ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಅಂತಾರಾಷ್ಟ್ರೀಯ ಯೋಗ ದಿನ 2021 ಅಂಗವಾಗಿ ಯೋಗ ವಿಜ್ಞಾನದಲ್ಲಿ ಎನ್ಐಒಎಸ್ ಡಿಪ್ಲೊಮಾ ಕೋರ್ಸ್ ಗೆ ಚಾಲನೆ ನೀಡಿದ ಶ್ರೀ ಸಂಜಯ್ ಧೋತ್ರೆ

Posted On: 21 JUN 2021 5:40PM by PIB Bengaluru

ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಅವರು ಅಂತಾರಾಷ್ಟ್ರೀಯ ಯೋಗ ದಿನದ  ಅಂಗವಾಗಿ ಇಂದು ಯೋಗ ವಿಜ್ಞಾನದಲ್ಲಿ ಎನ್ಐಒಎಸ್ ಡಿಪ್ಲೊಮಾ ಕೋರ್ಸ್ ಗೆ ಚಾಲನೆ ನೀಡಿದರು. ಸಚಿವರು ಕೋರ್ಸ್ ಗೆ ಸಂಬಂಧಿಸಿದ ಸ್ವಯಂ ಸೂಚನಾ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು. ಕಲಿಕಾರ್ಥಿಗಳಿಗೆ ಇಂತಹ ವೃತ್ತಿಪರ ಕೋರ್ಸ್ ನೀಡುತ್ತಿರುವುದಕ್ಕಾಗಿ ಎನ್ಐಒಎಸ್ ಅನ್ನು ಅಭಿನಂದಿಸಿದರು.

ವಿಶೇಷವಾಗಿ ಕೋವಿಡ್ ಸಮಯದಲ್ಲಿ ಯೋಗದ ಮಹತ್ವ ಪ್ರಸ್ತಾಪಿಸಿದ ಶ್ರೀ ಧೋತ್ರೆ ಅವರು ಇದರಿಂದ ಹಲವು ಉದ್ಯೋಗವಕಾಶಗಳು ಸೃಷ್ಟಿಗೆ ಕಾರಣವಾಗಿದೆ  ಎಂದರು. ಯೋಗ ವಿಜ್ಞಾನ ಕೋರ್ಸ್ ಗಳಲ್ಲಿ ತೇರ್ಗಡೆಯಾದವರು ಉದ್ಯೋಗ ಬಯಸುವವರಿಗಿಂತ ಉದ್ಯೋಗದಾತರಾಗುತ್ತಾರೆ. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಶ್ಲಾಘನೀಯ ಪ್ರಯತ್ನವನ್ನು ಸಚಿವರು ಪುನರುಚ್ಚರಿಸಿದರು.

ಎನ್ಐಒಎಸ್ ಅಧ್ಯಕ್ಷರು ತಮ್ಮ ಭಾಷಣದಲ್ಲಿ, ಎರಡು ವರ್ಷದ ಡಿಪ್ಲೊಮಾ ಕೋರ್ಸ್ ನಲ್ಲಿ ಮೊದಲನೇ ವರ್ಷ ಐದು ವಿಷಯಗಳಿರಲಿದ್ದು, ಅದರಲ್ಲಿ ಯೋಗ ಬೋಧನೆ ತರಬೇತಿಯನ್ನು ನೀಡಲಾಗುವುದು ಮತ್ತು ಎರಡನೇ ವರ್ಷ ಯೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಐದು ವಿಷಯಗಳನ್ನು ಬೋಧಿಸಲಾಗುವುದು ಎಂದರು.

***



(Release ID: 1729329) Visitor Counter : 124