ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ: ಮಿಥ್ಯೆ  ಹಾಗು  ವಾಸ್ತವ


ಮಹಿಳೆಯರು ಮತ್ತು ಪುರುಷರ ಬಂಜೆತನಕ್ಕೂ ಕೋವಿಡ್-19 ಲಸಿಕೆಗೆ ಸಂಬಂಧ ಕಲ್ಪಿಸಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ

ಎಲ್ಲ ಬಾಣಂತಿಯರಿಗೂ ಕೋವಿಡ್ -19 ಲಸಿಕೆ ಶಿಫಾರಸು ಮಾಡಿರುವ ಎನ್ ಇಜಿವಿಎಸಿ

Posted On: 21 JUN 2021 5:42PM by PIB Bengaluru

ಸಂತಾನೋತ್ಪತ್ತಿ ವಯಸ್ಸಿನ ಜನಸಂಖ್ಯೆಯಲ್ಲಿ ಕೋವಿಡ್-19 ಲಸಿಕೆ ಕಾರಣದಿಂದಾಗಿ ಬಂಜೆತನ ಉಂಟಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸುವ ವರದಿಗಳು ಮಾದ್ಯಮಗಳಲ್ಲಿ ಪ್ರಕಟವಾಗಿವೆ. ಕಳೆದ ಕೆಲವು ದಿನಗಳಿಂದೀಚೆಗೆ ಕೆಲವು ಮಾಧ್ಯಮಗಳಲ್ಲಿ ನರ್ಸ್ ಗಳೂ ಸೇರಿದಂತೆ ಆರೋಗ್ಯ ಕಾರ್ಯಕರ್ತರು(ಎಚ್ ಸಿಡಬ್ಲ್ಯೂ) ಮತ್ತು ಮುಂಚೂಣಿ ಕಾರ್ಯಕರ್ತರು (ಎಫ್ಎಲ್ ಡಬ್ಲ್ಯೂ) ವರ್ಗದವರ ಕುರಿತು ಹಲವು ಮೂಢನಂಬಿಕೆಗಳು ಮತ್ತು ಮಿಥ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ವರದಿಗಳು ಬಂದಿವೆ. ಅಂತಹ ತಪ್ಪು ಮಾಹಿತಿ ಮತ್ತು ವದಂತಿಗಳು ಸಮುದಾಯದಲ್ಲಿ ಹರಡುವುದು ಹಿಂದೆಯೂ ನಡೆಯುತ್ತಿತ್ತು, ಉದಾಹರಣೆಗೆ ಪೋಲಿಯೊ ಮತ್ತು ಸಿಡುಬು-ದಡಾರ ಲಸಿಕೆ  ಕಾರ್ಯಕ್ರಮದ ವೇಳೆಯೂ ಇಂತಹ ವರದಿಗಳು ಬಂದಿದ್ದವು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಎಂಒಎಚ್ಎಫ್ ಡಬ್ಲ್ಯೂ) ತನ್ನ ವೆಬ್ ಸೈಟ್ ನಲ್ಲಿ (https://www.mohfw.gov.in/pdf/FAQsforHCWs&FLWs.pdf) ಪ್ರಶ್ನೋತ್ತರಗಳನ್ನು (ಎಫ್ಎಕ್ಯೂ) ಪೋಸ್ಟ್ ಮಾಡಿದ್ದು, ಅದರಲ್ಲಿ ಸ್ಪಷ್ಟಪಡಿಸಿರುವುದೇನೆಂದರೆ  ಲಭ್ಯವಿರುವ ಯಾವುದೇ ಲಸಿಕೆ ಸಂತಾನೋತ್ಪತ್ತಿಗೆ ತೊಂದರೆ ಉಂಟುಮಾಡುವುದಿಲ್ಲ. ಎಲ್ಲಾ ಲಸಿಕೆಗಳು ಮತ್ತು ಅವುಗಳಲ್ಲಿನ ಅಂಶಗಳನ್ನು ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿತ್ತು ಮತ್ತು ನಂತರ ಮನುಷ್ಯರ ಮೇಲೆ ಪ್ರಯೋಗಿಸಿ ಅವುಗಳಿಂದಾಗುವ ಅಡ್ಡಪರಿಣಾಮಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಲಸಿಕೆಗಳನ್ನು ಅವುಗಳ ಸುರಕ್ಷತೆ ಮತ್ತು ಪರಿಣಾಮ ಖಾತ್ರಿಯಾದ ನಂತರವೇ ಬಳಕೆಗೆ ಅನುಮೋದನೆ ನೀಡಲಾಗಿದೆ

ಅಲ್ಲದೆ ಕೋವಿಡ್-19 ಲಸಿಕೆಯು ಬಂಜೆತನಕ್ಕೆ ಕಾರಣವಾಗಲಿದೆ ಎಂಬ ಕುರಿತ ಸದ್ಯದ ಮಿಥ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಭಾರತ ಸರ್ಕಾರ ಮೂಲಕ (https://twitter.com/PIBFactCheck/status/1396805590442119175) ಕೋವಿಡ್-19 ಲಸಿಕೆ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ ಎಂಬುದನ್ನು ಸೂಚಿಸುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಲಸಿಕೆಗಳು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿಯಾಗಿವೆ.  

ಕೋವಿಡ್-19 ಲಸಿಕೆ ಆಡಳಿತ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ(ಎನ್ ಇಜಿವಿಎಸಿ) ಎಲ್ಲಾ ಬಾಣಂತಿಯರಿಗೆ ಕೋವಿಡ್-19 ಲಸಿಕೆಯನ್ನು ಶಿಫಾರಸ್ಸು ಮಾಡಿದೆ ಮತ್ತು ಲಸಿಕೆಯ ಪಡೆಯುವ ಮುನ್ನ ಮತ್ತು ಆನಂತರ ಯಾವುದೇ ಕಾರಣಕ್ಕೂ ಎದೆಹಾಲು ಉಣಿಸುವುದನ್ನು ತಡೆಹಿಡಿಯುವುದು ಅಥವಾ ನಿಲ್ಲಿಸುವುದು ಸುರಕ್ಷಿತವಲ್ಲ ಎಂದು ಹೇಳಿದೆ. (https://pib.gov.in/PressReleasePage.aspx?PRID=1719925)

***


(Release ID: 1729234) Visitor Counter : 280