ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಸ್ವಚ್ಛ ಪರಿಸರ ಮತ್ತು ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಗೆ ಭಾರತದ ಆದ್ಯತೆ ಎಂದಿದ್ದಾರೆ ಶ್ರೀ ಪೀಯೂಷ್ ಗೋಯಲ್


ಬೃಹತ್ ಆರ್ಥಿಕತೆಗಳಲ್ಲಿ  ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ತಲಾ ಪ್ರಮಾಣ ಕಡಿಮೆ ಇದ್ದರೂ, ಭಾರತವು ಸಹ್ಯ ಅಭಿವೃದ್ಧಿ ಮತ್ತು ಎಸ್.ಡಿ.ಜಿ.ಗಳನ್ನು ಕುರಿತ ಯು.ಎನ್.2030 ರ ಕಾರ್ಯಪಟ್ಟಿಗೆ ಬದ್ಧತೆ ತೋರ್ಪಡಿಸಿದೆa

ಸ್ವಚ್ಛ ಇಂಧನ, ಇಂಧನ ದಕ್ಷತೆ, ಅರಣ್ಯೀಕರಣ ಮತ್ತು ಜೀವ ವೈವಿಧ್ಯಗಳ ಬಗ್ಗೆ ಭಾರತ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ

ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಕ್ರಮಗಳನ್ನು ವ್ಯಾಪಾರೋದ್ಯಮಕ್ಕೆ ಜೋಡಿಸಲಾಗದು

Posted On: 14 JUN 2021 5:51PM by PIB Bengaluru

ಭಾರತದ  ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ತಲಾ ಪ್ರಮಾಣ ಬೃಹತ್ ಆರ್ಥಿಕತೆಯಲ್ಲಿ ಅತ್ಯಂತ ಕಡಿಮೆ ಇದ್ದರೂ ಭಾರತದಲ್ಲಿ ನಾವು 2030 ವೇಳೆಗೆ ನಮ್ಮ ಮಹತ್ವಾಕಾಂಕ್ಷೆಯ ಗುರಿಯಾದ ಮರುನವೀಕರಿಸಬಹುದಾದ ಇಂಧನ ಗುರಿ 450 ಗಿಗಾ ವ್ಯಾಟ್ ತಲುಪಲು ಪ್ರಯತ್ನ ನಡೆಸುತ್ತಿರುವುದು ವಿಶ್ವ ಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಸಂಬಂಧಿಸಿದ 2030 ಕಾರ್ಯಪಟ್ಟಿಯನ್ನು ಅನುಷ್ಠಾನಿಸಲು ಇರುವ ನಮ್ಮ  ಬದ್ಧತೆಯನ್ನು   ತೋರಿಸುತ್ತದೆ ಎಂದು ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕಾ ಹಾಗು ಬಳಕೆದಾರ ವ್ಯವಹಾರಗಳು ಮತ್ತು ಆಹಾರ ಹಾಗು ಸಾರ್ವಜನಿಕ ವಿತರಣೆ ಸಚಿವರಾದ ಶ್ರೀ ಪೀಯೂಷ್ ಗೋಯಲ್ ಅವರು ಹೇಳಿದ್ದಾರೆ. ವಿಶ್ವಸಂಸ್ಥೆ ವ್ಯಾಪಾರ ವೇದಿಕೆ 2021ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾವೆಲ್ಲ ಕಾಳಜಿ ಹೊಂದಿದ್ದೇವೆ  ಎಂಬ ಬಗ್ಗೆ ಯಾವ ಸಂಶಯವೂ ಬೇಡ.ಮತ್ತು ನಾವು ಕೋವಿಡೋತ್ತರ ಜಗತ್ತಿನಲ್ಲಿ ಹೊಸ ಹುರುಪಿನೊಂದಿಗೆ ನಮ್ಮ ವಾತಾವರಣಕ್ಕೆ ಸಂಬಂಧಿಸಿದ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದರು. ವಾತಾವರಣ ನ್ಯಾಯವನ್ನು ಕಾಪಾಡಬೇಕು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅವುಗಳ ಬಳಕೆ ರೀತಿಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು ಹಾಗು ಸುಸ್ಥಿರ ಜೀವನ ಶೈಲಿಯತ್ತ ಆದ್ಯತೆ ನೀಡಬೇಕು ಎಂದರು.

ಸ್ವಚ್ಛ ಇಂಧನ, ಇಂಧನ ದಕ್ಷತೆ, ಅರಣ್ಯೀಕರಣ, ಮತ್ತು ಜೀವ ವೈವಿಧ್ಯಗಳ ನಿಟ್ಟಿನಲ್ಲಿ ಹಲವಾರು ದಿಟ್ಟ ಕ್ರಮಗಳನ್ನು ಭಾರತ ಕೈಗೊಂಡಿದೆ ಎಂದ ಸಚಿವರು ಅದರಿಂದಾಗಿ ಭಾರತವು ಎನ್.ಡಿ.ಸಿ.ಗಳು (ರಾಷ್ಟ್ರೀಯ ನಿರ್ಧರಿತ ಕೊಡುಗೆಗಳು-ನ್ಯಾಶನಲೀ ಡಿಟರ್ಮಿನ್ಡ್ ಕಾಂಟ್ರಿಬ್ಯೂಷನ್ಸ್) 2 ಡಿಗ್ರಿ ಸೆಲ್ಸಿಯಸ್ ಸರಿಹೊಂದುವ ಕೆಲವೇ ದೇಶಗಳಲ್ಲಿ ಒಂದಾಗಿದೆ ಎಂದರು.ನಾವು ಜಾಗತಿಕ ಉಪಕ್ರಮಗಳಾದ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಮತ್ತು ವಿಪತ್ತು ಪುನಶ್ಚೇತನ ಮೂಲಸೌಕರ್ಯ ಮಿತ್ರಕೂಟವನ್ನು ಉತ್ತೇಜಿಸಿದ್ದೇವೆಎಂದವರು ಹೇಳಿದರು.

ವ್ಯಾಪಾರ ನೀತಿ ಮತ್ತು ನಮ್ಮ ಹಸಿರು ಗುರಿಗಳನ್ನು ವಿಭಜಿಸುವ ಅಗತ್ಯವನ್ನು ಶ್ರೀ ಗೋಯಲ್ ಪ್ರತಿಪಾದಿಸಿದರು. ವ್ಯಾಪಾರ ನೀತಿಯು ಇಡೀ ಜಗತ್ತಿನಾದ್ಯಂತ  ಹೆಚ್ಚು ಒಳಗೊಳ್ಳುವಂತಹ ದೃಷ್ಟಿಯನ್ನು ಹೊಂದಿರಬೇಕು ಎಂದವರು ಹೇಳಿದರು. ಸುಸ್ಥಿರವಾದಂತಹ ಸ್ವಚ್ಛ ಪರಿಸರ ಮತ್ತು ಒಳಗೊಳ್ಳುವ ಅಭಿವೃದ್ಧಿ ಭಾರತದ ಆದ್ಯತಾ ಕಾರ್ಯಪಟ್ಟಿಯಾಗಿದೆ ಎಂದು ಹೇಳಿದ ಸಚಿವರು ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿ ಭಾರತದ ಬಹಳ ಧೀರ್ಘಾವಧಿಯ ಸ್ಥಾನಮಾನಗಳನ್ನು ವ್ಯಾಪಾರದೊಂದಿಗೆ ಜೋಡಿಸಬಾರದು ಎಂದರು.

ಯು.ಎನ್. ಮತ್ತು ಯು.ಎನ್.ಎಫ್.ಸಿ.ಸಿ. ಗಳು ವಾತಾವರಣ ಬದಲಾವಣೆಗೆ ಸಂಬಂಧಿಸಿದ ಬದ್ಧತೆಗಳನ್ನು ಈಡೇರಿಸಲು ವಿಶ್ವವನ್ನು ಒಗ್ಗೂಡಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದೂ ಶ್ರೀ ಗೋಯಲ್ ಹೇಳಿದರು. ವಾತಾವರಣ ಬಗೆಗಿನ ವಿಷಯಗಳನ್ನು ಯು.ಎನ್.ಎಫ್.ಸಿ.ಸಿ. ಚೌಕಟ್ಟಿನಡಿ ಮತ್ತು ಪ್ಯಾರಿಸ್ ಒಪ್ಪಂದದಡಿ ಚರ್ಚಿಸಬೇಕೇ ಹೊರತು ವ್ಯಾಪಾರ ಒಪ್ಪಂದ ಮಾತುಕತೆಗಳ ಭಾಗವಾಗಿ ಅಲ್ಲ ಎಂದರು. ಗುರಿಗಳನ್ನು ಈಡೇರಿಸಲು ವ್ಯಾಪಾರ ಒಪ್ಪಂದಗಳು  ಅತ್ಯುತ್ತಮ ಆಯ್ಕೆಗಳಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.

ಸ್ವಚ್ಛ ಪರಿಸರಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಶ್ರೀ ಗೋಯಲ್ ಕಳೆದ 7 ವರ್ಷಗಳಲ್ಲಿ ಭಾರತದಲ್ಲಿ ನಾವು 100% ವಿದ್ಯುತ್ ಸಂಪರ್ಕಗಳ ಬಗ್ಗೆ, 100% ಶೌಚಾಲಯಗಳ ಲಭ್ಯತೆ ಬಗ್ಗೆ , 100% ಹಣಕಾಸು ಸೇರ್ಪಡೆಯ ಬಗ್ಗೆ ಮತ್ತು 100% ಜನಸಂಖ್ಯೆ ಸ್ವಚ್ಛ ಅಡುಗೆ ಅನಿಲ ಪಡೆಯುವಂತೆ ಮಾಡುವ ಬಗ್ಗೆ ಆದ್ಯತೆ ನೀಡಿದ್ದೇವೆ ಎಂದರು. 2030 ವೇಳೆಗೆ ಭಾರತೀಯ ರೈಲ್ವೇ ಸ್ವಚ್ಛ ಇಂಧನದ ಮೇಲೆ ಓಡುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಿನ್ನೆ ಜಿ 7 ದೇಶಗಳಿಗೆ ವಿವರ ಒದಗಿಸಿದ್ದಾರೆ ಎಂದ ಶ್ರೀ ಗೋಯಲ್ ಭಾರತವು ಸಾರಿಗೆ- ಸಂಚಾರ ಕ್ಷೇತ್ರವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ, ನಾವು ಭವಿಷ್ಯದ ಸಾರಿಗೆ ಸಂಚಾರಕ್ಕಾಗಿ  ಹೈಡ್ರೋಜನ್ ಅಭಿವೃದ್ಧಿಯ ಬಗ್ಗೆ ಇತರ ದೇಶಗಳ ಜೊತೆ ಕಾರ್ಯನಿರತರಾಗಿದ್ದೇವೆ ಎಂದೂ ಹೇಳಿದರು.

ಆರೋಗ್ಯ ರಕ್ಷಣಾ ವಲಯದಲ್ಲಿ ಬಹಳ ದೊಡ್ಡ ಪ್ರಮಾಣದ ಹೂಡಿಕೆಗೆ ಭಾರತ  ಆದ್ಯ ಗಮನ ಕೊಟ್ಟಿದೆ ಎಂದ ಅವರು ಅದು ಮರುನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಮೂಲಸೌಕರ್ಯಗಳತ್ತಲೂ ಆದ್ಯತೆ ನೀಡುತ್ತಿದೆ ಎಂದರು. ಲಸಿಕೆಗಳು ಮತ್ತು ಔಷಧಿಗಳು ಸಮಾನವಾಗಿ ಲಭ್ಯವಾಗುವಂತೆ ಮಾಡುವುದನ್ನು ಖಾತ್ರಿಪಡಿಸುವಲ್ಲಿ ಭಾರತವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸಲಿದೆ ಎಂದರು. ಭಾರತವನ್ನು ಜಗತ್ತಿನ ಔಷಧಾಲಯ ಎಂದೂ ಕರೆಯಲಾಗುತ್ತದೆ, ಮತ್ತು ನಮಗೆ ಜಗತ್ತಿನ ಲಸಿಕಾ ಕಾರ್ಯಕ್ರಮದ ಪ್ರಯತ್ನಗಳಲ್ಲಿ ಪ್ರಮುಖ ಭಾಗವಾಗುವ ಆಶಯ ಮತ್ತು ಸಾಮರ್ಥ್ಯ ಇದೆ ಎಂದೂ ನುಡಿದರು. ನಾವು ವಿಶ್ವದ ಅತ್ಯಂತ ದೊಡ್ಡ ಉಚಿತ ಆರೋಗ್ಯರಕ್ಷಣಾ ಕಾರ್ಯಕ್ರಮವನ್ನು ಹೊಂದಿದ್ದೇವೆ, ಆಯುಷ್ಮಾನ್ ಭಾರತ್ ಅಡಿಯಲ್ಲಿ ಭಾರತದ 500 ಮಿಲಿಯನ್ ಜನತೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುತ್ತವೆ. ನಾವು ಇದನ್ನು ಪ್ರತೀ ನಾಗರಿಕರಿಗೆ ಲಭ್ಯವಾಗುವಂತೆ 100% ವಿಸ್ತರಿಸಲಿದ್ದೇವೆಎಂದರು.

ಪ್ರಕೃತಿ ನಮಗೆ ಬಹಳ ಮುಖ್ಯ ಮತ್ತು ಪ್ರಕೃತಿಯನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದೂ ಶ್ರೀ ಗೋಯಲ್ ಹೇಳಿದರು. ಅಭಿವೃದ್ಧಿ ಹೊಂದಿದ ಜಗತ್ತಿನ ಕಾರ್ಯಪಟ್ಟಿಯನ್ನು ಮಾತ್ರವೇ ನಾವು ಆದ್ಯತೆಯಾಗಿಸಬಾರದು ಎಂದ ಅವರು ಕೃಷಿ ಸಬ್ಸಿಡಿಗಳಲ್ಲಿಯ ಅಸಮತೆಯಂತಹ ಧೀರ್ಘ ಕಾಲದಿಂದ ಬಾಕಿಯುಳಿದಿರುವ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು ಎಂದರು.

ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಭಾರತದ ಪ್ರಯತ್ನಗಳ ಬಗ್ಗೆ ಮಾತನಾಡಿದ ಶ್ರೀ ಗೋಯಲ್ ಭಾರತವು ಕೋವಿಡ್ ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ 80 ಕೋಟಿ ಭಾರತೀಯರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದೆ ಎಂದರು. ನಮ್ಮ ಸಾರ್ವಜನಿಕ ಖರೀದಿ ಕಾರ್ಯಕ್ರಮಗಳಿಂದಾಗಿ ನಮಗೆ  ಇಂತಹ ಬೆಂಬಲವನ್ನು ನೀಡಲು ಸಾಧ್ಯವಾಯಿತು. ಹಸಿವೆಯಿಂದ ಯಾರೂ ಸಾವಿಗೀಡಾಗದಂತೆ ಬೃಹತ್ ಸಂಖ್ಯೆಯ ಜನರಿಗೆ ನೆರವನ್ನು ಖಾತ್ರಿಪಡಿಸಲು ಸಾಧ್ಯವಾಯಿತು ಎಂದರು.

ಕ್ರೆಡಿಟ್ ಶ್ರೇಯಾಂಕ ನೀಡುವ ಏಜೆನ್ಸಿಗಳಾದ,  ವಿಶ್ವದ ಹಣಕಾಸು ವಾಸ್ತುರಚನೆಯನ್ನು ನಿರ್ದೇಶಿಸುವಂತಹ .ಎಂ.ಎಫ್. ಗಳಂತಹವು ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಗ್ಗೆ ಅನ್ಯಾಯವಾಗಿ ಕಠಿಣ ನಿಲುವು ತೆಗೆದುಕೊಳ್ಳಲಾರವು ಎಂಬ ಭರವಸೆಯನ್ನು ಶ್ರೀ ಗೋಯಲ್ ವ್ಯಕ್ತಪಡಿಸಿದರು. ಇದು ಹೆಚ್ಚು ಅನುಕಂಪದಿಂದ, ಮುಕ್ತ ಮತ್ತು ಬೆಂಬಲ ನೀಡುವ ರೀತಿಯಲ್ಲಿ ಇರಬೇಕಾದ ಸಂದರ್ಭವಾಗಿದೆ ಎಂದವರು ಹೇಳಿದರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೈಗೆಟಕುವ ದರದಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಲಭ್ಯ ಮಾಡುವ ನಿಟ್ಟಿನಲ್ಲಿ  ಅನ್ವೇಷಣೆಗಳು ನಡೆಯಬೇಕು ಎಂಬುದನ್ನು ಒತ್ತಿ ಹೇಳಿದ ಸಚಿವರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಸಿರು ತಂತ್ರಜ್ಞಾನವನ್ನು ವರ್ಗಾಯಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನಾಯಕತ್ವ ವಹಿಸಬೇಕು ಎಂದರು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಯಾರಾಗುವ ಸ್ವಚ್ಛ/ಹಸಿರು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸಲೂ ಅವು ಮುಂದಾಗಬೇಕು ಎಂದವರು ಹೇಳಿದರು.

***



(Release ID: 1727157) Visitor Counter : 210