ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್ -19ಕ್ಕೆ ಸಾರ್ವಜನಿಕ ಆರೋಗ್ಯದ ಸ್ಪಂದನೆ ಮತ್ತು ಲಸಿಕೆಯ ಪ್ರಗತಿ ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಪುಟ ಕಾರ್ಯದರ್ಶಿ

ನಿರಾಳಕ್ಕೆ ಆಸ್ಪದವಿಲ್ಲ: ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಸ್ಪಷ್ಟ ವಿಶ್ಲೇಷಣೆ ಕೈಗೊಳ್ಳಲು ಮತ್ತು ಮೂಲಸೌಕರ್ಯ, ಔಷಧ ಮತ್ತು ಮಾನವ ಸಂಪನ್ಮೂಲ ವೃದ್ಧಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ

ಮುಂಬರುವ ಹಬ್ಬಗಳ ಪರ್ವದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಮತ್ತು ಸೋಂಕಿನ ಯಾವುದೇ ಹೊಸ ಉಲ್ಬಣ ತಪ್ಪಿಸಲು ಕಾರ್ಯತಂತ್ರದ ಅಗತ್ಯದ ಬಗ್ಗೆ ವಿವರಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ

11 ರಾಜ್ಯಗಳಲ್ಲಿ ಸಿರೋಟೈಪ್ –II ಡೆಂಘ್ಯೂ ನಿಯಂತ್ರಣಕ್ಕೆ ರಾಜ್ಯಗಳಿಗೆ ಮಾರ್ಗದರ್ಶನ

Posted On: 18 SEP 2021 3:24PM by PIB Bengaluru

ಕೋವಿಡ್ ನಿರ್ವಹಣೆ ಮತ್ತು ಸ್ಪಂದನೆಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮತ್ತು ಪರಾಮರ್ಶಿಸಲು ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್ ಅವರ ಸಮ್ಮುಖದಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು (ಆರೋಗ್ಯ), ಪ್ರಧಾನ ಕಾರ್ಯದರ್ಶಿಗಳು (ಆರೋಗ್ಯ), ಪುರಸಭೆಗಳ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳು  ಭಾಗಿಯಾಗಿದ್ದರು.

2.5 ಕೋಟಿ ಲಸಿಕಾ ಡೋಸ್ ಗಳನ್ನು ನಿನ್ನೆ ಒಂದೇ ದಿನ ನೀಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಧನೆಗೆ ಅವರು ಅಭಿನಂದನೆ ಸಲ್ಲಿಸಿದ ಸಂಪುಟ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯಕರ್ತರು, ಮುಖ್ಯ ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಆರೋಗ್ಯ ಕಾರ್ಯದರ್ಶಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಲಸಿಕೆಯ ಹೆಚ್ಚಿನ ಲಭ್ಯತೆಯೊಂದಿಗೆ ಲಸಿಕೆ ನೀಡಿಕೆಯ ವೇಗ ನಿರ್ವಹಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.  

ಆದಾಗ್ಯೂ ಅವರು ರಾಜ್ಯಗಳಿಗೆ ನಿರಾಳವಾಗಿರಲು ಅವಕಾಶವಿಲ್ಲ ಎಂಬುದನ್ನು ನೆನಪಿಸಲು ಈ ಸಂದರ್ಭವನ್ನು ತೆಗೆದುಕೊಂಡರು. ಕೋವಿಡ್ ಸೂಕ್ತ ನಡವಳಿಕೆಯನ್ನು (ಸಿಎಬಿ) ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಇತರ ದೇಶಗಳಲ್ಲಿ ಕೋವಿಡ್ -19 ಹಲವು ಬಾರಿ ತಾರಕಕ್ಕೆ ಏರಿದ್ದನ್ನು ಉದಾಹರಿಸಿದ  ಅವರು, ದೇಶದ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಪಾಸಿಟಿವಿಟಿ ವರದಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೋವಿಡ್ ವಿಚಾರದಲ್ಲಿ ಸ್ಪಷ್ಟ ವಿಶ್ಲೇಷಣೆಯನ್ನು ಕೈಗೊಳ್ಳಲು, ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು, ಅಗತ್ಯ ಔಷಧಗಳ ಸಂಗ್ರಹವನ್ನು ಕೈಗೊಳ್ಳಲು ಮತ್ತು ಮಾನವ ಸಂಪನ್ಮೂಲಗಳನ್ನು ಆದಷ್ಟು ಬೇಗ ಹೆಚ್ಚಿಸಲು, ಯಾವುದೇ ಸಂಭವನೀಯ ಏರಿಕೆಗಳನ್ನು ಎದುರಿಸಲು ಸಜ್ಜಾಗುವಂತೆ ಅವರು ರಾಜ್ಯ ಆರೋಗ್ಯ ಆಡಳಿತಗಾರರಿಗೆ ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು, 11 ರಾಜ್ಯಗಳಲ್ಲಿ ಸಿರೊಟೈಪ್- II ಡೆಂಗಿ ಕಾರಣದಿಂದ ಹೊರಹೊಮ್ಮುತ್ತಿರುವ ಸವಾಲುಗಳ ಬಗ್ಗೆ ಪ್ರತಿಪಾದಿಸಿದರು, ಇದು ರೋಗದ ಇತರ ಸ್ವರೂಪಗಳಿಗಿಂತ ಹೆಚ್ಚಿನ ಪ್ರಕರಣಗಳು ಮತ್ತು ಹೆಚ್ಚಿನ ತೊಂದರೆಗಳಿಂದ ಕೂಡಿದೆ ಎಂದರು. ಪ್ರಕರಣಗಳನ್ನು ಆದಷ್ಟು ಬೇಗ ಪತ್ತೆ ಹಚ್ಚುವುದು, ಜ್ವರಕ್ಕೆ ಸಂಬಂಧಿಸಿದಂತೆ ಸಹಾಯವಾಣಿಗಳ ಕಾರ್ಯಾಚರಣೆಯಂತಹ ಕ್ರಮಗಳನ್ನು ಕೈಗೊಳ್ಳುವಂತೆ ಅವರು ರಾಜ್ಯಗಳಿಗೆ ಸಲಹೆ ಮಾಡಿದರು; ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್‌ ಗಳು, ಲಾರ್ವಿಸೈಡ್‌ ಗಳು ಮತ್ತು ಔಷಧಿಗಳ ದಾಸ್ತಾನು; ತ್ವರಿತ ತಪಾಸಣೆಗಾಗಿ ಜ್ವರ ಸಮೀಕ್ಷೆ, ಸಂಪರ್ಕ ಪತ್ತೆ ಹಚ್ಚುವಿಕೆ, ರೋಗವಾಹಕಗಳ ನಿಯಂತ್ರಣ ಮುಂತಾದ ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಕ್ಕಾಗಿ ತ್ವರಿತ ಸ್ಪಂದನೆ ತಂಡಗಳ ನಿಯೋಜನೆ; ರಕ್ತ ಮತ್ತು ರಕ್ತದ ಅಂಶಗಳನ್ನು, ವಿಶೇಷವಾಗಿ ಪ್ಲೇಟ್‌ ಲೆಟ್‌ ಗಳ ಸಮರ್ಪಕ ದಾಸ್ತಾನುಗಳನ್ನು ನಿರ್ವಹಿಸಲು ರಕ್ತ ಬ್ಯಾಂಕ್‌ ಗಳನ್ನು ಜಾಗೃತಗೊಳಿಸುವಂತೆ ಸಲಹೆ ಮಾಡಿದರು. ಸಹಾಯವಾಣಿಗಳು, ರೋಗವಾಹಕ ನಿಯಂತ್ರಣದ ವಿಧಾನಗಳು, ಮನೆಗಳಲ್ಲಿ ಮೂಲದ ನಿಯಂತ್ರಣ ಮತ್ತು ಡೆಂಗಿ ರೋಗಲಕ್ಷಣಗಳ ಕುರಿತು ಐಇಸಿ ಅಭಿಯಾನಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಆಗ್ರಹಿಸಿದರು.

ಆರೋಗ್ಯ ಕಾರ್ಯದರ್ಶಿಯವರು 15 ರಾಜ್ಯಗಳ 70 ಜಿಲ್ಲೆಗಳು ಕಾಳಜಿಯ ಪರಿಧಿಯಲ್ಲಿದ್ದು, ಈ ಪೈಕಿ 3 ಜಿಲ್ಲೆಗಳಲ್ಲಿ ಶೇಕಡ10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದ್ದರೆ, 36 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5-ಶೇ.10ರ ಒಳಗಿದೆ ಎಂಬುದನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಮನಕ್ಕೆ ತಂದರು.  ಮುಂಬರುವ ಹಬ್ಬಗಳ ಪರ್ವದ ಹಿನ್ನೆಲೆಯಲ್ಲಿ, ರಾಜ್ಯಗಳು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು, ಜನ ಗುಂಪುಗೂಡುವುದು ಮತ್ತು ನಾಲ್ಕು ಗೋಡೆಗಳ ಮಧ್ಯೆ ಹೆಚ್ಚಿನ ಜನದಟ್ಟಣೆ ತಪ್ಪಿಸಲು ಕ್ರಮಗಳನ್ನು ಪರಿಣಾಮಕಾರಿಯಾಗಿ  ಜಾರಿಗೊಳಿಸಲು ಸೂಚಿಸಿದರು. ಮಾಲ್‌ ಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಕೋವಿಡ್ ಸೂಕ್ತ ನಡೆವಳಿಕೆ (ಸಿಎಬಿ) ಮತ್ತು ಕೋವಿಡ್ ಸುರಕ್ಷಿತ ಹಬ್ಬಗಳ ಆಚರಣೆಯ ಪ್ರಚಾರಕ್ಕಾಗಿ ಪರಿಣಾಮಕಾರಿ ಐಇಸಿ ಕೈಗೊಳ್ಳಲು ರಾಜ್ಯಗಳಿಗೆ ಆಗ್ರಹಿಸಿದರು. ಕೋವಿಡ್ ಸೂಕ್ತ ನಡೆವಳಿಕೆಗಳನ್ನು ಪಾಲಿಸಲು ಮತ್ತು ಮುಂಚಿತವಾಗಿ ಮುನ್ನೆಚ್ಚರಿಕೆಯ ಸಂಕೇತಗಳನ್ನು ಗುರುತಿಸಲು ಮತ್ತು ನಿರ್ಬಂಧಗಳನ್ನು ಹೇರಲು, ಪ್ರತಿನಿತ್ಯ ಎಲ್ಲಾ ಜಿಲ್ಲೆಗಳಲ್ಲಿನ ಪ್ರಕರಣಗಳ ಪಥಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಅವರು ಸಲಹೆ ನೀಡಿದರು.

ಐದು ಹಂತದ ಕೋವಿಡ್ ನಿಗ್ರಹ ಕಾರ್ಯತಂತ್ರ (ಪರೀಕ್ಷೆ, ಚಿಕಿತ್ಸೆ, ಪತ್ತೆ, ಲಸಿಕೆ ಮತ್ತು ಸಿಎಬಿ ಪರಿಪಾಲನೆ) : ಹೆಚ್ಚಿನ ಪರೀಕ್ಷೆ ಮುಂಚಿತವಾಗಿ ಗುರುತಿಸಲು ಸಹಕಾರಿಯಾಗಿದೆ, ಸಂಭವನೀಯತೆ ಎದುರಿಸಲು ಆರೋಗ್ಯ ಮೂಲಸೌಕರ್ಯ ಹೆಚ್ಚಳ (ಗ್ರಾಮೀಣ ಪ್ರದೇಶಗಳಿಗೆ ಮತ್ತು ಮಕ್ಕಳ ಪ್ರಕರಣಗಳಿಗೆ ಆದ್ಯತೆ), ಸಂಪರ್ಕ ಪತ್ತೆ, ನಿಗಾ ಮತ್ತು ನಿಗ್ರಹ ಕ್ರಮಗಳು ಮತ್ತು ಹೆಚ್ಚು ಪ್ರಕರಣ ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಕಠಿಣ ಕ್ರಮ, ಎಲ್ಲ ವಯೋಮಾನದವರನ್ನೂ ಲಸಿಕೆ ವ್ಯಾಪ್ತಿಗೆ ತರಲು ಗಮನ, ಅರ್ಹ ಫಲಾನುಭವಿಗಳ ನಡುವೆ 2 ನೇ ಡೋಸ್ ವ್ಯಾಪ್ತಿ ಮೇಲೆ ನಿರಂತರ ನಿಗಾ ಮತ್ತು ಕೋವಿಡ್ -19 ಅನ್ನು ನಿರ್ವಹಿಸುವ ಕೀಲಿಯಾಗಿ ಸಮರ್ಥನೀಯ ಸಮುದಾಯ ಬೆಂಬಲಕ್ಕೆ ಮರು ಒತ್ತು ನೀಡುವುದರ ಬಗ್ಗೆ ಪುನರ್ ಪ್ರತಿಪಾದಿಸಲಾಯಿತು.

ಆಸ್ಪತ್ರೆಯ ಮೂಲಸೌಕರ್ಯ ವೃದ್ಧಿ, ಆಮ್ಲಜನಕದ ಲಭ್ಯತೆ, ನಿರ್ಣಾಯಕ ಔಷಧಿಗಳ ಕಾಪು ದಾಸ್ತಾನು ರೂಪಿಸುವುದು, ಆಂಬ್ಯುಲೆನ್ಸ್ ಸೇವೆಗಳು ಮತ್ತು ಐಟಿ ವ್ಯವಸ್ಥೆಗಳು/ ಸಹಾಯವಾಣಿಗಳು/ ಟೆಲಿಮೆಡಿಸಿನ್ ಸೇವೆಗಳ ಅನುಷ್ಠಾನದ ಮೇಲೆ ತುರ್ತು ಕ್ರಮದ ಅಗತ್ಯವಿದೆ ಎಂಬುದನ್ನು ಗುರುತಿಸಲಾಯಿತು. ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಕೋವಿಡ್ ಸ್ಪಂದನೆ ಪ್ಯಾಕೇಜ್ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ವಿವೇಚನೆಯಿಂದ ಮತ್ತು ಪ್ರಾಮಾಣಿಕವಾಗಿ ವೆಚ್ಚ ಮಾಡುವಂತೆ ಆರೋಗ್ಯ ಕಾರ್ಯದರ್ಶಿಗಳು ತಿಳಿಸಿದರು.

ಜಿಲ್ಲಾಮಟ್ಟದ ಪರಾಮರ್ಶೆ ನಡೆಸಲು ಮತ್ತು ಅಂದಾಜು ಮಾಡಲಾದ ಅಗತ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಮೂಲಸೌಕರ್ಯ ಮತ್ತು ಪೂರೈಕೆಯನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ತುರ್ತುಗಾಗಿ ಹೊಂದಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಆಗ್ರಹಿಸಲಾಯಿತು. ಜೊತೆಗೆ ಹೊರಹೊಮ್ಮುವ ಅಗತ್ಯಕ್ಕೆ ತಕ್ಕಂತೆ ಖಾಸಗಿ ವಲಯದ ಸಾಮರ್ಥ್ಯವನ್ನೂ ಪರಿಶೋಧಿಸಿ, ನಿಯೋಜಿಸಬಹುದು.

ಯಾವುದೇ ಹೆಚ್ಚಿನ ಏರಿಕೆಯ ಸಾಧ್ಯತೆಯನ್ನು ತಡೆಯುವ ಪ್ರಯತ್ನವಾಗಿ, ರಾಜ್ಯಗಳ ಪ್ರಾಧಿಕಾರಗಳಿಗೆ ಈ ಕೆಳಕಂಡ ಅಂಶಗಳ ಮೇಲೆ ಗಮನ ಹರಿಸಲು ಸೂಚಿಸಲಾಯಿತು:

  • ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆ ಮತ್ತು ಕೋವಿಡ್-ಸುರಕ್ಷಿತ ಹಬ್ಬಗಳ ಆಚರಣೆಯ ಖಾತ್ರಿ.
  • ಹೆಚ್ಚಿನ ಪ್ರಕರಣಗಳು ವರದಿಯಾಗುವ ಪ್ರದೇಶಗಳಲ್ಲಿ ತೀವ್ರವಾದ ನಿಯಂತ್ರಣ ಮತ್ತು ಸಕ್ರಿಯ ಕಣ್ಗಾವಲು ಅಳವಡಿಸುವುದು ಮತ್ತು ನಿರ್ಬಂಧಗಳನ್ನು ಹೇರುವುದನ್ನು ವಿಳಂಬ ಮಾಡಬಾರದು.
  • ಆರ್‌ಟಿ-ಪಿಸಿಆರ್ ಅನುಪಾತದ ನಿರ್ವಹಣೆಯೊಂದಿಗೆ ಹೆಚ್ಚಿನ ಪರೀಕ್ಷೆ
  • ಪಿಎಸ್‌ಎ ಘಟಕಗಳು, ಆಮ್ಲಜನಕ ಸಿಲಿಂಡರ್‌ ಗಳು, ಸಾಂದ್ರಕಗಳು ಮತ್ತು ವೆಂಟಿಲೇಟರ್‌ ಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದು
  • ಇ.ಸಿ.ಆರ್.ಪಿ.-IIರ ಆದ್ಯತೆಯ ಅನುಷ್ಠಾನಕ್ಕಾಗಿ ನಿಯಮಿತ ವಿಮರ್ಶೆಗಳು ಸಾಕಷ್ಟು ಅಗತ್ಯಗಳೊಂದಿಗೆ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವುದು
  • ಕೆಲವು ರಾಜ್ಯಗಳು ಶಾಲೆಗಳನ್ನು ಪುನಾರಂಭಿಸಿರುವುದನ್ನು ಗಣನೆಯಲ್ಲಿಟ್ಟುಕೊಂಡು, ಮಕ್ಕಳಲ್ಲಿ ಸೋಂಕು ಹರಡುವ ಬಗ್ಗೆ ಮೇಲ್ವಿಚಾರಣೆ ಮಾಡುವುದು
  • ಲಸಿಕೆ ನಂತರದ ಸೋಂಕಿನ ಮೇಲ್ವಿಚಾರಣೆ ಮತ್ತು ಹೊರಹೊಮ್ಮುವ ಪುರಾವೆಗಳ ವಿಶ್ಲೇಷಣೆ
  • ಜಿನೋಮ್ ಸೀಕ್ವೆನ್ಸಿಂಗ್‌ ಗಾಗಿ ಸಾಕಷ್ಟು ಮಾದರಿಗಳನ್ನು ಕಳುಹಿಸುವುದೂ ಸೇರಿದಂತೆ ರೂಪಾಂತರಿಗಳ ಮೇಲ್ವಿಚಾರಣೆ ಮಾಡುವುದು.
  • ಲಸಿಕೆ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವುದು.
  • ಡೆಂಘಿ ಮತ್ತು ಇತರ ರೋಗ ವಾಹಕ- ರೋಗಗಳ ತಡೆಗಟ್ಟುವಿಕೆ  ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

***(Release ID: 1756079) Visitor Counter : 119