ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ-ಕಿಸಾನ್ ಯೋಜನೆಯ ಮುಂದಿನ ಕಂತನ್ನು ಆ.9ರಂದು ಬಿಡುಗಡೆ ಮಾಡಲಿರುವ ಪ್ರಧಾನಿ

Posted On: 07 AUG 2021 1:58PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ (ಪಿಎಂ-ಕಿಸಾನ್) ಯೋಜನೆಯಡಿ ಮುಂದಿನ ಕಂತಿನ ಆರ್ಥಿಕ ನೆರವನ್ನು 2021ರ ಆಗಸ್ಟ್ 9ರಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ. ಇದರಿಂದ 9.75 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ 19,500 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಜೊತೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪಿಎಂ-ಕಿಸಾನ್ ಬಗ್ಗೆ
ಪಿಎಂ-ಕಿಸಾನ್ ಯೋಜನೆಯಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000/- ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತದೆ. ತಲಾ ರೂ.2000/- ನಂತೆ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಮಾಸಿಕ ಕಂತುಗಳಲ್ಲಿ ಇದನ್ನು ಪಾವತಿಸಲಾಗುತ್ತದೆ. ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯಲ್ಲಿ, 1.38 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ಇಲ್ಲಿಯವರೆಗೆ ರೈತ ಕುಟುಂಬಗಳಿಗೆ ವರ್ಗಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರು ಸಹ ಉಪಸ್ಥಿತರಿರಲಿದ್ದಾರೆ.

***


(Release ID: 1743641) Visitor Counter : 283