ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಸ್ತೂರಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂನಲ್ಲಿ ರಕ್ಷಣಾ ಕಚೇರಿಗಳ ಸಂಕೀರ್ಣಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ನವ ಭಾರತದ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ರಾಷ್ಟ್ರದ ರಾಜಧಾನಿಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ: ಪ್ರಧಾನಿ

ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಎನ್‌ಕ್ಲೇವ್‌ ನಿರ್ಮಾಣಕ್ಕೆ ಒಂದು ದೊಡ್ಡ ಹೆಜ್ಜೆ: ಪ್ರಧಾನಿ

ಯಾವುದೇ ದೇಶದ ರಾಜಧಾನಿ ಆ ದೇಶದ ಚಿಂತನೆ, ದೃಢನಿಶ್ಚಯ, ಶಕ್ತಿ ಮತ್ತು ಸಂಸ್ಕೃತಿಯ ಸಂಕೇತವಾಗಿರುತ್ತದೆ: ಪ್ರಧಾನಿ

ಭಾರತವು ಪ್ರಜಾಪ್ರಭುತ್ವದ ತಾಯಿ, ಭಾರತದ ರಾಜಧಾನಿ ಎಂದರೆ ಅಲ್ಲಿ ನಾಗರಿಕರು, ಜನರು ಕೇಂದ್ರ ಸ್ಥಾನದಲ್ಲಿ ಇರಬೇಕು: ಪ್ರಧಾನಿ

ಸುಗಮ ಜೀವನ ಮತ್ತು ಸುಗಮ ವ್ಯಾಪಾರಕ್ಕೆ ಸರಕಾರ ಗಮನ ಕೇಂದ್ರೀಕರಿಸಿದ್ದು, ಇದರಲ್ಲಿ ಆಧುನಿಕ ಮೂಲಸೌಕರ್ಯವು ದೊಡ್ಡ ಪಾತ್ರವನ್ನು ಹೊಂದಿದೆ: ಪ್ರಧಾನಿ

ನೀತಿಗಳು ಮತ್ತು ಉದ್ದೇಶಗಳು ಸ್ಪಷ್ಟವಾಗಿದ್ದಾಗ, ಇಚ್ಛಾಶಕ್ತಿ ಬಲವಾಗಿದ್ದಾಗ ಮತ್ತು ಪ್ರಯತ್ನಗಳು ಪ್ರಾಮಾಣಿಕವಾಗಿದ್ದಾಗ, ಎಲ್ಲವೂ ಸಾಧ್ಯ: ಪ್ರಧಾನಿ

ಅವಧಿಗೆ ಮುನ್ನವೇ ಯೋಜನೆಗಳ ಪೂರ್ಣಗೊಳಿಸುವಿಕೆಯು ಬದಲಾದ ಕಾರ್ಯವಿಧಾನ ಮತ್ತು ಚಿಂತನೆಯನ್ನು ಸೂಚಿಸುತ್ತದೆ: ಪ್ರಧಾನಿ

Posted On: 16 SEP 2021 12:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂಗಳಲ್ಲಿ ರಕ್ಷಣಾ ಕಚೇರಿಗಳ ಸಂಕೀರ್ಣಗಳನ್ನು ಉದ್ಘಾಟಿಸಿದರು. ಆಫ್ರಿಕಾ ಅವೆನ್ಯೂನಲ್ಲಿರುವ ರಕ್ಷಣಾ ಕಚೇರಿ ಸಂಕೀರ್ಣಕ್ಕೂ ಭೇಟಿ ನೀಡಿದ ಅವರು, ಸೇನೆ, ನೌಕಾಪಡೆ, ವಾಯುಪಡೆ ಮತ್ತು ನಾಗರಿಕ ಸೇವಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಸಂಕೀರ್ಣಗಳ ಉದ್ಘಾಟನೆಯೊಂದಿಗೆ, ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ನವ ಭಾರತದ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ರಾಷ್ಟ್ರದ ರಾಜಧಾನಿಯನ್ನು ಅಭಿವೃದ್ಧಿಪಡಿಸುವಲ್ಲಿ ದೇಶ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಎಂದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಕುದುರೆ ಲಾಯ ಮತ್ತು ಬ್ಯಾರಕ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದ್ದ ಗೂಡುಗಳಿಂದಲೇ ಬಹಳ ಸಮಯದವರೆಗೆ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕೆಲಸಗಳನ್ನು ನಡೆಸಲಾಗುತ್ತಿತ್ತು ಎಂದು ಅವರು ವಿಷಾದಿಸಿದರು. " ಹೊಸ ರಕ್ಷಣಾ ಕಚೇರಿ ಸಂಕೀರ್ಣವು ನಮ್ಮ ರಕ್ಷಣಾ ಪಡೆಗಳ ಕಾರ್ಯವನ್ನು ಅನುಕೂಲಕರ ಮತ್ತು ಪರಿಣಾಮಕಾರಿಗೊಳಿಸುವ ಪ್ರಯತ್ನಗಳಿಗೆ ಬಲ ನೀಡುತ್ತದೆ,ʼʼ ಎಂದು ಅವರು ಹೇಳಿದರು.

ಕಸ್ತೂರಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂಗಳಲ್ಲಿ ನಿರ್ಮಿಸಲಾದ ಆಧುನಿಕ ಕಚೇರಿಗಳು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ದೂರಗಾಮಿ ಪಾತ್ರ ವಹಿಸಲಿವೆ ಎಂದು ಪ್ರಧಾನಿ ಹೇಳಿದರು. ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಎನ್‌ಕ್ಲೇವ್ ನಿರ್ಮಾಣಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು. ಹೊಸ ಸಂಕೀರ್ಣಗಳಲ್ಲಿ ʻಆತ್ಮ್ ನಿರ್ಭರ್ ಭಾರತ್ʼ ಸಂಕೇತವಾಗಿ ಭಾರತೀಯ ಕಲಾವಿದರು ರಚಿಸಿದ ಆಕರ್ಷಕ ಕಲಾಕೃತಿಗಳನ್ನು ಸ್ಥಾಪಿಸಿರುವುದಕ್ಕಾಗಿ ಅವರು ಶ್ಲಾಘಿಸಿದರು. "ಹೊಸ ಸಂಕೀರ್ಣಗಳು ದೆಹಲಿಯ ಜೀವಂತಿಕೆ ಮತ್ತು ಪರಿಸರವನ್ನು ಸುರಕ್ಷಿತವಾಗಿ ಉಳಿಸಿಕೊಂಡು ನಮ್ಮ ಸಂಸ್ಕೃತಿಯ ಆಧುನಿಕ ವೈವಿಧ್ಯತೆಯ ರೂಪವನ್ನು ಪ್ರತಿಬಿಂಬಿಸುತ್ತವೆ." ಎಂದು ಅವರು ಹೇಳಿದರು.

ನಾವು ರಾಜಧಾನಿಯ ಬಗ್ಗೆ ಮಾತನಾಡುವುದಾದರೆ, ಅದು ಕೇವಲ ನಗರವಲ್ಲ. ಯಾವುದೇ ದೇಶದ ರಾಜಧಾನಿಯು ದೇಶದ ಚಿಂತನೆ, ದೃಢನಿಶ್ಚಯ, ಶಕ್ತಿ ಮತ್ತು ಸಂಸ್ಕೃತಿಯ ಸಂಕೇತವಾಗಿರುತ್ತದೆ. ಭಾರತ ಪ್ರಜಾಪ್ರಭುತ್ವದ ತಾಯಿ. ಆದ್ದರಿಂದ, ಭಾರತದ ರಾಜಧಾನಿಯು ಹೇಗಿರಬೇಕೆಂದರೆ ಅಲ್ಲಿ ನಾಗರಿಕರು, ಜನರು ಕೇಂದ್ರ ಸ್ಥಾನ ಪಡೆದಿರಬೇಕು ಎಂದು ಪ್ರಧಾನಿ ಹೇಳಿದರು

ಸುಗಮ ಜೀವನ ಮತ್ತು ಸುಗಮ ವ್ಯಾಪಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿದ್ದು, ಇದರಲ್ಲಿ ಆಧುನಿಕ ಮೂಲಸೌಕರ್ಯ ವಹಿಸುವ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. " ಪ್ರಸ್ತುತ ಸೆಂಟ್ರಲ್ ವಿಸ್ತಾದ ನಿರ್ಮಾಣ ಕಾರ್ಯವು ಚಿಂತನೆಯೊಂದಿಗೇ ನಡೆಯುತ್ತಿದೆ", ಎಂದರು. ರಾಜಧಾನಿಯ ಆಶೋತ್ತರಗಳಿಗೆ ಅನುಗುಣವಾಗಿ ಹೊಸ ನಿರ್ಮಾಣಗಳ ಪ್ರಯತ್ನಗಳನ್ನು ವಿವರಿಸಿದರು. ಜನ ಪ್ರತಿನಿಧಿಗಳಿಗೆ ನಿವಾಸಗಳು, ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ನೆನಪುಗಳನ್ನು ಸಂರಕ್ಷಿಸುವ ಪ್ರಯತ್ನಗಳು, ಅನೇಕ ಭವನಗಳು, ನಮ್ಮ ಹುತಾತ್ಮರ ಸ್ಮಾರಕಗಳು ಮುಂತಾದ ನಿರ್ಮಾಣಗಳು ಇಂದು ರಾಜಧಾನಿಯ ವೈಭವವನ್ನು ಹೆಚ್ಚಿಸುತ್ತಿವೆ ಎಂದು ಪ್ರಧಾನಿ ಹೇಳಿದರು

24 ತಿಂಗಳಲ್ಲಿ ಪೂರ್ಣಗೊಳ್ಳಬೇಕಾಗಿದ್ದ ರಕ್ಷಣಾ ಕಚೇರಿ ಸಂಕೀರ್ಣದ ಕಾಮಗಾರಿ ಕೇವಲ 12 ತಿಂಗಳ ದಾಖಲೆಯ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದು ಪ್ರಧಾನಿ ಹೇಳಿದರು. ಅದು ಕೂಡ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಕಾರ್ಮಿಕರ ಸಮಸ್ಯೆಯಿಂದ ಹಿಡಿದು ಇತರ ಎಲ್ಲಾ ಸವಾಲುಗಳ ನಡುವೆ ಅವಧಿಗೆ ಮುನ್ನವೇ ಕಾಮಗಾರಿ ಮುಗಿಸಲಾಗಿದೆಕೊರೊನಾ ಅವಧಿಯಲ್ಲಿ ನೂರಾರು ಕಾರ್ಮಿಕರು ಯೋಜನೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಸರಕಾರದ ಕಾರ್ಯನಿರ್ವಹಣೆಯಲ್ಲಿ ಹೊಸ ಚಿಂತನೆ ಮತ್ತು ವಿಧಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು. "ನೀತಿಗಳು ಮತ್ತು ಉದ್ದೇಶಗಳು ಸ್ಪಷ್ಟವಾದಾಗ, ಇಚ್ಛಾಶಕ್ತಿ ಬಲವಾಗಿದ್ದಾಗ ಮತ್ತು ಪ್ರಯತ್ನಗಳು ಪ್ರಾಮಾಣಿಕವಾಗಿದ್ದಾಗ, ಎಲ್ಲವೂ ಸಾಧ್ಯ", ಎಂದು ಪ್ರಧಾನಿ ಹೇಳಿದರು.

ಹೊಸ ರಕ್ಷಣಾ ಕಚೇರಿ ಸಂಕೀರ್ಣಗಳು ಬದಲಾಗುತ್ತಿರುವ ಸರಕಾರದ ಆದ್ಯತೆಗಳು ಮತ್ತು ಕೆಲಸದ ಸಂಸ್ಕೃತಿಗೆ ಕನ್ನಡಿ ಹಿಡಿದಿವೆ ಎಂದು ಪ್ರಧಾನಿ ಹೇಳಿದರು. ಸರಕಾರದ ಇಲಾಖೆಗಳ ಬಳಿ ಲಭ್ಯವಿರುವ ಭೂಮಿಯನ್ನು ಸೂಕ್ತವಾಗಿ ಮತ್ತು ಸರಿಯಾಗಿ ಬಳಸುವುದು ಸರಕಾರದ ಅಂತಹ ಆದ್ಯತೆಗಳಲ್ಲಿ ಒಂದಾಗಿದೆ ಎಂದರು. ರಕ್ಷಣಾ ಕಚೇರಿ ಸಂಕೀರ್ಣಗಳನ್ನು 13 ಎಕರೆ ಭೂ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಹಿಂದೆ ಇಂತಹ ಸಂಕೀರ್ಣಗಳ ನಿರ್ಮಾಣಕ್ಕೆ ಇದಕ್ಕಿಂತಲೂ ಐದು ಪಟ್ಟು ಹೆಚ್ಚು ಭೂಮಿಯನ್ನು ಬಳಸಲಾಗುತ್ತಿತ್ತು ಎಂದು ಪ್ರಧಾನಿ ಮಾಹಿತಿ ನೀಡಿದರು. ಮುಂದಿನ 25 ವರ್ಷಗಳಲ್ಲಿ ಅಂದರೆ ʻಆಜಾದಿ ಕಾ ಅಮೃತ ಕಾಲʼದಲ್ಲಿ ಸರಕಾರಿ ವ್ಯವಸ್ಥೆಯ ಉತ್ಪಾದಕತೆ ಮತ್ತು ದಕ್ಷತೆಗೆ ಇಂತಹ ಪ್ರಯತ್ನಗಳ ಮೂಲಕ ಬೆಂಬಲ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು. ಒಂದು ಸಾಮಾನ್ಯ ಕೇಂದ್ರ ಸಚಿವಾಲಯ, ಸಂಪರ್ಕಿತ ಸಭಾಂಗಣಮೆಟ್ರೋದಂತಹ ಸುಲಭ ಸಂಪರ್ಕ ಇತ್ಯಾದಿಗಳ ಲಭ್ಯತೆಯು ರಾಜಧಾನಿಯನ್ನು ಜನಸ್ನೇಹಿಯಾಗಿಮಾಡಲು ಹೆಚ್ಚಿನ ಸಹಾಯ ಮಾಡುತ್ತವೆ ಎಂದು ಹೇಳಿ ಪ್ರಧಾನಿ ಮಾತು ಮುಗಿಸಿದರು.

***


(Release ID: 1755406) Visitor Counter : 348