ರಕ್ಷಣಾ ಸಚಿವಾಲಯ

75 ವರ್ಷಗಳ ಸ್ವಾತಂತ್ರ್ಯ – ಸ್ವಾತಂತ್ರ್ಯದ ಅಮೃತ ಮಹೋತ್ಸವ


ಭಾರತದ ಸಮರ ಕಲಿಗಳ ಪ್ರತಿಮೆಗಳನ್ನು ಗೌರವಿಸಲು ಮತ್ತು ನಿರ್ವಹಿಸಲು ʻಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್‌ʼ ಮತ್ತು ಎನ್‌ಸಿಸಿಯ ವಿಶಿಷ್ಟ ಉಪಕ್ರಮ

Posted On: 14 JUL 2021 3:51PM by PIB Bengaluru

ಭಾರತ ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಅಂಗವಾಗಿ, ʻ ಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್‌ʼ(ಶೌರ್ಯ ಪ್ರಶಸ್ತಿ ಪೋರ್ಟಲ್‌) ಮತ್ತು ʻರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ʼ (ಎನ್‌ಸಿಸಿ) ಜಂಟಿಯಾಗಿ ಸಶಸ್ತ್ರ ಪಡೆಗಳ ವೀರ ಯೋಧರನ್ನು ಹಾಗೂ ರಾಷ್ಟ್ರ ಸೇವೆಗಾಗಿ ಪರಮೋನ್ನತ ತ್ಯಾಗ ಮಾಡಿದ ಇತರರನ್ನು ಗೌರವಿಸಲು ಒಂದು ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿವೆ. ಈ ಉಪಕ್ರಮದ ಅಡಿಯಲ್ಲಿ, ವೀರ ಯೋಧರ ಪ್ರತಿಮೆಗಳನ್ನು ಸ್ವಚ್ಛವಾಗಿರಿಸಲು ಹಾಗೂ ನಿರ್ವಹಿಸಲು ಅವುಗಳನ್ನು ದತ್ತು ಪಡೆಯಲಾಗುತ್ತದೆ. ಜೊತೆಗೆ ಕೆಡೆಟ್‌ಗಳು ಸಂವಾದಾತ್ಮಕ ಉಪನ್ಯಾಸಗಳು, ಕವನ ವಾಚನ, ಬಯಲು ನಾಟಕ / ನೃತ್ಯ ಇತ್ಯಾದಿಗಳ ಮೂಲಕ ಸಮರ ಕಲಿಗಳು ಹಾಗೂ ಇತರ ತ್ಯಾಗಜೀವಿಗಳು ದೇಶಕ್ಕೆ ನೀಡಿದ ಕೊಡುಗೆ ಹಾಗೂ ಅವರ ನಾಯಕತ್ವದ ಗುಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ.

ಇದುವರೆಗೂ ಶೌರ್ಯ ಪ್ರಶಸ್ತಿ ವಿಜೇತರ 46 ಪ್ರತಿಮೆಗಳನ್ನು ಎನ್‌ಸಿಸಿ ದತ್ತು ಪಡೆದಿದೆ. ಈ ಪೈಕಿ 10 ಪರಮ ವೀರ ಚಕ್ರ, 6 ಅಶೋಕ ಚಕ್ರ, 11 ಮಹಾವೀರ ಚಕ್ರ, 4 ಕೀರ್ತಿ ಚಕ್ರ, 12 ವೀರ ಚಕ್ರ ಮತ್ತು 3 ಶೌರ್ಯ ಚಕ್ರ ಪ್ರಶಸ್ತಿ ವಿಜೇತರ ಪ್ರತಿಮೆಗಳು.

ಎನ್‌ಸಿಸಿಯ ಈ ಉದಾತ್ತ ಚಟುವಟಿಕೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ, ಪ್ರತಿ ವಾರ ಎನ್‌ಸಿಸಿ ಆಯೋಜಿಸುವ ಈ ಕಾರ್ಯಕ್ರಮಗಳನ್ನು ಲೈವ್ ವೆಬ್‌ಕಾಸ್ಟ್ ಮಾಡಲು ʻಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್ʼ ನಿರ್ಧರಿಸಿದೆ. ಭೌತಿಕವಾಗಿ ಕಾರ್ಯಕ್ರಮದಲ್ಲಿ ಹಾಜರಿಲ್ಲದವರೂ ವೀರ ಯೋಧರಿಗೆ ವರ್ಚ್ಯುಯಲ್‌ ರೂಪದಲ್ಲಿ ಗೌರವವನ್ನು ಸಲ್ಲಿಸಲು ಪೋರ್ಟಲ್ ( https://www.gallantryawards.gov.in/) ಅನುವುಮಾಡಿಕೊಡುತ್ತದೆ. ಅಂತಹ ಮೊದಲ ಕಾರ್ಯಕ್ರಮ ಜುಲೈ 7, 2021 ರಂದು ಪ್ರಾಯೋಗಿಕವಾಗಿ ಲೈವ್ ವೆಬ್‌ಕಾಸ್ಟ್ ಮಾಡಲಾಯಿತು. ಮುಂದಿನ ಕಾರ್ಯಕ್ರಮವು ಜುಲೈ 16, 2021 ರಂದು ಬೆಳಿಗ್ಗೆ 11 ಗಂಟೆಗೆ ಕೇರಳದ ಕೊಚ್ಚಿಯ ತಿರುಪುನಿತಾರದ ಪ್ರತಿಮೆ ವೃತ್ತದಲ್ಲಿ ನಡೆಯಲಿದ್ದು, ಅಲ್ಲಿ ವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಕರ್ನಲ್ ರಾಮಕೃಷ್ಣನ್ ವಿಶ್ವನಾಥನ್ ಅವರ ಪ್ರತಿಮೆಗೆ ಎನ್‌ಸಿಸಿ ಗೌರವ ಸಲ್ಲಿಸಲಿದೆ. ಲೆಫ್ಟಿನೆಂಟ್ ಕರ್ನಲ್ ರಾಮಕೃಷ್ಣನ್ ವಿಶ್ವನಾಥನ್ ಅವರು ʻಆಪರೇಷನ್ ವಿಜಯ್ʼ ಸಮಯದಲ್ಲಿ ಕಾರ್ಗಿಲ್‌ನ ಡ್ರಾಸ್ ಸೆಕ್ಟರ್ನ ಟೊಲೊಲಿಂಗ್ ಪರ್ವತದ ಮೇಲೆ ಮತ್ತು ಸುತ್ತಮುತ್ತಲೂ ಕಾರ್ಯಾಚರಣೆಗಳನ್ನು ನಡೆಸಿದ ʻ18 ಗ್ರೆನೇಡಿಯರ್ಸ್‌ʼನ ಎರಡನೇ ಕಮಾಂಡ್ ಆಗಿದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಕಾರ್ಯಗಳಿಗಾಗಿ ಮರಣೋತ್ತರವಾಗಿ ಅವರಿಗೆ ವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.

ಉಪಕ್ರಮದ ಭಾಗವಾಗಿ, ಎನ್‌ಸಿಸಿಯ ಸ್ಥಳೀಯ ಘಟಕವು ದತ್ತು ಪಡೆದ ಪ್ರತಿಮೆಯ ಆವರಣವನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವ ಹಾಗೂ ಮಾಹಿತಿ ಪ್ರಸಾರ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಒಂದು ಅಥವಾ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಎನ್‌ಸಿಸಿ ಕೆಡೆಟ್‌ಗಳಿಗೆ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಈ ಕಾರ್ಯಕ್ರಮವು ದೇಶದ ವೀರ ಯೋಧರ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಸಾಕಾರಗೊಳಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆರಂಭಿಸಿದ ʻಸ್ವಚ್ಛ ಭಾರತʼ ಅಭಿಯಾನದಲ್ಲಿ ಭಾಗವಹಿಸಲು ಜನರನ್ನು ಪ್ರೇರೇಪಿಸುವ ಗುರಿಯನ್ನೂ ಇದು ಹೊಂದಿದೆ.

ಈ ಉಪಕ್ರಮವು ದೈನಂದಿನ ಜೀವನದಲ್ಲಿ ʻಸ್ವಚ್ಛತೆʼಯ ಪ್ರಾಮುಖ್ಯತೆಯ ಸಂದೇಶವನ್ನು ಹರಡುತ್ತದೆ ಮತ್ತು ಸ್ಥಳೀಯ ಸ್ಮಾರಕಗಳು ಹಾಗೂ ಪರಂಪರೆಯನ್ನು ಕಾಪಾಡಲು ಸ್ಥಳೀಯ ಜನರಿಗೆ ಪ್ರೇರಣೆ ನೀಡುತ್ತದೆ. ಯುವ ಶಕ್ತಿಯನ್ನು ಸಾಮಾಜಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಮತ್ತು ದೇಶಭಕ್ತಿಯ ಜಾಗೃತಿಯನ್ನು ಹುಟ್ಟುಹಾಕಲು ಸಹ ಇದು ನೆರವಾಗುತ್ತದೆ. ಎನ್‌ಸಿಸಿಯ ಈ ಉಪಕ್ರಮಕ್ಕೆ ಎಲ್ಲಾ ವಲಯಗಳಿಂದಲೂ ಪ್ರೋತ್ಸಾಹ ದೊರೆತಿದೆ.

ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಾಗಿ ʻಗ್ಯಾಲಂಟ್ರಿ ಅವಾರ್ಡ್ಸ್ ಪೋರ್ಟಲ್‌ʼಗೆ ಲಾಗ್ ಇನ್ ಮಾಡಿ. ಸ್ಥಳೀಯ ಎನ್‌ಸಿಸಿ ಘಟಕದಿಂದ ದತ್ತು ಅಗತ್ಯವಿರುವ ಪ್ರತಿಮೆಗಳನ್ನು ಜನರೂ ಸಹ ಸೂಚಿಸಬಹುದು. ಸಲಹೆಗಳನ್ನು ಪೋರ್ಟಲ್‌ಗೆ ಕಳುಹಿಸಬಹುದು

***


(Release ID: 1735682) Visitor Counter : 416