ಪ್ರಧಾನ ಮಂತ್ರಿಯವರ ಕಛೇರಿ

ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕಾ ಫಲಾನುಭವಿಗಳ ಜೊತೆ ಪ್ರಧಾನ ಮಂತ್ರಿಗಳ ಸಂವಾದ

Posted On: 06 SEP 2021 1:20PM by PIB Bengaluru

ಹಿಮಾಚಲ ಪ್ರದೇಶವು ಇಂದು ಪ್ರಧಾನ ಸೇವಕನಾಗಿ ಮಾತ್ರವಲ್ಲ ಕುಟುಂಬದ ಸದಸ್ಯನಾಗಿ ನನಗೆ ಹೆಮ್ಮೆಯ ಅವಕಾಶವನ್ನು ಒದಗಿಸಿಕೊಟ್ಟಿದೆ. ಹಿಮಾಚಲವು ಸಣ್ಣ ಸೌಲಭ್ಯಗಳಿಗಾಗಿ, ಅವಕಾಶಗಳಿಗಾಗಿ ಹೋರಾಟ ಮಾಡುತ್ತಿದ್ದುದನ್ನು ನಾನು ನೋಡಿದ್ದೆ, ಮತ್ತು ಇಂದು ಹಿಮಾಚಲ ಪ್ರದೇಶವು ಅಭಿವೃದ್ಧಿಯ ಕಥೆ ಬರೆಯುತ್ತಿರುವುದನ್ನೂ ನೋಡುತ್ತಿದ್ದೇನೆ. ಇದೆಲ್ಲ ಸಾಧ್ಯವಾಗಿರುವುದು ದೇವತೆಗಳ ಆಶೀರ್ವಾದದಿಂದ, ಹಿಮಾಚಲ ಪ್ರದೇಶ ಸರಕಾರದ  ಪರಿಶ್ರಮದಿಂದ ಮತ್ತು ಹಿಮಾಚಲದ ಜನತೆಯ ಜಾಗೃತಿಯಿಂದ. ನನಗೆ ಸಂವಹನ ನಡೆಸಲು ಅವಕಾಶ ಮಾಡಿಕೊಟ್ಟಂತಹ ಎಲ್ಲರಿಗೂ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ಇಡೀ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಶುಭವಾಗಲಿ!!

ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜೀ, ಉತ್ಸಾಹಿ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್ ಜೀ, ಸಂಸತ್ತಿನಲ್ಲಿ ನಮ್ಮ ಸಹೋದ್ಯೋಗಿಯಾಗಿರುವ ಮತ್ತು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹಾಗು ಹಿಮಾಚಲ ಪ್ರದೇಶದ ಅದ್ಭುತವಾಗಿರುವ ಶ್ರೀ ಜಗತ್ ಪ್ರಕಾಶ್ ನಡ್ಡಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಅನುರಾಗ್ ಠಾಕೂರ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಹಿಮಾಚಲ ಬಿ.ಜೆ.ಪಿ. ಅಧ್ಯಕ್ಷ ಶ್ರೀ ಸುರೇಶ್ ಕಶ್ಯಪ್ ಜೀ, ಇತರ ಎಲ್ಲಾ ಸಚಿವರೇ, ಸಂಸದರೇ ಮತ್ತು ಶಾಸಕರೇ, ಪಂಚಾಯತ್ ಗಳ ಜನ ಪ್ರತಿನಿಧಿಗಳೇ, ಮತ್ತು ಹಿಮಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ!

ಹಿಮಾಚಲ ಪ್ರದೇಶವು ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡ ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಬಹಳ ದೊಡ್ಡ ನಾಯಕನಾಗಿ ಹೊರಹೊಮ್ಮಿದೆ. ಇಂತಹ ಪರಿಸ್ಥಿತಿ ಕಳೆದ ನೂರು ವರ್ಷಗಳಲ್ಲಿ ಎಂದೂ ಎದುರಾಗಿರಲಿಲ್ಲ. ಹಿಮಾಚಲ ಪ್ರದೇಶವು ತನ್ನ ಎಲ್ಲಾ ಅರ್ಹ ಜನಸಂಖ್ಯೆಗೆ ಕನಿಷ್ಟ ಒಂದು ಡೋಸ್ ನಷ್ಟಾದರೂ ಕೊರೊನ ಲಸಿಕೆಯನ್ನು ಹಾಕಿಸಿದ ದೇಶದ ಮೊದಲ ರಾಜ್ಯವಾಗಿದೆ. ಇದು ಮಾತ್ರವಲ್ಲ, ಹಿಮಾಚಲವು ಅದರ ಮೂರನೆ ಒಂದರಷ್ಟಕ್ಕಿಂತಲೂ ಅಧಿಕ ಜನಸಂಖ್ಯೆಗೆ ಎರಡನೇ ಡೋಸ್ ಲಸಿಕೆಯನ್ನು ನೀಡಿದೆ.

ಸ್ನೇಹಿತರೇ,

ಹಿಮಾಚಲದ ಜನತೆಯ ಯಶೋಗಾಥೆ ದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಅದು ಸ್ವಾವಲಂಬನೆಗೆ ಎಷ್ಟು ಮುಖ್ಯ ಎಂಬುದನ್ನೂ ನೆನಪಿಸಿಕೊಟ್ಟಿದೆ. ಲಸಿಕೆಯಲ್ಲಿ ಸ್ವಾವಲಂಬನೆಯ ಫಲ ಎಂದರೆ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ಮತ್ತು 130 ಕೋಟಿ ಭಾರತೀಯರ ವಿಶ್ವಾಸ. ಭಾರತವು ದಿನಕ್ಕೆ 1.25 ಕೋಟಿ ಲಸಿಕೆಗಳನ್ನು ಹಾಕುವ ಮೂಲಕ ದಾಖಲೆ ಮಾಡುತ್ತಿದೆ. ಭಾರತವು ಒಂದು ದಿನದಲ್ಲಿ ಹಾಕುತ್ತಿರುವ ಲಸಿಕೆಯ ಪ್ರಮಾಣ ಹಲವು ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಿನದಾಗಿದೆ. ಭಾರತದ ಲಸಿಕಾಕರಣ ಆಂದೋಲನದ ಯಶಸ್ಸು ಪ್ರತಿಯೊಬ್ಬ ಭಾರತೀಯರ ಕಠಿಣ ದುಡಿಮೆ ಮತ್ತು ಧೀರತ್ವದ ಫಲವಾಗಿದೆ. ಕೆಂಪು ಕೋಟೆಯಿಂದ 75ನೇ ಸ್ವಾತಂತ್ರ್ಯ ದಿನದಂದು ನಾನು ಘೋಷಿಸಿದ   “ಸಬ್ ಕಾ ಪ್ರಯಾಸ್ಅದರ ಪ್ರತಿಫಲನ. ಹಿಮಾಚಲದ ಬಳಿಕ ಸಿಕ್ಕಿಂ ಮತ್ತು ದಾದ್ರಾ ನಗರ್ ಹವೇಲಿ ಗಳು ಮೊದಲ ಡೋಸ್ ವಿತರಣೆಯಲ್ಲಿ ನೂರು ಪ್ರತಿಶತ ಲಸಿಕೆ ನೀಡಿಕೆಯ ಗುರಿಯನ್ನು ಪೂರೈಸಿವೆ. ಮತ್ತು ಇತರ ಹಲವು ರಾಜ್ಯಗಳು ಇದರ ಸನಿಹದಲ್ಲಿವೆ. ಮೊದಲ ಡೋಸ್ ತೆಗೆದುಕೊಂಡವರು ಎರಡನೆ ಡೋಸ್ ತೆಗೆದುಕೊಳ್ಳುವಂತೆ ಮಾಡಲು ನಾವು ದೃಢವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಹಿಮಾಚಲ ಪ್ರದೇಶದ ತ್ವರಿತಗತಿಯ ಲಸಿಕಾ ಆಂದೋಲನಕ್ಕೆ ಆತ್ಮವಿಶ್ವಾಸ ಒಂದು ಬೇರಿನಂತೆ. ಹಿಮಾಚಲವು ತನ್ನ ಸಾಮರ್ಥ್ಯದಲ್ಲಿ ನಂಬಿಕೆ ಇರಿಸಿತು, ಅದರ ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ವಿಜ್ಞಾನಿಗಳ ಮೇಲೆ ನಂಬಿಕೆ ಇಟ್ಟಿತು. ಎಲ್ಲಾ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಮತ್ತು ಎತರ ಎಲ್ಲಾ ಸಹೋದ್ಯೋಗಿಗಳ ಉತ್ಸಾಹ, ಶ್ರಮದ ಫಲ ಸಾಧನೆ. ಅಲ್ಲಿ ಆರೋಗ್ಯ ವಲಯಕ್ಕೆ ಸೇರಿದ ಜನರ ಕಠಿಣ ಪರಿಶ್ರಮವಿದೆ, ಅದು ವೈದ್ಯರಾಗಿರಲಿ, ಅರೆ ವೈದ್ಯಕೀಯ ಸಿಬ್ಬಂದಿಗಳಿರಲಿ, ಅಥವಾ ಇತರ ಸಹಾಯಕರಿರಲಿ. ಇದರಲ್ಲಿ ಕೂಡಾ ಬಹಳ ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಹೋದರಿಯರು ವಿಶೇಷವಾದ ಪಾತ್ರವನ್ನು ವಹಿಸಿದ್ದಾರೆ. ಸ್ವಲ್ಪ ಮೊದಲು ತಳಮಟ್ಟದಲ್ಲಿ ಕೆಲಸ ಮಾಡಿದ್ದ ಎಲ್ಲಾ ನಮ್ಮ ಸಹೋದ್ಯೋಗಿಗಳು ಅವರು ಎದುರಿಸಿದ ವಿವಿಧ ರೀತಿಯ ಸವಾಲುಗಳನ್ನು ವಿವರವಾಗಿ ತಿಳಿಸಿದ್ದಾರೆ. ಲಸಿಕಾಕರಣಕ್ಕೆ ಅಡ್ಡಿಯಾಗುವಂತಹ ಎಲ್ಲಾ ರೀತಿಯ ಹಿಂಜರಿಕೆಗಳೂ ಹಿಮಾಚಲದಲ್ಲಿ ಇದ್ದವು. ಗುಡ್ಡ ಗಾಡು ಪ್ರದೇಶವಾದುದರಿಂದ ಅಲ್ಲಿ ಸಾಗಾಟದ ಸಮಸ್ಯೆ ಇತ್ತು. ಕೊರೊನಾ ಲಸಿಕೆಯ ದಾಸ್ತಾನು ಮತ್ತು ಸಾಗಾಟ ಇನ್ನೂ ಜಟಿಲವಾಗಿತ್ತು. ಆದರೆ ಜೈರಾಮ್ ಜೀ ಅವರ ಸರಕಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ನಿಜವಾಗಿಯೂ ಶ್ಲಾಘನೀಯವಾದುದು. ಲಸಿಕೆಗಳನ್ನು ವ್ಯರ್ಥ ಮಾಡದೆ, ಪೋಲು ಮಾಡದೇ, ತ್ವರಿತ ಲಸಿಕಾ ಕಾರ್ಯಕ್ರಮವನ್ನು ಹಿಮಾಚಲ ಖಾತ್ರಿಪಡಿಸಿರುವುದು ನಿಜವಾಗಿಯೂ ಬಹಳ ದೊಡ್ಡ ಕೆಲಸ.

ಸ್ನೇಹಿತರೇ,

ಕಠಿಣ ಭೌಗೋಳಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಲಸಿಕಾಕರಣದ ಯಶಸ್ಸಿನಲ್ಲಿ  ಸಾಮೂಹಿಕ ಸಂವಹನ ಮತ್ತು ಸಾರ್ವಜನಿಕ ಸಹಭಾಗಿತ್ವ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಹಿಮಾಚಲದಲ್ಲಿ, ಪ್ರತಿಯೊಂದು ಗಿರಿ ಪ್ರದೇಶಗಳಲ್ಲಿ ಭಾಷಾ ವೈವಿಧ್ಯಗಳು ಇವೆ. ಗಿರಿಗಳಿಂದ ಗಿರಿಗಳಿಗೆ ಇವು ಬದಲಾಗುತ್ತವೆ. ಬಹುತೇಕ ಪ್ರದೇಶ ಹಳ್ಳಿಗಾಡಿನಂತಹದು. ಗ್ರಾಮೀಣ ಪ್ರದೇಶ ಹೆಚ್ಚು. ಅಲ್ಲಿ ನಂಬಿಕೆ ಜೀವನದ ಅವಿಭಾಜ್ಯ ಅಂಗ. ಜೀವನದಲ್ಲಿ ದೇವರು ಮತ್ತು ದೇವಿಯರ ಭಾವನಾತ್ಮಕ ಹಾಜರಾತಿ ಇರುತ್ತದೆ. ಸ್ವಲ್ಪ ಸಮಯಕ್ಕೆ ಮೊದಲು ನಮ್ಮ ಸಹೋದರಿಯರಲ್ಲೊಬ್ಬರು ಕುಲು ಜಿಲ್ಲೆಯಲ್ಲಿಯ ಮಲಾನಾ ಗ್ರಾಮದ ಬಗ್ಗೆ ಹೇಳಿದರು. ಮಲಾನಾವು ಪ್ರಜಾಪ್ರಭುತ್ವಕ್ಕೆ ದಿಕ್ಕು ದಿಸೆಗಳನ್ನು ತೋರಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಅಲ್ಲಿಯ ತಂಡವು ವಿಶೇಷ ಶಿಬಿರಗಳನ್ನು ನಡೆಸಿತ್ತು ಮತ್ತು ಲಸಿಕಾ ಬಾಕ್ಸ್ ಗಳನ್ನು ಸ್ಪಾನ್ ವಯರ್ ಮೂಲಕ ಸಾಗಾಟ ಮಾಡಿತ್ತು. ದೇವ್ ಸಮಾಜದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತ್ತು. ಸಾರ್ವಜನಿಕ ಸಹಭಾಗಿತ್ವದ ಇಂತಹ ತಂತ್ರ ಮತ್ತು ಸಾರ್ವಜನಿಕ ಸಂವಾದದ ವ್ಯೂಹ ಪ್ರತೀ ದುರ್ಗಮ ಪ್ರದೇಶಗಳಲ್ಲಿ, ಸಿಮ್ಲಾದ ದೋದ್ರಾ ಮತ್ತು ಕ್ವಾರ್, ಕಾಂಗ್ರಾದ ಛೋಟಾ ಬಡಾ ಭಂಗಾಲ್, ಕಿನ್ನೌರ್, ಲಾಹೌಲ್ಸ್ಪಿಟಿ ಮತ್ತು ಪಾಂಗಿ-ಭಾರ್ಮೌರ್ ಗಳಲ್ಲಿ ಉತ್ತಮ ಪರಿಣಾಮ ಬೀರಿತು.

ಸ್ನೇಹಿತರೇ

ಹಿಮಾಚಲ ಪ್ರದೇಶದ ಸಂಪರ್ಕ ಬಹಳ ಕಷ್ಟಕರವಾದ ಲಾಹೌಲ್-ಸ್ಪಿಟಿ ಜಿಲ್ಲೆ ಕೂಡಾ 100% ಜನರಿಗೆ ಮೊದಲ ಡೋಸ್ ಲಸಿಕೆ ಹಾಕಿಸುವಲ್ಲಿ ಮೊದಲ ಸಾಲಿನಲ್ಲಿರುವುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಅಟಲ್ ಸುರಂಗ ನಿರ್ಮಾಣ ಆಗುವುದಕ್ಕೆ ಮೊದಲು ವಲಯವು ತಿಂಗಳುಗಟ್ಟಲೆ ದೇಶದ ಇತರ ಭಾಗಗಳಿಂದ ಸಂಪರ್ಕವಂಚಿತವಾಗಿರುತ್ತಿತ್ತು. ಹಿಮಾಚಲವು ನಂಬಿಕೆ, ಶಿಕ್ಷಣ ಮತ್ತು ವಿಜ್ಞಾನಗಳು ಒಟ್ಟಾಗಿ ಹೇಗೆ ಬದುಕನ್ನು ಬದಲಾಯಿಸಬಲ್ಲವು ಎಂಬುದನ್ನು ತೋರಿಸಿಕೊಟ್ಟಿದೆ. ಹಿಮಾಚಲ ಪ್ರದೇಶದ ಜನರು ಯಾವುದೇ ಗಾಳಿ ಸುದ್ದಿಗಳನ್ನು ನಂಬಲಿಲ್ಲ, ತಪ್ಪು ಮಾಹಿತಿಗಳನ್ನು ನಂಬಲಿಲ್ಲ. ದೇಶದ ಗ್ರಾಮೀಣ ಸಮಾಜ ಹೇಗೆ ಜಗತ್ತಿನ ಅತ್ಯಂತ ದೊಡ್ಡ ಮತ್ತು ತ್ವರಿತ ಲಸಿಕಾ ಆಂದೋಲನವನ್ನು ಸಶಕ್ತೀಕರಣಗೊಳಿಸಬಲ್ಲದು ಎಂಬುದಕ್ಕೆ ಹಿಮಾಚಲ ಒಂದು ಪ್ರಬಲ ಉದಾಹರಣೆ.

ಸ್ನೇಹಿತರೇ,

ಹಿಮಾಚಲದ ಪ್ರವಾಸೋದ್ಯಮ ಅಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಯುವಜನತೆಗೆ ಉದ್ಯೋಗದ ಮೂಲ. ತ್ವರಿತ ಲಸಿಕಾಕರಣದಿಂದ ರಂಗಕ್ಕೆ ಕೂಡಾ ಪ್ರಯೋಜನವಾಗಲಿದೆ. ಆದರೆ ನೆನಪಿಡಿ, ಲಸಿಕೆಗಳನ್ನು ತೆಗೆದುಕೊಂಡಿದ್ದರೂನಾವು ಮುಖಗವಸುಗಳನ್ನು ಧರಿಸುವ ಮತ್ತು ಎರಡು ಯಾರ್ಡ್ ಅಂತರವನ್ನು ಕಾಪಾಡುವ ಮಂತ್ರವನ್ನು ಮರೆಯಬಾರದು. ಹಿಮಾಚಲದ ಜನತೆ ಹಿಮ ಬಿದ್ದ ನಂತರ ಹೇಗೆ ಜಾಗರೂಕತೆಯಿಂದ ಮನೆಗಳಿಂದ ಹೊರಗೆ ಬರಬೇಕು ಎಂಬುದನ್ನು ಬಹಳ ಚೆನ್ನಾಗಿ ಬಲ್ಲರು. ಮಳೆ ಬಂದು ಹೋದ ನಂತರ ನಾವು ಕೊಡೆಯನ್ನು ಹೇಗೆ ಜಾಗರೂಕತೆಯಿಂದ ಮಡಚಿ ಇಡುತ್ತೇವೆ ಎಂಬುದನ್ನು ನೀವು ಗಮನಿಸಿರಬಹುದು. ಅದೇ ರೀತಿ, ಕೊರೊನಾ ಜಾಗತಿಕ ಸಾಂಕ್ರಾಮಿಕದ ಬಳಿಕ ನಾವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ಕಾಲದಲ್ಲಿ, ಹಿಮಾಚಲವು ಹಲವು ಯುವಜನತೆಗೆ   “ಮನೆಯಿಂದ ಕೆಲಸ ಮಾಡುವಅಥವಾಎಲ್ಲಿಂದಾದರೂ ಕೆಲಸ ಮಾಡುವಅವಕಾಶದ ಅತ್ಯಂತ ಆಪ್ಯಾಯಮಾನವಾದ ತಾಣವಾಗಿದೆ. ಹಿಮಾಚಲವು ನಗರಗಳಲ್ಲಿ ಇರುವ ಉತ್ತಮ ಸೌಲಭ್ಯಗಳು ಮತ್ತು ಉತ್ತಮ ಅಂತರ್ಜಾಲ ಸಂಪರ್ಕ ಸೌಲಭ್ಯಗಳಿಂದಾಗಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕೊರೊನಾ ಅವಧಿಯಲ್ಲಿಯೂ ಹಿಮಾಚಲ ಪ್ರದೇಶದ ಮೇಲೆ  ಜೀವನ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿ ಸಂಪರ್ಕದ ಧನಾತ್ಮಕ ಪರಿಣಾಮಗಳಾಗಿವೆ. ಇಂದು ದೇಶದ ಅತ್ಯಂತ ದೊಡ್ಡ ಆದ್ಯತೆ ಎಂದರೆ ಸಂಪರ್ಕ. ಅದು ರಸ್ತೆ, ರೈಲು, ವಾಯು ಅಥವಾ ಅಂತರ್ಜಾಲ ಆಗಿರಬಹುದು. ಇಂದು 8-10 ಮನೆಗಳಿರುವ ಜನವಸತಿ ಪ್ರದೆಶಗಳಿಗೆ ಕೂಡಾ ಪ್ರಧಾನ ಮಂತ್ರಿ ಗ್ರಾಮೀಣ್ ಸಡಕ್ ಯೋಜನೆಯ ಮೂಲಕ ರಸ್ತೆಗಳ ಮೂಲಕ ಸಂಪರ್ಕ ಬೆಸೆಯಲಾಗುತ್ತಿದೆ. ಹಿಮಾಚಲದ ರಾಷ್ಟ್ರೀಯ ಹೆದ್ದಾರಿಗಳು ಅಗಲಗೊಳ್ಳುತ್ತಿವೆ. ಇಂತಹ ಬಲಿಷ್ಟ ಸಂಪರ್ಕ ವ್ಯವಸ್ಥೆಯಿಂದಾಗಿ ಪ್ರವಾಸೋದ್ಯಮಕ್ಕೆ ನೇರವಾದ ಲಾಭವಾಗುತ್ತಿದೆ, ಅದೇ ರೀತಿ ತರಕಾರಿ, ಹಣ್ಣುಗಳನ್ನು ಬೆಳೆಯುವ ರೈತರಿಗೆ, ತೋಟಗಾರರಿಗೆ ಕೂಡಾ ಪ್ರಯೋಜನವಾಗುತ್ತಿದೆ. ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕದಿಂದಾಗಿ ಹಿಮಾಚಲದ ಯುವ ಪ್ರತಿಭೆಗಳು ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಣೆ ಮಾಡುವಂತಾಗಿದೆ ಮತ್ತು ಅವರ ಸಂಸ್ಕೃತಿಯನ್ನು ದೇಶಾದ್ಯಂತ ಮತ್ತು ವಿದೇಶಗಳಿಗೂ ಪರಿಚಯಿಸುವುದು ಸಾಧ್ಯವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸದ್ಯೋಭವಿಷ್ಯದಲ್ಲಿ ಆಧುನಿಕ ಮತ್ತು ಡಿಜಿಟಲ್ ತಂತ್ರಜ್ಞಾನದಿಂದಾಗಿ ಹಿಮಾಚಲ ಪ್ರದೇಶವು ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದೆ. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಬಹಳ ದೊಡ್ಡ ಬದಲಾವಣೆಗಳು ಆಗಲಿವೆ. ಇದರೊಂದಿಗೆ ಅತ್ಯಂತ ದುರ್ಗಮ ಪ್ರದೇಶಗಳಲ್ಲಿರುವ ಶಾಲೆಗಳು, ಆರೋಗ್ಯ ಕೇಂದ್ರಗಳು ವರ್ಚುವಲ್ ಮೂಲಕ ಅನುಕ್ರಮವಾಗಿ ದೊಡ್ಡ ಶಾಲೆಗಳ ಶಿಕ್ಷಕರ ಜೊತೆ ಮತ್ತು ದೊಡ್ಡ ಆಸ್ಪತ್ರೆಗಳ ವೈದ್ಯರ ಜೊತೆ ಜೋಡಿಸಲ್ಪಡಲಿವೆ.

ಇತ್ತೀಚೆಗೆ ದೇಶವು ಇನ್ನೊಂದು ನಿರ್ಧಾರವನ್ನು ಮಾಡಿದೆ. ಅದನ್ನು ನಾನು ವಿಶೇಷವಾಗಿ ಹಿಮಾಚಲ ಪ್ರದೇಶದ ಜನತೆಗೆ ತಿಳಿಸಲಿಚ್ಛಿಸುತ್ತೇನೆ. ಇದು ಡ್ರೋನ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗೆ ಸಂಬಂಧಿಸಿದ್ದು. ಈಗ ಅದರ ನಿಯಮಗಳನ್ನು ಸರಳಗೊಳಿಸಲಾಗಿದೆ. ಇದರಿಂದ ಹಿಮಾಚಲದ ಆರೋಗ್ಯ ಮತ್ತು ಕೃಷಿ ಸಹಿತ ಅನೇಕ ಕ್ಷೇತ್ರಗಳಲ್ಲಿ ಹೊಸ ಸಾಧ್ಯತೆಗಳು ಗೋಚರಿಸಲಿವೆ. ಈಗ ಡ್ರೋನ್ ಗಳನ್ನು ಮನೆಗಳಿಗೆ ಔಷಧಗಳ ಪೂರೈಕೆಗಾಗಿ ಬಳಸಬಹುದು, ಅವುಗಳನ್ನು ತೋಟಗಳಲ್ಲಿ ಬಳಸಬಹುದು ಮತ್ತು ಅವುಗಳನ್ನು ಈಗಾಗಲೇ ಸರ್ವೇ ಕಾರ್ಯದಲ್ಲಿ ಬಳಸಲಾಗುತ್ತಿದೆ. ಡ್ರೋನ್ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸುವುದರಿಂದ ನಮ್ಮ ಗಿರಿ ಪ್ರದೇಶಗಳಲ್ಲಿಯ ಜನರ ಜೀವನ ಬದಲಾಗಬಲ್ಲುದು. ಹಿಮಾಚಲ ಪ್ರದೇಶದಲ್ಲಿ ಡ್ರೋನ್ ತಂತ್ರಜ್ಞಾನದಿಂದ ಅರಣ್ಯ ರಕ್ಷಣೆ ಮತ್ತು ಸಂರಕ್ಷಣೆಗೂ ಬಹಳ ಉಪಯೋಗವಾಗಲಿದೆ. ಸರಕಾರಿ ಸೇವೆಗಳಲ್ಲಿ ಕೂಡಾ  ಆಧುನಿಕ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸಬೇಕು ಎಂಬುದು ಕೇಂದ್ರ ಸರಕಾರದ ನಿರಂತರವಾದ  ಪ್ರಯತ್ನವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಹಿಮಾಚಲವು ಇಂದು ತ್ವರಿತಗತಿಯ ಅಭಿವೃದ್ಧಿ ಹೊಂದುವ ಹಾದಿಯಲ್ಲಿದೆ. ಆದರೆ ನೈಸರ್ಗಿಕ ವಿಕೋಪಗಳು ಹಿಮಾಚಲಕ್ಕೆ ಬಹಳ ದೊಡ್ಡ ಸವಾಲುಗಳನ್ನು ತಂದೊಡ್ಡುತ್ತಿವೆ. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಅನೇಕ ಸ್ನೇಹಿತರನ್ನು ಹಲವಾರು ದುರದೃಷ್ಟಕರ ಘಟನೆಗಳಲ್ಲಿ ಕಳೆದುಕೊಂಡಿದ್ದೇವೆ. ಆದುದರಿಂದ ನಾವು ಭೂಕುಸಿತಗಳ ಬಗ್ಗೆ ಸಾಕಷ್ಟು ಮುಂಚಿತವಾಗಿ ಸೂಚನೆ ನೀಡುವ ವ್ಯವಸ್ಥೆಗಳನ್ನು ಸಿದ್ಧಪಡಿಸುವ ಸಂಶೋಧನೆಗಳಿಗೆ ಉತ್ತೇಜನ ನೀಡಬೇಕಾಗಿದೆ ಮತ್ತು ತ್ವರಿತ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗಿರಿ ಪ್ರದೇಶಗಳ ಆವಶ್ಯಕತೆಗಳಿಗೆ ಅನುಗುಣವಾದಂತಹ ನಿರ್ಮಾಣ ತಂತ್ರಜ್ಞಾನದಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುವಂತೆ ನಮ್ಮ ಯುವಜನತೆಯನ್ನು ಉತ್ತೇಜಿಸುತ್ತಿರಬೇಕಾಗಿದೆ.

ಸ್ನೇಹಿತರೇ,

ಗ್ರಾಮಗಳನ್ನು ಮತ್ತು ಸಮುದಾಯಗಳನ್ನು ಸಂಪರ್ಕಿಸಿದರೆ ಅರ್ಥಪೂರ್ಣ ಫಲಿತಾಂಶಗಳನ್ನು ಹೇಗೆ ಪಡೆಯಬಹುದು ಎಂಬುದಕ್ಕೆ  ಜಲ್ ಜೀವನ್ ಆಂದೋಲನ ಒಂದು ದೊಡ್ಡ ಉದಾಹರಣೆ. ಇಂದು ಹಿಮಾಚಲ ಪ್ರದೇಶದಲ್ಲಿ ಅಸಾಧ್ಯ ಎಂದು ಪರಿಗಣಿಸಲ್ಪಟ್ಟಿದ್ದ ಪ್ರದೇಶಗಳಲ್ಲಿ ನಳ ಮೂಲಕ ನೀರು ಲಭ್ಯವಾಗುತ್ತಿದೆ. ಇಂತಹದೇ  ಧೋರಣೆಯನ್ನು ಅರಣ್ಯ ಸಂಪತ್ತಿಗೆ ಸಂಬಂಧಿಸಿದಂತೆಯೂ ಅನುಸರಿಸಬಹುದು. ನಿಟ್ಟಿನಲ್ಲಿ ಗ್ರಾಮಗಳಲ್ಲಿರುವ ಸ್ವ ಸಹಾಯ ಗುಂಪುಗಳಲ್ಲಿ ನಮ್ಮ ಸಹೋದರಿಯರ ಪಾಲುದಾರಿಕೆಯನ್ನು ಬಲಪಡಿಸುವಂತಾಗಬೇಕು. ಹಿಮಾಚಲದ ಅರಣ್ಯಗಳಲ್ಲಿ  ವಿಶೇಷವಾಗಿ ಇಲ್ಲಿಯ ಗಿಡ ಮೂಲಿಕೆಗಳು, ಸಲಾದ್ ಗಳು ಮತ್ತು ತರಕಾರಿಗಳಲ್ಲಿ ಬಹಳಷ್ಟು ವೈವಿದ್ಯಗಳಿವೆ ಮತ್ತು ಅವುಗಳ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ನಮ್ಮ ಕಠಿಣ ಪರಿಶ್ರಮಿ ಸಹೋದರಿಯರು ಸಂಪತ್ತನ್ನು ವೈಜ್ಞಾನಿಕ ವಿಧಾನಗಳ ಮೂಲಕ ಹಲವು ಪಟ್ಟು ಹೆಚ್ಚಿಸಲು ಅವಕಾಶಗಳಿವೆ. ಈಗ ನಮ್ಮ ಸಹೋದರಿಯರಿಗೆ ಹೊಸ ಮಾಧ್ಯಮವಾದ -ವಾಣಿಜ್ಯದ ಸವಲತ್ತು ಲಭ್ಯವಿದೆ. ಆಗಸ್ಟ್ 15ರಂದು ನಾನು ನನ್ನ ಕೆಂಪುಕೋಟೆಯ ಭಾಷಣದಲ್ಲಿ ಸ್ವಸಹಾಯ ಗುಂಪಿನ ಸಹೋದರಿಯರಿಗಾಗಿ ಕೇಂದ್ರ ಸರಕಾರವು ವಿಶೇಷ ಆನ್ ಲೈನ್ ವೇದಿಕೆಯನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೆ. ನಮ್ಮ ಸಹೋದರಿಯರು ಅವರ ಉತ್ಪಾದನೆಗಳನ್ನು ಮಾಧ್ಯಮದ ಮೂಲಕ ದೇಶದ ಮತ್ತು ಜಗತ್ತಿನ ಯಾವುದೇ ಮೂಲೆಯಲ್ಲೂ ಮಾರಾಟ ಮಾಡಲು ಸಮರ್ಥರಾಗುತ್ತಾರೆ. ಹಿಮಾಚಲದ ನಮ್ಮ ಸಹೋದರಿಯರು ಆಪಲ್, ಆರೆಂಜ್, ಅಣಬೆ, ಟೊಮ್ಯಾಟೋ ಮತ್ತು ಅಂತಹ ಇತರ ಉತ್ಪನ್ನಗಳನ್ನು ಮಾಧ್ಯಮದ ಮೂಲಕ ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಮಾರಾಟ ಮಾಡಬಹುದು. ಕೇಂದ್ರ ಸರಕಾರವು 1 ಲಕ್ಷ ಕೋ.ರೂ.ಗಳ ವಿಶೇಷ ಕೃಷಿ-ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಿದೆ. ಸ್ವ-ಸಹಾಯ ಗುಂಪುಗಳ ಸಹೋದರಿಯರು ಮತ್ತು ಕೃಷಿಕರ ಉತ್ಪನ್ನಗಳ ಸಂಘಗಳು ತಮ್ಮ ಗ್ರಾಮಗಳ ಸಮೀಪ ನಿಧಿಯ ಸಹಾಯದಿಂದ ಶೀತಲೀಕೃತ ದಾಸ್ತಾನುಗಾರಗಳನ್ನು ಅಥವಾ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು. ಇದರಿಂದ ಅವರು ಹಣ್ಣುಗಳು ಮತ್ತು ತರಕಾರಿಗಳ ದಾಸ್ತಾನಿಗಾಗಿ ಇತರರನ್ನು ಅವಲಂಬಿಸುವುದು ತಪ್ಪುತ್ತದೆ. ಕಠಿಣ ದುಡಿಮೆ ಮಾಡುವ ಹಿಮಾಚಲದ ರೈತರು ಮತ್ತು ತೋಟಗಾರರು ಗರಿಷ್ಠ ಪ್ರಮಾಣದಲ್ಲಿ ನಿಧಿಯ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ,

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಿಮಾಚಲದ ರೈತರು ಮತ್ತು ತೋಟಗಾರರಲ್ಲಿ ನಾನು ಇನ್ನೊಂದು ಕೋರಿಕೆಯನ್ನು ಮಂಡಿಸಲು ಬಯಸುತ್ತೇನೆ.ಮುಂದಿನ 25 ವರ್ಷಗಳಲ್ಲಿ ನಮಗೆ ಹಿಮಾಚಲದ ಕೃಷಿಯನ್ನು ಸಾವಯವವನ್ನಾಗಿಸಲು ಪ್ರಯತ್ನಗಳನ್ನು ನಡೆಸುವುದು ಸಾಧ್ಯವಿದೆಯೇ?. ನಿಧಾನವಾಗಿ ನಾವು ನಮ್ಮ ಮಣ್ಣನ್ನು ರಾಸಾಯನಿಕಗಳಿಂದ ಮುಕ್ತ ಮಾಡಬೇಕು. ನಮ್ಮ ಪುತ್ರರು ಮತ್ತು ಹೆಣ್ಣು ಮಕ್ಕಳ ಆರೋಗ್ಯ  ದೃಢವಾಗಿರುವಂತಹ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವು ಮುಂದೆ ಸಾಗಬೇಕು. ಹಿಮಾಚಲದ ಸಾಮರ್ಥ್ಯದಲ್ಲಿ ಮತ್ತು ಹಿಮಾಚಲದ ಯುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಗಡಿಗಳನ್ನು ರಕ್ಷಿಸುವಲ್ಲಿ ಮುಂಚೂಣಿಯಲ್ಲಿರುವ ಹಿಮಾಚಲದ ಯುವ ಜನತೆಯಂತೆ ನಮ್ಮ ಹಿಮಾಚಲದ ಪ್ರತಿಯೊಬ್ಬ ರೈತರು ಕೂಡಾ ಅದೇ ರೀತಿಯಲ್ಲಿ ಪ್ರತೀ ಹಳ್ಳಿಯ ಮಣ್ಣನ್ನು ರಕ್ಷಿಸುವಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಾರೆಂಬ ಬಗ್ಗೆ ನನಗೆ ವಿಶ್ವಾಸವಿದೆ. ಅಸಾಧ್ಯವಾದುದನ್ನು ಸಾಧಿಸುವ ಮೂಲಕ ತನ್ನ ಅಚ್ಚಳಿಯದ ಗುರುತಿಸುವಿಕೆಯನ್ನು ಪಡೆದಿರುವ ಹಿಮಾಚಲ ಅದನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುಂದುವರೆಯಲಿ ಎಂದು ನಾನು ಹಾರೈಸುತ್ತೇನೆ. ಎಲ್ಲಾ ಯುವಜನರಿಗೂ ಮತ್ತೊಮ್ಮೆ ಅಭಿನಂದನೆಗಳು!. ಸಂಪೂರ್ಣ ಲಸಿಕಾ ಕಾರ್ಯಕ್ರಮದ ಗುರಿಯನ್ನು ಸಾಧಿಸಿದ ದೇಶದ ಮೊದಲ ರಾಜ್ಯ ಹಿಮಾಚಲ ಆಗಿರುವುದಕ್ಕೆ ಬಹಳ ಬಹಳ ಅಭಿನಂದನೆಗಳು ! ಕೊರೊನಾ ಬಗ್ಗೆ ಜಾಗೃತರಾಗಿರುವಂತೆ ಇಂದು ನಾನು ಮತ್ತೊಮ್ಮೆ ಎಲ್ಲಾ ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ. ಇದುವರೆಗೆ 70 ಕೋಟಿ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ. ಭಾರತದ ವೈದ್ಯರು, ದಾದಿಯರು, ಅಂಗನವಾಡಿ-ಆಶಾ ಸಹೋದರಿಯರು, ಸ್ಥಳೀಯ ಆಡಳಿತಗಳು, ಲಸಿಕಾ ತಯಾರಿಕಾ ಕಂಪೆನಿಗಳು ಮತ್ತು ವಿಜ್ಞಾನಿಗಳು ದೇಶಾದ್ಯಂತ ತಮ್ಮ ಉತ್ತಮ ಪ್ರಯತ್ನಗಳನ್ನು ಮಾಡಿದ್ದಾರೆ. ಲಸಿಕಾ ಕಾರ್ಯಕ್ರಮ ಬಹಳ ತ್ವರಿತಗತಿಯಿಂದ ನಡೆಯುತ್ತಿದೆ. ಆದರೆ ನಾವು ಯಾವುದೇ ವ್ಯತ್ಯಾಸ ಮತ್ತು ಅಜಾಗ್ರತೆಯ ಬಗ್ಗೆ ನಿಗಾ ಇಡಬೇಕಾಗಿದೆ. ಮತ್ತು ನಾನು ಮೊದಲ ದಿನದಿಂದಲೇದವಾಯಿ ಭೀ ಕಡಾಯಿ ಭೀ” (ಔಷಧ ತೆಗೆದುಕೊಳ್ಳುವುದು ಹಾಗು ಶಿಷ್ಟಾಚಾರಗಳ ಕಟುನಿಟ್ಟಿನ ಅನುಸರಣೆ) ಮಂತ್ರವನ್ನು ಪುನರುಚ್ಚರಿಸುತ್ತಿದ್ದೇನೆ. ಮತ್ತೊಮ್ಮೆ ಹಿಮಾಚಲದ ಜನತೆಗೆ ಬಹಳ ಬಹಳ ಶುಭಾಶಯಗಳು. ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1752795) Visitor Counter : 197