ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

2030ರ ವೇಳೆಗೆ 35% ಇಂಗಾಲ ಹೊರಸೂಸುವಿಕೆ ಕಡಿತದ ಗುರಿಯ ವಿಚಾರದಲ್ಲಿ ಅವಧಿಗೆ ಮುನ್ನ ಸಾಧನೆ ಮಾಡಿರುವ ಭಾರತ, ಈಗಾಗಲೇ 2005ರ ಮಟ್ಟಕ್ಕಿಂತ 28% ನಷ್ಟು ಹೊರಸೂಸುವಿಕೆ ಕಡಿತಗೊಳಿಸಿದೆ


ಭಾರತ 100 ಗಿ.ವ್ಯಾ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಮೈಲಿಗಲ್ಲನ್ನು ಸಾಧಿಸಿದ್ದು, ಇದು ಭಾರತೀಯ ವಿದ್ಯುತ್ ವಲಯದ ಪಾಲಿಗೆ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ

ಹೆಚ್ಚುತ್ತಿರುವ ಬೇಡಿಕೆಯು ವಿದ್ಯುತ್ ವ್ಯವಸ್ಥೆಯಲ್ಲಿ ನಮ್ಯತೆ ಹಾಗೂ ವಿವಿಧ ಶೇಖರಣಾ ತಂತ್ರಜ್ಞಾನಗಳ ಅಭಿವೃದ್ಧಿಯ ಅಗತ್ಯವನ್ನೂ ಹೆಚ್ಚಿಸಿದೆ

ಭಾರತವು ಜಾಗತಿಕವಾಗಿ ನ್ಯಾಯಸಮ್ಮತ, ಸಮಗ್ರ ಮತ್ತು ನಿಷ್ಪಕ್ಷಪಾತ ಇಂಧನ ಪರಿವರ್ತನೆಯನ್ನು ಬೆಂಬಲಿಸಲು ಮುಂದಾಳತ್ವ ವಹಿಸಿದೆ

Posted On: 25 AUG 2021 1:00PM by PIB Bengaluru

ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು 'ಭಾರತ-ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟʼ (ಐಎಸ್ಎ) ಇಂಧನ ಪರಿವರ್ತನೆ ಸಂವಾದ 2021' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದರು.

2030 ವೇಳೆಗೆ 35% ಇಂಗಾಲ ಹೊರಸೂಸುವಿಕೆ ತಗ್ಗಿಸುವ ಗುರಿಯ ವಿಚಾರದಲ್ಲಿ ಅವಧಿಗೆ ಮುನ್ನ ಸಾಧನೆ ಮಾಡಿರುವ ಭಾರತ, ಈಗಾಗಲೇ 2005 ಮಟ್ಟಕ್ಕಿಂತ 28% ನಷ್ಟು ಹೊರಸೂಸುವಿಕೆ ತಗ್ಗಿಸಿದೆ. ಭಾರತವು ತನ್ನ ʻಎನ್‌ಡಿಸಿʼಗಳಿಗೆ (ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳುʼ) ಬದ್ಧವಾಗಿದೆ. ಇದರೊಂದಿಗೆ ಭಾರತವು ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಅಗಾಧ ಹೆಚ್ಚಳದ ಜೊತೆಗೆ ಜಾಗತಿಕವಾಗಿ ಪ್ಯಾರಿಸ್ ಹವಾಮಾನ ಬದಲಾವಣೆ (ಸಿಒಪಿ21) ಬದ್ಧತೆಗಳನ್ನು ಉಳಿಸಿಕೊಂಡಿರುವ ಕೆಲವೇ ದೇಶಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ದೇಶದಲ್ಲಿ ಇಂಧನ ವಲಯದ ಅಭಿವೃದ್ಧಿಯ ವೇಗವನ್ನು ಪರಿಗಣಿಸಿದರೆ, ಭಾರತ  ತನ್ನ ʻಎನ್‌ಡಿಸಿʼ ಬದ್ಧತೆಗಳನ್ನು ಸಾಧಿಸುವುದಷ್ಟೇ ಅಲ್ಲನಿಗದಿತ ಕಾಲಮಿತಿಗೂ ಮುನ್ನವೇ  ಸಾಧನೆ ಮಾಡುವುದು ನಿಶ್ಚಿತವಾಗಿದೆ ಎಂದು  ಕೇಂದ್ರ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ.ಸಿಂಗ್ ಅವರು ವಿಷಯ ತಿಳಿಸಿದರು. ʻಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟʼ (ಐಎಸ್ಎ) ಮತ್ತು ಕೇಂದ್ರ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್ಆರ್‌ಇ) ಇಲ್ಲಿ ಆಯೋಜಿಸಿದ್ದ 'ಭಾರತ-ಐಎಸ್ಎ ಇಂಧನ ಪರಿವರ್ತನೆ ಸಂವಾದ 2021' ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಅಧ್ಯಕ್ಷರೂ ಆಗಿರುವ ಸಿಂಗ್‌ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು. ಉದ್ಘಾಟನಾ ಸಮಾರಂಭದಲ್ಲಿ ʻಎಂಎನ್ಆರ್‌ಇʼ ಕಾರ್ಯದರ್ಶಿ ಶ್ರೀ ಇಂದು ಶೇಖರ ಚತುರ್ವೇದಿ ಅವರು ಆರಂಭಿಕ ಭಾಷಣ ಮಾಡಿದರು. ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ  ಮಹಾ ನಿರ್ದೇಶಕ ಡಾ. ಅಜಯ್ ಮಾಥುರ್ ಅವರು ಸಾಂದರ್ಭಿಕ ನುಡಿಗಳನ್ನಾಡಿದರು.

ಶುದ್ಧ ಇಂಧನ ವಲಯವನ್ನು ಉತ್ತೇಜಿಸಲು ಭಾರತ ಸರಕಾರವು ಕಾಲಕಾಲಕ್ಕೆ ಅನುಕೂಲಕರ ನಿಯಂತ್ರಣ ಮತ್ತು ನಿಬಂಧನೆಗಳನ್ನು ಜಾರಿಗೆ ತಂದಿದೆ ಎಂದು ಶ್ರೀ ಆರ್.ಕೆ. ಸಿಂಗ್ ಒತ್ತಿ ಹೇಳಿದರು. ವಿನೂತನ ಮಾರುಕಟ್ಟೆ ಕಾರ್ಯವಿಧಾನಗಳು ಮತ್ತು ವ್ಯಾಪಾರ ಮಾದರಿಗಳು, ಸಾಂಸ್ಥಿಕ ಬಲವರ್ಧನೆ ಮತ್ತು ಸಾಮರ್ಥ್ಯ ವರ್ಧನೆ ಹಾಗೂ ಬೇಡಿಕೆ ಸೃಷ್ಟಿ ಕ್ರಮಗಳ ಸಂಯೋಜನೆಯ ಮೂಲಕ ಭಾರತವು ಕಳೆದ ಎರಡು ದಶಕಗಳಿಂದ ಇಂಧನ ದಕ್ಷತೆ ಸುಧಾರಣೆಗಳಿಗೆ ಬಿರುಸಿನ ಉತ್ತೇಜನ ನೀಡುತ್ತಿದೆ ಎಂದರು.

ಪೂರೈಕೆಯು ಬಲಗೊಳ್ಳುವವರೆಗೆ, ತಂತ್ರಜ್ಞಾನ ಅಭಿವೃದ್ಧಿ ಹೊಂದುವವರೆಗೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯು ತಳವೂರಿ ಮೂಲಕ ಉದ್ಯಮವು ಸ್ವಾವಲಂಬಿಯಾಗುವವರೆಗೂ ವಲಯವನ್ನು ರಕ್ಷಿಸಲು ನಿಯಂತ್ರಣ ಮತ್ತು ನೀತಿ ಬೆಂಬಲ ನೀಡುವುದು ಮುಖ್ಯವಾಗಿದೆ ಎಂದು ಶ್ರೀ ಸಿಂಗ್ ಹೇಳಿದರು. 2050 ವೇಳೆಗೆ ಭಾರತದ ಒಟ್ಟಾರೆ ವಿದ್ಯುತ್ ಸಾಮರ್ಥ್ಯದಲ್ಲಿ ಶೇ.80-85ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಬರುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಭಾರತವು ಈಗಾಗಲೇ 200 ಗಿ.ವ್ಯಾ. ಗರಿಷ್ಠ ಬೇಡಿಕೆಯನ್ನು ಮುಟ್ಟಿದೆ. ಹಾಲಿ ಬೇಡಿಕೆಯು ಕೋವಿಡ್ ಪೂರ್ವ ಸಮಯದಲ್ಲಿ ಇದ್ದ ಬೇಡಿಕೆಯನ್ನು  ಮೀರಿದೆ ಮತ್ತು ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇರುವುದೆಂದು ನಿರೀಕ್ಷಿಸಲಾಗಿದೆ. ಇದು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ನಮಗೆ ಅವಕಾಶ ಒದಗಿಸುತ್ತದೆ. ಇದೇ ವೇಳೆ, ವಿದ್ಯುತ್ ವ್ಯವಸ್ಥೆಯ ನಮ್ಯತೆ ಮತ್ತು ವಿವಿಧ ಶೇಖರಣಾ ತಂತ್ರಜ್ಞಾನಗಳ ಅಭಿವೃದ್ಧಿ ಅಗತ್ಯವನ್ನೂ ಇದು ಒತ್ತಿ ಹೇಳುತ್ತದೆ ಎಂದರು.

100 ಗಿ.ವ್ಯಾ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಮೈಲಿಗಲ್ಲನ್ನು ಸಾಧಿಸಿರುವುದು ಭಾರತೀಯ ವಿದ್ಯುತ್ ವಲಯದ ಪಾಲಿಗೆ ಅಪಾರ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ವಿವರಿಸಿದರು. 100 ಗಿ.ವ್ಯಾ ಸಾಮರ್ಥ್ಯದ ಸ್ಥಾವರಗಳನ್ನು ಈಗಾಗಲೇ ಸ್ಥಾಪಿಸಿ ಕಾರ್ಯಾಚರಣೆಗೆ ಇಳಿಸಲಾಗಿದೆ. 50 ಗಿ.ವ್ಯಾ ಹೆಚ್ಚುವರಿ ಸಾಮರ್ಥ್ಯವು ಸ್ಥಾಪನೆಯ ಹಂತದಲ್ಲಿದೆ. ಜೊತೆಗೆ ಇನ್ನೂ 27 ಗಿ.ವ್ಯಾ ಸಾಮರ್ಥ್ಯದ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. 2021 ಜುಲೈ  31 ಪ್ರಕಾರ, ಭಾರತದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಶೇ. 38.5%ರಷ್ಟು  ಶುದ್ಧ ನವೀಕರಿಸಬಹುದಾದ ಇಂಧನ ಮೂಲಗಳನ್ನು ಆಧರಿಸಿದೆ ವೇಗದೊಂದಿಗೆ ನಾವು 2023 ವೇಳೆಗೆ 40% ಗುರಿಯನ್ನು ತಲುಪುತ್ತೇವೆಪ್ರಸ್ತುತ ಭಾರತವು ಸೌರಶಕ್ತಿಯಲ್ಲಿ 5ನೇ ಸ್ಥಾನ ಮತ್ತು ಪವನಶಕ್ತಿ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಶುದ್ಧ ಇಂಧನ ವಲಯದಲ್ಲಿ ವೇಗವನ್ನು ಮುಂದುವರಿಸಲು ಭಾರತ ಯೋಜಿಸಿದೆ. ಇದಕ್ಕಾಗಿ, ಪ್ರಸ್ತುತ ಹೊಂದಲಾಗಿರುವ 2022 ವೇಳೆಗೆ 175 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧನೆಯ  ಗುರಿಯನ್ನು 2030 ವೇಳೆಗೆ 450 ಗಿ.ವ್ಯಾ.ಗೆ ವ್ಯವಸ್ಥಿತವಾಗಿ ಹೆಚ್ಚಿಸಲು ಉದ್ದೇಶಿಸಲಾಗಿದೆ  ಎಂದು ಅವರು ಹೇಳಿದರು. 100 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧನೆಯು 2030 ವೇಳೆಗೆ 450 ಗಿ.ವ್ಯಾ. ಸಾಧನೆಯ ಗುರಿಯತ್ತ ಭಾರತದ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆಅಷ್ಟೇ ಅಲ್ಲದೆ, ಮತ್ತಷ್ಟು ಹೆಚ್ಚಿನ ಸಾಧನೆ ಮಾಡುವ ಭಾರತದ ವಿಶ್ವಾಸವನ್ನು ಇದು ಹೆಚ್ಚಿಸುತ್ತದೆ ಹಾಗೂ ಜಾಗತಿಕವಾಗಿ ಇಂಧನ ಪರಿವರ್ತನೆಯ ಹಾದಿಯನ್ನು ತುಳಿಯುವ ಪ್ರಮುಖ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲು ನೆರವಾಗುತ್ತದೆ ಎಂದು ಸಚಿವರು ಹೇಳಿದರು.

ಸಕ್ರಿಯ ಖಾಸಗಿ ವಲಯವು ಸಾಮರ್ಥ್ಯ ವರ್ಧನೆ ಅಭ್ಯಾಸಗಳ ಮೂಲಕ ಪೂರೈಕೆ ಹೆಚ್ಚಳವನ್ನು ಮುಂದುವರಿಸಿದೆ ಎಂದು ಸಚಿವರು ಹೇಳಿದರು. ಇಂಧನ ಸಂಗ್ರಹಣೆ ಮತ್ತು ಹಸಿರು ಜಲಜನಕದಂತಹ ಸುಧಾರಿತ ತಂತ್ರಜ್ಞಾನಗಳೊಂದಿಗೆ ಮುಂದಿನ ವರ್ಷಗಳಲ್ಲಿ ಯಶೋಗಾಥೆ  ಪುನರಾವರ್ತನೆಯಾಗುವ ನಿರೀಕ್ಷೆಯಿದೆ. ʻಎಂಎನ್‌ಆರ್‌ಇʼ ಪ್ರಾರಂಭಿಸಿದ ವಿಶೇಷ ಹಸಿರು ಇಂಧನ ಕಾರಿಡಾರ್‌ಗಳು ನವೀಕರಿಸಬಹುದಾದ ಇಂಧನ ಉತ್ಪಾದಕರಿಗೆ ಗ್ರಿಡ್ ಸಂಪರ್ಕವನ್ನು ಪಡೆಯಲು ಮತ್ತು ದೇಶದಲ್ಲಿ ನವೀಕರಿಸಬಹುದಾದ ಇಂಧನ ಸಮೃದ್ಧವಾಗಿರುವ ಪ್ರದೇಶಗಳಿಂದ 40,000 ಮೆ.ವ್ಯಾನಷ್ಟು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನು ಸ್ಥಳಾಂತರಿಸಲು ಹಾದಿ ಸುಲಭಗೊಳಿಸಿವೆ. ಇದೇ ಹಾದಿಯಲ್ಲಿ ಮುಂದುವರಿದು, ದೇಶಾದ್ಯಂತ ಜಲಮೂಲಗಳು ಮತ್ತು ಜಲಾಶಯಗಳಲ್ಲಿ ತೇಲುವ ಸೌರ ವಿದ್ಯುತ್ ಸ್ಥಾವರಗಳ ಅಳವಡಿಕೆ ಮತ್ತು ದತ್ತು ಪ್ರಕ್ರಿಯೆಗೆ ಇದೇ ರೀತಿಯ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಭಾರತವು ಇಂಧನ ಪರಿವರ್ತನೆಯಲ್ಲಿ ತನ್ನನ್ನು ಮುಂದಾಳಾಗಿ ಜಾಗತಿಕ ಮಟ್ಟದಲ್ಲಿ ನ್ಯಾಯೋಚಿತಸಮಗ್ರ ಮತ್ತು ನಿಷ್ಪಕ್ಷಪಾತ ಇಂಧನ ಪರಿವರ್ತನೆಗೆ ಬೆಂಬಲ ನೀಡುತ್ತಿದೆ. ಕಾರ್ಬನ್‌ ಹೊರಸೂಸುವಿಕೆ ತಗ್ಗಿಸಲು ಇತರ ದೇಶಗಳು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸುತ್ತಿವೆ ಎಂಬುದರ ಬಗ್ಗೆ ಇತರ ರಾಷ್ಟ್ರಗಳೊಂದಿಗೆ ಚರ್ಚಿಸುವುದು ಸಂತೋಷದ ವಿಷಯ ಎಂದು ಶ್ರೀ ಸಿಂಗ್ ಹೇಳಿದರು. ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದೃಢವಾದ ಯೋಜನೆಗಳನ್ನು ರೂಪಿಸುವಂತೆ ಅವರು ಇತರ ದೇಶಗಳನ್ನು ಒತ್ತಾಯಿಸಿದರು.

ವಿಶ್ವದಾದ್ಯಂತದ ಎಲ್ಲಾ ದೇಶಗಳು ಮೂಲ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಮತ್ತು ವಾಸ್ತವಿಕ ಇಂಧನ ಪರಿವರ್ತನೆ ಹಾಗೂ ಹೆಚ್ಚು-ಹೆಚ್ಚು ನವೀಕರಿಸಬಹುದಾದ ಇಂಧನ ಬಳಕೆಗೆ ಅನುಕೂಲ ಮಾಡಿಕೊಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು. " ಸಂವಾದವು ಭಾರತ ಮತ್ತು ಐಎಸ್ಎ ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ದಾರಿ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, ಜೊತೆಗೆ ಹವಾಮಾನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಾಮೂಹಿಕ ಹೆಜ್ಜೆಯಾಗಿ ಭವಿಷ್ಯದ ಮಾರ್ಗಸೂಚಿಯನ್ನು ಇದು ವಿವರಿಸುತ್ತದೆ. ಅನೇಕ ಸಮುದಾಯಗಳು ಇನ್ನೂ ಪಳೆಯುಳಿಕೆ ಇಂಧನಗಳನ್ನು ಅವಲಂಬಿಸಿರುವ ದೇಶಗಳಲ್ಲಿ ಹಾಗೂ ಇಂಗಾಲ ಹೊರಸೂಸುವಿಕೆ ಇಳಿಕೆಗೆ ರಾಷ್ಟ್ರೀಯ ಕಾರ್ಯತಂತ್ರಗಳ ಅಗತ್ಯವಿರುವ ಅನೇಕ ದೇಶಗಳಿಗೆ ಪರಿವರ್ತನೆಯ ಹಾದಿಯನ್ನು ಸುಗಮಗೊಳಿಸಲು ಇದು ನೆರವಾಗಲಿದೆ ಎಂದು ನಾನು ಭಾವಿಸುತ್ತೇನೆ,"  ಎಂದರು.

ಸಂವಾದದಲ್ಲಿ ಎರಡು ಚರ್ಚೆಗಳು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್‌ಆರ್‌ ) ʻನಾಗರಿಕ ಕೇಂದ್ರಿತ ಇಂಧನ ಸ್ಥಿತ್ಯಂತರ- ಭಾರತ ಕಥೆʼ ಎಂಬ ಪ್ರಸ್ತುತಿಯನ್ನು ಒಳಗೊಂಡಿತ್ತುಪ್ರಸ್ತುತಿಯಲ್ಲಿ ಭಾರತದ ಇಂಧನ ಪರಿವರ್ತನೆಯ ಪ್ರಯಾಣವನ್ನು ಎತ್ತಿ ತೋರಿಸಲಾಯಿತು.

"ಹೆಚ್ಚಿನ ನವೀಕರಿಸಬಹುದಾದ ಇಂಧನ ಪರಿವರ್ತನೆಗೆ ಅನುಕೂಲವಾಗುವಂತೆ ಗ್ರಿಡ್ ಏಕೀಕರಣ ಸಮಸ್ಯೆಗಳನ್ನು ಪರಿಹರಿಸುವುದು" ಎಂಬುದು ಮೊದಲ ಚರ್ಚೆಯ ವಿಷಯವಾಗಿತ್ತು. ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಏಜೆನ್ಸಿಯ (ಐಆರ್‌ಇಎನ್ಎ) ಉಪ ಮಹಾನಿರ್ದೇಶಕಿ ಶ್ರೀಮತಿ ಗೌರಿ ಸಿಂಗ್ ಅವರು ಇದರ ಅಧ್ಯಕ್ಷತೆ ವಹಿಸಿದರು. "ನವೀಕರಿಸಬಹುದಾದ ಇಂಧನವನ್ನು ವೇಗಗೊಳಿಸುವ ಚೌಕಟ್ಟುಗಳು" ಎಂಬುದು ಎರಡನೇ ಚರ್ಚೆಯ ವಿಷಯವಾಗಿತ್ತು. ವಿಶ್ವ ಬ್ಯಾಂಕ್ ಸಮೂಹದ ಹಿರಿಯ ಇಂಧನ ತಜ್ಞ ಡಾ. ಅಮಿತ್ ಜೈನ್ ಅವರು ಇದರ ಅಧ್ಯಕ್ಷತೆ ವಹಿಸಿದ್ದರು.

ಸಂವಾದದಲ್ಲಿ ʻಐಎಸ್ಎʼ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಹಿರಿಯ ಸರಕಾರಿ ಅಧಿಕಾರಿಗಳು, ಉದ್ಯಮ ಪಾಲುದಾರರು, ಶಿಕ್ಷಣ ತಜ್ಞರು, ನವೋದ್ಯಮಿಗಳು, ಸಂಶೋಧಕರು ಮತ್ತು ವಿಶ್ವದಾದ್ಯಂತದ ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ʻಐಎಸ್ಎʼ ಸದಸ್ಯ ರಾಷ್ಟ್ರಗಳಲ್ಲಿ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ಸದಸ್ಯ ರಾಷ್ಟ್ರಗಳು ಇಂಧನ ಪರಿವರ್ತನೆಗಾಗಿ ತಮ್ಮ ರಾಷ್ಟ್ರೀಯ ಕಾರ್ಯತಂತ್ರಗಳನ್ನು ಮರು ಪರಿಶೀಲಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ  ಜಾಗತಿಕ ನವೀಕರಿಸಬಹುದಾದ ಇಂಧನ ಮಧ್ಯಸ್ಥಗಾರರ ನಡುವೆ ವಿಚಾರ ವಿನಿಮಯಕ್ಕೆ ಮಾತುಕತೆ ಅನುಕೂಲ ಮಾಡಿಕೊಟ್ಟಿತು. ಇಂಧನ ಸ್ಥಿತ್ಯಂತರ ಮತ್ತು ʻಸಿಒಪಿ26ʼ ಕುರಿತ `ಯುಎನ್‌ ಎಚ್‌ಎಲ್‌ಡಿಇʼ ಯಂತಹ ಉನ್ನತ ಮಟ್ಟದ ಸಂವಾದಗಳನ್ನು ನಡೆಸಲು ಪ್ರಯತ್ನಗಳನ್ನು ಬಲಪಡಿಸಲು ಸಹ ಸಂವಾದ ನೆರವಾಗಿದೆ.

***



(Release ID: 1749156) Visitor Counter : 424