ಪ್ರಧಾನ ಮಂತ್ರಿಯವರ ಕಛೇರಿ

ಹೊರರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರು, ವ್ಯಾಪಾರ ಮತ್ತು ವಾಣಿಜ್ಯ ವಲಯದ ಪಾಲುದಾರರ ಜತೆಗಿನ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 06 AUG 2021 10:30PM by PIB Bengaluru

ನಮಸ್ಕಾರ,

ಕೇಂದ್ರ ಸಂಪುಟದ ನನ್ನೆಲ್ಲಾ ಸಹೋದ್ಯೋಗಿಗಳೇ, ರಾಯಭಾರಿಗಳು ಮತ್ತು ಹೈ ಕಮೀಷನರ್ ಗಳೇ, ವಿಶ್ವದೆಲ್ಲೆಡೆ ಸೇವೆ ಸಲ್ಲಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೇ, ವಿವಿಧ ರಫ್ತು ಮಂಡಳಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟಗಳ ನಾಯಕರೇ ಹಾಗೂ ಇಲ್ಲಿ ನೆರೆದಿರುವ ಎಲ್ಲಾ ಮಾನ್ಯರೇ ಮತ್ತು ಮಹಿಳೆಯರೇ.... ದೇಶಕ್ಕೆ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬಿದ ಅಮೃತ ಮಹೋತ್ಸವ ಆಚರಣೆಗೆ ಈಗ ಕಾಲ ಕೂಡಿಬಂದಿದೆ. ಇದು ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುವ ಸಮಯ ಮಾತ್ರವಲ್ಲ; ಭವಿಷ್ಯದ ಭಾರತಕ್ಕಾಗಿ ಸ್ಪಷ್ಟವಾದ ದೃಷ್ಟಿಕೋನ ಮತ್ತು ಮಾರ್ಗಸೂಚಿಯನ್ನು ನಿರ್ಮಿಸಲು ಬಂದೊದಗಿರುವ ಒಂದು ಉತ್ತಮ ಅವಕಾಶವಾಗಿದೆ. ನಮ್ಮ ರಫ್ತು ಮಹತ್ವಾಕಾಂಕ್ಷೆಗಳಿಗೆ ನಿಮ್ಮ ಪಾತ್ರ, ತೊಡಗಿಸಿಕೊಳ್ಳುವಿಕೆ ಮತ್ತು ಉಪಕ್ರಮಗಳು ಬಹಳ ದೊಡ್ಡದಾಗಿದೆ. ಜಾಗತಿಕ ಮಟ್ಟದಲ್ಲಿ ಇಂದು ಏನಾಗುತ್ತಿದೆ ಎಂಬ ಬಗ್ಗೆ ನಿಮಗೆಲ್ಲರಿಗೂ ಅರಿವಿದೆ ಎಂದು ನಾನು ಭಾವಿಸುತ್ತೇನೆ. ಭೌತಿಕ, ತಾಂತ್ರಿಕ ಮತ್ತು ಆರ್ಥಿಕ ಸಂಪರ್ಕದಿಂದಾಗಿ ಇಂದು ಪ್ರಪಂಚವು ಪ್ರತಿದಿನ ಚಿಕ್ಕದಾಗುತ್ತಾ ಬರುತ್ತಿದೆ. ಸದ್ಯದ ಪರಿಸ್ಥಿಯಲ್ಲಿ, ನಮ್ಮ ರಫ್ತು ವಹಿವಾಟು ವಿಸ್ತರಣೆಗೆ ವಿಶ್ವದೆಲ್ಲೆಡೆ ಹೊಸ ಅವಕಾಶಗಳು ಮತ್ತು ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ವಿಷಯದ ಬಗ್ಗೆ ನನಗಿಂತ ನಿಮಗೇ ಹೆಚ್ಚಿನ ಅನುಭವವಿದೆ, ನೀವೇ ಉತ್ತಮ ತೀರ್ಪುಗಾರರಾಗಿದ್ದೀರಿ. ಇವತ್ತಿನ ಉಪಕ್ರಮ ಆಯೋಜಿಸಿರುವ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಮ್ಮ ನಿಮ್ಮೆಲ್ಲಾ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲು ಸಿಕ್ಕ ಉತ್ತಮ ಅವಕಾಶ ಇದಾಗಿದೆ. ರಫ್ತು ವಹಿವಾಟಿನ ಮಹತ್ವಕಾಂಕ್ಷಿ ಗುರಿಗಳನ್ನು ಸಾಧಿಸಲು ನೀವೆಲ್ಲಾ ತೋರಿರುವ ಅತ್ಯುತ್ಸಾಹ, ಆಶಾವಾದ ಮತ್ತು ಬದ್ಧತೆಗಳನ್ನು ಪ್ರಶಂಸಿಸುತ್ತಾ, ನಾನಿಲ್ಲಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಭಾರತದ ಉತ್ಕೃಷ್ಟ ವ್ಯಾಪಾರ ಮತ್ತು ರಫ್ತು ವಹಿವಾಟಿನ ಪರಿಣಾಮವಾಗಿ, ಜಾಗತಿಕ ಆರ್ಥಿಕತೆಯಲ್ಲಿ ನಾವು ಅತ್ಯಧಿಕ ಪಾಲು ಹೊಂದಲು ಸಾಧ್ಯವಾಗಿತ್ತು. ಜಗತ್ತಿನ ಎಲ್ಲ ಭಾಗಗಳಲ್ಲೂ ನಾವು ವ್ಯಾಪಾರ ಮಾರ್ಗ ಮತ್ತು ಸಂಪರ್ಕಗಳನ್ನು ಕಂಡುಕೊಂಡಿದ್ದೇವೆ. ಇಂದು, ಜಾಗತಿಕ ಆರ್ಥಿಕತೆಯಲ್ಲಿ ಹಳೆಯ ಪಾಲನ್ನು ಮರಳಿ ಪಡೆಯಲು ನಾವು ಪ್ರಯತ್ನಿಸಬೇಕಾದರೆ, ನಮ್ಮ ರಫ್ತು ವಹಿವಾಟಿನ  ಪಾತ್ರ ಬಹಳ ಮುಖ್ಯವಾಗಿರುತ್ತದೆ. ಕೋವಿಡ್-19 ಸೋಂಕು ಕಾಣಿಸಿಕೊಂಡ ನಂತರ ಜಗತ್ತಿನಲ್ಲಿ, ಜಾಗತಿಕ  ಪೂರೈಕೆ ಸರಪಳಿಯ ಬಗ್ಗೆ ವಿಸ್ತೃತ ಚರ್ಚೆಗಳೇ ನಡೆಯುತ್ತಿವೆ. ನಿಟ್ಟಿನಲ್ಲಿ ಸೃಷ್ಟಿಯಾಗಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು, ರಫ್ತು ವಹಿವಾಟನ್ನು ಗರಿಷ್ಠಗೊಳಿಸಲು ನಾವು ಗರಿಷ್ಠ ಪ್ರಯತ್ನಗಳನ್ನು ಹಾಕಬೇಕಿದೆ. ನಮ್ಮ ರಫ್ತು ವಹಿವಾಟು ಜಿಡಿಪಿ ಬೆಳವಣಿಗೆಗೆ ಶೇ.20 ಕೊಡುಗೆ ನೀಡುತ್ತಾ ಬಂದಿದೆ. ನಮ್ಮ ಅರ್ಥ ವ್ಯವಸ್ಥೆಯ ಗಾತ್ರ ಮತ್ತು ದೇಶದ ಸಾಮರ್ಥ್ಯವನ್ನು ಪರಿಗಣಿಸಿದರೆ, ತಯಾರಿಕೆ ಮತ್ತು ಸೇವಾ ವಲಯವನ್ನು ಆಧಾರವಾಗಿ ಇಟ್ಟುಕೊಂಡರೆ, ದೇಶದ ರಫ್ತು ವಹಿವಾಟು ಹೆಚ್ಚಿಸಲು ಅಪಾರ ಅವಕಾಶ ಮತ್ತು ಸಾಮರ್ಥ್ಯಗಳಿವೆ. ಆತ್ಮನಿರ್ಭರ್ ಭಾರತ ಕಟ್ಟುವ ಕಾಲಘಟ್ಟದಲ್ಲಿ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಪಾಲನ್ನು ಹೆಚ್ಚಿಸುವ ಗುರಿಯೂ ಒಂದಾಗಿದೆ. ಅಂತಾರಾಷ್ಟ್ರೀಯ ಬೇಡಿಕೆಗೆ ಅನುಗುಣವಾಗಿ ನಾವು ಉತ್ಪನ್ನಗಳನ್ನು ಪೂರೈಸುವುದನ್ನು  ಖಾತ್ರಿಪಡಿಸಬೇಕಿದೆ. ಹೀಗೆ ಮಾಡಿದರೆ ನಮ್ಮ ಉದ್ಯಮ ವ್ಯವಹಾರಗಳು ಬೆಳವಣಿಗೆ ಕಾಣುವ ಜತೆಗೆ, ಅದರ ಪ್ರಮಾಣವೂ ಹೆಚ್ಚುತ್ತದೆ. ನಿಟ್ಟಿನಲ್ಲಿ ನಮ್ಮ ಉದ್ಯಮವು ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು, ಅನುಶೋಧನೆ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಬೇಕು. ರೀತಿ ಮಾಡುವುದರಿಂದ ರಫ್ತು ವಹಿವಾಟಿನ ಜಾಗತಿಕ ಪೂರೈಕೆ ಸರಪಳಿಯಲ್ಲಿ ನಮ್ಮ ಪಾಲನ್ನು ಹೆಚ್ಚಿಸಿಕೊಳ್ಳಬಹುದು. ಸ್ಪರ್ಧಾತ್ಮಕತೆ ಮತ್ತು ಶ್ರೇಷ್ಠತೆ ಕಾಯ್ದುಕೊಳ್ಳುವ ಮೂಲಕ ನಾವು ಪ್ರತಿ ವಲಯದಲ್ಲಿ ಜಾಗತಿಕ ಸರದಾರರಾಗಲು ಸಿದ್ಧರಾಗಬೇಕು.

ಸ್ನೇಹಿತರೆ,

ರಫ್ತು ವಹಿವಾಟು ಹೆಚ್ಚಿಸಲು ಪ್ರಮುಖ ನಾಲ್ಕು ಅಂಶಗಳು ನಿರ್ಣಾಯಕವಾಗಿವೆ. ಮೊದಲನೆಯದಾಗಿ, ದೇಶದಲ್ಲಿ ಉತ್ಪಾದನೆ ಹಲವು ಪಟ್ಟು ಹೆಚ್ಚಾಗಬೇಕು. ಇದು ಗುಣಮಟ್ಟದಲ್ಲಿ ಸ್ಪರ್ಧಾತ್ಮಕವಾಗಬೇಕು. ನಮ್ಮ ಸ್ನೇಹಿತರು ಹೇಳಿದಂತೆ, ಜಾಗತಿಕ ಮಾರುಕಟ್ಟೆಯಲ್ಲಿ ಈಗ ಬೆಲೆಗಿಂತ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ, ನಾವು ವಿಷಯಕ್ಕೆ ಒತ್ತು ನೀಡಬೇಕಿದೆ. ಎರಡನೆಯದಾಗಿ, ಸಾರಿಗೆ ಮತ್ತು ಸಾಗಣೆ ಸಮಸ್ಯೆಗಳಿಗೆ ಅಂತ್ಯ ಹಾಡಬೇಕು. ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಪಾಲುದಾರರು ಸಮಸ್ಯೆ ನಿವಾರಿಸಲು ಪ್ರಮುಖ ಪಾತ್ರ ವಹಿಸಬೇಕು. ಮೂರನೆಯದಾಗಿ, ರಫ್ತುದಾರರಿಗೆ ಸರ್ಕಾರ ಪ್ರತಿ ಹಂತದಲ್ಲೂ ಹೆಗಲು ಕೊಡಬೇಕುರಾಜ್ಯ ಸರ್ಕಾರಗಳು ಭಾಗಿಯಾಗದಿದ್ದರೆ ನಾವು ಇಚ್ಛಿತ ಫಲಿತಾಂಶ ಪಡೆಯಲು ಸಾಧ್ಯವೇ ಇಲ್ಲ. ರಾಜ್ಯಗಳಲ್ಲಿರುವ ರಫ್ತು ಮಂಡಳಿಗಳು ಸಂಪೂರ್ಣ ಭಾಗಿಯಾಗದಿದ್ದರೆ, ಉದ್ಯಮಿಗಳು ಪ್ರತ್ಯೇಕ ಜಗತ್ತಿನಲ್ಲಿ ರಫ್ತು ವಹಿವಾಟು ನಡೆಸಿದರೆ, ರಫ್ತು ವಹಿವಾಟು ಹೆಚ್ಚಿಸಲು ಸಾಧ್ಯವೇ ಇಲ್ಲ. ಹಾಗಾಗಿ, ಸಹಭಾಗಿತ್ವದ ಉದ್ಯಮ ವ್ಯವಹಾರ ಅತ್ಯಗತ್ಯ. ನಾಲ್ಕನೆಯದಾಗಿ, ಇವತ್ತಿನ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಅಂದರೆ ಭಾರತದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಲಭ್ಯತೆ ಕುರಿತದ್ದಾಗಿದೆ. ಈಮೇಲಿನ ನಾಲ್ಕು ಅಂಶಗಳು ಸಂಯೋಜನೆಗೊಂಡರೆ, ಭಾರತದ ಸ್ಥಳೀಯ ಉತ್ಪನ್ನ ಜಾಗತಿಕ ಉತ್ಪನ್ನವಾಗಿ ಪರಿವರ್ತನೆಯಾಗಲಿದೆ. ರೀತಿ ಮಾಡಿದಾಗ ಮಾತ್ರ ಇಡೀ ವಿಶ್ವಕ್ಕೆ ಉತ್ತಮ ರೀತಿಯಲ್ಲಿ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ಪೂರೈಸುವ ಗುರಿ ಸಾಧಿಸಲು ಸಾಧ್ಯ.

ಸ್ನೇಹಿತರೆ,

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯಮ ಜಗತ್ತಿನ ಇಂದಿನ ಅಗತ್ಯಗಳನ್ನು ಅರ್ಥ ಮಾಡಿಕೊಂಡು, ದೇಶದ ಉದ್ಯಮಗಳಿಗೆ ನೆರವಾಗುತ್ತಾ ಬಂದಿವೆ. ಉತ್ಪನ್ನಗಳ ಮಾರಾಟಕ್ಕೆ ಸಹಕರಿಸುತ್ತಿವೆ. ಆತ್ಮ ನಿರ್ಭರ್ ಭಾರತ ಆಂದೋಲನದ ಅಡಿ, ದೇಶದ ಆರ್ಥಿಕ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾಡಲು ಹಲವು ವಿನಾಯಿತಿಗಳನ್ನು ನೀಡಿವೆ, ಅನುಸರಣಾ ವಿಧಿವಿಧಾನಗಳನ್ನು ಸರಳೀಕರಿಸಿವೆ. ದೇಶದ ಎಂಎಸ್ಎಂಇ ಮತ್ತು ಇತರೆ ಅಸ್ವಸ್ಥ ಕೈಗಾರಿಕಾ ವಲಯಗಳಿಗೆ 3 ಲಕ್ಷ ಕೋಟಿ ರೂಪಾಯಿ ಮೊತ್ತದ ತುರ್ತು ಸಾಲ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಉದ್ಯಮಗಳ ಚೇತರಿಕೆ ಮತ್ತು ಬೆಳವಣಿಗೆ ಉತ್ತೇಜಿಸಲು ಇತ್ತೀಚೆಗೆ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ಸ್ನೇಹಿತರೆ,

ದೇಶೀಯ ಉತ್ಪಾದನೆಯನ್ನು ಜಾಗತಿಕ ಗುಣಮಟ್ಟಕ್ಕೆ ಹೆಚ್ಚಿಸಲು ಮತ್ತು ಉತ್ಪಾದನೆ ದಕ್ಷತೆ ವೃದ್ಧಿಸುವ ಸಲುವಾಗಿ ದೀರ್ಘ ಕಾಲೀನ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೇಡ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಇದು ಸಹಾಯಕವಾಗಿದೆ. ಭಾರತವು ಉತ್ಪಾದನೆ ಮತ್ತು ರಫ್ತು ವಹಿವಾಟಿನಲ್ಲಿ ಜಾಗತಿಕ ಸರದಾರನಾಗಿ ಹೊರಹೊಮ್ಮಲು ಯೋಜನೆಗಳು ನೆರವಾಗಲಿವೆ. ಮೊಬೈಲ್ ಫೋನ್ ಉತ್ಪಾದನೆ ರಂಗದಲ್ಲಿ ಇದರ ಪರಿಣಾಮ ನಮ್ಮ ಅನುಭವಕ್ಕೆ ಬಂದಿದೆ. 7 ವರ್ಷಗಳ ಹಿಂದೆ ನಾವು 8 ಶತಕೋಟಿ ಡಾಲರ್ ಮೊತ್ತದ ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಂಡಿದ್ದೆವು. ಅದೀಗ 2 ಶತಕೋಟಿ ಡಾಲರ್ ಗೆ ತಗ್ಗಿದೆ. ಏಳು ವರ್ಷಗಳ ಹಿಂದೆ ಭಾರತವು 0.3 ಶತಕೋಟಿ ಡಾಲರ್ ಮೊತ್ತದ ಮೊಬೈಲ್ ಫೋನ್|ಗಳನ್ನು ರಫ್ತು ಮಾಡಿತ್ತು. ಅದರ ಪ್ರಮಾಣ ಇದೀಗ 3 ಶತಕೋಟಿ ಡಾಲರ್ ದಾಟಿದೆ.

ಸ್ನೇಹಿತರೆ,

ದೇಶದ ಉತ್ಪಾದನೆ ಮತ್ತು ರಫ್ತು ವಹಿವಾಟಿಗೆ ಎದುರಾಗಿರುವ ಸಕಲ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಕೇಂದ್ರೀಕರಿಸಿವೆ. ಉತ್ಪಾದನೆ ಸಮಯ ಮತ್ತು ಸಾಗಣೆ ವೆಚ್ಚ ನಿಯಂತ್ರಿಸಲು ಆದ್ಯತೆಯ ಗಮನ ನೀಡಲಾಗಿದೆ. ಇದಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿ ಮತ್ತು ನೀತಿ ಮಾರ್ಪಾಟಿಗೆ ಮುಂದಡಿ ಇಡಲಾಗಿದೆ.

ಸ್ನೇಹಿತರೆ,

ರೈಲು ಮಾರ್ಗಗಳ ಮೂಲಕ ಸರಕುಗಳು ಸರಾಗವಾಗಿ ರವಾನೆಯಾಗುತ್ತಿದ್ದು, ಇದರಿಂದ ರಫ್ತು ಗಾತ್ರ ಹೆಚ್ಚಾಗಿದೆ ಎಂದು ಬಾಂಗ್ಲಾದೇಶ ಇತ್ತೀಚೆಗೆ ತನ್ನ ಅನುಭವವನ್ನು ಹಂಚಿಕೊಂಡಿದೆ. ಕೊರೊನಾ ಸಾಂಕ್ರಾಮಿಕ ಸೋಂಕಿನ ಪರಿಣಾಮಗಳನ್ನು ಕನಿಷ್ಠಗೊಳಿಸಲು ಸರ್ಕಾರ, ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ, ಸೋಂಕು ಹರಡುವುದನ್ನು ಆದಷ್ಟು ನಿಯಂತ್ರಣಕ್ಕೆ ತಂದಿದೆ. ಲಸಿಕಾ ಆಂದೋಲನ ದೇಶಾದ್ಯಂತ ಭರದಿಂದ ಸಾಗಿದೆ. ಸಾಂಕ್ರಾಮಿಕ ಸೋಂಕಿನ ಕಾಲಘಟದಲ್ಲಿ ನಮ್ಮ ಉದ್ಯಮಗಳು ಮತ್ತು ಕೈಗಾರಿಕೆಗಳು ಪ್ರತಿ ಸಮಸ್ಯೆಯನ್ನು ನಿವಾರಿಸಲು ಹೊಸತನವನ್ನು ಅಳವಡಿಸಿಕೊಂಡಿವೆ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಅವು ಸಮರ್ಥವಾಗಿ ನಿರ್ವಹಿಸಿವೆ. ಔಷಧ ವಲಯದಲ್ಲಿ ನಮ್ಮ ರಫ್ತು ಗಣನೀಯವಾಗಿ ಹೆಚ್ಚಿದೆ. ಕೃಷಿ ಉತ್ಪನ್ನಗಳ ರಫ್ತು ಹೊಸ ಎತ್ತರಕ್ಕೆ ಮುಟ್ಟಿದೆ. ಇವೆಲ್ಲದರ ಪರಿಣಾಮ, ದೇಶದ ಅರ್ಥ ವ್ಯವಸ್ಥೆ ತ್ವರಿತವಾಗಿ ಚೇತರಿಕೆ ಕಾಣುವ ಜತೆಗೆ, ಅತ್ಯಧಿಕ ಬೆಳವಣಿಗೆ ದಾಖಲಿಸಿ, ಸಕಾರಾತ್ಮಕ ಸೂಚನೆಗಳನ್ನು ನೀಡುತ್ತಿದೆ. ಆದ್ದರಿಂದ ದೇಶದ ರಫ್ತು ವಹಿವಾಟು ಹೆಚ್ಚಿಸಲು ಇದು ಸಕಾಲವಾಗಿದೆ. ರಫ್ತುದಾರರನ್ನು ಉತ್ತೇಜಿಸಲು ಕೇಂದ್ರ ಸರ್ಕಾರ, 88,000 ಕೋಟಿ ರೂಪಾಯಿ ಮೊತ್ತದ ವಿಮಾ ರಕ್ಷಣೆ ಒದಗಿಸಿದೆ. ಜತೆಗೆ, ರಫ್ತು ಪ್ರೋತ್ಸಾಹಕ ಧನವನ್ನು ತರ್ಕಬದ್ಧಗೊಳಿಸಿದೆ. ಮೂಲಕ, ವಿಶ್ವ ವ್ಯಾಪಾರ ಸಂಘಟನೆಯ ನೀತಿ ನಿಯಮಗಳ ಅನುಸರಣೆಗೆ ಪೂರಕವಾಗಿ ದೇಶೀಯ ಉದ್ಯಮಗಳನ್ನು ಅಣಿಗೊಳಿಸಲಾಗಿದೆ.

ಸ್ನೇಹಿತರೆ,

ಜಾಗತಿಕ ಹೂಡಿಕೆದಾರರಿಗೆ ಪೂರ್ವನ್ವಯವಾಗುವ ತೆರಿಗೆ ಪದ್ಧತಿಯನ್ನು ತೆಗೆದುಹಾಕಿ, ಸರಾಗವಾಗಿ ಉದ್ಯಮ ವ್ಯವಹಾರ ನಡೆಸಲು ಅನುವು ಮಾಡಿಕೊಡಲಾಗಿದೆ. ಇದು ನಮ್ಮ ಬದ್ಧತೆ ಮತ್ತು ಸ್ಥಿರ ನೀತಿಗಳಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದ ಜಾಗತಿಕ ಹೂಡಿಕೆದಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿಟ್ಟಂತಾಗಿದೆ. ನಮ್ಮ ರಫ್ತುದಾರರು ವಿಶ್ವದೆಲ್ಲೆಡೆ ವ್ಯವಹಾರ ನಡೆಸುತ್ತಿದ್ದಾರೆ. ಇದರಿಂದ ವ್ಯವಹಾರ ಸ್ಥಿರತೆ ಸಾಧ್ಯವಾಗಿದೆ.

ಸ್ನೇಹಿತರೆ,

ನಮ್ಮ ರಫ್ತು ಗುರಿಗಳನ್ನು ಸಾಧಿಸಲು ರಾಜ್ಯಗಳಿಗೆ ಬೃಹತ್ ಪಾಲು ನೀಡಲಾಗಿದೆ. ಹಾಗಾಗಿ, ರಾಜ್ಯಗಳ ಪಾತ್ರ ಅತಿಮುಖ್ಯವಾಗಿದೆ. ಹೂಡಿಕೆಯೇ ಆಗಿರಲಿ, ಉದ್ಯಮ ವ್ಯವಹಾರವೇ ಆಗಿರಲಿ, ಮೂಲಸೌಕರ್ಯವೇ ಆಗಿರಲಿ, ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಬೇಕಿದೆ. ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಜತೆ ನಿಕಟವಾಗಿ ಕೆಲಸ ಮಾಡುತ್ತಿದೆ. ನಿಯಂತ್ರಣ ಕಟ್ಟುಪಾಡುಗಳನ್ನು ಕನಿಷ್ಠಗೊಳಿಸಿ, ರಫ್ತು ಹೆಚ್ಚಿಸಲು ಕೆಲಸ ಮಾಡಲಾಗುತ್ತಿದೆ. ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಉತ್ಪನ್ನ ಉತ್ತೇಜಿಸಲು ರಾಜ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಸ್ನೇಹಿತರೆ,

ಸಮಗ್ರ ಮತ್ತು ವಿಸ್ತೃತ ಕ್ರಿಯಾಯೋಜನೆ ಮೂಲಕ ರಫ್ತು ವಹಿವಾಟು ಹೆಚ್ಚಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ. ಹೊಸ ಉತ್ಪನ್ನಗಳ ರಫ್ತು ವಹಿವಾಟು ಹೆಚ್ಚಿಸಲು ಹೊಸ ಮಾರುಕಟ್ಟೆಗಳ ಅನ್ವೇಷಣೆಗೆ ಒತ್ತು ನೀಡಲಾಗಿದೆ. ನಾನಿಲ್ಲಿ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸುಸಂದರ್ಭದಲ್ಲಿ ನಾವು ರಫ್ತು ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಗಮನ ನೀಡಬೇಕು. ಇದನ್ನು ಮಾಡಲು ಸಾಧ್ಯವಿದೆ ಎಂದು ನನಗನಿಸುತ್ತಿದೆ. ಇದೇ ಸಂದರ್ಭದಲ್ಲಿ ನಾವು 75 ಹೊಸ ಉತ್ಪನ್ನಗಳನ್ನು ರಫ್ತು ಪಟ್ಟಿಗೆ ಸೇರಿಸುವಂತಾಗಬೇಕು. ವಿಶ್ವಾದ್ಯಂತ ಇರುವ ಭಾರತೀಯ ಸಮುದಾಯ ನಿಮ್ಮೆಲ್ಲಾ ಪ್ರಯತ್ನಗಳಿಗೆ ಹೆಗಲು ಕೊಡಲಿದೆ ಎಂಬುದು ನನ್ನ ಭಾವನೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಸಮುದಾಯದ ಜತೆ ವರ್ಚುವಲ್ ಸಮಾವೇಶ ನಡೆಸಿ, ರಫ್ತು ವಹಿವಾಟು ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬಹುದು. ಅವರು ನಮ್ಮ ಉತ್ಪನ್ನಗಳ ಉತ್ತೇಜನಕ್ಕೆ ಸಹಕಾರ ನೀಡಲಿದ್ದಾರೆ. ರೀತಿ ಮಾಡಿದರೆ, ನಮ್ಮ ಉತ್ಪನ್ನಗಳು ವಿಶ್ವದೆಲ್ಲೆಡೆಗೆ ತಲುಪಲು ಸಾಧ್ಯವಾಗಲಿದೆ. ಅಂತೆಯೇ, ರಾಜ್ಯಗಳು ಸಹ 5 ಅಥವಾ 10 ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಿ, 75 ರಾಷ್ಟ್ರಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಬಗ್ಗೆ ರಾಜ್ಯಗಳು ಗುರಿ ಹಾಕಿಕೊಳ್ಳಬೇಕು. ನಮ್ಮ ಹಲವಾರು ವಿಶಿಷ್ಟ ಉತ್ಪನ್ನಗಳ ಬಗ್ಗೆ ಹಲವಾರು ರಾಷ್ಟ್ರಗಳಿಗೆ ಗೊತ್ತಿಲ್ಲ. ಅವುಗಳಿಗೆ ಮಾಹಿತಿಯೇ ಇಲ್ಲ. ಉದಾಹರಣೆಗೆ ಅಗ್ಗದ ಬೆಲೆಯ ಎಲ್ಇಡಿ ಬಲ್ಬ್|ಗಳು. ಜಾಗತಿಕ ಹವಾಮಾನ ಬದಲಾವಣೆ ಮತ್ತು ಇಂಧನ ಉಳಿತಾಯದ ಒತ್ತಡ ಎದುರಿಸುತ್ತಿರುವ ರಾಷ್ಟ್ರಗಳಿಗೆ ಅಗ್ಗದ ಬೆಲೆಯ ಎಲ್ಇಡಿ ಬಲ್ಬ್|ಗಳನ್ನು ರಫ್ತು ಮಾಡಲು ವಿಪುಲ ಅವಕಾಶಗಳಿವೆ. ಪ್ರಸ್ತುತ, ನಮ್ಮ ಬಹುತೇಕ ಅರ್ಧದಷ್ಟು ರಫ್ತು ಪ್ರಮುಖ ನಾಲ್ಕು ರಾಷ್ಟ್ರಗಳಿಗೆ ಮಾತ್ರ ಹೋಗುತ್ತಿವೆ. ನಮ್ಮ ರಫ್ತಿನ 60% ಪ್ರಮಾಣವು ಕೇಂದ್ರ ಪಟ ಸರಕುಗಳು, ಮುತ್ತು, ರತ್ನ ಮತ್ತು ಚಿನ್ನಾಭರಣಗಳು, ಪೆಟ್ರೋಲಿಯಂ ಮತ್ತು ರಾಸಾಯನಿಕ ಉತ್ಪನ್ನಗಳಳು ಮತ್ತು ಔಷಧ ಉತ್ಪನ್ನಗಳಿಗೆ ಸೇರಿದೆ. ಆದರೆ ನಾವು ಇಡೀ ವಿಶ್ವಕ್ಕೆ ನಮ್ಮ ಉತ್ಪನ್ನಗಳನ್ನು ಕಳಿಸಲು ಗಮನ ಕೊಡಬೇಕು. ನಿಟ್ಟಿನಲ್ಲಿ ನಾವು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಬೇಕು. ಗಣಿ, ಕಲ್ಲಿದ್ದಲು, ರಕ್ಷಣಾ ಉತ್ಪನ್ನಗಳು, ರೈಲ್ವೆ ವಲಯದ ಉತ್ಪನ್ನಗಳ ರಫ್ತಿಗೆ ಗಮನ ನೀಡಬೇಕಿದೆ. ನಮ್ಮ ಉದ್ಯಮಶೀಲರಿಗೆ ರಫ್ತಿನ ಹೊಸ ಅವಕಾಶಗಳು ತೆರೆದಿವೆ. ಹೊಸ ವಲಯಗಳಿಗೆ ನಾವು ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಬೇಕಲ್ಲವೆ?

ಸ್ನೇಹಿತರೆ,

ಕಾರ್ಯಕ್ರಮದಲ್ಲಿ ಹಾಜರಿರುವ ನಮ್ಮ ರಾಯಭಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹೋದ್ಯೋಗಿಗಳಿಗೆ ನಾನಿಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನೀವು ಯಾವುದೋ ದೇಶದಲ್ಲಿದ್ದುಕೊಂಡು ಭಾರತವನ್ನು ಪ್ರತಿನಿಧಿಸುತ್ತಿದ್ದೀರಾ. ದೇಶದ ಅಗತ್ಯಗಳು ಮತ್ತು ಬೇಡಿಕೆಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಭಾರತದ ಯಾವ ಭಾಗದಿಂದ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಸಬಹುದು ಎಂಬ ಉತ್ತಮ ಐಡಿಯಾವು ನಿಮಗಿರುತ್ತದೆ. ಕಳೆದ 7 ವರ್ಷಗಳಲ್ಲಿ ನಾವು ಹೊಸ ಪ್ರಯೋಗವನ್ನು ಮಾಡುತ್ತಾ ಬಂದಿದ್ದೇವೆ. ಹೊರರಾಷ್ಟ್ರಗಳ ರಾಯಭಾರ ಕಚೇರಿಗಳಿಗೆ ನಾವು ನೇಮಿಸಿರುವ ಅಧಿಕಾರಿಗಳು ಭಾರತಕ್ಕೆ ಬರುತ್ತಾರೆ. ನಾವು ಕಳಿಸುವ ರಾಜ್ಯಗಳಿಗೆ ತೆರಳಿ ಅಲ್ಲಿ ಮೂರ್ನಾಲ್ಕು ದಿನ ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ, ದೇಶದ ಅಗತ್ಯ ಮತ್ತು ಬೇಡಿಕೆಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ರಾಜ್ಯಗಳು ಸಹ ಮಾಹಿತಿ ಕಲೆ ಹಾಕಿ, ರಫ್ತಿಗಿರುವ ಅವಕಾಶಗಳನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ರಫ್ತು ಮಾಡಲು ಕ್ರಮ ಕೈಗೊಳ್ಳುತ್ತಿವೆ. ಅಭ್ಯಾಸ ನಡುಕೊಂಡು ಬಂದಿದೆ. ದೇಶದ ವಾಣಿಜ್ಯ ಉದ್ಯಮ ಮತ್ತು ರಫ್ತುದಾರರಿಗೆ ನೀವೆಲ್ಲಾ ಬಲಿಷ್ಠ ಸೇತುವಾಗಿದ್ದೀರಿ. ಭಾರತದ ಉತ್ಪಾದನಾ ಶಕ್ತಿಗೆ ಹೊರರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಪ್ರಾತಿನಿಧಿಕ ಮನೆಗಳಾಗಿವೆ ಎಂಬುದನ್ನು ಹೇಳಲು ನಾನು ಬಯಸುತ್ತೇನೆ. ಕಾಲ ಕಾಲಕ್ಕೆ ನೀವೆಲ್ಲಾ ದೇಶದ ಉತ್ಪಾದನಾ ಘಟಕಗಳಿಗೆ ಮಾಹಿತಿ ನೀಡುತ್ತಾ ಬಂದರೆ, ಮಾರ್ಗದರ್ಶನ ನೀಡಿದರೆ, ದೇಶದ ರಫ್ತು ವಹಿವಾಟು ನಿಸ್ಸಂಶಯವಾಗಿ ಹೆಚ್ಚಳವಾಗುತ್ತದೆ. ರಫ್ತುದಾರರು ಮತ್ತು ರಾಯಭಾರ ಕಚೇರಿಗಳ ನಡುವೆ ನಿರಂತರ ಸಂಪರ್ಕ ಸಾಧಿಸಲು ಪೂರಕವಾದ ವ್ಯವಸ್ಥೆಯೊಂದನ್ನು ರೂಪಿಸುವಂತೆ ನಾನು ವಾಣಿಜ್ಯ ಸಚಿವಾಲಯಕ್ಕೆ ಸೂಚಿಸುತ್ತೇನೆ. ವರ್ಚುವಲ್ ಸಂಪರ್ಕಗಳ ಮೂಲಕ ನಾವು ಸುಲಭವಾಗಿ ವಹಿವಾಟು ಹೆಚ್ಚಿಸಬಹುದು. ಕೊರೊನಾ ನಂತರ ಇಡೀ ವಿಶ್ವಾದ್ಯಂತ ವರ್ಚುವಲ್ ಸಮಾವೇಶ ಅಥವಾ ಸಭೆ ಅಥವಾ ಸಂಪರ್ಕ ಸುಲಭವಾಗಿದೆ. ಹಾಗಾಗಿ, ನಾವೆಲ್ಲಾ ಇನ್ನು ಮುಂದೆ ವರ್ಚುವಲ್ ಸಂಪರ್ಕ ಹೆಚ್ಚಿಸಿಕೊಳ್ಳಬೇಕು.

ಸ್ನೇಹಿತರೆ,

ನಾವು ದೇಶದೊಳಗೆ ತಡೆರಹಿತ ಮತ್ತು ಉತ್ತಮ ಗುಣಮಟ್ಟದ ಪೂರೈಕೆ ಸರಪಳಿಯನ್ನು ನಿರ್ಮಿಸಬೇಕು ಮತ್ತು ನಮ್ಮ ರಫ್ತಿನಿಂದ ನಮ್ಮ ಆರ್ಥಿಕತೆಗೆ ಗರಿಷ್ಠ ಲಾಭವನ್ನು ಪಡೆಯಬೇಕು. ಇದಕ್ಕಾಗಿ ನಾವು ಹೊಸ ಸಂಬಂಧ, ಹೊಸ ಪಾಲುದಾರಿಕೆಯನ್ನು ರೂಪಿಸಿಕೊಳ್ಳಬೇಕು. ನಮ್ಮ ಎಂಎಸ್ಎಂಇ ಉದ್ದಿಮೆದಾರರು, ರೈತರು ಮತ್ತು ಮೀನುಗಾರರೊಂದಿಗೆ ಪಾಲುದಾರಿಕೆ ಬಲಪಡಿಸಲು ಮತ್ತು ನಮ್ಮ ನವೋದ್ಯಮಗಳನ್ನು ಉತ್ತೇಜಿಸುವಂತೆ ನಾನು ಎಲ್ಲಾ ರಫ್ತುದಾರರಲ್ಲಿ ಮನವಿ ಮಾಡುತ್ತೇನೆ. ನಮ್ಮ ಯುವ ಪೀಳಿಗೆಯು ನವೋದ್ಯಮ ಕ್ಷೇತ್ರದ ಮೂಲಕ ಜಗತ್ತಿಗೆ ತುಂಬಾ ಕೊಡುಗೆ ನೀಡಬಹುದು. ಹೆಚ್ಚಿನ ರಫ್ತುದಾರರಿಗೆ ವಾಸ್ತವ ತಿಳಿದಿಲ್ಲ. ಸಾಧ್ಯವಾದರೆ, ವಾಣಿಜ್ಯ ಸಚಿವಾಲಯವು ಸಂಬಂಧ ಉಪಕ್ರಮಗಳನ್ನು ಕೈಗೊಳ್ಳಬಹುದು. ನಮ್ಮ ನವೋದ್ಯಮಗಳು, ರಫ್ತುದಾರರು ಮತ್ತು ಹೂಡಿಕೆದಾರರಿಗೆ ಜಂಟಿ ಕಾರ್ಯಾಗಾರಗಳನ್ನು ನಡೆಸಬೇಕು. ಇದರಿಂದ ಪ್ರತಿಯೊಬ್ಬರ ಬಲ ಅರ್ಥ ಮಾಡಿಕೊಳ್ಳುವ ಜತೆಗೆ, ಜಾಗತಿಕ ಮಾರುಕಟ್ಟೆಗೆ ಪರಿಚಯವಾಗಲು ಸಾಧ್ಯವಾಗಲಿದೆ. ವಿಷಯದಲ್ಲಿ ನಾವು ಇನ್ನೂ ಹೆಚ್ಚಿನ ಕೆಲಸ ಮಾಡಬಹುದು. ನಾವೆಲ್ಲಾ ಅವರಿಗೆ ಬೆಂಬಲ ನೀಡಬೇಕು. ಗುಣಮಟ್ಟ ಮತ್ತು ದಕ್ಷತೆಗೆ ಸಂಬಂಧಿಸಿದಂತೆ, ಔಷಧಗಳು ಮತ್ತು ಲಸಿಕೆಗಳಲ್ಲಿ ನಾವು ವಿಶ್ವಕ್ಕೆ ಸಾಧಿಸಿ ತೋರಿದ್ದೇವೆ. ಉದಾಹರೆಗೆ, ಜೇನುತುಪ್ಪ ಉತ್ಪಾದನೆ ವಲಯದಲ್ಲಿ ಉತ್ತಮ ತಂತ್ರಜ್ಞಾನ ಬಳಕೆ ಮೂಲಕ ಗುಣಮಟ್ಟ ಸುಧಾರಣೆಯನ್ನು ನಾವು ಕಂಡುಕೊಂಡಿದ್ದೇವೆ. ಇದರ ಫಲವಾಗಿ, ಕಳೆದ ವರ್ಷ ನಾವು 97 ದಶಲಕ್ಷ ಡಾಲರ್ ಮೊತ್ತದ ಜೇನು ತುಪ್ಪ ರಫ್ತು ಮಾಡಿದ್ದೇವೆ. ಇದೇ ರೀತಿಯ ಹೊಸತನವನ್ನು ಸಂಸ್ಕರಣೆ ಕ್ಷೇತ್ರ(ಹಣ್ಣುಗಳು ಮತ್ತು ಸಾಗರ ಉತ್ಪನ್ನಗಳು)ದಲ್ಲೂ ಮಾಡಿಕೊಳ್ಳಬೇಕಿದೆ. ಯೋಗದಿಂದ ಭಾರತವು ವಿಶ್ವದ ಕಣ್ಣು ತೆರೆಸಿದೆ. ಯೋಗ ಸಾಧನೆಗೆ ಪೂರಕವಾದ ಸಾವಯವ ಕೃಷಿ(ಆಹಾರ) ಉತ್ಪನ್ನಗಳನ್ನು ರಫ್ತು ಮಾಡಲು ನಮಗೆ ವಿಪುಲ ಮಾರುಕಟ್ಟೆ ಅವಕಾಶಗಳಿವೆ.

ಸ್ನೇಹಿತರೆ,

ಬ್ರಾಂಡ್ ಇಂಡಿಯಾ ಉತ್ತೇಜಿಸುವ ಗುರಿಯ ಹೊಸ ಪಯಣಕ್ಕೆ ಇದು ಸಕಾಲ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಹೊಸ ಗುರುತು ಸ್ಥಾಪಿಸಲು ಇದು ಸರಿಯಾದ ಸಮಯ. ಭಾರತದ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಮತ್ತಷ್ಟು ಮೌಲ್ಯ ಸೇರಿಸಲು ಸ್ಥಿರ ಪ್ರಯತ್ನಗಳನ್ನು ಹಾಕಬೇಕಿದೆ. ರೀತಿ ಮಾಡಿದರೆ, ಸಹಜವಾಗಿ ನಮ್ಮ ಉತ್ಪನ್ನಗಳಿಗೆ ಸದಾ ಬೇಡಿಕೆ ಇರುತ್ತದೆ. ಇದಕ್ಕಾಗಿ ನಾವೆಲ್ಲಾ ಪ್ರಯತ್ನ ಮಾಡಬೇಕಿದೆ. ನಿಮ್ಮೆಲ್ಲಾ ಪ್ರತಿ ಹೆಜ್ಜೆಯ ಪ್ರಯತ್ನಗಳಿಗೆ ಸರ್ಕಾರ ಬೆಂಬಲ ಮತ್ತು ಸಹಕಾರ ನೀಡಲಿದೆ ಎಂದು ನಾನು ಎಲ್ಲಾ ರಫ್ತುದಾರರು ಮತ್ತು ಕೈಗಾರಿಕೆಗಳಿಗೆ ಭರವಸೆ ನೀಡುತ್ತೇನೆ. ಸಮೃದ್ಧ ಭಾರತ ಮತ್ತು ಆತ್ಮನಿರ್ಭರ್ ಭಾರತವನ್ನು ಒಟ್ಟಾಗಿ ಕಟ್ಟುವ ಸಂಕಲ್ಪವನ್ನು ನಾವೆಲ್ಲಾ ಮನಗಾಣೋಣ. ನಿಮ್ಮೆಲ್ಲರಿಗೂ ನಾನು ಶುಭ ಕೋರುತ್ತೇನೆ. ವಾರದ ನಂತರ ನಾವೆಲ್ಲಾ ಆಗಸ್ಟ್ 15ರಂದು ಹೊರರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಮತ್ತು ಭಾರತದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಈಗಾಗಲೇ ಔಪಚಾರಿಕವಾಗಿ ಆರಂಭವಾಗಿದೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಲಿದೆ. ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವು ನಮಗೆ ಜಗತ್ತನ್ನು ತಲುಪಲು ಮತ್ತು ಪ್ರಭಾವವನ್ನು ಬೀರಲು ಬಹುದೊಡ್ಡ ಸ್ಫೂರ್ತಿದಾಯಕ ಸಂದರ್ಭವಾಗಿದೆ. 2047ರಲ್ಲಿ ಸ್ವಾತಂತ್ಯ್ರೋತ್ಸವ ಶತಮಾನೋತ್ಸವ ಆಚರಿಸುವುದರಿಂದ, ಮುಂದಿನ 25 ವರ್ಷಗಳು ನಮಗೆಲ್ಲಾ ಬಹಳ ಮೌಲ್ಯಯುತವಾಗಿರಲಿದೆ. ಸ್ಪಷ್ಟ ಮಾರ್ಗಸೂಚಿಯಲ್ಲಿ ನಾವೆಲ್ಲಾ ಮಾರ್ಗದಲ್ಲಿ ಮುಂದೆ ಸಾಗೋಣ. ಇಂದಿನ ಸಭೆಯ ನಂತರ ನಾವು ಮಹತ್ವಾಕಾಂಕ್ಷಿ ನಿರ್ಣಯವನ್ನು ಪೂರೈಸುತ್ತೇವೆ ಎಂದು ನಾನು ನಂಬುತ್ತೇನೆ. ನಂಬಿಕೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ. ಧನ್ಯವಾದಗಳು.

ಡಿಸ್ ಕ್ಲೇಮರ್(ನಿರಾಕರಣೆ ಹೇಳಿಕೆ): ಇದು ಪ್ರಧಾನ ಮಂತ್ರಿಯವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದವಾಗಿದೆ. ಮೂಲ ಭಾಷಣ ಹಿಂದಿಯಲ್ಲಿದೆ.

***(Release ID: 1743909) Visitor Counter : 234