ಇಂಧನ ಸಚಿವಾಲಯ

ಇಂಧನ ಪರಿವರ್ತನೆಯಲ್ಲಿ ಜಾಗತಿಕ ಸರದಾರನಾಗಿ ಹೊರಹೊಮ್ಮಿದ ಭಾರತ: ಕೇಂದ್ರ ಇಂಧನ ಖಾತೆ ಸಚಿವ ಆರ್ ಕೆ ಸಿಂಗ್


ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕ: ಶ್ರೀ ಆರ್ ಕೆ ಸಿಂಗ್

ಹಸಿರು ಇಂಧನ ಮೂಲಗಳ ಸುಲಭ ಲಭ್ಯತೆಗೆ ಸರ್ಕಾರ ಮುಕ್ತ ಅವಕಾಶ ಕಲ್ಪಿಸಲಿದೆ: ಇಂಧನ ಸಚಿವರು

Posted On: 16 JUL 2021 9:23AM by PIB Bengaluru

ಭಾರತೀಯ ಕೈಗಾರಿಕಾ ಒಕ್ಕೂಟವು ‘ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಮೂಲಕ ಆತ್ಮನಿರ್ಭರ್ ಭಾರತ ನಿರ್ಮಾಣ’ ವಿಷಯ ಕುರಿತು ಆಯೋಜಿಸಿದ್ದ ಸಮಾವೇಶ ಉದ್ದೇಶಿಸಿ ಕೇಂದ್ರ ಇಂಧನ ಸಚಿವ ಆರ್ ಕೆ ಸಿಂಗ್ ಭಾಷಣ ಮಾಡಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಮುಂಚೂಣಿ ಸ್ಥಾನದಲ್ಲಿದ್ದು, ಇಂಧನ ಪರಿವರ್ತನೆಯಲ್ಲಿ ಜಾಗತಿಕ ಸರದಾರನಾಗಿ ಹೊರಹೊಮ್ಮಿದೆ ಎಂದರು.

ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಇಡೀ ವಿಶ್ವದಲ್ಲೇ ತ್ವರಿತ ಬೆಳವಣಿಗೆ ಕಾಣುತ್ತಿದೆ. ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದ-21ರ ನಿರ್ಣಯಗಳನ್ನು ಪಾಲಿಸಿ, ಅನುಷ್ಠಾನಕ್ಕೆ ತರಲು ಭಾರತ ಸಂಕಲ್ಪ ಮಾಡಿದೆ. ದೇಶದಲ್ಲಿ ನೈಸರ್ಗಿಕ ಇಂಧನ ಮೂಲಗಳನ್ನು ಬಳಸಿ 40% ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈಗಾಗಲೇ ನೈಸರ್ಗಿಕ ಮೂಲಗಳಿಂದ ಶೇ.38.5ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ದೇಶದ ವಿವಿಧೆಡೆ ನಡೆಯುತ್ತಿರುವ ಹೆಚ್ಚುವರಿ ವಿದ್ಯುತ್  ಉತ್ಪಾದನೆ ಸಾಮರ್ಥ್ಯದ ನಿರ್ಮಾಣ ಹಂತದ ಸ್ಥಾವರಗಳನ್ನು ಪರಿಗಣಿಸಿದರೆ ಉತ್ಪಾದನೆ ಸಾಮರ್ಥ್ಯ ಪ್ರತಿಶತ 48.5ಕ್ಕೆ ಹೆಚ್ಚಲಿದೆ. ಮುಂಬರುವ ವರ್ಷಗಳಲ್ಲೂ ಹೆಚ್ಚಿನ ವಿದ್ಯುತ್ ಉತ್ಪಾದಿಸಿ, ಜಾಗತಿಕ ಸರದಾರನ ಪಟ್ಟದಲ್ಲಿ ಮುಂದುವರಿಯಲು ಭಾರತ ಉದ್ದೇಶಿಸಿದೆ. 2030ರ ಹೊತ್ತಿಗೆ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯವನ್ನು 450 ಗಿಗಾವ್ಯಾಟ್ ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ ಭಾರತವು ಪ್ರತಿ ಹಳ್ಳಿ ಮತ್ತು ಕುಗ್ರಾಮಕ್ಕೂ ವಿದ್ಯುತ್  ಸಂಪರ್ಕ ಒದಗಿಸಿ, ಸಾರ್ವತ್ರಿಕ ಲಭ್ಯತೆಗೆ ಅನುಕೂಲ ಕಲ್ಪಿಸಿದೆ. ಅಲ್ಲದೆ, ಪ್ರತಿ ಕುಟುಂಬಕ್ಕೂ ಸೌಭಾಗ್ಯ ಯೋಜನೆ ಅಡಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ತ್ವರಿತವಾದ ಮತ್ತು ಬೃಹದಾಕಾರದ ವಿದ್ಯುತ್ ಸಂಪರ್ಕ ವಿಸ್ತರಣೆ ಯೋಜನೆಯಾಗಿದೆ. ಇದರ ಫಲವಾಗಿ ದೇಶದಲ್ಲಿ ವಿದ್ಯುಚ್ಛಕ್ತಿಗೆ ಹಠಾತ್ತನೇ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್-19 ಸಂಕಷ್ಟ ಕಾಲದಲ್ಲೂ ಭಾರತ, 200 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆಯನ್ನು ಪೂರೈಸಿದೆ. ಕೋವಿಡ್-ಪೂರ್ವ ಕಾಲಕ್ಕಿಂತ ಈ ಬೇಡಿಕೆ ಹೆಚ್ಚಾಗಿದ್ದು, ವಿದ್ಯುಚ್ಛಕ್ತಿ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಶ್ರೀ ಆರ್ ಕೆ ಸಿಂಗ್ ತಿಳಿಸಿದರು.

ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳ ಮೂಲಕ ದೇಶದಲ್ಲಿ ಉದ್ಯೋಗಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ದೃಢ ನಿಶ್ಚಯ ಮಾಡಿದೆ. ಇದರಿಂದಾಗಿಯೇ ಆತ್ಮನಿರ್ಭರ್ ಭಾರತ ಅತಿಮುಖ್ಯವಾಗಿದೆ. ಕೆಲವು ರಾಷ್ಟ್ರಗಳು ಸೌರಶಕ್ತಿ ಕೋಶಗಳು ಮತ್ತು ಮಾಡ್ಯೂಲ್ ಗಳನ್ನು ಅಗ್ಗದ ಬೆಲೆಗೆ ದೇಶದೊಳಕ್ಕೆ ರಾಶಿ ಹಾಕಿ (ಡಂಪಿಂಗ್), ದೇಶೀಯ ಮತ್ತು ಸ್ಥಳೀಯ ಉದ್ದಿಮೆ ಘಟಕಗಳಿಗೆ ಹಾನಿ ಉಂಟುಮಾಡುತ್ತಿವೆ. ಈ ರೀತಿ ಅಪಾರ ಪ್ರಮಾಣದಲ್ಲಿ ದೇಶದೊಳಕ್ಕೆ ಬರುತ್ತಿರುವ ಅಗ್ಗದ ಬೆಲೆಯ ಸೌರಶಕ್ತಿ ಉತ್ಪನ್ನಗಳನ್ನು ನಿಯಂತ್ರಿಸುವ ಉದ್ದೇಶದಿಂದ ಆಮದು ಉತ್ಪನ್ನಗಳಿಗೆ ಸೀಮಾಸುಂಕ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಭಾರತದ ಕೈಗಾರಿಕೆಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಉತ್ಪನ್ನ ಮಾದರಿಗಳು ಮತ್ತು ಉತ್ಪಾದಕರ ಅನುಮೋದಿತ ಪಟ್ಟಿ (ಎಎಲ್ಎಂಎಂ)ಯ ವ್ಯವಸ್ಥೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಹಸಿರು ಜಲಜನಕ ಮತ್ತು ಹಸಿರು ಅಮೋನಿಯಾ ಉತ್ಪಾದನೆಯಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಆಮದು ಮಾಡಿಕೊಂಡ ನೈಸರ್ಗಿಕ ಅನಿಲದಿಂದ ಉತ್ಪಾದಿಸುವ ಬೂದು ಬಣ್ಣದ ಜಲಜನಕ ಉತ್ಪಾದನೆಯಿಂದ ಹಸಿರು ಜಲಜನಕ ಉತ್ಪಾದನೆಗೆ ಪರಿವರ್ತನೆಯಾಗಲು ಭಾರತ ಉದ್ದೇಶಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಮತ್ತು ರಾಸಾಯನಿಕ ರಸಗೊಬ್ಬರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹಸಿರು ಹೈಡ್ರೋಜನ್ ಖರೀದಿ ಬಾಧ್ಯತೆಯೊಂದಿಗೆ ಹೊರಬಂದಿದೆ ಎಂದು ಸಚಿವರು ತಿಳಿಸಿದರು. ಇದರಿಂದ ದೇಶದೊಳಗೆ ಸೌರಶಕ್ತಿ ಮತ್ತು ಪವನ ಶಕ್ತಿ ಉಪಕರಣಗಳು ಮತ್ತು ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ ಎಂದರು.

ನವೀಕರಿಸಬಹದಾದ ಇಂಧನ ಉತ್ಪಾದನೆ ಉದ್ಯಮಗಳಿಗೆ ಸುಲಭ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ಸರ್ಕಾರವು ಸೂಕ್ತ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲು ಉದ್ದೇಶಿಸಿದೆ. ಇದರಿಂದ ದೇಶೀಯ ಕೈಗಾರಿಕೆಗಳು ಸಂಪೂರ್ಣ ಹಸಿರು ಇಂಧನ ಮೂಲಗಳನ್ನು ಬಳಸಲು ಮತ್ತು ಅವಲಂಬಿಸಲು ಸಾಧ್ಯವಾಗಲಿದೆ. ದೇಶೀಯ ಕೈಗಾರಿಕೆಗಳು ಹಸಿರು ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಸ್ವತಃ ಅಥವಾ ಡೆವಲಪರ್ ಮೂಲಕ ಸ್ಥಾಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಸಿರು ಇಂಧನ ಮೂಲಗಳ ಮುಕ್ತ ಲಭ್ಯತೆಗೆ ಮೇಲ್ ತೆರಿಗೆಗಳನ್ನು ತರ್ಕಬದ್ಧಗೊಳಿಸಲಾಗುವುದು. ಇದರಿಂದ ಅಸಂಗತವಾಗಿ ವಿಪರೀತ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

***



(Release ID: 1736132) Visitor Counter : 306