ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪತ್ರಕರ್ತರ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳ ಪರಾಮರ್ಶೆಗೆ ಸಮಿತಿ ರಚಿಸಿದ ಸಚಿವಾಲಯ


2 ತಿಂಗಳುಗಳ ಒಳಗಾಗಿ ವರದಿ ಸಲ್ಲಿಸಲಿರುವ ಸಮಿತಿ

Posted On: 02 SEP 2021 4:14PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪತ್ರಕರ್ತರ ಕಲ್ಯಾಣ ಯೋಜನೆಯ ಪ್ರಸ್ತುತ ಮಾರ್ಗಸೂಚಿಗಳನ್ನು ಪರಿಶೀಲಿಸಲು ಮತ್ತು ಅದರಲ್ಲಿ ಬದಲಾವಣೆಗಳಿಗಾಗಿ ಸೂಕ್ತ ಶಿಫಾರಸುಗಳನ್ನು ಮಾಡಲು ಹೆಸರಾಂತ ಪತ್ರಕರ್ತ ಮತ್ತು ಪ್ರಸಾರ ಭಾರತಿಯ ಸದಸ್ಯ ಶ್ರೀ ಅಶೋಕ್ ಕುಮಾರ್ ಟಂಡನ್ ಅವರ ಅಧ್ಯಕ್ಷತೆಯಲ್ಲಿ 10 ಸದಸ್ಯರ ಸಮಿತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ರಚಿಸಿದೆ. ಕೋವಿಡ್ -19ರ ಕಾರಣದಿಂದಾಗಿ ದೊಡ್ಡ ಸಂಖ್ಯೆಯ ಪತ್ರಕರ್ತರ ಸಾವು ಮತ್ತು "ಕಾರ್ಯನಿರತ ಪತ್ರಕರ್ತರ" ವ್ಯಾಖ್ಯಾನದ ವಿಶಾಲ ಆಧಾರವೂ ಒಳಗೊಂಡಂತೆ ಮಾಧ್ಯಮ ಪರಿಸರದಲ್ಲಿ ಹಲವಾರು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ ಎಂದು ಪರಿಗಣಿಸಲಾಗಿದೆ.

ಪತ್ರಕರ್ತರ ಕಲ್ಯಾಣ ಯೋಜನೆ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ದೇಶದ ಪತ್ರಕರ್ತರ ಅನುಕೂಲಕ್ಕಾಗಿ ಭವಿಷ್ಯದ ದೃಷ್ಟಿಕೋನದೊಂದಿಗೆ ಇದನ್ನು ವಿಶಾಲವಾದ ವ್ಯಾಪ್ತಿಯಿಂದ ಪುನರಾವಲೋಕಿಸುವ ಅಗತ್ಯವಿದೆ.  ಔದ್ಯೋಗಿಕ, ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಸ್ಥಿತಿ ಸಂಹಿತೆ 2020 ಕಾಯಿದೆಯ ಜಾರಿಯೊಂದಿಗೆ, ಕಾರ್ಯನಿರತ ಪತ್ರಕರ್ತರ ವ್ಯಾಖ್ಯಾನವನ್ನು ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುವವರನ್ನೂ ಅದರ ವ್ಯಾಪ್ತಿಗೆ ಸೇರಿಸಿಕೊಳ್ಳಲು ವಿಸ್ತರಿಸಲಾಗಿದೆ. ಜೊತೆಗೆ, ಮಾನ್ಯತೆ ಪಡೆದ ಮತ್ತು ಮಾನ್ಯತೆ ಪಡೆಯದ ಪತ್ರಕರ್ತರ ನಡುವಿನ ಸಂಭಾವ್ಯ ಸಮಾನತೆಯನ್ನು ಕಲ್ಯಾಣದ ದೃಷ್ಟಿಕೋನದಿಂದ ಮತ್ತು ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ನೋಡುವುದು ಅಗತ್ಯವೆಂದು ಪರಿಗಣಿಸಲಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇತ್ತೀಚಿನ ದಿನಗಳಲ್ಲಿ, ಕೋವಿಡ್ -19ರಿಂದ ದುರ್ದೈವವಶಾತ್ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡಲು ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ ಮತ್ತು 100ಕ್ಕೂ ಹೆಚ್ಚು ಅಂತಹ ಪ್ರಕರಣಗಳಲ್ಲಿ ತಲಾ 5 ಲಕ್ಷ ರೂಪಾಯಿ ಪರಿಹಾರ ಪಾವತಿಸಲಾಗಿದೆ.

ಈ ಸಮಿತಿಯು ಕಾಲಮಿತಿಯ ಆಧಾರದಲ್ಲಿ 2 ತಿಂಗಳುಗಳ ಒಳಗಾಗಿ ತನ್ನ ವರದಿಯಲ್ಲಿ ಸಲ್ಲಿಸಲಿದೆ. ಅದರ ಶಿಫಾರಸುಗಳು ಪತ್ರಕರ್ತರ ಅನುಕೂಲಕ್ಕಾಗಿ ಸರ್ಕಾರಕ್ಕೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಅವಕಾಶ ನೀಡುತ್ತದೆ. ಶ್ರೀ ಅಶೋಕ್ ಕುಮಾರ್ ಅವರ ನೇತೃತ್ವದ ಸಮಿತಿಯಲ್ಲಿ ವೀಕ್ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಸಚ್ಚಿದಾನಂದಮೂರ್ತಿ, ಹವ್ಯಾಸಿ ಪತ್ರಕರ್ತರಾದ ಶ್ರೀ ಶೇಖರ್ ಐಯ್ಯರ್, ನ್ಯೂಸ್ 18ನ ಶ್ರೀ ಅಮಿತಾಬ್ ಸಿನ್ಹಾ, ಬ್ಯುಸೆನೆಸ್ ಲೈನ್ ನ ಶ್ರೀ ಶಿಶಿರ್ ಕುಮಾರ್ ಸಿನ್ಹಾ, ಝೀ ನ್ಯೂಸ್ ವಿಶೇಷ ಬಾತ್ಮೀದಾರರಾದ ಶ್ರೀ ರವೀಂದ್ರ ಕುಮಾರ್, ಪಾಂಚಜನ್ಯ ಸಂಪಾದಕ ಶ್ರೀ ಹಿತೇಶ್ ಶಂಕರ್, ಹಿಂದೂಸ್ತಾನ್ ಟೈಮ್ಸ್ ನ ಶ್ರೀಮತಿ ಸ್ಮೃತಿ ಕಾಕ್ ರಾಮಚಂದ್ರನ್,  ಟೈಮ್ಸ್ ನೌ ನ ಶ್ರೀ ಅಮಿತ್ ಕುಮಾರ್, ಎಕನಾಮಿಕ್ ಟೈಮ್ಸ್ ನ ಶ್ರೀಮತಿ ವಸುಧಾ ವೇಣುಗೋಪಾಲ್ ಮತ್ತು ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕಿ ಶ್ರೀಮತಿ ಕಂಚನ್ ಪ್ರಸಾದ್ ಅವರಿದ್ದಾರೆ.

***


(Release ID: 1751449) Visitor Counter : 316