ಹಣಕಾಸು ಸಚಿವಾಲಯ

161ನೇ ಆದಾಯ ತೆರಿಗೆ ದಿನ ಆಚರಣೆ; ರಾಷ್ಟ್ರ ನಿರ್ಮಾಣದತ್ತ ಪಯಣ


ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರಿಂದ ಶುಭಾಶಯ

ಪ್ರಾಮಾಣಿಕ ತೆರಿಗೆದಾರರನ್ನು ಗುರುತಿಸಿ, ಗೌರವಿಸುವ ಕೆಲಸವಾಗಬೇಕು: ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್

ದೇಶ ಕಟ್ಟುವ ಮಹತ್ತರ ಸೇವೆ ಸಲ್ಲಿಸುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಉದ್ಯೋಗಿಗಳ ಕರ್ತವ್ಯ ಶ್ಲಾಘನೀಯ: ಕೇಂದ್ರ ಹಣಕಾಸು ಸಚಿವರು

Posted On: 24 JUL 2021 12:21PM by PIB Bengaluru

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ‘ಸಿಬಿಡಿಟಿ’ ಮತ್ತು ದೇಶಾದ್ಯಂತ ಇರುವ ಅದರ ಎಲ್ಲಾ ಕ್ಷೇತ್ರ ಕಚೇರಿಗಳು ಇಂದು  ಆದಾಯ ತೆರಿಗೆ ಇಲಾಖೆಯ 161ನೇ ವಾರ್ಷಿಕೋತ್ಸವ ಆಚರಿಸಿದವು. ವಾರ್ಷಿಕೋತ್ಸವ ಆಚರಣೆಯ ಭಾಗವಾಗಿ, ಕ್ಷೇತ್ರ ಕಚೇರಿಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದಾಯ ತೆರಿಗೆ ಇಲಾಖೆಯ ಒಗ್ಗಟ್ಟು, ಸಾಮರ್ಥ್ಯ, ಸ್ಪರ್ಧಾತ್ಮಕತೆ, ಸಹಕಾರ ಮತ್ತು ರಚನಾತ್ಮಕ ತೊಡಗಿಸಿಕೊಳ್ಳುವಿಕೆಯ ಮನೋಭಾವವನ್ನು ಪ್ರತಿಬಿಂಬಿಸುವ ವೆಬಿನಾರ್ ಸೇರಿದಂತೆ ನಾನಾ ಚಟುವಟಿಕೆಗಳು ಜರುಗಿದವು. ಇನ್|ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ-ಐಸಿಎಐ)ದ ಪ್ರಾದೇಶಿಕ ಸಂಸ್ಥೆಗಳು, ವ್ಯಾಪಾರ ಮತ್ತು ಉದ್ಯಮ ಸಂಘಟನೆಗಳಂತಹ ಬಾಹ್ಯ ಸಂಘ ಸಂಸ್ಥೆಗಳು ಈ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದವು. ಸಸಿ ನೆಡುವ ಆಂದೋಲನ, ಉಚಿತ ಲಸಿಕೆ ಅಭಿಯಾನ, ಕೋವಿಡ್-19 ನಿಯಂತ್ರಣ ಮತ್ತು ಸಂತ್ರಸ್ತರ ಪರಿಹಾರಕ್ಕಾಗಿ ಕೆಲಸ ಮಾಡಿದ ಅಧಿಕಾರಿಗಳಿಗೆ ಪ್ರಶಂಸೆ ಪತ್ರಗಳ ವಿತರಣೆ ಕಾರ್ಯಕ್ರಮ, ಕರ್ತವ್ಯ ನಿರ್ವಹಿಸುವಾಗ ಕೋವಿಡ್-19 ಸೋಂಕಿಗೆ ಮೃತರಾದ ಅಧಿಕಾರಿಗಳ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಶುಭ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೆಚ್ಚುಗೆಯ ಸಂದೇಶ ನೀಡಿರುವ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ 2014ರಿಂದ ಜಾರಿಗೆ ತರುತ್ತಿರುವ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳನ್ನು ಅಪಾರ ಸ್ಫೂರ್ತಿ ಮತ್ತು ಚೈತನ್ಯದಿಂದ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಐಟಿ ಸಿಬ್ಬಂದಿಯನ್ನು ಶ್ಲಾಘಿಸಿದರು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಪ್ರಾಮಾಣಿಕ ತೆರಿಗೆದಾರರು ತಮ್ಮ ಪಾಲಿನ ತೆರಿಗೆಯನ್ನು ಪಾವತಿಸುತ್ತಾ ಬಂದಿದ್ದಾರೆ. ಅವರ ಪ್ರಾಮಾಣಿಕ ಕೊಡುಗೆಯನ್ನು ಗುರುತಿಸುವ ಕೆಲಸವಾಗಬೇಕು. ತೆರಿಗೆ ವಿವರ ಸಲ್ಲಿಕೆಯಿಂದ ಹಿಡಿದು ತೆರಿಗೆ ಪಾವತಿ ತನಕ ವಿಧಿವಿಧಾನ ಮತ್ತು ಪ್ರಕ್ರಿಯೆಗಳನ್ನು ಸರಳೀಕರಿಸಲು ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಅವರು ಅಭಿನಂದಿಸಿದರು. ಅವರೆಲ್ಲರ ಶ್ರಮದಿಂದ ಐಟಿ ಇಲಾಖೆಯ ತೆರಿಗೆ ಪಾವತಿ ವಿಧಾನವು ರಗಳೆ-ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಪರಿವರ್ತನೆಗೊಂಡಿದೆ. ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಎದುರಾದ ಕಷ್ಟಗಳ ನಡುವೆಯೂ ತೆರಿಗೆದಾರರು ಅನುಸರಣಾ ಕಟ್ಟುಪಾಡುಗಳನ್ನು ಉತ್ತಮವಾಗಿ ನಿರ್ವಹಿಸಿದರು ಎಂದು ಸಚಿವರು ಶ್ಲಾಘಿಸಿದರು. ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ವ್ಯಾಪಕವಾದಾಗ ಕರ್ತವ್ಯ ಸಲ್ಲಿಸುವ ವೇಳೆ ಜೀವ ತೆತ್ತ ಐಟಿ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ನೆನಪು ಮಾಡಿಕೊಂಡ ಸಚಿವರು, ದೇಶ ಕಟ್ಟುವ ಗುರುತರ ಕರ್ತವ್ಯದ ವೇಳೆ ಮಡಿದವರ ಅತ್ಯಮೂಲ್ಯ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಎಂದು ಸ್ಮರಿಸಿದರು.

ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ ತಮ್ಮ ಸಂದೇಶದಲ್ಲಿ, ಆದಾಯ ಸಂಗ್ರಹಣೆ ಮತ್ತು ತೆರಿಗೆ ನೀತಿಗಳ ಅನುಷ್ಠಾನದಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ತನ್ನ ಎರಡು ಪಾತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಕ್ಕಾಗಿ ಇಲಾಖೆಯನ್ನು ಅಭಿನಂದಿಸಿದರು. ಆದಾಯ ತೆರಿಗೆ ಇಲಾಖೆಯ ಬಹುತೇಕ ವಿಧಿವಿಧಾನಗಳು ಮತ್ತು ಅನುಸರಣಾ ಅಗತ್ಯಗಳನ್ನು ಆನ್|ಲೈನ್ ವೇದಿಕೆಗಳಿಗೆ ವರ್ಗಾಯಿಸಲಾಗಿದೆ. ತೆರಿಗೆದಾರ ಭೌತಿಕವಾಗಿ ಆದಾಯ ತೆರಿಗೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುವುದನ್ನು ತೊಡೆದುಹಾಕಲಾಗಿದೆ ಅಥವಾ ಕನಿಷ್ಠಗೊಳಿಸಲಾಗಿದೆ. ತೆರಿಗೆದಾರರ ಜತೆಗಿನ ಸಂವಾದ ಮತ್ತು ಸಂವಹನವು ಈಗ ವಿಶ್ವಾಸ ಮತ್ತು ಗೌರವದ ಮನೋಭಾವದಿಂದ ನಿರೂಪಿಸಲ್ಪಟ್ಟಿದೆ, ಸ್ವಯಂಪ್ರೇರಿತ ಅನುಸರಣೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬ ಅಂಶವನ್ನು ಅವರು ಪ್ರಸ್ತಾಪಿಸಿದರು.

ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಡಾ. ಭಗವತ್ ಕಿಶನ್|ರಾವ್ ಕಾರದ್ ತಮ್ಮ ಸಂದೇಶದಲ್ಲಿ, ನೇರ ತೆರಿಗೆಗಳ ಆಡಳಿತ ನಡೆಸುವ ಸಮಸ್ಥೆಯಾಗಿ ಆದಾಯ ತೆರಿಗೆ ಇಲಾಖೆಯು ದೇಶಕ್ಕೆ ಅಪಾರ ಸೇವೆ ಸಲ್ಲಿಸುವ ಪಾತ್ರ ನಿರ್ವಹಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ತೆರಿಗೆಗಳು ಸರ್ಕಾರಕ್ಕೆ ಕೇವಲ ಆದಾಯ ಮೂಲಗಳಾಗಿರದೆ, ನಿರ್ದಿಷ್ಟ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸುವ ಪರಿಣಾಮಕಾರಿ ಸಾಧನವಾಗಿದೆ. ಆದಾಯ ತೆರಿಗೆ ಇಲಾಖೆಯು ಉತ್ಕೃಷ್ಟವಾದ ಮತ್ತು ಸಮಯದ ಅಗತ್ಯತೆಯೊಂದಿಗೆ ವಿಕಸನಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು. ನ್ಯಾಯಸಮ್ಮತ ಮತ್ತು ಪಾರದರ್ಶಕ ತತ್ವಗಳಿಂದ ರೂಪಿತವಾದ ವೃತ್ತಿಪರ ಸಂಸ್ಥೆಯಾಗಿ ಆದಾಯ ತೆರಿಗೆ ಇಲಾಖೆ ಮುಂದೆಯೂ ತನ್ನ ಖ್ಯಾತಿಯನ್ನು ಉಳಿಸಿಕೊಳ್ಳುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಂದಾಯ ಕಾರ್ಯದರ್ಶಿ ಶ್ರೀ ತರುಣ್ ಬಜಾಜ್ ತಮ್ಮ ಸಂದೇಶದಲ್ಲಿ, ಐಟಿ ಇಲಾಖೆಗೆ ಶುಭ ಕಾಮನೆಗಳನ್ನು ತಿಳಿಸಿದರು. ಆದಾಯ ತೆರಿಗೆ ಇಲಾಖೆಯು ನಮ್ಮ ಆರ್ಥಿಕತೆಯಲ್ಲಿ ಹೊರಹೊಮ್ಮುತ್ತಿರುವ ಕಾಲ ಕಾಲದ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಜತೆಗೆ, ತೆರಿಗೆ ಸಂಗ್ರಹದಲ್ಲೂ ಆರೋಗ್ಯಕರ ಬೆಳವಣಿಗೆ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದರು. ಆದಾಯ ಸಂಗ್ರಹಣೆಯ ಕಾರ್ಯವಿಧಾನವನ್ನು ಮರುಹೊಂದಿಸಲು ಇಲಾಖೆ ಕೈಗೊಂಡಿರುವ ಉಪಕ್ರಮಗಳು ಶ್ಲಾಘನೀಯ. ನಂಬಿಕೆ ಆಧರಿತ ಮತ್ತು ತೆರಿಗೆದಾರ-ಕೇಂದ್ರಿತ ಕಾರ್ಯವೈಖರಿಯನ್ನು ಅಳವಡಿಸಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಆದಾಯ ತೆರಿಗೆ ಇಲಾಖೆಯ ಕ್ಷೇತ್ರ ಕಚೇರಿಗಳು ಕೋವಿಡ್-19 ಸಾಂಕ್ರಾಮಿಕ ಸೋಂಕಿಗೆ ತುತ್ತಾದವರಿಗೆ ಹಮ್ಮಿಕೊಂಡಿದ್ದ ಪರಿಹಾರ ಕಾರ್ಯಗಳು ಮತ್ತು ಇಲಾಖೆಯ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಆಯೋಜಿಸಿದ್ದ ಲಸಿಕೆ ಆಂದೋಲನಗಳು ಶ್ಲಾಘನೀಯ ಎಂದರು.

ಸಿಬಿಡಿಟಿ ಅಧ್ಯಕ್ಷ ಶ್ರೀ ಜೆ.ಬಿ. ಮೊಹಾಪಾತ್ರ ಅವರು ತಮ್ಮ ಸಂದೇಶದಲ್ಲಿ ಆಯಕಾರ್ ಪರಿವಾರ ಮತ್ತು ಅವರ ಕುಟುಂಬ ಸದಸ್ಯರಿಗೆ ವಾರ್ಷಿಕೋತ್ಸವದ ಶುಭಾಶಯ ಕೋರಿದರು. ದೇಶಕ್ಕೆ ಆದಾಯ ಸಂಗ್ರಹಿಸುವ ಮತ್ತು ತೆರಿಗೆದಾರನಿಗೆ ಸೇವೆ ಒದಗಿಸುವ ಎರಡು ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸುತ್ತಿರುವ ಐಟಿ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸಿದರು.

‘ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವುದು’, ಮುಖರಹಿತ(ಬೌತಿಕ ಉಪಸ್ಥಿತಿ ಇಲ್ಲದ) ತೆರಿಗೆ ಆಡಳಿತ ಮತ್ತು ತೆರಿಗೆದಾರರ ಸನ್ನದು ಮತ್ತಿತರ ಬೃಹತ್ ಮತ್ತು ದೂರಗಾಮಿ ನೀತಿ ಕ್ರಮಗಳನ್ನು ಉಲ್ಲೇಖಿಸಿದ ಅವರು, ಈ ಎಲ್ಲಾ ಉಪಕ್ರಮಗಳು ಇಲಾಖೆಯನ್ನು ಹೆಚ್ಚು ಪಾರದರ್ಶಕವಾಗಿ, ತೆರಿಗೆದಾರ-ಸ್ನೇಹಿಯಾಗಿ ಕೆಲಸ ಮಾಡಲು ನೆರವಾಗುತ್ತವೆ.

ಕರ್ತವ್ಯ ನಿರ್ವಹಣೆ ವೇಳೆ ಕೋವಿಡ್-19 ಸಾಂಕ್ರಾಮಿಕ ಸೋಂಕಿಗೆ ತುತ್ತಾಗಿ ಮೃತಪಟ್ಟ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಹೃದಯಪೂರ್ವಕ ಸಂತಾಪಗಳನ್ನು ಸೂಚಿಸುತ್ತೇನೆ. ಅವರು ಕರ್ತವ್ಯ ಸೇವಾ ಮನೋಭಾವ ಮತ್ತು ಸಮರ್ಪಣೆಯು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಮತ್ತಷ್ಟು ಬದ್ಧತೆಯಿಂದ ಸೇವೆ ಸಲ್ಲಿಸಲು, ಮಾನವೀಯ ಮೌಲ್ಯಗಳಿಂದ ಕರ್ತವ್ಯ ನಿರ್ವಹಿಸಲು, ಮತ್ತಷ್ಟು ವೃತ್ತಿಪರತೆಯಿಂದ ಕೆಲಸ ಮಾಡಲು ಮತ್ತು ಐಟಿ ಇಲಾಖೆಯನ್ನು ಮತ್ತಷ್ಟು ದಕ್ಷತೆಯ ಸಂಸ್ಥೆಯಾಗಿ ರೂಪಿಸಲು ಕೋವಿಡ್ ಮೃತರೆಲ್ಲರೂ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಸ್ಮರಿಸಿದರು.

***



(Release ID: 1738729) Visitor Counter : 205