ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಎಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಡ್ರೋನ್ ಸಮೀಕ್ಷೆ ಕಡ್ಡಾಯ ಮಾಡಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
Posted On:
16 JUN 2021 3:46PM by PIB Bengaluru
ಪಾರದರ್ಶಕತೆ, ಏಕರೂಪತೆಯನ್ನು ಹೆಚ್ಚಿಸುವ ಸಲುವಾಗಿ, ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಡಿಯ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಎಲ್ಲ ಹಂತಗಳ ಅಭಿವೃದ್ಧಿ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಮಾಸಿಕ ವಿಡಿಯೋ ಮುದ್ರಣಕ್ಕೆ ಡ್ರೋಸ್ ಬಳಕೆಯನ್ನು ಕಡ್ಡಾಯ ಮಾಡಿದೆ.
ಗುತ್ತಿಗೆದಾರರು ಮತ್ತು ರಿಯಾಯಿತಿದಾರರು ಮೇಲ್ವಿಚಾರಣಾ ಸಲಹೆಗಾರರ ತಂಡದ ನಾಯಕರ ಸಮ್ಮುಖದಲ್ಲಿ ಡ್ರೋನ್ ವಿಡಿಯೋ ಮುದ್ರಣವನ್ನು ನಿರ್ವಹಿಸುತ್ತಾರೆ ಮತ್ತು ಪ್ರಸ್ತುತ ಮತ್ತು ಕಳೆದ ತಿಂಗಳ ತುಲನಾತ್ಮಕ ಯೋಜನಾ ವೀಡಿಯೊಗಳನ್ನು ಎನ್.ಎಚ್.ಎ.ಐ.ನ ಪೋರ್ಟಲ್ ‘ಡಾಟಾ ಲೇಕ್’ ನಲ್ಲಿ ಅಪ್ ಲೋಡ್ ಮಾಡುತ್ತಾರೆ ಮತ್ತು ತಿಂಗಳಲ್ಲಿ ವಿವಿಧ ಯೋಜನೆ ಸಂಬಂಧಿತ ಬೆಳವಣಿಗೆಗಳನ್ನು ಸೆರೆಹಿಡಿಯುತ್ತಾರೆ. ಮೇಲ್ವಿಚಾರಣಾ ಸಲಹೆಗಾರರು ಈ ವೀಡಿಯೊಗಳನ್ನು ವಿಶ್ಲೇಷಿಸುತ್ತಾರೆ ಮತ್ತು ಯೋಜನೆಯ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡ ಡಿಜಿಟಲ್ ಮಾಸಿಕ ಪ್ರಗತಿ ವರದಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಯೋಜನೆಗಳ ಭೌತಿಕ ತಪಾಸಣೆಯ ಸಮಯದಲ್ಲಿ ಈ ವೀಡಿಯೊಗಳನ್ನು ಎನ್.ಎಚ್.ಎ.ಐ. ಅಧಿಕಾರಿಗಳು ಹಿಂದಿನ ಅವಲೋಕನಗಳ ಆಧಾರದ ಮೇಲೆ ಮಾಡಿದ ವ್ಯತ್ಯಾಸಗಳು ಮತ್ತು ತಿದ್ದುಪಡಿಗಳನ್ನು ಪರಿಶೀಲಿಸಲು ಬಳಸುತ್ತಾರೆ.
ಹೆಚ್ಚುವರಿಯಾಗಿ, ಎನ್.ಎಚ್.ಎ.ಐ.ನ ಯೋಜನಾ ನಿರ್ದೇಶಕರು, ಯೋಜನೆಯ ಗುತ್ತಿಗೆಗೆ ಅಂಕಿತ ಹಾಕಿದ ದಿನದಿಂದ ಸ್ಥಳದಲ್ಲಿ ಯೋಜನೆಯ ಕಾಮಗಾರಿ ಆರಂಭವಾಗುವವರೆಗೆ ಮತ್ತು ಯೋಜನೆ ಪೂರ್ಣಗೊಳ್ಳುವ ತನಕ ಮಾಸಿಕ ಡ್ರೋನ್ ಸಮೀಕ್ಷೆಯನ್ನು ಕೈಗೊಳ್ಳುತ್ತಾರೆ. ಎನ್.ಎಚ್.ಎ.ಐ. ಸಹ ಮಾಸಿಕ ಡ್ರೋನ್ ಸಮೀಕ್ಷೆಯನ್ನು ಎನ್.ಎಚ್.ಎ.ಐ. ಕಾರ್ಯಾಚರಣೆ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಎಲ್ಲ ಅಭಿವೃದ್ಧಿಪಡಿಸಲಾದ ಯೋಜನೆಗಳಲ್ಲಿಯೂ ನಡೆಸಲಿದೆ.
ಈ ವಿಡಿಯೋಗಳು ಶಾಶ್ವತವಾಗಿ ಡಾಟಾ ಲೇಕ್ ನಲ್ಲಿ ಉಳಿಯುವ ಕಾರಣ, ಅದನ್ನು ನ್ಯಾಯಾಯಲಗಳು ಮತ್ತು ಮಧ್ಯಸ್ಥಿಕೆ ನ್ಯಾಯಾಧಿಕರಣಗಳಲ್ಲಿ ವಿವಾದ ಇತ್ಯರ್ಥ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿಯೂ ಬಳಸಬಹುದು.
ಇದರ ಜೊತೆಗೆ, ಗುಣಮಟ್ಟವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸ್ಥಿತಿ ಸಮೀಕ್ಷೆ ನಡೆಸಲು ನೆಟ್ ವರ್ಕ್ ಸಮೀಕ್ಷೆ ವಾಹನ (ಎನ್.ಎಸ್.ವಿ)ವನ್ನು ಕಡ್ಡಾಯವಾಗಿ ನಿಯೋಜಿಸುವುದರಿಂದ ಹೆದ್ದಾರಿಗಳ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುತ್ತದೆ ಏಕೆಂದರೆ ಎನ್.ಎಸ್.ವಿ 360 ಡಿಗ್ರಿಗಳ ಹೈ ರೆಸಲ್ಯೂಷನ್ ಡಿಜಿಟಲ್ ಕ್ಯಾಮೆರಾ, ಚಿತ್ರಣ, ಲೇಸರ್ ರಸ್ತೆ ಪ್ರೊಫಿಲೋಮೀಟರ್ ಮತ್ತು ರಸ್ತೆ ಮೇಲ್ಮೈಯಲ್ಲಿನ ತೊಂದರೆಯನ್ನು ಅಳೆಯಲು ಇತರ ಇತ್ತೀಚಿನ ತಂತ್ರಜ್ಞಾನದಂತಹ ಇತ್ತೀಚಿನ ಸಮೀಕ್ಷಾ ತಂತ್ರಗಳನ್ನು ಬಳಸುತ್ತದೆ.
***
(Release ID: 1727840)
Visitor Counter : 234