ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವ ದಲ್ಲಿ ನಡೆದ ಜಮ್ಮು-ಕಾಶ್ಮೀರ ರಾಜಕೀಯ ಪಕ್ಷಗಳ ನಾಯಕರ ಸಭೆ; ಸಭೆಯ ನಂತರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಹೇಳಿಕೆ

Posted On: 24 JUN 2021 9:56PM by PIB Bengaluru

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಸಕಾರಾತ್ಮಕವಾಗಿ ಅಂತ್ಯವಾಗಿದೆ. ಕಣಿವೆಯಲ್ಲಿ  ಪ್ರಜಾಪ್ರಭುತ್ವ ಬಲಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಇದೊಂದು ಬಹಳ ಸಕಾರಾತ್ಮಕ ಬೆಳವಣಿಗೆಯಾಗಿದೆ.   ನಾಯಕರ ಜತೆಗಿನ ಸಭೆಯು ಅತ್ಯಂತ ಸೌಹಾರ್ದಯುತವಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಕಣಿವೆಯ ಎಲ್ಲ ನಾಯಕರು ಭಾರತದ ಪ್ರಜಾಸತ್ತೆ ವ್ಯವಸ್ಥೆ ಮತ್ತು ದೇಶದ ಸಂವಿಧಾನಕ್ಕೆ ಸಂಪೂರ್ಣ ನಿಷ್ಠೆ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಯಾಗಿ, ಶಾಂತಿ ಮರಳುತ್ತಿರುವುದಕ್ಕೆ, ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಗೃಹ ಸಚಿವರು ಶ್ಲಾಘಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಂದು ರಾಜಕೀಯ ಪಕ್ಷದ ನಾಯಕರ ವಾದಗಳು ಮತ್ತು ಸಲಹೆ ಸೂಚನೆಗಳನ್ನು ತಾಳ್ಮೆಯಿಂದ ಆಲಿಸಿ, ಜನಪ್ರತಿನಿಧಿಗಳು ಮುಕ್ತ ಮನಸ್ಸಿನಿಂದ ವಾಸ್ತವ ಪರಿಸ್ಥಿತಿಗಳ ಕುರಿತು ತಮ್ಮ ಅನಿಸಿಕೆಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಅವರು ಸಭೆಯಲ್ಲಿ 2 ಪ್ರಮುಖ ವಿಷಯಗಳಿಗೆ ಒತ್ತು ನೀಡಿದರು. ಮೊದಲನೆಯದಾಗಿ, ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು  ತಳಮಟ್ಟಕ್ಕೆ ಕೊಂಡೊಯ್ಯಲು ನಾವೆಲ್ಲರೂ ಜತೆಗೂಡಿ ಕೆಲಸ ಮಾಡಬೇಕಿದೆ. ಎರಡನೆಯದಾಗಿ, ಜಮ್ಮು-ಕಾಶ್ಮೀರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು. ಅಭಿವೃದ್ಧಿಯ ಫಲ ಎಲ್ಲಾ ಪ್ರದೇಶಗಳಿಗೆ ಮುಟ್ಟಬೇಕು, ಪ್ರತಿ ಸಮುದಾಯಕ್ಕೂ ತಲುಪಬೇಕು. ಎರಡು ಉದ್ದೇಶಗಳು ಸಫಲವಾಗಬೇಕಾದರೆ, ಸಹಕಾರ ಮತ್ತು ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯ ಪರಿಸರ ಸೃಷ್ಟಿಯಾಗಬೇಕು ಎಂದು ಪ್ರಧಾನ ಮಂತ್ರಿ ಸಭೆಯ ಗಮನಕ್ಕೆ ತಂದರು.

ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್|ರಾಜ್ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಿಗೆ ಯಶಸ್ವಿಯಾಗಿ ಚುನಾವಣೆ ನಡೆದಿದೆ ಎಂದು ಸಭೆಯ ಗಮನಕ್ಕೆ ತಂದ ಪ್ರಧಾನ ಮಂತ್ರಿ, ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಚುನಾವಣೆ ಮುಗಿದ ನಂತರ  ಸುಮಾರು 12,000 ಕೋಟಿ ರೂ. ಅನುದಾನ ನೇರವಾಗಿ ಪಂಚಾಯತ್|ಗಳಿಗೆ ತಲುಪಿದೆ. ಇದು ಹಳ್ಳಿಗಳ ಅಭಿವೃದ್ಧಿ ವೇಗವನ್ನು ಹೆಚ್ಚಿಸಿದೆ.

ನಾವೀಗ ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದ ಮುಂದಿನ ಮಹತ್ವಪೂರ್ಣ ಹೆಜ್ಜೆ ಇಡಬೇಕಾಗಿದೆ. ಅದೆಂದರೆ, ವಿಧಾನಸಭಾ ಚುನಾವಣೆ. ಕ್ಷೇತ್ರಗಳ ಮರುವಿಂಗಡೆ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಬೇಕಿದೆ. ಕಣಿವೆಯ ಪ್ರತಿಯೊಂದು ಭಾಗ ಮತ್ತು ಪ್ರತಿಯೊಂದು ಸಮುದಾಯಕ್ಕೆ ವಿಧಾನಸಭೆಯಲ್ಲಿ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ದೊರಕಿಸಬೇಕಾದರೆ ಕ್ಷೇತ್ರಗಳ ಪುನರ್|ವಿಂಗಣೆ ಕಾರ್ಯವನ್ನು ಜಾಗರೂಕತೆಯಿಂದ ಮಾಡಬೇಕಾಗಿದೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ಒದಗಿಸುವುದು ಅಗತ್ಯವಾಗಿದೆ. ಕ್ಷೇತ್ರಗಳ ಮರುವಿಂಗಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರ ಪುನರ್|ವಿಂಗಣೆ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಒಪ್ಪಿಗೆ ಸೂಚಿಸಿದರು.

ಜಮ್ಮು-ಕಾಶ್ಮೀರ ಕಣಿವೆಯು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಲು ಎಲ್ಲಾ ಪಾಲುದಾರರ ಸಹಕಾರ ಅತ್ಯಗತ್ಯ ಎಂದು ಪ್ರಧಾನ ಮಂತ್ರಿ ಅವರು ಸಭೆಯಲ್ಲಿ ಒತ್ತು ನೀಡಿದರು. ಜಮ್ಮು-ಕಾಶ್ಮೀರವು ಹಿಂಸಾಚಾರದ ವಿಷ ವರ್ತುಲದಿಂದ ಹೊರಬಂದು ಸ್ಥಿರತೆಯತ್ತ ಸಾಗುತ್ತಿದೆ. ಕಣಿವೆ ಜನರ ಮೊಗದಲ್ಲಿ ಇದೀಗ ಹೊಸ ಆಶಾವಾದ ಮತ್ತು ಆತ್ಮವಿಶ್ವಾಸ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ನಂಬಿಕೆಯನ್ನು ಬಲಪಡಿಸಬೇಕಾದರೆ ನಾವು ಹಗಲಿರುಳು ಕೆಲಸ ಮಾಡಬೇಕು, ಆತ್ಮವಿಶ್ವಾಸವನ್ನು ಸುಧಾರಣೆಗೆ ತರಬೇಕಾದರೆ ನಾವೆಲ್ಲಾ ಜತೆಗೂಡಿ ಕೆಲಸ ಮಾಡಬೇಕು. ಹೊಸ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತೆ ಬಲಗೊಳ್ಳಲು, ಅಭಿವೃದ್ಧಿ ಮತ್ತು ಸಮೃದ್ಧಿ ಕಾಣಲು ಇಂದಿನ ಸಭೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಸಹ ಪ್ರಧಾನ ಮಂತ್ರಿ ತಿಳಿಸಿದರು.

ಇಂದಿನ ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು.

ನಿರಾಕರಣೆ ಹೇಳಿಕೆ: ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿಕೆಯ ಅಂದಾಜು ಅನುವಾದ ಇದಾಗಿದೆ. ಅವರ ಮೂಲ ಹೇಳಿಕೆ ಹಿಂದಿ ಭಾಷೆಯಲ್ಲಿದೆ.

***



(Release ID: 1730206) Visitor Counter : 593