ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ – ರುದ್ರಾಕ್ಷ- ಉದ್ಘಾಟಿಸಿದ ಪ್ರಧಾನಿ

ಕೋವಿಡ್ ಹೊರತಾಗಿಯೂ, ಕಾಶಿಯಲ್ಲಿ ಅಭಿವೃದ್ಧಿಯ ವೇಗಕ್ಕೆ ಧಕ್ಕೆಯಾಗಿಲ್ಲ: ಪ್ರಧಾನಿ

ಈ ಸಮಾವೇಶ ಕೇಂದ್ರವು ಭಾರತ ಮತ್ತು ಜಪಾನ್ ನಡುವಿನ ಗಾಢ ಸಂಬಂಧವನ್ನು ತೋರಿಸುತ್ತದೆ: ಪ್ರಧಾನಿ

ಈ ಸಮಾವೇಶ ಕೇಂದ್ರವು ಸಾಂಸ್ಕೃತಿಕ ಕೇಂದ್ರವಾಗಲಿದೆ ಮತ್ತು ವಿಭಿನ್ನ ಜನರನ್ನು ಒಂದುಗೂಡಿಸುವ ಮಾಧ್ಯಮವಾಗಲಿದೆ: ಪ್ರಧಾನಿ

ಕಳೆದ 7 ವರ್ಷಗಳಲ್ಲಿ ಕಾಶಿಯನ್ನು ಹಲವು ಅಭಿವೃದ್ಧಿ ಯೋಜನೆಗಳಿಂದ ಸಿಂಗರಿಸಲಾಗಿದೆ ಮತ್ತು ರುದ್ರಾಕ್ಷ್ ಇಲ್ಲದೆ ಇದು ಪೂರ್ಣಗೊಳ್ಳುವುದಿಲ್ಲ: ಪ್ರಧಾನಿ

Posted On: 15 JUL 2021 3:30PM by PIB Bengaluru

ವಾರಾಣಸಿಯಲ್ಲಿ ಜಪಾನಿನ ನೆರವಿನೊಂದಿಗೆ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ ರುದ್ರಾಕ್ಷವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ನಂತರ ಅವರು ಬಿಎಚ್‌ಯುನ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಿದರು. ಕೋವಿಡ್ ಸನ್ನದ್ಧತೆಯನ್ನು ಪರಿಶೀಲಿಸಲು ಅವರು ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಕೋವಿಡ್ ಹೊರತಾಗಿಯೂ, ಕಾಶಿಯಲ್ಲಿ ಅಭಿವೃದ್ಧಿಯ ವೇಗಕ್ಕೆ ಧಕ್ಕೆಯಾಗಿಲ್ಲ ಎಂದರು. ಸೃಜನಶೀಲತೆ ಮತ್ತು ದಕ್ಷತೆಯ ಪರಿಣಾಮವೇ 'ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ - ರುದ್ರಾಕ್ಷ' ಎಂದು ಅವರು ಹೇಳಿದರು. ಕೇಂದ್ರವು ಭಾರತ ಮತ್ತು ಜಪಾನ್ ನಡುವಿನ ಗಾಢ ಸಂಬಂಧವನ್ನು ತೋರಿಸುತ್ತದೆ ಎಂದರು. ಸಮಾವೇಶ ಕೇಂದ್ರವನ್ನು ನಿರ್ಮಿಸಲು ನೆರವು ನೀಡುವಲ್ಲಿ ಜಪಾನ್ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಜಪಾನ್ ಪ್ರಧಾನಿ ಶ್ರೀ ಸುಗಾ ಯೋಶಿಹಿಡೆ ಆಗ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದರು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಅಂದಿನಿಂದ ಜಪಾನ್ ಪ್ರಧಾನಿಯಾಗುವವರೆಗೂ ಅವರು ವೈಯಕ್ತಿಕವಾಗಿ ಯೋಜನೆಯಲ್ಲಿ ಭಾಗಿಯಾಗಿದ್ದಾರೆ. ಭಾರತದ ಬಗೆಗಿನ ಒಲವಿಗಾಗಿ ಪ್ರತಿಯೊಬ್ಬ ಭಾರತೀಯನೂ ಅವರಿಗೆ ಕೃತಜ್ಞರಾಗಿರುತ್ತಾರೆ ಎಂದು ಶ್ರೀ ಮೋದಿ ಹೇಳಿದರು.

ಇಂದಿನ ಕಾರ್ಯಕ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಜಪಾನ್ ಮಾಜಿ ಪ್ರಧಾನಿ ಶ್ರೀ ಶಿಂಜೋ ಅಬೆ ಅವರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ನೆನಪಿಸಿಕೊಂಡರು. ಅಂದಿನ ಜಪಾನ್ ಪ್ರಧಾನಿ ಶ್ರೀ ಶಿಂಜೊ ಅಬೆ ಕಾಶಿಗೆ ಬಂದಾಗ ರುದ್ರಾಕ್ಷದ ಬಗ್ಗೆ ಅವರೊಂದಿಗೆ ಚರ್ಚಿಸಿದ ಕ್ಷಣವನ್ನು ಅವರು ಸ್ಮರಿಸಿಕೊಂಡರು. ಕಟ್ಟಡವು ಆಧುನಿಕತೆ ಮತ್ತು ಸಾಂಸ್ಕೃತಿಕ ಹೊಳಪನ್ನು ಹೊಂದಿದೆ, ಇದು ಭಾರತ ಜಪಾನ್ ನಡುವಿನ ಸಂಬಂಧ ಮತ್ತು ಭವಿಷ್ಯದ ಸಹಕಾರದ ವ್ಯಾಪ್ತಿಯನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು. ಶ್ರೀ ಮೋದಿಯವರು ತಮ್ಮ ಜಪಾನ್‌ ಭೇಟಿಯಿಂದ ರೀತಿಯ ಜನರು-ಜನರು ನಡುವಿನ ಸಂಬಂಧಗಳನ್ನು ರೂಪಿಸಲಾಯಿತು. ರುದ್ರಾಕ್ಷ ಮತ್ತು ಅಹಮದಾಬಾದ್‌ನ ಝೆನ್ ಗಾರ್ಡನ್‌ನಂತಹ ಯೋಜನೆಗಳು ಸಂಬಂಧವನ್ನು ಸಂಕೇತಿಸುತ್ತವೆ ಎಂದು ಅವರು ಹೇಳಿದರು.

ಕಾರ್ಯತಂತ್ರ ಮತ್ತು ಆರ್ಥಿಕ ಕ್ಷೇತ್ರಗಳೆರಡರಲ್ಲೂ ಇಂದು ಭಾರತದ ಅತ್ಯಂತ ವಿಶ್ವಾಸಾರ್ಹ ಸ್ನೇಹಿತನಾಗಿರುವುದಕ್ಕೆ ಜಪಾನ್ ಅನ್ನು ಪ್ರಧಾನಿ ಶ್ರೀ ಮೋದಿ ಶ್ಲಾಘಿಸಿದರು. ಜಪಾನ್‌ನೊಂದಿಗಿನ ಭಾರತದ ಸ್ನೇಹವನ್ನು ಇಡೀ ಪ್ರದೇಶದ ಅತ್ಯಂತ ಸಹಜ ಸಹಭಾಗಿತ್ವವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ನಮ್ಮ ಅಭಿವೃದ್ಧಿಯನ್ನು ನಮ್ಮ ಮನೋಭಾವದೊಂದಿಗೆ ಜೋಡಿಸಬೇಕು ಎಂಬುದು ಭಾರತ ಮತ್ತು ಜಪಾನ್ ದೃಷ್ಟಿಕೋನವಾಗಿದೆ. ಅಭಿವೃದ್ಧಿಯು ಸರ್ವತೋಮುಖವಾಗಿರಬೇಕು, ಸರ್ವರಿಗೂ ಇರಬೇಕು ಮತ್ತು ಸರ್ವಾಂಗೀಣವಾಗಿರಬೇಕು ಎಂದರು.

ಹಾಡು, ಸಂಗೀತ ಮತ್ತು ಕಲೆ ಬನಾರಸ್‌ನ ರಕ್ತನಾಳಗಳಲ್ಲಿ ಹರಿಯುತ್ತಿದೆ ಎಂದು ಪ್ರಧಾನಿ ಹೇಳಿದರು. ಇಲ್ಲಿನ ಗಂಗಾ ನದಿಯ ಘಟ್ಟಗಳ ಮೇಲೆ ಅನೇಕ ಕಲೆಗಳು ಅಭಿವೃದ್ಧಿ ಕಂಡಿವೆ. ಜ್ಞಾನವು ಉತ್ತುಂಗಕ್ಕೇರಿದೆ ಮತ್ತು ಮಾನವೀಯತೆಗೆ ಸಂಬಂಧಿಸಿದ ಅನೇಕ ಗಂಭೀರ ಚಿಂತನೆನೆಗಳು ನಡೆದಿವೆ. ಆದ್ದರಿಂದಲೇ ಬನಾರಸ್ ಸಂಗೀತ, ಧರ್ಮ, ಚೇತನ ಮತ್ತು ಜ್ಞಾನ ಮತ್ತು ವಿಜ್ಞಾನದ ಒಂದು ದೊಡ್ಡ ಜಾಗತಿಕ ಕೇಂದ್ರವಾಗಬಹುದು. ಕೇಂದ್ರವು ಸಾಂಸ್ಕೃತಿಕ ಕೇಂದ್ರವಾಗಲಿದೆ ಮತ್ತು ವಿಭಿನ್ನ ಜನರನ್ನು ಒಂದುಗೂಡಿಸುವ ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು. ಕೇಂದ್ರವನ್ನು ಕಾಪಾಡಿಕೊಳ್ಳುವಂತೆ ಅವರು ಕಾಶಿಯ ಜನರಿಗೆ ಮನವಿ ಮಾಡಿದರು.

ಕಳೆದ 7 ವರ್ಷಗಳಲ್ಲಿ ಕಾಶಿಯನ್ನು ಹಲವು ಅಭಿವೃದ್ಧಿ ಯೋಜನೆಗಳಿಂದ ಸಿಂಗರಿಸಲಾಗಿದೆ, ಆದರೆ ರುದ್ರಾಕ್ಷ ಇಲ್ಲದೆ ಅಲಂಕಾರ ಹೇಗೆ ಪೂರ್ಣವಾಗುತ್ತದೆ? ಎಂದು ಪ್ರಧಾನಿ ಹೇಳಿದರು. ಈಗ ನಿಜವಾದ ಶಿವನಾದ ಕಾಶಿಯು ರುದ್ರಾಕ್ಷವನ್ನು ಧರಿಸಿದ್ದರಿಂದ, ಕಾಶಿಯ ಪ್ರಗತಿ ಹೆಚ್ಚು ಹೊಳೆಯುತ್ತದೆ ಮತ್ತು ಕಾಶಿಯ ಸೌಂದರ್ಯವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು.

***(Release ID: 1735896) Visitor Counter : 65