೇಟರ್ ನೊಯಿಡಾಗಳಲ್ಲಿ ತಲೆ ಎತ್ತುತ್ತಿವೆ. ಇವುಗಳನ್ನು ಪೂರ್ವದ ಮತ್ತು ಪಶ್ಚಿಮ ಭಾರತದ ಬಂದರುಗಳ ಅದಕ್ಕಾಗಿಯೇ ಮೀಸಲಾದ ಸರಕು ಸಾಗಾಣಿಕೆ ಕಾರಿಡಾರಿನ ಜೊತೆಯಲ್ಲಿ ಬೆಸೆಯಲಾಗುವುದು. ಬಹು ಮಾದರಿ ಸರಕು ಸಾಗಾಣಿಕಾ ತಾಣವನ್ನು ಇಲ್ಲಿ ಸ್ಥಾಪಿಸಲಾಗುವುದು. ಅದರ ಸನಿಹದಲ್ಲಿಯೇ ಬಹುಮಾದರಿ ಸಾರಿಗೆ ತಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಅತ್ಯಾಧುನಿಕ ರೈಲ್ವೇ ನಿಲ್ದಾಣವು ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಸಂಚರಿಸುವ ಬಸ್ ಗಳ ನಿಲ್ದಾಣವನ್ನು ಹೊಂದಿರುತ್ತದೆ ಮತ್ತು ಅಲ್ಲಿ ತ್ವರಿತ ಸಾಗಾಣಿಕಾ ವ್ಯವಸ್ಥೆ ಹಾಗು ಇತರ ಸೌಲಭ್ಯಗಳೂ ಇರುತ್ತವೆ. ದೇಶದ ವಿವಿಧ ಭಾಗಗಳಲ್ಲಿ ಇಂತಹ ಸೌಲಭ್ಯಗಳ ನಿರ್ಮಾಣದಿಂದ, ಭಾರತವು ಜಗತ್ತಿನ ವ್ಯಾಪಾರ ರಾಜಧಾನಿಯಾಗುವ ಕನಸನ್ನು ಈಡೇರಿಸಿಕೊಳ್ಳಬಹುದು.

ಸ್ನೇಹಿತರೇ,

ನಾನು ಪಟ್ಟಿ ಮಾಡಿರುವ ಎಲ್ಲಾ ಗುರಿಗಳು ಸಾಮಾನ್ಯವಾದ ಗುರಿಗಳಲ್ಲ. ಆದುದರಿಂದ, ಅವುಗಳನ್ನು ಸಾಧಿಸಲು ಮಾಡಬೇಕಾಗಿರುವ ಪ್ರಯತ್ನಗಳು ಮತ್ತು ವಿಧಾನಗಳು ಕೂಡಾ ಅಭೂತಪೂರ್ವವಾದವು. ಮತ್ತು ಅವುಗಳಿಗೆ ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯಿಂದ ಗರಿಷ್ಠ ಶಕ್ತಿ ದೊರೆಯುತ್ತದೆ. ಜ್ಯಾಮ್ ಎಂಬ ಮೂರಂಶಗಳ  ಮೂಲಕ ಅಂದರೆ ಜನ ಧನ್-ಆಧಾರ್-ಮೊಬೈಲ್ ಶಕ್ತಿಯ ಮೂಲಕ ನಾವು ನೈಜ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ತ್ವರಿತವಾಗಿ ಒದಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವಂತೆ, ಪಿ.ಎಂ. ಗತಿಶಕ್ತಿ ಕೂಡಾ ಮೂಲಸೌಕರ್ಯ ಕ್ಷೇತ್ರದಲ್ಲಿ ಅಂತಹದೇ ಬದಲಾವಣೆಗೆ ಕಾರಣವಾಗಲಿದೆ. ಮೂಲ ಸೌಕರ್ಯ ಯೋಜನೆಯಿಂದ ಹಿಡಿದು ಅನುಷ್ಠಾನದವರೆಗೆ ಸಮಗ್ರ ಚಿಂತನೆಯೊಂದಿಗೆ, ಮುನ್ನೋಟದೊಂದಿಗೆ  ಅದು ಅನುಷ್ಠಾನಕ್ಕೆ ಬರಲಿದೆ. ಮತ್ತೊಮ್ಮೆ ನಾನು ಎಲ್ಲಾ ರಾಜ್ಯ ಸರಕಾರಗಳು ಉಪಕ್ರಮದಲ್ಲಿ ಭಾಗಿಯಾಗಲು ಆಹ್ವಾನಿಸುತ್ತೇನೆ. ಸ್ವಾತಂತ್ರ್ಯದ 75 ನೇ ವರ್ಷದ ಕಾಲಘಟ್ಟದಲ್ಲಿ ಒಗ್ಗೂಡಲು, ದೇಶಕ್ಕಾಗಿ ಏನನ್ನಾದರೂ ಮಾಡಲು ಇದು ಸಕಾಲ. ಕಾರ್ಯಕ್ರಮದ ಜೊತೆ ಸಮ್ಮಿಳಿತಗೊಂಡಿರುವ ಪ್ರತಿಯೊಬ್ಬರಲ್ಲೂ ಇದು ನನ್ನ ಕೋರಿಕೆ.

ಪ್ರಮುಖ ಕಾರ್ಯಕ್ರಮದಲ್ಲಿ ಸೇರ್ಪಡೆಯಾದುದಕ್ಕಾಗಿ ನಿಮಗೆಲ್ಲಾ ಧನ್ಯವಾದಗಳು ಮತ್ತು ಖಾಸಗಿ ವಲಯದವರು ಕೂಡಾ ಪ್ರಧಾನ ಮಂತ್ರಿ ಗತಿ ಶಕ್ತಿ ಮಹಾ ಯೋಜನೆಯನ್ನು ಬಹಳ ನಿಕಟವಾಗಿ ವಿಶ್ಲೇಷಿಸುತ್ತಾರೆ ಎಂದು ನನಗೆ ಖಚಿತ ವಿಶ್ವಾಸವಿದೆ. ಅದರ ಭಾಗವಾಗಲು ಅವರು ತಮ್ಮ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಿಕೊಳ್ಳಬಹುದು ಮತ್ತು ಅಭಿವೃದ್ಧಿಯ ಹೊಸ ಮಜಲನ್ನು ತಲುಪಬಹುದು. ನಿಲ್ಲಿಸುವುದಕ್ಕೆ ಮೊದಲು ನಾನು ನಿಮಗೆಲ್ಲಾ ಪವಿತ್ರ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಮತ್ತು ಶಕ್ತಿಯ ಆರಾಧನೆಯ ಸಂದರ್ಭದಲ್ಲಿ ಮಹತ್ವದ ಕಾರ್ಯಕ್ಕಾಗಿ ಶುಭವನ್ನು ಹಾರೈಸುತ್ತೇನೆ.

ಬಹಳ ಧನ್ಯವಾದಗಳು ಮತ್ತು ಶುಭ ಹಾರೈಕೆಗಳು!

***



(Release ID: 1765031) Visitor Counter : 256