ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಮ್ಯೂಕರ್|ಮೈಕೊಸಿಸ್ ಕಪ್ಪು ಶಿಲೀಂಧ್ರ ಸೋಂಕು ನಿಯಂತ್ರಣಕ್ಕೆ ಔಷಧ ಲಭ್ಯತೆ ಖಾತರಿಪಡಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು
ಕಚ್ಚಾವಸ್ತುಗಳ ಲಭ್ಯತೆಗೆ ಸಂಬಂಧಿಸಿದ ವಿವಾದಗಳ ಪರಿಹಾರಕ್ಕೆ ಔಷಧ ಉತ್ಪಾದಕ ಕಂಪನಿಗಳ ಜತೆ ನಿರಂತರ ತೊಡಗಿಸಿಕೊಂಡಿರುವ ಕೇಂದ್ರ ಸರ್ಕಾರ
ಆಂಫೊಟೆರಿಸಿನ್ ಬಿ/ ಲಿಪೊಸೊಮೊಲ್ ಆಂಫೊಟೆರಿಸಿನ್-ಬಿ ಚುಚ್ಚುಮದ್ದು ಮತ್ತು ಪರ್ಯಾಯ ಔಷಧಗಳನ್ನು ಪಡೆಯಲು ಹೊಸ ಮೂಲಗಳನ್ನು ಗುರುತಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಮ್ಯೂಕರ್|ಮೈಕೊಸಿಸ್ ಚಿಕಿತ್ಸೆಗೆ ಅಗತ್ಯವಾದ ಔಷಧಗಳ ಉತ್ಪಾದನೆ, ಆಮದು, ಪೂರೈಕೆ ಮತ್ತು ಲಭ್ಯತೆ ಮೇಲೆ ಸರ್ಕಾರದಿಂದ ನಿರಂತರ ಮೇಲ್ವಿಚಾರಣೆ (ನಿಗಾ)
Posted On:
17 JUN 2021 1:41PM by PIB Bengaluru
ಮ್ಯೂಕರ್|ಮೈಕೊಸಿಸ್ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ತಜ್ಞವೈದ್ಯರು ವ್ಯಾಪಕವಾಗಿ ಮತ್ತು ಸಕ್ರಿಯವಾಗಿ ಆಂಫೊಟೆರಿನ್ ಚುಚ್ಚುಮದ್ದು ಔಷಧವನ್ನು ರೋಗಿಗಳಿಗೆ ಗೊತ್ತು ಮಾಡುತ್ತಿರುವುದು (ಸೂಚಿಸುತ್ತಿರುವುದು) ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಹಠಾತ್ತನೇ ಬೇಡಿಕೆ ಹೆಚ್ಚಾಗಿದೆ. ಕೋವಿಡ್ 2ನೇ ಅಲೆ ಕಾಣಿಸಿಕೊಂಡ ನಂತರ ರೋಗಿಗಳಲ್ಲಿ ಮತ್ತು ಗುಣಮುಖರಾದವರಲ್ಲಿ ಮ್ಯೂಕರ್|ಮೈಕೊಸಸಿಸ್ ಸೋಂಕು ಕಾಣಿಸಿಕೊಳ್ಳುತ್ತಿರುವುದು ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಕ್ರಿಯ ಕ್ರಮಗಳ ಮೂಲಕ ಔಷಧಗಳ ಉತ್ಪಾದನೆ ಮತ್ತು ಆಮದು ಹೆಚ್ಚಿಸಲು ಮತ್ತು ಸಮಾನ ಹಂಚಿಕೆ ಮತ್ತು ವಿತರಣೆಯನ್ನು ಖಾತರಿಪಡಿಸಲು ಕಾರ್ಯೋನ್ಮುಖವಾಗಿದೆ. ಆಂಫೊಟೆರಿಸಿನ್ ಚುಚ್ಚುಮದ್ದನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಆರೋಗ್ಯ ಸಂಸ್ಥೆಗಳಿಗೆ ವಿತರಿಸುವ ಸಲುವಾಗಿ 6.67 ಲಕ್ಷ ಬಾಟಲ್(ವಯಲ್ಸ್)ಗಳನ್ನು ಈಗಾಗಲೇ ಕ್ರೋಡೀಕರಿಸಿದೆ. ಇದರ ಜತೆಗೆ, ಮ್ಯೂಕರ್|ಮೈಕೊಸಿಸ್ ಚಿಕಿತ್ಸೆಗೆ ಬಳಸುವ ಇತರೆ ಔಷಧಗಳಾದ ಆಂಫೊಟೆರಿಸಿನ್ ಡಿಆಕ್ಸಿಕೊಲೇಟ್ ಮತ್ತು ಪೊಸಕೊನಜೊಲ್ ಚುಚ್ಚುಮದ್ದುಗಳನ್ನು ಸಹ ತರಿಸಿಕೊಂಡಿದೆ.
ಕೇಂದ್ರ ಸರಕಾರದ ಔಷಧ ಇಲಾಖೆಯು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದಂತೆ ಮ್ಯೂಕರ್|ಮೈಕೊಸಿಸ್ ಚಿಕಿತ್ಸೆಗೆ ನಿರಂತರ ಔಷಧಗಳ ಲಭ್ಯತೆಯ ಮೌಲ್ಯಮಾಪನ ನಡೆಸುತ್ತಿದೆ. ದೇಶೀಯ ಉತ್ಪಾದಕರು ಮತ್ತು ಆಮದು ಮೂಲಕ ಔಷಧಗಳನ್ನು ದಾಸ್ತಾನು ಮಾಡಲಾಗುತ್ತಿದೆ. 2021 ಮೇ ಆರಂಭದ ತನಕ ಔಷಧಗಳ ಉತ್ಪಾದನೆ, ದಾಸ್ತಾನು, ಪೂರೈಕೆ ಮತ್ತು ಖರೀದಿ ಆದೇಶ ಕುರಿತ ಸಮಗ್ರ ಮಾಹಿತಿಯನ್ನು ಉತ್ಪಾದಕರಿಂದ ಪಡೆಯಲಾಗುತ್ತಿತ್ತು. ಅವರ ಸಹಕಾರದಿಂದ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ನೀಗಿಸಲಾಗುತ್ತಿತ್ತು. ಕೇಂದ್ರದ ಔಷಧ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿಗಳು ಮೇ 10ರಂದು ಅಂತರ್|ಇಲಾಖೆಗಳ ಸಭೆ ನಡೆಸಿ, ಔಷಧಗಳ ಲಭ್ಯತೆ ಮತ್ತು ಮ್ಯೂಕರ್ ಮೈಕೋಸಿಸ್ ಸೋಂಕು ಹರಡುವಿಕೆಯ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಔಷಧಗಳ ಸೀಮಿತ ದಾಸ್ತಾನು ಹಂಚಿಕೆಯಿಂದ ಸಮಸ್ಯೆಯಾಗುತ್ತಿದೆ. ಮುಕ್ತವಾಗಿ ಮತ್ತು ಬೇಡಿಕೆಗೆ ಅನುಗುಣವಾಗಿ ಔಷಧಗಳನ್ನು ಪೂರೈಸುವ ಅಗತ್ಯವಿದೆ. ಬೇಡಿಕೆ ಮತ್ತು ಪೂರೈಕೆಯ ಕಂದಕ ನಿವಾರಿಸಬೇಕಿದೆ ಎಂಬ ಒಮ್ಮತಾಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿತ್ತು.
ಉತ್ಪಾದನೆ ಹೆಚ್ಚಳ
ಔಷಧಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಔಷಧ ತಯಾರಿಕಾ ಕಂಪನಿಗಳ ಜತೆ ನಿರಂತರ ತೊಡಗಿಸಿಕೊಳ್ಳುತ್ತಿದ್ದು, ಕಚ್ಚಾವಸ್ತುಗಳ ಲಭ್ಯತೆ ಸೇರಿದಂತೆ ಅವರ ಸಕಲ ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಕೇಂದ್ರದ ಔಷಧಗಳ ಇಲಾಖೆ ಮತ್ತು ಔಷಧಗಳ ನಿಯಂತ್ರಣದ ಮಹಾನಿರ್ದೇಶಕರ ಕಾರ್ಯಾಲಯ(ಡಿಸಿಜಿಐ) ಜತೆಗೂಡಿ, ಸಕ್ರಿಯ ಸಮನ್ವಯದ ಮೂಲಕ ಔಷಧ ಉದ್ಯಮದ ಜತೆ ಮಾತುಕತೆ ನಡೆಸುತ್ತಿದೆ. ದೇಶ ಮತ್ತು ಹೊರರಾಷ್ಟ್ರಗಳಲ್ಲಿರುವ ಔಷಧ ಉತ್ಪಾದನಾ ಕಂಪನಿಗಳನ್ನು ಗುರುತಿಸುವುದು, ಪರ್ಯಾಯ ಔಷಧಗಳ ಲಭ್ಯತೆ ಮತ್ತು ದೇಶದಲ್ಲಿ ಹೊಸದಾಗಿ ಸ್ಥಾಪಿಸಲು ಬಯಸುವ ಔಷಧ ಕಂಪನಿಗಳಿಗೆ ತ್ವರಿತ ಅನುಮೋದನೆ ನೀಡಲು ನಿರ್ಧರಿಸಿವೆ. ಔಷಧ ಉತ್ಪಾದನಾ ಕಂಪನಿಗಳನ್ನು ಜಾಗೃತಿಗೊಳಿಸಿ, ಉತ್ಪಾದನೆ ಹೆಚ್ಚಿಸುವ ಅಗತ್ಯಗಳ ಮನವರಿಕೆ ಮಾಡಲಾಗಿದೆ. ಲಿಪೊಸೊಮಲ್ ಆಂಫೊಟೆರಿಸಿನ್-ಬಿ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಿಸುವಂತೆ ಚಾಲ್ತಿಯಲ್ಲಿರುವ ಉತ್ಪಾದನಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಮ್ಯೂಕರ್|ಮೈಕೊಸಿಸ್ ಚಿಕಿತ್ಸೆಗೆ ಇರುವ ಪರ್ಯಾಯ ಔಷಧಗಳು ಮತ್ತು ಔಷಧ ರೂಪಗಳ ಉತ್ಪಾದನೆ ಹೆಚ್ಚಿಸುವಂತೆಯೂ ಉತ್ಪಾಕರಿಗೆ ಮನವರಿಕೆ ಮಾಡಲಾಗಿದೆ. ಪರವಾನಗಿ, ಕಚ್ಚಾ ವಸ್ತುಗಳ ಲಭ್ಯತೆ, ಆಮದು ಲೈಸೆನ್ಸ್ ಸೇರಿದಂತೆ ಉತ್ಪಾದಕರು ಮತ್ತು ಅಮದುದಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗಿದೆ.
ಭಾರತ್ ಸೆರಮ್ಸ್ ಅಂಡ್ ವಾಕ್ಸಿನ್ಸ್ ಲಿಮಿಟೆಡ್, ಸಿಪ್ಲಾ, ಸನ್ ಫಾರ್ಮಾ, ಬಿಡಿಆರ್ ಫಾರ್ಮಾಸ್ಯೂಟಿಕಲ್ಸ್ ಅಂಡ್ ಲೈಫ್|ಕೇರ್ ಇನೊವೇಷನ್ಸ್ ಸೇರಿದಂತೆ ಪ್ರಮುಖ ಐದು ಕಂಪನಿಗಳು ದೇಶದಲ್ಲಿ ಲಿಪೊಸೊಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದು ಉತ್ಪಾದಿಸುತ್ತಿವೆ. ಈ ಕಂಪನಿಗಳು ಜೂನ್ ತಿಂಗಳಿಗೆ 2.63 ಲಕ್ಷ ಚುಚ್ಚುಮದ್ದು ಬಾಟಲ್|ಗಳನ್ನು ಬಿಡುಗಡೆ (ಪೂರೈಕೆ) ಮಾಡಲಿವೆ. ವಿಶೇಷವೆಂದರೆ, ಲಿಪೊಸೊಮಲ್ ಚುಚ್ಚುಮದ್ದು ತಯಾರಿಕಾ ಸೂತ್ರ ತೀರಾ ಸಂಕಕೀರ್ಣದಿಂದ ಕೂಡಿದೆ. ಸುಧಾರಿತ ತಂತ್ರಜ್ಞಾನ ಹೊಂದಿರುವ ಔಷಧ ಕಂಪನಿಗಳಲ್ಲಿ ಮಾತ್ರ ಈ ಚುಚ್ಚುಮದ್ದು ಉತ್ಪಾದಿಸಲು ಸಾಧ್ಯ ಎಂಬುದೇ ಔಷಧದ ಲಭ್ಯತೆಗೆ ಎದುರಾಗಿರುವ ತೊಡಕಾಗಿದೆ. ದೇಶೀಯ ಔಷಧ ತಯಾರಕರ ಸಂಘಟನೆಯ ಜತೆ ವಿಸ್ತೃತ ಸಮಾಲೋಚನೆ ನಡೆಸಿದ ಔಷಧಗಳ ನಿಯಂತ್ರಣದ ಮಹಾನಿರ್ದೇಶಕರ ಕಾರ್ಯಾಲಯ(ಡಿಸಿಜಿಐ), 6 ಹೊಸ ಉತ್ಪಾದಕರಿಗೆ ಆಂಫೊಟೆರಿಸಿನ್ ಬಿ ಲಿಪೊಸೊಮಲ್ ಔಷಧ ತಯಾರಿಕೆ ಮತ್ತು ಮಾರುಕಟ್ಟೆಗೆ ಅನುಮತಿ ನೀಡಿದೆ. ಅವೆಂದರೆ, ಎಮ್|ಕ್ಯೂರ್, ಗುಫಿಕ್, ಅಲೆಂಬಿಕ್, ಲೈಕಾ, ನ್ಯಾಟ್ಕೊ ಲಿಮಿಟೆಡ್ ಮತ್ತು ಇಂಟಾಸ್ ಫಾರ್ಮ. ಈ ಆರು ಹೊಸ ಕಂಪನಿಗಳು ಜೂನ್|ನಲ್ಲಿ 1.13 ಲಕ್ಷ ಬಾಟಲ್ ಚುಚ್ಚುಮದ್ದುಗಳನ್ನು ಪೂರೈಸಲಿವೆ.
ಆಂಫೊಟೆರಿಸಿನ್ ಬಿ ಲಿಪೊಸೊಮಲ್ ಚುಚ್ಚುಮದ್ದಿನ ದೇಶೀಯ ಉತ್ಪಾದನೆ ಸಾಮರ್ಥ್ಯವನ್ನು ಏಪ್ರಿಲ್|ನಲ್ಲಿದ್ದ 62 ಸಾವಿರದಿಂದ ಮೇನಲ್ಲಿ 1.63 ಲಕ್ಷ ಬಾಟಲ್|ಗೆ ಹೆಚ್ಚಿಸಲಾಗಿದೆ. ಅದು ಜೂನ್|ನಲ್ಲಿ 3.75 ಲಕ್ಷ ಬಾಟಲ್|ಗಳಿಗೆ ಹೆಚ್ಚಾಗುವ ನಿರೀಕ್ಷೆ ಇದೆ. ಚುಚ್ಚುಮದ್ದು ಉತ್ಪಾದನಾ ಪ್ರಮಾಣ ಅಲ್ಪಾವಧಿಯಲ್ಲಿ ಐದು ಪಟ್ಟು ಹೆಚ್ಚಾಗಲಿದೆ.
ಔಷಧಗಳ ಉತ್ಪಾದನೆ ಮೇಲೆ ಕೇಂದ್ರ ಸರ್ಕಾರ ನಿಯಮಿತ ಮತ್ತು ನಿರಂತರ ನಿಗಾ ವಹಿಸಿದೆ. ಜತೆಗೆ, ಉತ್ಪಾದನೆ ಹೆಚ್ಚಿಸಲು ಎದುರಾಗುತ್ತಿರುವ ನಾನಾ ಸಮಸ್ಯೆಗಳ ಕುರಿತು ಉತ್ಪಾಕರ ಜತೆ ಹಲವಾರು ಸಭೆಗಳನ್ನು ನಡೆಸಿದೆ. ಆಂಫೊಟೆರಿಸಿನ್ ಬಿ ಲಿಪೊಸೊಮಲ್ ಚುಚ್ಚುಮದ್ದು ತಯಾರಿಸುವ ಕಂಪನಿಗಳನ್ನು ಸಂಪರ್ಕಿಸಿ, ಉತ್ಪಾದನೆ ಹೆಚ್ಚಿಸುವ ಮೂಲಕ ಪೂರೈಕೆ ಖಾತರಿಪಡಿಸುವಂತೆಯೂ ಮಾತುಕತೆ ನಡೆಸಿದೆ.
ಆಮದು ಸೌಲಭ್ಯಗಳು
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೊರರಾಷ್ಟ್ರಗಳ ಔಷಧ ತಯಾರಿಕಾ ಕಂಪನಿಗಳನ್ನು ಸಂಪರ್ಕಿಸಿ, ಔಷಧಗಳನ್ನು ದೇಶಕ್ಕೆ ತರಿಸಿಕೊಳ್ಳಲು ಪ್ರಮುಖ ಪಾತ್ರಿ ನಿರ್ವಹಿಸುತ್ತಿದೆ. ವಿಶ್ವಾದ್ಯಂತ ಇರುವ ಭಾರತೀಯ ರಾಯಭಾರಿ ಕಚೇರಿಗಳ ಮೂಲಕ ಔಷಧ ತಯಾರಿಕೆಯ ಹೊಸ ಮೂಲಗಳನ್ನು ಗುರುತಿಸಿದೆ. ಮ್ಯೂಕರ್|ಮೈಕೊಸಿಸ್ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್ ಬಿ ಮತ್ತು ಲಿಪೊಸೊಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದುಗಳು ಮತ್ತು ಪರ್ಯಾಯ ಔಷಧಗಳ ಲಭ್ಯತೆಯನ್ನು ಅದು ಗುರುತಿಸಿದೆ.
ಈಗಾಗಲೇ ಗುರುತಿಸಿರುವ ಔಷಧಗಳ ಪಟ್ಟಿಯಲ್ಲಿ ಲಿಪೊಸೊಮಲ್ ಆಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ಆಸ್ಟ್ರೇಲಿಯಾ, ರಷ್ಯಾ, ಜರ್ಮನಿ, ಅರ್ಜೆಂಟೈನಾ, ಬೆಲ್ಜಿಯಂ ಮತ್ತು ಚೀನಾದಿಂದ ಖರೀದಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿದೇಶಾಂಗ ಸಚಿವಾಲಯಕ್ಕೆ ಸೂಚನೆ ನೀಡಿದೆ. ಭಾರತದಲ್ಲಿ ಲಿಪೊಸೊಮಲ್ ಆಂಫೊಟೆರಿಸಿನ್-ಬಿ ಚುಚ್ಚಮದ್ದು ಉತ್ಪಾದನೆಗೆ ಅಗತ್ಯವಾದ ಎಚ್ಎಸ್|ಪಿಸಿ ಮತ್ತು ಡಿಎಸ್|ಪಿಜಿ-ಎನ್ಎ ಪ್ರಮುಖ ಕಚ್ಚಾ ವಸ್ತುಗಳನ್ನು ಹೊರರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲು ವಿದೇಶಾಂಗ ಸಚಿವಾಲಯ ಸಕ್ರಿಯವಾಗಿ ಕಾರ್ಯೋನ್ಮುಖವಾಗಿದೆ.
ಕೇಂದ್ರದ ಔಷಧ ಇಲಾಖೆ ಮತ್ತು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಲ್ಲಿರುವ ಮೈಲಾನ್ ಲ್ಯಾಬ್(ಭಾರತದ ಆಮದು ಕಂಪನಿ) ಜತೆ ನಿಕಟ ಸಂಪರ್ಕ ಹೊಂದಿದ್ದು, ಆಮದು ಹೆಚ್ಚಳಕ್ಕೆ ಕೆಲಸ ಮಾಡುತ್ತಿವೆ. ಜತೆಗೆ, ಗಿಲೀಡ್ ಇನ್|ಕಾರ್ಪೊರೇಷನ್ ಕಂಪನಿಯಿಂದ ತ್ವರಿತ ವಿತರಣೆಗೆ ನಿಗಾ ವಹಿಸಿವೆ. ಗಿಲೀಡ್ ಕಂಪನಿಗೆ 9,05,000 ಬಾಟಲ್ ಆಂಫೊಟೆರಿಸಿನ್ ಚುಚ್ಚುಮದ್ದಿಗೆ ಆರ್ಡರ್ ನೀಡಲಾಗಿದ್ದು, ಇದುವರೆಗೆ ಅಂದರೆ ಜೂನ್ 16ರ ವರೆಗೆ 5,33,971 ಬಾಟಲ್ ಚುಚ್ಚುಮದ್ದು ಸ್ವೀಕರಿಸಲಾಗಿದೆ. ಇನ್ನುಳಿದ ದಾಸ್ತಾನು ತರಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ.
ಸಮರ್ಪಕ ಹಂಚಿಕೆ
ದೇಶದಲ್ಲಿರುವ ಸೀಮಿತ ಔಷಧ ದಾಸ್ತಾನನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮ ಪ್ರಮಾಣದಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಮ್ಯೂಕರ|ಮೈಕೊಸಿಸ್ ಸೋಂಕು ಹೆಚ್ಚಿರುವ ರಾಜ್ಯಗಳಿಗೆ ಆದ್ಯತೆಯ ಮೇರೆಗೆ ಚುಚ್ಚುಮದ್ದು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಭಾರತ್ ಸೆರಮ್ ಕಂಪನಿ ಉತ್ಪಾದಿಸುವ ಲೈಪೊಸೊಮಲ್, ಲಿಪಿಡ್ ಮತ್ತು ಎಮಲ್ಷನ್ ರೂಪದ ಚುಚ್ಚುಮದ್ದು ಹೊರತುಪಡಿಸಿ, ಕೇಂದ್ರ ಸರ್ಕಾರವು ಲೈಪೊಸಮಲ್ ಆಂಫೊಟೆರಿಸಿನ್ ಚುಚ್ಚುಮದ್ದು ಹಂಚಿಕೆ ಮಾಡುತ್ತಿದೆ. ಬೇಡಿಕೆ ಮತ್ತು ಲಭ್ಯತೆ ಆಧರಿಸಿ, ಸಾಂಪ್ರದಾಯಿಕ ಆಂಫೊಟೆರಿಸಿನ್ ಚುಚ್ಚಮದ್ದನ್ನು ಜೂನ್ 14ರ ವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ.
ಮ್ಯೂಕರ್|ಮೈಕೊಸಿಸ್ ಪ್ರಕರಣಗಳ ಪ್ರಮಾಣಕ್ಕೆ ಅನುಗುಣವಾಗಿ ಚುಚ್ಚುಮದ್ದಿನ ಸಮಾನ ಹಂಚಿಕೆ ಮತ್ತು ವಿತರಣೆ ಮಾಡಲಾಗುತ್ತಿದೆ. ಔಷಧಗಳ ಲಭ್ಯತೆಯಲ್ಲಿ ಸ್ಥಿರತೆ ಬರುವ ತನಕ ಹಂಚಿಕೆ ಮತ್ತು ವಿತರಣೆಗೆ ಆದ್ಯತೆಯ ಗಮನ ನೀಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪೋರ್ಟಲ್|ನಲ್ಲಿ ದಾಖಲಾಗುವ ರೋಗ ಪ್ರಮಾಣದ ಅಂಕಿಅಶ ಆಧರಿಸಿ, ರೋಗ ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದ್ಯತೆಯ ಮೇರೆಗೆ ಚುಚ್ಚುಮದ್ದು ಒದಗಿಸಲಾಗುತ್ತಿದೆ.
ನಿರ್ದಿಷ್ಟ ನಗರಗಳು ಮತ್ತು ಆಸ್ಪತ್ರೆಗಳಿಗೆ ಅಗತ್ಯವಾದ ಔಷಧಗಳ ಬೇಡಿಕೆ ಆಧರಿಸಿ ಸಂಬಂಧಿಸಿದ ರಾಜ್ಯಗಳೇ ಪೂರೈಕೆ ವ್ಯವಸ್ಥೆ ಮಾಡಲಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಿದ ನಂತರ, ರಾಜ್ಯಗಳೇ ನೇರವಾಗಿ ಔಷಧ ತಯಾರಿಕಾ ಕಂಪನಿಗಳಿಂದ ಲಿಪೊಸೊಮಲ್ ಆಂಫೊಟೆರಿಸಿನ್ ಚಚ್ಚುಮದ್ದನ್ನು ನೇರವಾಗಿ ಖರೀದಿಸಲಿವೆ. ಕೇಂದ್ರ ಔಷಧ ಇಲಾಖೆಯು ಜೂನ್ 14ರ ವರೆಗೆ ಒಟ್ಟು 6,67,360 ಬಾಟಲ್ ಚುಚ್ಚುಮದ್ದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಇದರ ಜತೆಗೆ, 53 ಸಾವಿರ ಸಾಂಪ್ರದಾಯಿಕ ಆಂಫೊಟೆರಿಸಿನ್-ಬಿ ಚುಚ್ಚುಮದ್ದು ಬಾಟಲ್|ಗಳನ್ನು ಜೂನ್ 14ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ.
ಪೂರೈಕೆ ಖಾತ್ರಿ
ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ(ಎನ್|ಪಿಪಿಎ)ವು ಔಷಧಗಳ ಪೂರೈಕೆ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದೆ. ಅಗತ್ಯ ಇರುವ ರಾಜ್ಯಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಇದು ತ್ವರಿತವಾಗಿ ಔಷಧಗಳನ್ನು ಪೂರೈಸುತ್ತಿದೆ. ಹಂಚಿಕೆಯಾದ ಔಷಧ ಪ್ರಮಾಣವನ್ನು ಸಕಾಲದಲ್ಲಿ ತಲುಪಿಸಲು ಇದು ಬಲಿಷ್ಠ ಸ್ಪಂದನಾ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಅಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ನಿರಂತರ ಸಂಪರ್ಕ ಸಾಧಿಸುತ್ತಿದೆ. ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಔಷಧ ಪೂರೈಕೆಯಲ್ಲಿ ಏನಾದರೂ ಅಡಚಣೆಗಳು ಉಂಟಾದರೆ ಅದು ತಕ್ಷಣವೇ ಸಮಸ್ಯೆಗಳನ್ನು ನಿವಾರಿಸಿ, ಔಷಧ ತಲುಪುವಂತೆ ಕ್ರಮ ವಹಿಸುತ್ತದೆ.
ಕೋವಿಡ್ ಸಂಬಂಧಿತ ಮ್ಯೂಕರ್|ಮೈಕೊಸಿಸ್ ರೋಗದ ನಿರ್ವಹಣೆ, ಚಿಕಿತ್ಸೆ, ಔಷಧಗಳ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 7ರಂದು ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಸಲಹಾಸೂಚಿಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಆಂಫೊಟೆರಿಸಿನ್-ಬಿ ಲಿಪಿಡ್ ಸಂಕೀರ್ಣ ಔಷಧ, ಲಿಪೊಸೊಮಲ್ ಆಂಫೊಟೆರಿಸಿನ್ ಬಿ, ಆಂಫೊಟೆರಿಸಿನ್ ಡಿಆಕ್ಸಿಕೋಲೆಟ್ ರೂಪ, ಪೊಸಕನಜೊಲ್ ಇತ್ಯಾದಿ ಔಷಧಗಳನ್ನು ಬಳಸುವ ಕುರಿತು ಸಮಗ್ರ ಮಾಹಿತಿಯನ್ನು ಪ್ರಕಟಿಸಿದೆ. ಕೇಂದ್ರ ಔಷಧ ಇಲಾಖೆಯು ಸಹ ಜೂನ್ 10ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಸಲಹಾಸೂಚಿ ಹೊರಡಿಸಿದ್ದಾರೆ. ಹಂಚಿಕೆ ಮಾಡಿರುವ ಔಷಧಗಳನ್ನು ನ್ಯಾಯಸಮ್ಮತವಾಗಿ ಬಳಕೆ ಮಾಡುವುದನ್ನು ಖಾತ್ರಿಪಡಿಸುವಂತೆ ಹಾಗೂ ದಕ್ಷತೆಯಿಂದ ಹಂಚಿಕೆ ಮಾಡುವಂತೆ ಅದು ಸೂಚನೆ ನೀಡಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಔಷಧ ಉತ್ಪಾದಕರ ಜತೆ ನಿರಂತರ ನಿಕಟ ಸಂಪರ್ಕ ಸಾಧಿಸುತ್ತಿದ್ದು ಉತ್ಪಾದನೆ, ಆಮದು, ಪೂರೈಕೆ ಮತ್ತು ಲಭ್ಯತೆಯ ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ.
***
(Release ID: 1728008)
Visitor Counter : 320